ನ.27ರಂದು ಶಹಾಪುರದಲ್ಲಿ ಜನಸಂಪರ್ಕ ಸಭೆ, ಸಚಿವರಿಂದ ಪೂರ್ವಭಾವಿ ಸಭೆ

ಶಹಾಪುರ : ನವೆಂಬರ್ 27 ರಂದು ಶಹಾಪುರದ ಆರಭೋಳ ಕಲ್ಯಾಣ ಮಂಟಪದಲ್ಲಿ ಜನ ಸಂಪರ್ಕ ಸಭೆ ನಡೆಯಲಿದ್ದು, ಅದಕ್ಕೆ ಬೇಕಾದ ಸೌಲಭ್ಯಗಳ ಕುರಿತು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ತಾಲೂಕು ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.

           ಯಾದಗಿರಿ,ಸುರಪುರದಲ್ಲಿ ಈಗಲೇ ಜನಸಂಪರ್ಕ ಸಭೆ ನಡೆಸಲಾಗಿದೆ.ಯಾದಗಿರಿ 290, ಸುರಪುರದಲ್ಲಿ 360 ಅರ್ಜಿಯನ್ನು ಬಂದಿದ್ದು ಹಲವು ಅರ್ಜಿಗಳನ್ನು ಈಗಾಗಲೆ ಇತ್ಯರ್ಥ ಮಾಡಲಾಗಿದೆ.ನ.27 ರಂದು ಶಹಾಪುರದಲ್ಲಿ ನಡೆಯುವ ಜನಸಂಪರ್ಕ ಸಭೆಯಲ್ಲಿ ಜಿಲ್ಲೆ ಮತ್ತು ತಾಲೂಕು ಅಧಿಕಾರಿಗಳು ಎಲ್ಲಾ ಮಾಹಿತಿ ತರಲೇಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

             ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟು ಕಾರಣ ರಾಜ್ಯದಲ್ಲಿ 223 ತಾಲೂಕುಗಳು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ.ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಗಾಲ ಪ್ರದೇಶಗಳೆಂದು ಘೋಷಿಸಲಾಗಿದ್ದು, ಮುಖ್ಯಮಂತ್ರಿಗಳು ಯಾದಗಿರಿ ಜಿಲ್ಲೆಗೆ  ಒಂಭತ್ತು ಕೋಟಿ ಬರ ಪರಿಹಾರ ಧನ ನೀಡಿದ್ದಾರೆ ಎಂದರು.

