ಬಿಜೆಪಿಗೆ ವಿಜಯೇಂದ್ರ ಸಾರಥ್ಯ; ಕಾಂಗ್ರೆಸ್ಸಿನ ಹಿನ್ನಡೆಯ ಸೂಚನೆ : ಮುಕ್ಕಣ್ಣ ಕರಿಗಾರ

ಬಿಜೆಪಿಯ ರಾಷ್ಟ್ರೀಯ ವರಿಷ್ಠರು ಅಳೆದು ತೂಗಿ ಕೊನೆಗೆ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರ ಪುತ್ರ ಮತ್ತು ಶಾಸಕ ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಘಟಕಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.ಯಡಿಯೂರಪ್ಪ ಪಟ್ಟು ಹಿಡಿದು ತಮ್ಮ ಮಗನನ್ನು ರಾಜ್ಯ ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವದಕ್ಕಿಂತ ಬಿಜೆಪಿ ವರಿಷ್ಠರ ರಾಜಕೀಯ ಚಾಣಾಕ್ಷ ನಡೆ ಇಲ್ಲಿ ಎದ್ದು ಕಾಣುತ್ತಿದೆ.ಪಕ್ಷವನ್ನು ಉತ್ಸಾಹದಿಂದ ಮುನ್ನಡೆಸಬಲ್ಲ ನಾಯಕರುಗಳು ರಾಜ್ಯ ಬಿಜೆಪಿಯಲ್ಲಿ ಇಲ್ಲವಾದ್ದರಿಂದ ಸಂಘಟನಾ ಚತುರ ಮತ್ತು ಚುನಾವಣಾ ತಂತ್ರಗಾರಿಕೆಯನ್ನು ಮೈಗೂಡಿಸಿಕೊಂಡಿರುವ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟದ ಮೇಲೆ ಕೂಡಿಸಲಾಗಿದೆ.ಇದು ವಿಜಯೇಂದ್ರ ಅವರ ನಾಯಕತ್ವದ ಸಾಮರ್ಥ್ಯದ ಪರೀಕ್ಷೆಯೂ ಹೌದು.ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗರಿಷ್ಠಸಂಖ್ಯೆಯ ಎಂ.ಪಿ.ಗಳನ್ನು ಗೆಲ್ಲಿಸುವ ಹೊಣೆಗಾರಿಕೆ ಬಿ.ವೈ.ವಿಜಯೇಂದ್ರ ಅವರ ಹೆಗಲಿಗೆ ಹೊರಿಸಿದ್ದಾರೆ ಪಕ್ಷದ ವರಿಷ್ಠರು.ಈ ಪರೀಕ್ಷೆಯಲ್ಲಿ ವಿಜಯೇಂದ್ರ ಯಶಸ್ವಿಯಾದರೆ ಅವರು ನಿರಾಂತಕವಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಬಹುದಲ್ಲದೆ ಪಕ್ಷದಿಂದ ಹಲವು ‘ ಕೊಡುಗೆ’ ಗಳನ್ನು ಪಡೆಯಬಹುದು.ಒಂದು ವೇಳೆ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದ ಸ್ಥಾನಗಳನ್ನು ಪಡೆಯದಿದ್ದರೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ಹೈಕಮಾಂಡ್ ನೆಪಗಳನ್ನು ಹುಡುಕುತ್ತದೆ ಎನ್ನುವುದನ್ನು ಸಂಭ್ರಮದಲ್ಲಿರುವ ವಿಜಯೇಂದ್ರ ಅವರು ಮರೆಯಬಾರದು.

ಬಿಜೆಪಿಯ ವರಿಷ್ಠರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಸಖ್ಯ ಬೆಳಸಿದ್ದರಿಂದ ಕುಮಾರಸ್ವಾಮಿಯವರಿಗೆ ಮುಜುಗರ ಉಂಟು ಮಾಡುವಂತಹ ಬಿಜೆಪಿಯ ಹಿರಿಯ ತಲೆಗಳಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಬಾರದೆಂದೇ ಬಿಜೆಪಿಯ ವರಿಷ್ಠರು ವಿಜಯೇಂದ್ರ ಅವರಿಗೆ ಮಣೆಹಾಕಿದ್ದಾರೆ.ಶೋಭಾ ಕರಂದ್ಲಾಜೆಯವರನ್ನಾಗಲಿ,ಬಸನಗೌಡ ಪಾಟೀಲ್ ಯತ್ನಾಳ ಅವರನ್ನಾಗಲಿ ರಾಜ್ಯಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ್ದರೆ ಅವರು ಕುಮಾರಸ್ವಾಮಿಯವರೊಂದಿಗೆ ಅಂತರಕಾಪಾಡಿಕೊಳ್ಳುತ್ತಿದ್ದರು,ಸೌಜನ್ಯಕ್ಕಿಂತ ಹೆಚ್ಚಿನ ಶಿಷ್ಟಾಚಾರ ಪಾಲಿಸುತ್ತಿರಲಿಲ್ಲವಾದ್ದರಿಂದ ಕುಮಾರಸ್ವಾಮಿಯವರು ಖಂಡಿತವಾಗಿಯೂ ಮುನಿಸಿಕೊಳ್ಳುತ್ತಿದ್ದರು.ಹಾಗಾಗಿ ಕುಮಾರಸ್ವಾಮಿಯವರಿಗೆ ಎನ್ ಡಿ ಎ ಮೈತ್ರಿಕೂಟದ ಕೊಡುಗೆಯಾಗಿ ದಕ್ಕಲಿರುವ ವಿರೋಧಪಕ್ಷದ ನಾಯಕನ ಪಟ್ಟಕ್ಕೆ ಮುಜುಗರವಾಗದಂತಹ,ಕುಮಾರಸ್ವಾಮಿಯವರೊಂದಿಗೆ ವಿನಯ,ಸೌಜನ್ಯದಿಂದ ವರ್ತಿಸಬಲ್ಲ ಯುವಕರು ಎನ್ನುವ ಕಾರಣದಿಂದ ಬಿಜೆಪಿಯ ವರಿಷ್ಠರು ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟನೀಡಿದ್ದಾರೆ.

