ಮಕ್ಕಳ ಸೃಜನಶೀಲತೆ ಅಭಿವ್ಯಕ್ತತೆಯನ್ನು ಗುರುತಿಸಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಅವಶ್ಯಕ : ಡಾ.ಸುದತ್ ದರ್ಶನಾಪುರ

ಶಹಾಪುರ : ನಾಡನ್ನು ಕಟ್ಟುವ ನವ ಭಾರತ ನಿರ್ಮಾಣದ ರುವಾರಿಗಳಾದ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು, ಅವರಲ್ಲಿನ ಸೃಜನಶೀಲತೆ ಅಭಿವ್ಯಕ್ತತೆಯನ್ನು ಗುರುತಿಸಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಮಕ್ಕಳ ತಜ್ಞ ಡಾ.ಸುದತ್ ದರ್ಶನಾಪುರ ತಿಳಿಸಿದರು.
     ನಗರದ ಬಾಪುಗೌಡ ದರ್ಶನಾಪುರ ಪಬ್ಲಿಕ್ ಶಾಲೆಯ ಆವರಣದಲ್ಲಿ ಸರ್ಕಾರದ ಜಿಪಂ.ಶಿಕ್ಷಣ ಇಲಾಖೆ ವತಿಯಿಂದ ೨೦೨೩-೨೪ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು,ಪ್ರತಿಯೊಂದು ಮಗುವಿನಲ್ಲಿ ಒಂದೊಂದು ರೀತಿಯ ಸಾಮರ್ಥ್ಯವಿರುತ್ತದೆ, ಅದನ್ನು ಗುರುತಿಸುವ ಕಾರ್ಯ ಗುರುವೃಂದದವರು ಮಾಡಬೇಕು, ಮಕ್ಕಳಿಗಾಗಿ ಹತ್ತು ಹಲವು ಸ್ಪರ್ಧೆಗಳನ್ನು ಏರ್ಪಡಿಸಬೇಕು, ಗುಣಾತ್ಮಕ ಮೌಲ್ಯಗಳನ್ನು ತರುವಂತಹ ಪ್ರಯತ್ನ ನಿರಂತರವಾಗಿರಲಿ, ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗಲಿ, ಪ್ರತಿಭೆಗಳು ರಾಜ್ಯ ರಾಷ್ಟ್ರದ ವರೆಗೆ ಪ್ರಜ್ವಲಿಸಲಿ ಎಂದರು.
      ಕ್ಷೇತ್ರ ಸಮನ್ವಯಾಧಿಕಾರಿ ರೇಣುಕಾ ಪಾಟೀಲ್ ಮಾತನಾಡಿ, ಶಿಕ್ಷಣ ಎಲ್ಲಾ ಸಮಸ್ಯೆಗಳಿಗೂ ದಿವ್ಯೌಷಧಿಯಾಗಿದೆ, ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತರಬೇತಿ ನೀಡುವುದು ಪ್ರಸ್ತುತ ಅವಶ್ಯಕತೆಯಾಗಿದ್ದು, ಅದರಲ್ಲಿ ಪ್ರತಿಭಾಕಾರಂಜಿಯೂ ಒಂದು ಭಾಗವಾಗಿದ್ದು, ಪ್ರತಿಭೆಗಳನ್ನು ಗುರುತಿಸುವುದು ಬಹು ಮುಖ್ಯವಾಗಿದ್ದು, ಸರ್ಕಾರ ಶಿಕ್ಷಣ ಇಲಾಖೆ ಪ್ರತಿಭಾಕಾರಂಜಿ ಮೂಲಕ ಪ್ರತಿಭಾನ್ವೇಷಣೆಗೆ ಸೂಕ್ತ ಅವಕಾಶ ನೀಡಿದೆ ಎಂದರು.
   ದಕ್ಷಿಣ ಭಾಗದ ಕ್ಲಸ್ಟರ್‌ನ ಸಿಆರ್‌ಪಿ ವೀರಭದ್ರಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಪ್ರಮುಖರಾದ ಶರಣಪ್ಪ ಪಾಟೀಲ, ಈರಯ್ಯ ದರ್ಶನಾಪುರ, ಪ್ರಧಾನ ಅಧ್ಯಾಪಕಿ ಶಾಂತಕುಮಾರಿ, ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಮುಖ ತಿಪ್ಪಣ್ಣ ಕ್ಯಾತÀನಾಳ, ಪ್ರಶಾಂತ ಯಾಳಗಿ, ಸಂಗನಬಸವ, ಅರುಂಧತಿ ಕುಲಕರ್ಣಿ, ಪ್ರಸಾದ ಸೇರಿದಂತೆ ಇತರರು ಇದ್ದರು. ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಪ್ರಸ್ತುತಪಡಿಸಿದರು, ಬಾಪುಗೌಡ ದರ್ಶನಾಪುರ ಪಬ್ಲಿಕ್ ಶಾಲೆ ಮಕ್ಕಳು ಮಹಿಷಾಸುರ ಮರ್ದಿನಿ ಸಮೂಹ ನೃತ್ಯ ಪ್ರದರ್ಶಿಸಿದರು, ಕಾರ್ಯಕ್ರಮವನ್ನು ಶಿಕ್ಷಕಿ ಅಶ್ವಿನಿ ಜೋಶಿ ನಿರೂಪಿಸಿದರು, ದಕ್ಷಿಣ ಭಾಗದ ಕ್ಲಸ್ಟರ್‌ನ ವಿವಿಧ ಶಾಲೆಗಳ ಮಕ್ಕಳು, ಆಯ್ದ ಶಿಕ್ಷಕರು ಭಾಗವಹಿಸಿದ್ದರು, ಜಾನಪದ ನೃತ್ಯ, ಅಭಿನಯ ಗೀತೆ, ರಸಪ್ರಶ್ನೆ, ಛದ್ಮವೇಷ, ಲಘು ಸಂಗೀತ, ಕಥೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಂಡು ಪ್ರತಿಭೆಯನ್ನು ಪ್ರದರ್ಶಿಸಿದರು.

About The Author