ಮಹಾಶೈವ ಧರ್ಮಪೀಠದಲ್ಲಿ 68 ನೆಯ ಶಿವೋಪಶಮನ ಕಾರ್ಯ

ರಾಯಚೂರು (ಗಬ್ಬೂರು ನವೆಂಬರ್ 12,2023) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ನವೆಂಬರ್ 12 ರ ಆದಿತ್ಯವಾರದಂದು 68 ನೆಯ ‘ ಶಿವೋಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸಾನ್ನಿಧ್ಯವನ್ನರಸಿ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹ ಕರುಣಿಸಿದರು.

ಕ್ಯಾನ್ಸರ್ ಪೀಡಿತ ಮೂವರು ಕ್ಯಾನ್ಸರ್ ರೋಗ ಮುಕ್ತರಾಗಲು ಶಿವಾಭಯವನ್ನು ಆಶಿಸಿ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿದ್ದು ಇಂದಿನ ವಿಶೇಷವಾಗಿತ್ತು.ಇವರಲ್ಲಿ ಇಬ್ಬರು ಬೆಂಗಳೂರಿನಲ್ಲಿ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ ಮತ್ತೊಬ್ಬರು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಸತ್ಯಶಿವನು ತನ್ನ ಲೋಕೋದ್ಧಾರದ ನಿತ್ಯಲೀಲೆಯನ್ನಾಡುತ್ತಿದ್ದು ಎಂತಹದೆ ಭಯಂಕರ ಮಾರಕ,ಗಂಭೀರ ರೋಗಪೀಡಿತರುಗಳನ್ನು ತನ್ನ ಅಮೃತಮಯ ಕಾರುಣ್ಯದೃಷ್ಟಿಯಿಂದ ವೀಕ್ಷಿಸಿ ಪರಿಹರಿಸುತ್ತಿರುವುದರಿಂದ ಅಸಾಧ್ಯರೋಗಪೀಡಿತ ಭಕ್ತರುಗಳು ರಾಜ್ಯ,ಹೊರರಾಜ್ಯಗಳಿಂದ ಮಹಾಶೈವ ಧರ್ಮಪೀಠದತ್ತ ಧಾವಿಸಿ ಬರುತ್ತಿದ್ದಾರೆ.ಭವರೋಗವೈದ್ಯನಾಗಿರುವ ಪರಶಿವನು ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ವೈದ್ಯನಾಥೇಶ್ವರ ಲೀಲೆ ಮೆರೆಯುತ್ತಿರುವುದರಿಂದ ಕ್ಷೇತ್ರವನ್ನರಸಿ ಬರುವವರ ಎಂತಹದೆ ಅಸಾಧ್ಯ ರೋಗಗಳೂ ಪರಿಹಾರವಾಗುತ್ತಿವೆ.ಶ್ರೀಕ್ಷೇತ್ರ ಕೈಲಾಸದಲ್ಲಿ ವಿಶ್ವೇಶ್ವರ ಶಿವನ ಶಕ್ತಿತರಂಗಗಳು ಅಲೆಅಲೆಯಾಗಿ ತೇಲಿಬರುತ್ತಿರುವುದರಿಂದ ಭಕ್ತರುಗಳು ಮಹಾಶೈವ ಧರ್ಮಪೀಠದ ದ್ವಾರ ಪ್ರವೇಶಿಸುತ್ತಿದ್ದಂತೆಯೇ ಶಿವಶಕ್ತಿತರಂಗಗಳ ಅನುಭೂತಿಯ ದಿವ್ಯಾನುಭವವನ್ನು ಪಡೆಯುತ್ತಾರೆ.

ಮಹಾಶೈವ ಧರ್ಮಪೀಠವು ಸರ್ವಧರ್ಮಸಮನ್ವಯದ ಧರ್ಮಪೀಠವಾಗಿರುವುದರಿಂದ ಮುಸ್ಲಿಂ ಸಮುದಾಯದ ಭಕ್ತರುಗಳು ಸಹ ಮಹಾಶೈವ ಧರ್ಮಪೀಠಕ್ಕೆ ನಡೆದುಕೊಳ್ಳುತ್ತಿದ್ದಾರೆ.ದೇವದುರ್ಗ ತಾಲೂಕಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಪ್ರಸ್ತುತ ಚುಟುಕು ತಾಲೂಕಾ ಪರಿಷತ್ತಿನ ಅಧ್ಯಕ್ಷರೂ ಸಾಹಿತಿ- ಸಂಘಟಕರಾಗಿರುವ ಬಸವರಾಜ ಬ್ಯಾಗವಾಟ ಅವರು ಇಂದು ಗುಡ್ ವರ್ಡ್ ಬುಕ್ಸ್ ಪ್ರಕಾಶನವು ಪ್ರಕಟಿಸಿರುವ ಅಬ್ದುಸಲಾಮ್ ಪುತ್ತಿಗೆ ಅವರು ಕನ್ನಡಕ್ಕೆ ಅನುವಾದಿಸಿರುವ ” ಕನ್ನಡದಲ್ಲಿ ಕುರ್ ಆನ್ ” ಮತ್ತು ಬೆಂಗಳೂರಿನ ಸೆಂಟರ್ ಫಾರ್ ಪೀಸ್ ಅಂಡ್ ಸ್ಪಿರಿಚುವಾಲಿಟಿ ಇಂಟರ್ ನ್ಯಾಶನಲ್ ( CPS International) ಸಂಸ್ಥೆಯು ಪ್ರಕಟಿಸಿರುವ ಮೌಲಾನಾ ವಹೀದುದ್ದೀನ್ ಖಾನ್ ಅವರ ” ಇಸ್ಲಾಂ — ಒಂದು ಆಧ್ಯಾತ್ಮಿಕ ಅವಲೋಕನ” ಎನ್ನುವ ಇಸ್ಲಾಂಧರ್ಮದ ಕುರಿತ ಎರಡು ಕೃತಿಗಳನ್ನು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣಕರಿಗಾರ ಅವರಿಗೆ ಸಮರ್ಪಿಸಿ ಮಹಾಶೈವ ಧರ್ಮಪೀಠವು ಸರ್ವಸಮನ್ವಯ ತತ್ತ್ವದ ಧಾರ್ಮಿಕ ಕೇಂದ್ರ ಎನ್ನುವುದನ್ನು ಬಿತ್ತರಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮೂಲಕಾರ್ಯಕರ್ತರಾದ ಗೋಪಾಲ ಮಸೀದಪುರ,ರಂಗನಾಥ ಮಸೀದಪುರ,ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ, ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರಾಗಿರುವ ಡಾ. ಎನ್ .ಹೆಚ್.ಪೂಜಾರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಮುಖ್ಯಸ್ಥರುಗಳು ಮತ್ತು ಸದಸ್ಯರುಗಳಾಗಿರುವ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ, ಉಮೇಶ ಸಾಹುಕಾರ ಅರಷಣಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ ,ಯಲ್ಲಪ್ಪ ಕರಿಗಾರ,ಸಿದ್ರಾಮಯ್ಯಸ್ವಾಮಿ ಹಳ್ಳಿ,ಶಿವಕುಮಾರ ವಸ್ತಾರ,ಪತ್ರಕರ್ತರುಗಳಾದ ಏಳುಬಾವೆಪ್ಪ ಗೌಡ ಮತ್ತು ಬಸವರಾಜ ಬ್ಯಾಗವಾಟ, ಮತ್ತು ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು ಭಕ್ತರುಗಳು ಉಪಸ್ಥಿತರಿದ್ದರು.

About The Author