ಬರಗಾಲದಲ್ಲಿ ಧೃತಿಗೆಡದಿರಿ ನಿಮ್ಮೊಂದಿಗೆ ನರೇಗಾ ಯೋಜನೆಗಳಿವೆ- ಜಿಪಂ ಸಿಇಒ ಗರಿಮಾ ಪನ್ವಾರ್

ವಡಗೇರಾ : ಬರ ಪೀಡಿತ ತಾಲ್ಲೂಕಿನ ಜನರೊಂದಿಗೆ ನರೇಗಾ ಯೋಜನೆ ಆಸರೆಯಾಗಲಿದ್ದು, ಜನರು ಧೃತಿಗೆಡದೆ ಧೈರ್ಯದಿಂದ ಇರುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಗರಿಮಾ ಪನ್ವಾರ ಹೇಳಿದರು. ತಾಲ್ಲೂಕಿನ ಕುರಕುಂದ ಗ್ರಾಮದಲ್ಲಿ ನರೇಗಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ಯೋಗ ವಾಹಿನಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಕ್ಟೋಬರ ತಿಂಗಳು ಪೂರ್ತಿ ವಡಗೇರಾ ತಾಲ್ಲೂಕಿನಾದ್ಯಂತ ಜಾಗೃತಿ ವಾಹನ ಸಂಚರಿಸಿ, ಗ್ರಾಮೀಣ ಭಾಗದ ಜನರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದೊರೆಯುವ ಸೌಲಭ್ಯಗಳು ಕುರಿತು ವ್ಯಾಪಕ ಪ್ರಚಾರ ಮಾಡಲಾಗುತ್ತಿದ್ದು,ಪ್ರತಿ ಕುಟುಂಬಕ್ಕೆ ಸರ್ಕಾರ 100 ದಿನ ಕೂಲಿ ಕೆಲಸ ಒದಗಿಸುತ್ತಿದ್ದು,ಗಂಡು ಹೆಣ್ಣಿಗೆ ಸಮಾನ ದಿನಕ್ಕೆ 316 ರೂ. ಕೂಲಿ ಹಣ ನೀಡಲಾಗುತ್ತಿದ್ದು,ಇದರ ಸದುಪಯೋಗವನ್ನು ನರೇಗಾ ಫಲನುಭವಿಗಳು ಪಡೆದುಕೊಳ್ಳಬೇಕಿದೆ ಎಂದರು.

ನರೇಗಾ ಯೋಜನೆಯಡಿ ದನದ ಕೊಟ್ಟಿಗೆ, ಕೋಳಿ ಶೇಡ್, ಎರೆಹುಳ ಘಟಕ, ತೆರಬಾವಿ, ಕೃಷಿಹೊಂಡ, ಕ್ಷೇತ್ರಬದು, ಇಂಗುಗುಂಡಿ, ಜೈವಿಕ ಅನಿಲ ಘಟಕ, ತೆಂಗು, ಅಡಿಕೆ ಹಾಗೂ ದ್ರಾಕ್ಷಿ, ನಿಂಬೆ, ಜಮೀನಿನಲ್ಲಿ ಸಸಿಗಳು ನಾಟಿ ಸೇರಿದಂತೆ, ಕೃಷಿ, ತೋಟಗಾರಿಕೆ ಮತ್ತು ಅರಣ್ಯಕರಣ ಕಾಮಗಾರಿಗಳನ್ನು ಗ್ರಾಮೀಣ ಭಾಗದ ಜನರು ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.

ಜಾಬ್ ಕಾರ್ಡ್ ಹೊಂದಿದ ಪ್ರತಿ ಕುಟುಂಬಗಳು ಜೀವಿತಾವಧಿಯಲ್ಲಿ 5 ಲಕ್ಷದ ವರೆಗೆ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಗ್ರಾಮದ‌ ಜನರಿಗೆ ಮಾಹಿತಿ ನೀಡಿದರು.

ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಹಿರಿಯ ಕಾರ್ಮಿಕರಿಗೆ ಸಿಇಒ ಅವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ ಇಒ ಮಲ್ಲಿಕಾರ್ಜುನ ಸಂಗ್ವಾರ, ಸಹಾಯಕ ನಿರ್ದೇಶಕ ಮೌಲಾಲಿ ಐಕೂರು, ಪಿಡಿಒ ಸಿದ್ದವೀರಪ್ಪ, ತಾಂತ್ರಿಕ ಸಹಾಯಕ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್ ಸೇರಿದಂತೆ ತಾಪಂ, ಗ್ರಾಪಂ ಸಿಬ್ಬಂದಿಗಳು ಇದ್ದರು.