            ಪ್ರಗತಿ ಹಂತದಲ್ಲಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ತೆಗೆದುಕೊಂಡರು.ನಗರಸಭೆ, ತಹಶೀಲ್ದಾರ ಕಛೇರಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದರು.ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಪಶು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಇಲಾಖೆ : ತಾಲೂಕಿನಲ್ಲಿ ರೈತರು ಎಪ್ ಐ ಡಿ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಆದಷ್ಟು ಜಾಗೃತ ಕ್ರಮ ವಹಿಸಬೇಕೆಂದು ಸೂಚಿಸಿದರು. ತಾಲೂಕಿನಲ್ಲಿ 43,856  ಹಿಡುವಳಿದಾರರಿದ್ದು, 32280 ರೈತರಿಂದ ಬೆಳೆ ನಷ್ಟವಾಗಿದೆ. 40,000 ರೈತರು ಎಪ್ ಐ ಡಿ ಮಾಡಿಸಿಕೊಂಡಿದ್ದಾರೆ.4858 ಜನ ರೈತರು ಎಪ್ ಐ ಡಿ ಮಾಡಿಸಿಕೊಂಡಿಲ್ಲ.ವಡಗೇರಾ ತಾಲೂಕಿನಲ್ಲಿ 30058 ಹಿಡುವಳಿದಾರರಿದ್ದು,24000 ರೈತರು ಎಪ್ ಐ ಡಿ ಮಾಡಿಸಿಕೊಂಡಿದ್ದು,6058 ಜನ ರೈತರು ಎಪ್ ಐ ಡಿ ಬಾಕಿ ಇದೆ.ಒಂದು ವಾರದೊಳಗೆ ಕ್ರಮವಹಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನಲ್ಲಿ ತೊಗರಿ ಬೆಳೆಗೆ ನೆಟೆ ರೋಗದಿಂದ 3886 ಜನ ರೈತರ ತೊಗರಿಬೆಳೆ ನಷ್ಟವಾಗಿದ್ದು, 2153 ರೈತರಿಗೆ ನೇರ ಪರಿಹಾರ ನೀಡಲಾಗಿದೆ.1700 ರೈತರಿಗೆ ಇನ್ನೂ ಪರಿಹಾರ ನೀಡಲಾಗಿಲ್ಲ ಎಂದು ತಹಶೀಲ್ದಾರು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ 26616 ಕುಟುಂಬ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, 22390 ಕುಟುಂಬ ಫಲಾನುಭವಿಗಳ ನೊಂದಾವಣೆಯಾಗಿದೆ. 20142 ಕುಟುಂಬ ಫಲಾನುಭವಿಗಳ ಖಾತೆಗೆ ನೇರವಾಗಿ ಎರಡು ಸಾವಿರ ರೂಪಾಯಿ ಮನೆ ಯಜಮಾನಿಗೆ ಹಣ ಜಮಾವಣಿಯಾಗಿದೆ. 1169 ಅರ್ಜಿಗಳು ಬಾಕಿ ಇದೆ ಎಂದು ತಿಳಿಸಿದರು.ಸಚಿವರು ಅದನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ಆರೋಗ್ಯ ಅಧಿಕಾರಿಯಾದ ರಮೇಶ್ ಗುತ್ತಿಗೆದಾರ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು ಆಸ್ಪತ್ರೆಯಲ್ಲಿ 58 ಜನ ಗುತ್ತಿಗೆಆಧಾರದ ಮೇಲೆ  ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಕೂಡ ಆಸ್ಪತ್ರೆಯಿಂದ ಹಲವು ಸಮಸ್ಯೆಗಳು ನಮ್ಮ ಗಮನಕ್ಕೆ ಬರುತ್ತಿವೆ. ಆಸ್ಪತ್ರೆಯಿಂದ ಔಷಧಿಗಳ ಕೊರತೆ ಇದ್ದರೆ ನಮಗೆ ತಿಳಿಸಿ. ಯಾವುದೇ ಔಷಧಿಗಳು ಕೊರತೆಯಾಗದಂತೆ ನೋಡಿಕೊಳ್ಳಬೇಕು. ವೈದ್ಯರು ಹೊರಗಿನ ಮೆಡಿಕಲ್ ಗಳಿಗೆ ಔಷಧಿ ಚೀಟಿ ಬರೆದುಕೊಡುತ್ತಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ ಎಂದು ಎಚ್ಚರಿಸಿದರು. ಆಸ್ಪತ್ರೆಯಲ್ಲಿರುವ ಔಷಧಿಗಳ ಮಾಹಿತಿಯನ್ನು ಆಸ್ಪತ್ರೆಯ ಮುಂದೆ ಬೋರ್ಡ್ ಫಲಕದಲ್ಲಿ ಹಾಕಬೇಕು ಎಂದು ಸೂಚಿಸಿದರು.

                    ಸಭೆಯಲ್ಲಿ ತಹಸಿಲ್ದಾರ್ ಉಮಾಕಾಂತ ಹಳ್ಳೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರೆದಾರ್, ಪೌರಾಯುಕ್ತ ರಮೇಶ್ ಬಡಿಗೇರ್, ಪೋಲಿ ಸರ್ಕಲ್ ಇನ್ಸ್ಪೆಕ್ಟರ್ ಎಸ್ ಎಂ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

About The Author