ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಅವರ ಹೆಸರನ್ನಿಡುವುದು ಸೂಕ್ತ:ಮುಕ್ಕಣ್ಣ ಕರಿಗಾರ

ಶಿವಮೊಗ್ಗ ವಿಮಾನನಿಲ್ದಾಣಕ್ಕೆ ತಮ್ಮ ಹೆಸರು ಇಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹೇಳಿದ್ದರಿಂದ ಈಗ ಬೇರೆ ಬೇರೆ ಹೆಸರುಗಳು ತೇಲಿಬರುತ್ತಿವೆ.ಯಡಿಯೂರಪ್ಪನವರು ತಮ್ಮ ಹೆಸರು ಇಡುವುದು ಬೇಡ ಎನ್ನುವ ಮೂಲಕ ರಾಜಕಾರಣವನ್ನು ಮೀರಿದ ಉನ್ನತಿಕೆಯ ನಿಲುವನ್ನು ಪ್ರದರ್ಶಿಸಿದ್ದಾರೆ.ಅವರ ಪ್ರಯತ್ನದ ಫಲವಾಗಿ ಶಿವಮೊಗ್ಗದಲ್ಲಿ ವಿಮಾನನಿಲ್ದಾಣದ ಸ್ಥಾಪನೆ ಆಗಿದ್ದರಿಂದ ಅವರ ಅನುಯಾಯಿಗಳು,ಅಭಿಮಾನಿಗಳು ಯಡಿಯೂರಪ್ಪ ಅವರ ಹೆಸರನ್ನಿಡಲು ಒತ್ತಾಯಿಸಿದ್ದರು.ಈಗ ಸ್ವತಃ ಯಡಿಯೂರಪ್ಪನವರೇ ನಯವಾಗಿ ನಿರಾಕರಿಸಿದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಾವ ರಾಜಕಾರಣಿಗಳ ಹೆಸರಿಡುವುದು ಬೇಡ.

ಶಿವಮೊಗ್ಗ ಜಿಲ್ಲೆಯಿಂದಲೇ ಬಂದು ರಾಷ್ಟ್ರ,ವಿಶ್ವಮಟ್ಟದಲ್ಲಿ ಕನ್ನಡದ ಕೀರ್ತಿ ಕಹಳೆ ಮೊಳಗಿಸಿದ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡುವುದು ಎಲ್ಲ ಆಯಾಮಗಳಿಂದಲೂ ಸೂಕ್ತವಾದುದು.ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದು ಮಾತ್ರವಲ್ಲದೆ ಆಧುನಿಕ ಕಾಲದಲ್ಲಿ ” ಶ್ರೀ ರಾಮಾಯಣ ದರ್ಶನಂ” ಎನ್ನುವ ಯುಗಕಾವ್ಯವಾದ ಮಹಾಕಾವ್ಯವನ್ನು ಬರೆದು ‘ ವಿಶ್ವಮಾನವ ಸಂದೇಶ’ ವನ್ನು ಸಾರಿದ ಮಹಾನ್ ಚೇತನ,ಋಷಿಸದೃಶ ವ್ಯಕ್ತಿತ್ವ ಕುವೆಂಪು ಅವರದ್ದು.ಕುವೆಂಪು ಅವರಿಗೆ ಸರಿಮಿಗಿಲು ವ್ಯಕ್ತಿತ್ವಗಳಿಲ್ಲ ಆಧುನಿಕ ಕಾಲಸಂದರ್ಭದ ಕನ್ನಡ ಸಾಹಿತ್ಯ,ಸಾಂಸ್ಕೃತಿಕ ಲೋಕದಲ್ಲಿ.ಯುವಜನಾಂಗವನ್ನು ಮೌಢ್ಯ,ಭೀತಿಮುಕ್ತರಾಗಿ ‘ ನಿರಂಕುಶಮತಿ’ ಗಳಾಗಿ ನಡೆಯಲು‌ ಪ್ರೇರೇಪಿಸಿದ ಕುವೆಂಪು ಅವರು ಮೌಢ್ಯ ಕಂದಾಚಾರಗಳ ವಿರುದ್ಧ ಪಾಂಚಜನ್ಯ ಮೊಳಗಿಸಿದವರು.ಕನ್ನಡ ನುಡಿಗೆ ವಿಶ್ವ ಮಾನ್ಯತೆಯ ಕೊಡುಗೆ ನೀಡಿದ ಅಪರೂಪದ ಕವಿ,ದಾರ್ಶನಿಕರು.ಯುಗಯುಗಗಳವರೆಗೆ ಕನ್ನಡಜನಸ್ತೋಮವನ್ನು ಪ್ರಚೋದಿಸಿ,ಮುನ್ನಡೆಸಬಲ್ಲ ಸ್ಫೂರ್ತಿದಾಯಕ ವ್ಯಕ್ತಿತ್ವ ಕುವೆಂಪು ಅವರದ್ದು.ವಿಶ್ವಮಾನವ ಸಂದೇಶದ ಮಹಾಕವಿ ಕುವೆಂಪು ಅವರ ಹೆಸರಿನಲ್ಲಿ ‘ವಿಶ್ವಮಾನವ ಸಂದೇಶದ ಮಹಾಕವಿ ಕುವೆಂಪು ವಿಮಾನ ನಿಲ್ದಾಣ’ ಎಂದು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಹೆಸರಿಸಿದರೆ ಕನ್ನಡ ಸಂಸ್ಕೃತಿಯ ಸತ್ತ್ವ ದೇಶ- ವಿದೇಶಗಳಲ್ಲಿ ಪಸರಿಸಲು ಸಹಕಾರಿಯಾಗುತ್ತದೆ.

About The Author