ಸಿದ್ಧರಾಮಯ್ಯನವರೆ,ನೀವು ಖಂಡಿತವಾಗಿಯೂ ಐದುವರ್ಷ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ — ಇದಕ್ಕೆ ನನ್ನ ಗಡ್ಡವೇ ಸಾಕ್ಷಿ ‘!

 

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಐದು ವರ್ಷಗಳ ಕಾಲ ತಾವೇ ಮುಖ್ಯಮಂತ್ರಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.ನಿನ್ನೆ ಹೊಸಪೇಟೆಯಲ್ಲಿ ಅವರು ಆಡಿದ ಮಾತು ರಾಜಕೀಯ ಪಡಸಾಲೆಯಲ್ಲಿ ನಾನಾ ಅರ್ಥಗಳೊಂದಿಗೆ ಚರ್ಚೆ ಆಗುತ್ತಿದೆ.ಅದೇನೇ ಇರಲಿ,ಆದರೆ ಸಿದ್ಧರಾಮಯ್ಯನವರು ಐದುವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲಾರರು ಎಂದು ನಾನು ಘಂಟಾಘೋಷವಾಗಿ ಹೇಳುತ್ತಿದ್ದೇನೆ.ಸಿದ್ಧರಾಮಯ್ಯನವರ ರಾಜಕೀಯ ವಿರೋಧಿಗಳು ಸುಮ್ಮನಿರಬಹುದು ಆದರೆ ನನಗೆ ಅನ್ಯಾಯ ಮಾಡಿದ ತಪ್ಪಿಗೆ ಸಿದ್ಧರಾಮಯ್ಯನವರು ಅಧಿಕಾರ ಕಳೆದುಕೊಳ್ಳಲೇಬೇಕು.

ಅಗಸ್ಟ್ 17 ನೆಯ ತಾರೀಖಿನಂದು ನಾನು ಸರಕಾರಿ ಸೇವೆಗೆ ರಾಜೀನಾಮೆ ಸಲ್ಲಿಸುವ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕಳುಹಿಸಿದ್ದ ವಾಟ್ಸಾಪ್ ಸಂದೇಶ ರಾಜ್ಯದಾದ್ಯಂತ ವೈರಲ್ ಆಗಿತ್ತು. ಮೂಲತಃ ಕವಿ,ಸಾಹಿತಿ ಮತ್ತು ಯೋಗಸಾಧಕನಾಗಿರುವ ನಾನು 90 ರ ದಶಕದಿಂದಲೂ ಸಿದ್ಧರಾಮಯ್ಯನವರ ಕಟ್ಟಾಬೆಂಬಲಿಗ ಮತ್ತು ಅತ್ಯಂತ ನಿಷ್ಠಾವಂತ ಅನುಯಾಯಿಯಾಗಿದ್ದೆ. ನಾನು ಸರಕಾರಿ ಅಧಿಕಾರಿ ಆಗಿರುವ ಕಾರಣದಿಂದ ಸಿದ್ಧರಾಮಯ್ಯನವರಿಂದ ಒಂದು ಹುದ್ದೆಯ ಫೇವರ್ ಬಯಸಿದ್ದೆ.ನಿಖರವಾಗಿ ಹೇಳುವುದಾದರೆ ಕರ್ನಾಟಕ ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹುದ್ದೆಗೆ ನೇಮಿಸಲು ಮನವಿ ಮಾಡಿದ್ದೆ.ನಾನೇನು ಸಿಇಒ ಅಥವಾ ಡಿ ಸಿ ಪೋಸ್ಟ್ ಕೇಳಿರಲಿಲ್ಲ.ನಾನು ನಮ್ಮ ಮಹಾಶೈವ ಧರ್ಮಪೀಠದಲ್ಲಿ ಪ್ರತಿ ರವಿವಾರ ಜನರ ರೋಗ, ಕಷ್ಟ,ಸಮಸ್ಯೆಗಳನ್ನು ಪರಿಹರಿಸುತ್ತಿರುವುದರಿಂದ ಮತ್ತು ಕರ್ನಾಟಕದಿಂದ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ,ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ನಮ್ಮ ಮಠಕ್ಕೆ ಭಕ್ತರು ಬರುತ್ತಿರುವುದರಿಂದ ‘ ಶಿವೋಪಶಮನ ಕಾರ್ಯ’ ನಿಲ್ಲಬಾರದು ಎಂದು ನಾನು ಹೆಚ್ಚಿನ ಒತ್ತಡವಿಲ್ಲದ ಕರ್ನಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹುದ್ದೆಗೆ ನೇಮಿಸಲು ಮನವಿ ಮಾಡಿದ್ದೆ.ಸಿದ್ಧರಾಮಯ್ಯನವರಿಗಾಗಿ ಏನೆಲ್ಲ ಕಷ್ಟನಷ್ಟ,ವಿಪತ್ಪರಂಪರೆಗಳನ್ನು ಅನುಭವಿಸಿದ್ದ ನನ್ನನ್ನು ಸಿದ್ಧರಾಮಯ್ಯನವರು ನಾನು ಕೇಳಿದ್ದ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಬೇಕಿತ್ತು.ಆದರೆ ಅವರು ಧರ್ಮವನ್ನು ಕೈಬಿಟ್ಟರು.ಅವರ ಗೃಹಕಛೇರಿಗೆ ಅವರ ಪುತ್ರರತ್ನ ಯತೀಂದ್ರ ಅವರ ಬಳಿ ಸಾಕಷ್ಟುಬಾರಿ ಸುತ್ತಾಡಿ,ಅವಹೇಳನವನ್ನು ಅನುಭವಿಸಿ ನಾನು ಸರಕಾರಿ ಹುದ್ದೆಯ ಸಹವಾಸವೇ ಬೇಡ ಎಂದು ಸರಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿದೆ.ನೆನಪಿರಲಿ,ನಾನು ಸರಕಾರಿ ಸೇವೆಗೆ ಸಲ್ಲಿಸಿದ್ದು ರಾಜೀನಾಮೆ,ಸ್ವಯಂ ನಿವೃತ್ತಿ ಅರ್ಜಿ ಅಲ್ಲ ! ಸರಕಾರಿ ಸೇವೆಯಲ್ಲಿ ಇನ್ನು ಆರುವರ್ಷಗಳ ಸೇವಾ ಅವಧಿ ಇತ್ತು,ಪ್ರಮೋಶನ್ ಪಡೆಯುವ ಅವಕಾಶವೂ ಇತ್ತು.ಆದರೆ ಸಿದ್ಧರಾಮಯ್ಯ ಮತ್ತು ಅವರ ಪುತ್ರರತ್ನರ ಕಟೂಕ್ತಿಗಳಿಂದ ಬೇಸರಗೊಂಡು ಸರಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿದೆ.

