ಲಂಚಕೊಡಲು ಪ್ರೇರೇಪಿಸುವುದು ತಪ್ಪು ಶರಣು ಸಲಗರ ಅವರೆ !

ಲೇಖನ : ಮುಕ್ಕಣ್ಣ ಕರಿಗಾರ 

ಶಾಸಕ ಶರಣು ಸಲಗರ ಅವರು ತಮ್ಮ ಹಿಂಬಾಲಕರೊಬ್ಬರಿಂದ ಹತ್ತುಸಾವಿರ ಲಂಚ ಪಡೆದು ಕೆಲಸ ಮಾಡಿಕೊಡಲು ಲೋಕೋಪಯೋಗಿ ಇಲಾಖೆಯ ನೌಕರರೊಬ್ಬರಿಗೆ ಹೇಳಿರುವ ಆಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತ ಭಾರಿ ಸದ್ದುಮಾಡಿದೆ.ದೀಪಾವಳಿಯ ಪಟಾಕಿಯ ಶಬ್ದವನ್ನು ಮೀರಿ ಸದ್ದುಮಾಡುತ್ತಿದೆ ಶಾಸಕ ಶರಣು ಸಲಗರ ಅವರು ಆಡಿದ್ದಾರೆನ್ನಲಾದ ಆಡಿಯೋ.

‘ಕೆಲಸ ಆಗಲಿ ಎನ್ನುವ ಸದುದ್ದೇಶ ನನ್ನದಾಗಿತ್ತು.ಇದರಲ್ಲಿ ತಪ್ಪೇನಿದೆ ?’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಶರಣು ಸಲಗರ ಅವರು ‘ ಒಂದು ಕೆಲಸಕ್ಕಾಗಿ ಬಡಕುಟುಂಬದ ಕಾರ್ಯಕರ್ತನಿಂದ ₹40,000 ಸಾವಿರ ಲಂಚಕ್ಕೆ ಬೇಡಿಕೆ ಇಡಲಾಗಿತ್ತು.ಅದನ್ನು ಕಡಿತಗೊಳಿಸಿ ಬರೀ ₹10,000 ಪಡೆದು ಕೆಲಸಮಾಡಿಕೊಡಿ ಎಂದು ಕೇಳಿಕೊಂಡಿದ್ದೇನೆ’ಎಂದಿರುವ ಶಾಸಕ ಶರಣು ಸಲಗರ ಅವರ ಕಾಳಜಿ ಏನೋ ಸರಿ ಇರಬಹುದು.ಆದರೆ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಅವರು ಲಂಚಕೊಡಲು ತಮ್ಮ ಕಾರ್ಯಕರ್ತರಿಗೆ ಹೇಳಿದ್ದು ತಪ್ಪು ಮಾತ್ರವಲ್ಲ,ಅದು ಅವರ ಅಸಾಮರ್ಥ್ಯದ ಸಂಕೇತವು ಕೂಡ.ಲೋಕೋಪಯೋಗಿ ಇಲಾಖೆಯ ಬೀದರ ಜಿಲ್ಲೆಯ ಅಧಿಕಾರಿಗಳು ಈ ಕೂಡಲೆ ಬಸವಕಲ್ಯಾಣದ ಲೋಕೋಪಯೋಗಿ ಕಛೇರಿಯ ಲೆಕ್ಕಶಾಖೆಯ ಪ್ರಥಮದರ್ಜೆ ಸಹಾಯಕ ವೆಂಕಟರಾವ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು.ಶಾಸಕರೇ ತಮ್ಮ ಕಾರ್ಯಕರ್ತರಿಗೆ ಲಂಚಕೊಟ್ಟು ಕೆಲಸಮಾಡಿಸಿಕೊಳ್ಳುವಂತಹ ಅಧೋಗತಿಯನ್ನು ತಲುಪಿರುವ ಬಸವಕಲ್ಯಾಣದ ಲೋಕೋಪಯೋಗಿ ಇಲಾಖೆಯ ಸಂಬಂಧಪಟ್ಟ ಕಛೇರಿಯ ಭ್ರಷ್ಟಾಚಾರ ಮತ್ತು ಅವ್ಯವಸ್ಥೆಯನ್ನು ಸರಿಪಡಿಸಲು ಬೀದರ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು.ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಲೋಕಾಯುಕ್ತ ಅಧಿಕಾರಿಗಳು ವೆಂಕಟರಾವ್ ಎನ್ನುವ ಅಯೋಗ್ಯನೌಕರನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು.ಜನಸಾಮಾನ್ಯರ ಬದುಕಿನೊಂದಿಗೆ ಆಟವಾಡುತ್ತಿರುವ ಇಂತಹ ಪೀಡೆಗಳು ಸೆರೆಮನೆಯಲ್ಲಿರಬೇಕೇ ಹೊರತು ಸರಕಾರಿ ಕಛೇರಿಗಳಲ್ಲಿ ಅಲ್ಲ.

