ಬರ ಅಧ್ಯಯನಕ್ಕಿಂತ ರಾಜ್ಯ ಬಿಜೆಪಿಯು ಕೇಂದ್ರದಿಂದ ನೆರವು ತರುವುದು ಲೇಸು : ಮುಕ್ಕಣ್ಣ ಕರಿಗಾರ

ರಾಜ್ಯ ಬಿಜೆಪಿಯು ಹದಿನೇಳು ತಂಡಗಳಾಗಿ ರಾಜ್ಯದಲ್ಲಿ ಸಂಚರಿಸಿ ಬರದ ಸಮೀಕ್ಷೆ ನಡೆಸಲಿದೆಯಂತೆ.ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಗ್ಗೆ ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕುವ ಉದ್ದೇಶದಿಂದ ರಾಜ್ಯ ಬಿಜೆಪಿ ಪಕ್ಷವು ಕೈಗೊಳ್ಳಲಿರುವ ಬರಸಮೀಕ್ಷೆಯು ಯಾವ ರಚನಾತ್ಮಕ ಉದ್ದೇಶವನ್ನು ಹೊಂದಿರುವಂತೆ ಕಾಣುತ್ತಿಲ್ಲ.ಇಡೀ ರಾಜ್ಯವೇ ಬರದ ಬವಣೆಗೆ ತುತ್ತಾಗಿರುವ ಸಂದರ್ಭದಲ್ಲಿ ರಾಜ್ಯ ಬಿಜೆಪಿಗರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಸರಕಾರದಿಂದ ಪರಿಹಾರಧನ ಮಂಜೂರು ಮಾಡಿಸಿಕೊಂಡು ಬಂದು ತಾವು ಜನಪರವಾಗಿದ್ದೇವೆ,ಸಂಕಷ್ಟದ ಕಾಲದಲ್ಲಿ ಜನರಿಗೆ ನೆರವಾಗಿದ್ದೇವೆ ಎಂದು ಬಿಂಬಿಸಿಕೊಳ್ಳಬಹುದಿತ್ತು.ಅದನ್ನು ಮಾಡದೆ ಹಳ್ಳಹಳ್ಳಿ ಸುತ್ತಿ ಬಿಜೆಪಿಯು ಮಾಡುವ ಸಾಧನೆಯಾದರೂ ಏನು? ಅಥವಾ ಬಿಜೆಪಿ ಪಕ್ಷದ ಸಮೀಕ್ಷೆಯನ್ನು ಆಧರಿಸಿಯಾದರೂ ಕೇಂದ್ರ ಸರಕಾರವು ರಾಜ್ಯಕ್ಕೆ ಬರಪರಿಹಾರನಿಧಿ ಘೋಷಿಸುವ ಖಾತ್ರಿಯಾದರೂ ಇದೆಯೆ? ರಾಜ್ಯದಲ್ಲಿ ಬಿಜೆಪಿ ಪಕ್ಷವು ಅಸ್ತಿತ್ವದಲ್ಲಿದೆ ಎನ್ನುವುದನ್ನು ತೋರಿಸುವುದು ಬಿಟ್ಟರೆ ಬಿಜೆಪಿಯ ಬರಸಮೀಕ್ಷೆಯಿಂದ ಏನೂ ಪ್ರಯೋಜನ ಆಗುವುದಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರಬಹುದು.ಬಿಜೆಪಿಗೆ ಕಾಂಗ್ರೆಸ್ ವಿರೋಧ ಪಕ್ಷವಾಗಿರಬಹುದು.ಆದರೆ ಆರುಕೋಟಿ ಕನ್ನಡಿಗರೇನು ಬಿಜೆಪಿಯ ವಿರೋಧಿಗಳಲ್ಲವಲ್ಲ! ರಾಜ್ಯದ ಅರ್ಧದಷ್ಟು ಜಿಲ್ಲೆಗಳು ಬರದ ತೀವ್ರಬವಣೆಯನ್ನು ಅನುಭವಿಸುತ್ತಿವೆ,ಕಾಲು ಭಾಗ ಜಿಲ್ಲೆಗಳು ಬರದಬೇಗೆಗೆ ಸಿಲುಕಿವೆ.