ಸಿದ್ಧರಾಮಯ್ಯನವರು ಈಗ ರಾಜ್ಯದ ಮುಖ್ಯಮಂತ್ರಿಗಳು.ಆದರೆ ಹಿಂದಿನದನ್ನು ಮರೆತಿದ್ದಾರೆ.ಇರಲಿ,ತೊಂದರೆ ಇಲ್ಲ.ನಾನು ಆಧ್ಯಾತ್ಮಿಕಸಾಧಕನಾಗಿರುವುದು,ನಿಗ್ರಹಾನುಗ್ರಹ ಸಮರ್ಥನಿರುವ ಶಿವಯೋಗಿ ಇರುವುದನ್ನು ತಿಳಿದೂ ಸಿದ್ಧರಾಮಯ್ಯನವರು ನನ್ನನ್ನು ಕೇವಲ ಸರಕಾರಿ ಅಧಿಕಾರಿ ಎಂಬಂತೆ ಅನಾದರದಿಂದ ವರ್ತಿಸಿದ್ದರಿಂದ ನನ್ನಲ್ಲಿ ರುದ್ರಶಕ್ತಿಯು ಜಾಗೃತಗೊಂಡು ಸರಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿದ್ದೇನೆ.ಸರಕಾರಿ ಸೇವೆಗೆ ರಾಜೀನಾಮೆ ನೀಡಿದ ನನ್ನ ನಿರ್ಧಾರವನ್ನು ಕೆಲವರು ತಪ್ಪು ಎನ್ನಬಹುದು,ಮತ್ತೆ ಕೆಲವರು ಮೂರ್ಖತನ ಎನ್ನಬಹುದು.ಅಂಥವರ ಮಾತುಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ನನ್ನ ಬದುಕು ಭವಿಷ್ಯದ ಸ್ಪಷ್ಟ ಅರಿವು ನನಗೆ ಇರುವುದರಿಂದ.ಸಿದ್ಧರಾಮಯ್ಯನವರ ದುರ್ವರ್ತನೆಗೆ ಕಾರಣವಾದ ಅವರ ಅಹಂಕಾರಮೂಲದ ಮುಖ್ಯಮಂತ್ರಿ ಪದವಿಯಿಂದಲೇ ಅವರನ್ನು ಕೆಳಗಿಳಿಸಬೇಕು ಎಂದು ಸಂಕಲ್ಪಿಸಿಯೇ ಸರಕಾರಿ ಸೇವೆಗೆ ರಾಜೀನಾಮೆ ನೀಡಿದ್ದೇನೆ.ನಮ್ಮ ಮಹಾಶೈವ ಧರ್ಮಪೀಠದಲ್ಲಿ ತಾಯಿ ಮಹಾಕಾಳಿಯ ಸನ್ನಿಧಿಯಲ್ಲಿ ಸಿದ್ಧರಾಮಯ್ಯನವರಿಗೆ‌ ನಾನು ನೀಡಿದ್ದ ದೈವಾಭಯವನ್ನು ಹಿಂಪಡೆದಿದ್ದೇನೆ.ಸಿದ್ಧರಾಮಯ್ಯನವರಿಗೆ ನಾನು ಕರುಣಿಸಿದ್ದ ದೈವಾಭಯವನ್ನು ಹಿಂಪಡೆಯುವ ಕುರಿತು ಅವರ ಪುತ್ರ ಡಾ. ಯತೀಂದ್ರ ಹಾಗೂ ಕೆ.ಎಂ.ರಾಮಚಂದ್ರಪ್ಪನವರಿಗೆ ಮೆಸೇಜ್ ಮಾಡಿ ಮಾಹಿತಿ ನೀಡಿದ್ದೆ.ಅದರಂತೆ 16.08.2023 ರಅಧಿಕ ಅಮವಾಸೆಯಂದೇ ಸಿದ್ಧರಾಮಯ್ಯನವರಿಗೆ ನೀಡಿದ್ದ ದೈವಾಭಯ ಹಿಂಪಡೆದಿದ್ದೇನೆ.