ಒಬ್ಬ ಶಾಸಕರಾಗಿ ಶರಣು ಸಲಗರ ಅವರು ‘ ನಾನು ರಾಜಕೀಯ ವ್ಯಕ್ತಿ.ಆದರೂ ಏನೂ ಅನ್ನುತ್ತಿಲ್ಲ.ವ್ಯವಸ್ಥೆಯೇ ಹಾಗಿದ್ದಾಗ ಏನೂ ಮಾಡಕ್ಕಾಗಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿರುವುದು ಹಳಿತಪ್ಪಿದ ಆಡಳಿತ ವ್ಯವಸ್ಥೆಯತ್ತ ಬೆರಳು ಮಾಡಿ ತೋರಿಸುತ್ತಿದೆ.ಬಹುತೇಕ ಸರಕಾರಿ ಕಛೇರಿಗಳಲ್ಲಿ ಲಂಚಕೊಟ್ಟರೆ ಮಾತ್ರ ಕೆಲಸ ಆಗುತ್ತದೆ ಎನ್ನುವ ಭಾವನೆ ಸಾರ್ವಜನಿಕರಲ್ಲಿದೆ.ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ- ಸವಲತ್ತುಗಳನ್ನು ಪಡೆಯುತ್ತಿರುವ ಸರಕಾರಿ ಅಧಿಕಾರಿಗಳು ಮತ್ತು ನೌಕರರು ಸಾರ್ವಜನಿಕರಿಂದ ಲಂಚಪಡೆಯುವುದು ತಮ್ಮ ಹಕ್ಕು,ಪ್ರತಿಷ್ಠೆ ಎಂಬಂತೆ ಭಾವಿಸಿದ್ದಾರೆ.ಅದರಲ್ಲೂ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜಿಲ್ಲೆಗಳಲ್ಲಿ ಲಂಚದ ಹಾವಳಿ ಅತಿಯಾಗಿದೆ.ಸರಕಾರಿ ಅಧಿಕಾರಿಗಳು ಮತ್ತು ನೌಕರರು ತಾವು ಮಾಡುತ್ತಿರುವ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಂಬಳ ಪಡೆಯುತ್ತಿದ್ದಾರೆಯೇ ಹೊರತು ಅವರೇನು ಧರ್ಮಾರ್ಥ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಸಾರ್ವಜನಿಕರು ಅರ್ಥಮಾಡಿಕೊಂಡು ಲಂಚಕ್ಕೆ ಬೇಡಿಕೆ ಇಡುವ ಸರಕಾರಿ ನೌಕರರನ್ನು ಪ್ರಶ್ನಿಸಬೇಕು,ತರಾಟೆಗೆ ತೆಗೆದುಕೊಳ್ಳಬೇಕು.ಶಾಸಕರೇ ಲಂಚಕೊಡಿಸಿ ಕೆಲಸ ಮಾಡಿಸಿಕೊಡುವಂತಹ ಶೋಚನೀಯ ಪರಿಸ್ಥಿತಿಗೆ ಆಡಳಿತ ವ್ಯವಸ್ಥೆ ತಲುಪಿದ್ದು ವ್ಯವಸ್ಥೆಯ ಅಧಃಪತನದ ಸಂಕೇತ.

ಶರಣು ಸಲಗರ ಅವರು ಸಾಮಾನ್ಯರಲ್ಲ,ನಾಡಿನ ಆಡಳಿತದ ಕಾನೂನನ್ನು ರೂಪಿಸುವ ಜವಾಬ್ದಾರಿಯುತ ಶಾಸಕರು.ಅವರು ತಮ್ಮ ಶಾಸಕಸ್ಥಾನದ ಬಲದಿಂದ ಆ ಎಫ್ಡಿಎಯನ್ನು ತರಾಟಗೆಗೆ ತೆಗೆದುಕೊಂಡು ಆತನ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಬೇಕಿತ್ತು.ಸರಕಾರಿ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳುವ ಹೊಣೆಗಾರಿಕೆಯು ಶಾಸಕರಿಗೆ ಇದೆ.ಸರಕಾರಿ ಅಧಿಕಾರಿಗಳು ದುರ್ವರ್ತನೆ ತೋರಿದಾಗ,ತಪ್ಪೆಸಗಿದಾಗ ಅವರ ಮೇಲಾಧಿಕಾರಿಗಳಿಗೆ ಲಿಖಿತ ದೂರು ನೀಡಿ ಸಂಬಂಧಪಟ್ಟ ನೌಕರ,ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಆಗುವವರೆಗೆ ಸುಮ್ಮನಿರಬಾರದು.ಇದು ಶಾಸಕರು ಮಾಡಬೇಕಾದ ಕೆಲಸ.ಅದನ್ನು ಬಿಟ್ಟು ಅಸಾಹಯಕತೆ ವ್ಯಕ್ತಪಡಿಸಿ 40,000 ರೂಪಾಯಿಗಳ ಲಂಚದ ಬೇಡಿಕೆಯನ್ನು 10,000 ರೂಪಾಯಿಗಳಿಗೆ ಇಳಿಸಿದ್ದೇನೆ ಎನ್ನುವುದು ಶಾಸಕರ ದೌರ್ಬಲ್ಯವೇ ಹೊರತು ಸಮರ್ಥ ಶಾಸಕರು ಮಾಡಬೇಕಾದ ಕಾರ್ಯವಲ್ಲ.ಲಂಚಪಡೆಯುವುದು ಹೇಗೆ ಅಪರಾಧವೋ ಹಾಗೆ ಲಂಚನೀಡುವುದು,ಲಂಚನೀಡಲು ಪ್ರೇರೇಪಿಸುವುದು ಕೂಡ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಶರಣು ಸಲಗರ ಅವರು ಅರ್ಥಮಾಡಿಕೊಳ್ಳಬೇಕು.ಎಲ್ಲ ಶಾಸಕರು ಶರಣು ಸಲಗರ ಅವರ ಹಾದಿಯನ್ನೇ ಹಿಡಿದರೆ ಜನಸಾಮಾನ್ಯರ ಗತಿ ಏನು ?

About The Author