ರಾಜ್ಯ ಸರಕಾರವು ಬರದಿಂದಾಗಿ ₹33,000 ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಿದ್ದು ಇದರಲ್ಲಿ ₹17,900 ಕೋಟಿಯಷ್ಟು ಅನುದಾನವನ್ನು ಕೇಂದ್ರದ ಬರಪರಿಹಾರನಿಧಿಯಡಿ ಮಂಜೂರು ಮಾಡಲು ಕೋರಿ ಕೇಂದ್ರಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಕೇಂದ್ರದಿಂದ ನಿಯೋಜಿಸಲ್ಪಟ್ಟ ಅಧಿಕಾರಿಗಳ ಬರ ಅಧ್ಯಯನ ತಂಡವು ರಾಜ್ಯದ ಬರಪರಿಸ್ಥಿತಿಯ ಅಧ್ಯಯನ ಮಾಡಿ ಹೋದ ಬಳಿಕ ರಾಜ್ಯಸರಕಾರದ ಅಹವಾಲನ್ನು ಹೊತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡ,ಕೃಷಿಸಚಿವ ಚೆಲುವರಾಯಸ್ವಾಮಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಈ ಮೂವರು ಸಚಿವರು ಮೂರುದಿನಗಳ ಕಾಲ ದೆಹಲಿಯಲ್ಲೇ ಇದ್ದು ಕೇಂದ್ರಸಚಿವರುಗಳ ಭೇಟಿಗಾಗಿ ಕಾಯ್ದು ಕೇಂದ್ರಸಚಿವರುಗಳು ಭೇಟಿಗೆ ಅವಕಾಶನೀಡದೆ ಇದ್ದುದರಿಂದ ಮರಳಿ ಬಂದಿದ್ದಾರೆ. ಕೇಂದ್ರ ಸಚಿವರುಗಳ ಪ್ರಜಾಸತ್ತಾತ್ಮಕವಲ್ಲದ ಈ ನಡೆಯು ಬಿಜೆಪಿಯು ಜನವಿರೋಧಿ ಪಕ್ಷ ಎಂದು ಟೀಕಿಸಲು ಕಾಂಗ್ರೆಸ್ ಗೆ ಒಂದು ಅಸ್ತ್ರ ಸಿಕ್ಕಂತೆ ಆಯಿತು.ಕರ್ನಾಟಕದಿಂದ ಬಂದಿದ್ದ ಸಚಿವರು ಅವರು ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿನಿಧಿಗಳಾಗಿ ಜನರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲು ಕೇಂದ್ರದ ಬಳಿ ಬಂದಿದ್ದರು.ಕರ್ನಾಟಕಕ್ಕೆ ಅನುದಾನ ನೀಡದೆ ಇದ್ದರೂ ಪರವಾಗಿರಲಿಲ್ಲ,ಭೇಟಿಗೆ ಅವಕಾಶಕೇಳಿದ ರಾಜ್ಯದ ಜವಾಬ್ದಾರಿಯುತ ಸಚಿವತ್ರಯರಿಗೆ ಭೇಟಿಗೆ ಅವಕಾಶವನ್ನೇ ನೀಡದಿರುವ ಮೂಲಕ ಕೇಂದ್ರ ಸರಕಾರವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಿಕ್ಕರಿಸಿದೆ.ಕರ್ನಾಟಕದ ಜನತೆ ಕೇಂದ್ರ ಸಚಿವರುಗಳು ರಾಜ್ಯದ ಮೂವರು ಸಚಿವರುಗಳಿಗೆ ಭೇಟಿಗೆ ಅವಕಾಶ ನೀಡದೆ ಇದ್ದುದನ್ನು ಬಿಜೆಪಿಯ ತಪ್ಪುನಡೆ ಎಂದೇ ಭಾವಿಸಿದ್ದಾರೆ.ಜನರು ಈ ಬಗ್ಗೆ ಪ್ರಶ್ನಿಸಿದರೆ ಬಿಜೆಪಿಯ ಸಮೀಕ್ಷಾ ತಂಡಗಳು ನೀಡುವ ಉತ್ತರವಾದರೂ ಏನು ?