ಪ್ರತಿವರ್ಷ ಶರನ್ನವರಾತ್ರಿಯಲ್ಲಿ ನಾನು ನಮ್ಮ ಮಠದಲ್ಲಿ ಒಂಬತ್ತುದಿನಗಳ ಕಾಲ ಅಖಂಡಮೌನ ಮತ್ತು ನಿರಾಹಾರ ವ್ರತದೊಂದಿಗೆ ಪ್ರತಿದಿನ ಹನ್ನೆರಡು ಘಂಟೆಗಳಂತೆ ಅತ್ಯುಗ್ರ ದುರ್ಗಾನುಷ್ಠಾನ ಕೈಗೊಳ್ಳುತ್ತೇನೆ ಲೋಕಾನುಗ್ರಹ ಕಾರಣದಿಂದ ನಮ್ಮ ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರಿ ಶ್ರೀ ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಯಲ್ಲಿ.ಪ್ರತಿವರ್ಷ ನವರಾತ್ರಿ ಅನುಷ್ಠಾನ ಯಾವ ಉದ್ದೇಶದಿಂದ ಕೈಗೊಳ್ಳುತ್ತೇನೋ ಅದು ತಪ್ಪದೆ ಈಡೇರುತ್ತದೆ.ಮೊನ್ನೆ ಮುಕ್ತಾಯಗೊಂಡ ಶರನ್ನವರಾತ್ರಿ ಅನುಷ್ಠಾನವನ್ನು ನಾನು ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಲೇಬೇಕು ಎನ್ನುವ ಸಂಕಲ್ಪದಿಂದ ಕೈಗೊಂಡಿದ್ದೆ ! ವಿಶೇಷವೆಂದರೆ ಪ್ರತಿವರ್ಷದ ನವರಾತ್ರಿ ಪೂಜೆಗಿಂತಲೂ ಈ ವರ್ಷದ ನವರಾತ್ರಿ ಪೂಜೆಯು ಅತ್ಯದ್ಭುತ ಯಶಸ್ಸನ್ನು ಕಂಡಿದೆ.ಇಷ್ಟು ಸಾಲದು ಎಂಬಂತೆ ವಿಜಯದಶಮಿಯ ‘ ವಿಜಯಮುಹೂರ್ತ’ ದಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಪದವಿಯಿಂದ ಕೆಳಗೆ ಇಳಿಯುವವರೆಗೂ ಗಡ್ಡ ಬೋಳಿಸುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದೇನೆ ತಾಯಿ ವಿಜಯದುರ್ಗಾ ದೇವಿಯ ಸನ್ನಿಧಿಯಲ್ಲಿ.ಶಿಸ್ತಿಗೆ ಹೆಸರಾಗಿರುವ ನಾನು ಈಗ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳಲು ಗಡ್ಡ ಬಿಟ್ಟಿದ್ದೇನೆ.ನನ್ನ ಗಡ್ಡಬೆಳೆದಷ್ಟೂ ಸಿದ್ಧರಾಮಯ್ಯನವರ ಮುಖ್ಯಮಂತ್ರಿ ಖುರ್ಚಿಗೆ ಅಪಾಯ !