ರಾಜ್ಯ ಬಿಜೆಪಿಯ ಸಾರಥ್ಯವು ಬಿ ವೈ ವಿಜಯೇಂದ್ರ ಅವರಿಗೆ ಸಿಕ್ಕಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಪಡೆಯದೆ ಇದ್ದರೂ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ.ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯ ಘಂಟೆ.ಕಾಂಗ್ರೆಸ್ ಪಕ್ಷವು ‘ ಗ್ಯಾರಂಟಿಯ ಗೆಲುವಿನ ಗುಂಗಿ’ ನಿಂದ ಈಗ ಹೊರಬರಲೇಬೇಕಿದೆ.ಅಲ್ಲದೆ ಗ್ಯಾರಂಟಿಯ ಅಲೆಗಳಲ್ಲಿ ಮತಗಳ ಮಹಾಪೂರದಿಂದ ಮೇಲೆದ್ದು ಬಂದ ಕಾಂಗ್ರೆಸ್ ಪಕ್ಷವು ಈ ಆರು ತಿಂಗಳೊಳಗಿನ ಅವಧಿಯಲ್ಲಿಯೇ ಜನರ ಬೇಸರ,ಆಕ್ರೋಶಕ್ಕೆ ತುತ್ತಾಗಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನಡುವಿನ ಶೀತಲಸಮರವು ಕಾಂಗ್ರೆಸ್ಸಿನಲ್ಲಿ ಬಣಗಳುಂಟಾಗಲು ಕಾರಣವಾಗಿರುವುದಲ್ಲದೆ ಸುಭದ್ರಸರಕಾರ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಮತನೀಡಿದ ಮತದಾರರಿಗೆ ಭ್ರಮ ನಿರಸನವಾಗಿದೆ.ಗ್ಯಾರಂಟಿಯೋಜನೆಗಳಿಂದ ಅನುಕೂಲವಾಗಿದೆಯೇನೋ ನಿಜ.ಆದರೆ ಬರಿ ಗ್ಯಾರಂಟಿಯೋಜನೆಗಳಿಗಾಗಿ ಹಣ ಸುರಿಸುತ್ತ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದರೆ? ಗ್ಯಾರಂಟಿಯೋಜನೆಗಳ ಕಾರಣದಿಂದ ತಮ್ಮ ಕ್ಷೇತ್ರದಲ್ಲಿ ತಿರುಗಾಡಲು ಆಗದಂತಹ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷದ ಶಾಸಕರುಗಳು ಒಳಗೊಳಗೆ ಸಿದ್ಧರಾಮಯ್ಯನವರ ವಿರುದ್ಧ ಕುದಿಯುತ್ತಿದ್ದಾರೆ.ಸಿದ್ಧರಾಮಯ್ಯನವರು ಈಗ ಪಕ್ಷದ ಶಾಸಕರುಗಳೆಲ್ಲರ ಅಚ್ಚುಮೆಚ್ಚಿನ ನಾಯಕರಾಗಿ ಉಳಿದಿಲ್ಲ.ಲೋಕಸಭಾ ಚುನಾವಣೆಯನ್ನು ಕಣ್ಣಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವುದಕ್ಕೆ ಆದ್ಯತೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡುವುದಿರಲಿ ಸರಕಾರಿ ನೌಕರರ ಸಂಬಳ ನೀಡುವುದಕ್ಕೂ ಪರದಾಡುತ್ತಿದ್ದಾರೆ.ಇದರಿಂದ ಶಾಸಕರ ಬೇಗುದಿಗೆ ಕಾರಣರಾಗಿದ್ದಾರಲ್ಲದೆ ಸಿದ್ಧರಾಮಯ್ಯನವರು ಜನರ ಆಕ್ರೋಶಕ್ಕೂ ಗುರಿಯಾಗಿದ್ದಾರೆ. ಕಾವೇರಿ ನೀರು ನಿರ್ವಹಣೆಯಲ್ಲಿನ ವೈಫಲ್ಯ,ಬರಪರಿಹಾರ ನೀಡುವಲ್ಲಿನ ವೈಫಲ್ಯ,ರೈತರಿಗೆ ವಿದ್ಯುತ್ ನೀಡುವಲ್ಲಿ ವಿಫಲರಾಗಿದ್ದು ಇವೇ ಮೊದಲಾದ ಸಮಸ್ಯೆಗಳು ಅವರಿಗೆ ತೊಂದರೆಯನ್ನುಂಟು ಮಾಡಲಿವೆ.ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಜನರ ಮುಂದೆ ಇಟ್ಟು,ಇದು ಕಾಂಗ್ರೆಸ್ಸಿನ ವೈಫಲ್ಯ ಎಂದು ಬಿಂಬಿಸುತ್ತ ವಿಜಯೇಂದ್ರ ಬಿಜೆಪಿಯ ಗೆಲುವಿನ ಸೂತ್ರರೂಪಿಸಲಿದ್ದಾರೆ.ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ಖಂಡಿತವಾಗಿಯೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗುವ ಸ್ಪಷ್ಟ ಮುನ್ಸೂಚನೆ.