‌ರಾಜ್ಯ ಬಿಜೆಪಿಯು ಬರ ಸಮೀಕ್ಷೆ ನಡೆಸುವ ಬದಲು ರಾಜ್ಯಸರಕಾರವು ಅಂದಾಜಿಸಿದ ಬರದಿಂದಾದ ನಷ್ಟದಲ್ಲಿಯೇ ಸ್ವಲ್ಪ ಹೆಚ್ಚೋ ಕಡಿಮೆಯೋ ತೋರಿಸಿ ಕೇಂದ್ರದಿಂದ ಬರಪರಿಹಾರ ನಿಧಿ ಮಂಜೂರು ಮಾಡಿಸಿದ್ದರೆ ಪಕ್ಷಕ್ಕೆ ಹೆಸರು ಬರುತ್ತಿತ್ತು.ರಾಜ್ಯದ ಬಿಜೆಪಿ ಮುಖಂಡರುಗಳು ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿ ಪ್ರಧಾನಮಂತ್ರಿ,ಗೃಹಮಂತ್ರಿಯವರು ಸೇರಿದಂತೆ ಇತರ ಮಂತ್ರಿಗಳನ್ನು ಭೇಟಿ ಮಾಡಿ,ಅನುದಾನ ಬಿಡುಗಡೆ ಮಾಡಿಸಿದ್ದರೆ ಜನ ಸಂಭ್ರಮಿಸುತ್ತಿದ್ದರು.ಸಂಪುಟದರ್ಜೆಯ ಸಚಿವರಾಗಿರುವ ಪ್ರಹ್ಲಾದಜೋಶಿಯವರು ಸೇರಿದಂತೆ ಕರ್ನಾಟಕದ ನಾಲ್ಕು ಜನರು ಕೇಂದ್ರದಲ್ಲಿ ಸಚಿವರಾಗಿದ್ದಾರೆ.ಅವರಾದರೂ ರಾಜ್ಯದ ಬರಪರಿಸ್ಥಿತಿಯ ಬಗ್ಗೆ ಕೇಂದ್ರಸರ್ಕಾರದ ವರಿಷ್ಠರಿಗೆ ಮನವರಿಕೆ ಮಾಡಿ,ಬರಪರಿಹಾರ ನಿಧಿ ಬಿಡುಗಡೆ ಮಾಡಿಸಬೇಕಿತ್ತು.ಬರಪರಿಹಾರ ಕಾಮಗಾರಿಗಳನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷವೇ ಅನುಷ್ಠಾನಗೊಳಿಸಿದರೂ ನಾವೇ ಅನುದಾನವನ್ನು ಕೇಂದ್ರ ಸರಕಾರದಿಂದ ಬಿಡುಗಡೆ ಮಾಡಿಸಿದ್ದೇವೆ ಎಂದು ಬಿಜೆಪಿಗರು ಜನರೆದುರು ಹೇಳಿಕೊಳ್ಳಬಹುದಿತ್ತು.

ಬರಪರಿಸ್ಥಿತಿಯಂತಹ ವಿಕೋಪದ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸಲ್ಲದು.ಜನರ ಬವಣೆಗೆ ಸ್ಪಂದಿಸುವುದು ರಚನಾತ್ಮಕ ರಾಜಕಾರಣ.ಪಕ್ಷರಾಜಕಾರಣಕ್ಕಿಂತ ರಾಜ್ಯದ ಹಿತವನ್ನು ಎತ್ತಿಹಿಡಿಯುವ ರಚನಾತ್ಮಕ ರಾಜಕಾರಣ ಇಂದಿನ ತುರ್ತು ಅಗತ್ಯ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಾದರೆ ಬಿಜೆಪಿಯ ರಾಜ್ಯನಾಯಕರುಗಳು ದೆಹಲಿಯತ್ತಮುಖಮಾಡಬೇಕು,ಹಳ್ಳಿಗಳತ್ತ ಅಲ್ಲ.ಕೇಂದ್ರ ಸರಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ‘ ನಾವೇ ಅನುದಾನ ತಂದೆವು’ ಎಂದು ಬೇಕಿದ್ದರೆ ಜನರೆದುರು ಹೇಳಿಕೊಳ್ಳಲಿ.ಕೇಂದ್ರದಲ್ಲಿ ತಮ್ಮದೇ ಪಕ್ಷವು ಅಧಿಕಾರದಲ್ಲಿದ್ದರೂ ಕೇಂದ್ರಸರಕಾರದಿಂದ ನಯಾಪೈಸೆ ನೆರವು ಪಡೆಯಲು ಆಗದ ರಾಜ್ಯ ಬಿಜೆಪಿ ನಾಯಕರುಗಳು ಜನರ ಬಳಿ ಹೋಗಿ ಹೇಳುವುದಾದರೂ ಏನನ್ನು ? ‘ಸಿದ್ರಾಮಯ್ಯ ಮುಖ್ಯಮಂತ್ರಿಯಾದರೆ ಬರಬೀಳುತ್ತದೆ’ , ‘ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬರಬೀಳುತ್ತದೆ’ ಎನ್ನುವಂತಹ ಬಾಲಿಷ ( chidish) ಮಾತುಗಳಿಂದ ಬರದ ಬವಣೆಗೆ ತುತ್ತಾದ ಜನರ ಆಕ್ರೋಶವನ್ನು ತಣಿಸಲು ಸಾಧ್ಯವಿಲ್ಲ.ರಾಜ್ಯದ ಜವಾಬ್ದಾರಿಯುತ ವಿರೋಧಪಕ್ಷವಾಗಿ ಜನರ ಸಂಕಷ್ಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವ ಪ್ರಯತ್ನಮಾಡಿದರೆ ಮಾತ್ರ ಜನರು ಬಿಜೆಪಿಯನ್ನು ನಂಬುತ್ತಾರೆ.

About The Author