ಇದು ಕೆಲವರಿಗೆ ಅಪಹಾಸ್ಯದ ಸಂಗತಿಯಾಗಿ ಕಾಣಿಸಬಹುದು.ಆದರೆ ‘ ಕಾದುನೋಡಿ’ ಎಂದಷ್ಟೇ ನಾನು ಹೇಳಬಯಸುವೆ.ಶರಣರು,ಸಂತರು,ಯೋಗಿಗಳು ಎಲ್ಲ ಕಾಲದಲ್ಲಿಯೂ ಇರುತ್ತಾರೆ,ಎಂಥವರನ್ನು ಬೇಕಾದರೂ ನಿಗ್ರಹಿಸುತ್ತಾರೆ’ ಎನ್ನುವುದನ್ನು ನಾನು ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸುವ ಮೂಲಕ ಸಾಬೀತು ಪಡಿಸುವೆ.ಈ ಹಿಂದೆ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ ರಾಜಕಾರಣಿಗಳೆಲ್ಲರೂ ರಾಜಕೀಯ ನಿರಾಶ್ರಿತರಾಗಿದ್ದಾರೆ.ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರದಿ!

‘ಇದು ಸರಿಯೆ?’ ಎಂದು ಕೆಲವರು ಆಕ್ಷೇಪಿಸಬಹುದು.ಅಂಥವರು ದಯವಿಟ್ಟು ಒಂದು ವಿಷಯದ ಬಗ್ಗೆ ಆಲೋಚಿಸಬೇಕು.ಸಿದ್ಧರಾಮಯ್ಯನವರಿಗಾಗಿ,ಅವರ ಶ್ರೇಯೇಸ್ಸಿಗಾಗಿ ಹತ್ತುಹಲವು ವಿಧದಲ್ಲಿ ಪ್ರಯತ್ನಿಸಿದ್ದ ನಾನು ಸರಕಾರದ ಉನ್ನತ ಹುದ್ದೆಯಲ್ಲಿದ್ದು ಇನ್ನೂ ಆರುವರ್ಷಗಳ ಸೇವಾ ಅವಧಿ ಇದ್ದೂ ಸ್ವಯಂ ನಿವೃತ್ತಿಯಲ್ಲ,ರಾಜೀನಾಮೆ ಕೊಡಲು ಸಿದ್ಧರಾಮಯ್ಯನವರ ದುರ್ವರ್ತನೆಯೇ ಕಾರಣ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ನನ್ನ ಬದುಕಿನೊಂದಿಗೆ ಚೆಲ್ಲಾಟವಾಡಿದ,ನನ್ನ ಎರಡು ಎಳೆ ಮಕ್ಕಳು ಮತ್ತು ಮಡದಿಯ ಬದುಕು ಅತಂತ್ರವಾಗಲು ಕಾರಣರಾದ ಪುಣ್ಯಾತ್ಮ ಸಿದ್ಧರಾಮಯ್ಯನವರಿಗೆ ಒಳಿತನ್ನು ಹರಸುವುದಾದರೂ ಹೇಗೆ? ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದಂದೇ ಗಡ್ಡಬೋಳಿಸುತ್ತೇನೆ ಎಂದು ಕೈಗೊಂಡ ಶಪಥವನ್ನು ವಿಶ್ವನಿಯಾಮಕಿಯಾಗಿರುವ ನನ್ನ ತಾಯಿ ದುರ್ಗಾದೇವಿಯು ಆದಷ್ಟು ಬೇಗನೆ ನಡೆಸಿಕೊಡುತ್ತಾಳೆ ಎನ್ನುವ ದೃಢ ವಿಶ್ವಾಸ ಇರುವುದರಿಂದಲೇ ‘ ಸಿದ್ಧರಾಮಯ್ಯನವರೆ,ನೀವು ಖಂಡಿತವಾಗಿಯೂ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುವುದಿಲ್ಲ’ ಎಂದು ಕೈಯೆತ್ತಿ ಹೇಳುತ್ತಿದ್ದೇನೆ.

About The Author