‌ವಿಜಯೇಂದ್ರ ಅವರಿಗೆ ಅವರ ತಂದೆ ಯಡಿಯೂರಪ್ಪನವರ ಕೃಪಾಶೀರ್ವಾದ ಇರುವುದರ ಜೊತೆಗೆ ರಾಜ್ಯದಾದ್ಯಂತ ಅವರದೆ ಆದ ಟೀಮನ್ನು ಕಟ್ಟಿಕೊಂಡಿದ್ದಾರೆ.ರಂಭಾಪುರಿ ಜಗದ್ಗುರುಗಳು ಸೇರಿದಂತೆ ವೀರಶೈವ ಲಿಂಗಾಯತ ಮಠಗಳ ಸ್ವಾಮಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ವಿಜಯೇಂದ್ರ ವೀರಶೈವ ಲಿಂಗಾಯತ ಸಮುದಾಯದ ಕಣ್ಮಣಿಯಾಗಿ ಹೊರಹೊಮ್ಮಿ ಆ ಸಮುದಾಯಗಳ ಮತ ಕ್ರೋಢೀಕರಣದಲ್ಲಿ ಯಶಸ್ವಿಯಾಗುತ್ತಾರೆ.ಮುಂಬರುವ ದಿನಗಳಲ್ಲಿ ಮತ್ತಷ್ಟು ಕೋರ್ಟ್ ಕೇಸುಗಳ ಸರಮಾಲೆಯನ್ನು ಕೊರಳಿಗೆ ಹಾಕಿಕೊಳ್ಳಲಿರುವ ಡಿ.ಕೆ.ಶಿವಕುಮಾರ ಅವರು ತಾವು ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡರಷ್ಟೇ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿ ಅವರು ಪಕ್ಷದ ಸಂಘಟನೆ,ಚುನಾವಣಾ ತಂತ್ರಗಾರಿಕೆಗಳತ್ತ ಅಷ್ಟು ಆಸಕ್ತಿವಹಿಸಲಾರರು.ಐದು ವರ್ಷಗಳ ಮುಖ್ಯಮಂತ್ರಿಪದವಿಯ ಗ್ಯಾರಂಟಿ ಇಲ್ಲದ ಸಿದ್ಧರಾಮಯ್ಯನವರು ‘ನನ್ನ ನಂತರ ರಾಜ್ಯದ ಮುಖ್ಯಮಂತ್ರಿ ಯಾರು ಆಗಬೇಕು?’ ಎನ್ನುವ ಬಗ್ಗೆಯೇ ತಲೆಕೆಡಿಸಿಕೊಳ್ಳುತ್ತಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಹೆಚ್ಚಿನ ಸೀಟುಗಳೊಂದಿಗೆ ಗೆಲ್ಲಿಸಲೇಬೇಕು ಎನ್ನುವ ಆತ್ಮಸ್ಥೈರ್ಯವೂ ಅವರಲ್ಲಿಲ್ಲ .ಕುಮಾರಸ್ವಾಮಿಯವರ ನೇತೃತ್ವದ ಜೆಡಿಎಸ್ ಪಕ್ಷವು ಈಗಾಗಲೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಹಿರಿಯ ನಾಯಕ ಎಚ್ ಡಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರಲ್ಲಿ ನಂಬಿಕೆ,ನಿಷ್ಠೆಯನ್ನು ಇಟ್ಟಿರುವ ಒಕ್ಕಲಿಗರ ಮತಗಳು ಬಿಜೆಪಿಯ ಬುಟ್ಟಿಗೆ ಬೀಳುವ ಅದೃಷ್ಟದ ಹಣ್ಣುಗಳಾಗುತ್ತವೆ.ಹಿಂದೆ ಒಂದು ಅಂಕಣ ಲೇಖನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಂಟರಿಂದ ಹತ್ತು ಸ್ಥಾನಗಳನ್ನು ಪಡೆಯುವುದು ಕಷ್ಟ ಎಂದು ನಾನು ಬರೆದಿದ್ದ ಮಾತು ನಿಜವಾಗುವ ಲಕ್ಷಣಗಳಿವೆ.

About The Author