ಹಿರಿಯರ ನಾಗರಿಕರ ದಿನಾಚರಣೆ | ಹಿರಿಯರು ಹಾರೈಕೆಯೆ ಕಿರಿಯರಿಗೆ ಶ್ರೀರಕ್ಷೆ

ಶಹಾಪುರ : ಹಿರಿಯರ ಹಾರೈಕೆಯೆ ಕಿರಿಯರಿಗೆ ಶ್ರೀರಕ್ಷೆ. ಹಿರಿಯರ ಅನುಭವ, ಮಾರ್ಗದರ್ಶನ, ಹಿರಿಯರ ಪಾತ್ರದ ಕುರಿತು ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡುವುದು ಪ್ರತಿಯೊಬ್ಬರ ಕರ್ತವ್ ಎಂದು. ಇದರಿಂದ  ಕುಟುಂಬಗಳು ಶಾಂತಿಯಿಂದ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಹೆಚ್ಚುವರಿ ನ್ಯಾಯಾಧೀಶರಾದ ಬಸವರಾಜ ತಿಳಿಸಿದರು.ತಾಲೂಕ ಕಾನೂನು ಸೇವಾ ಸಮಿತಿ ತಾಲೂಕ ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಸಭಾಂಗಣದಲ್ಲಿ ಆಯೋಜಿಸಲಾದ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,ಗುರು-ಹಿರಿಯರ ಬಗ್ಗೆ ಪೂಜ್ಯನೀಯ ಭಾವನೆಯಿಂದ ನಡೆದುಕೊಳ್ಳುವುದರ ಮೂಲಕ ಸಂಸ್ಕಾರವಂತರಾಗಬೇಕು ಎಂದು ತಿಳಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಕು.ಶೋಭಾ ರವರು ಮಾತನಾಡಿ, ಮಾನವೀಯತೆ ಮತ್ತು ಮನುಷ್ಯತ್ವದ ಕೊರತೆಯಿಂದ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಇಂದಿನ ಯುವ ಸಮುದಾಯ ತಂದೆ-ತಾಯಿಗಳನ್ನು  ಬದುಕಿರುವಾಗಲೇ ಪ್ರೀತಿಯಿಂದ ಕಾಣಬೇಕು ಎಂದರು.ಹಿರಿಯ ನ್ಯಾಯವಾದಿ ಶ್ರೀನಿವಾಸ್ ಕುಲಕರ್ಣಿ ಅವರು, ಹಿರಿಯರ ಧೈರ್ಯ, ತಾಳ್ಮೆ, ಅವರು ಹೊಂದಿರುವ ಜವಾಬ್ದಾರಿಯ ಮೌಲ್ಯಗಳು ಯುವ ಪೀಳಿಗೆಗಿಂತ ಉತ್ತಮವಾಗಿವೆ. ತಮ್ಮ ಹಿರಿಯರ ಮಾರ್ಗದರ್ಶನದಲ್ಲಿ ಇರುವವರು ತಮ್ಮ ಮಾರ್ಗದಿಂದ ಎಂದಿಗೂ ದೂರವಾಗುವುದಿಲ್ಲ ಎಂದು ತಿಳಿಸಿದರು.

ಪೊಲೀಸ್ ಇನ್ಸ್ಪೆಕ್ಟರ್ ಎಸ್ ಎಮ್ ಪಾಟೀಲ್ ಅವರು, 20, 25 ವರ್ಷ ಗಳ ಹಿಂದೆ ಅವಿಭಕ್ತ ಕುಟುಂಬ ವ್ಯವಸ್ಥೆ ಹೆಚ್ಚಾಗಿದ್ದರಿಂದ ಮನೆಯಲ್ಲಿ ಹಿರಿಯರ ಅನುಭವ ಹಾಗೂ ಅವರ ಮಾರ್ಗದರ್ಶನ ಪಡೆದು ಸಮಾಜ ಗೌರವಿಸುವಂತಹ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಉತ್ತಮ ಜೀವನ ಸಾಗಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಕ್ಕಳನ್ನು ಪಾಲನೆ-ಪೋಷಣೆ ಮಾಡಿ ಪಾಲಕರು ಅರೆ ಹೊಟ್ಟೆ ಉಂಡು ಸಂಕಷ್ಟದಲ್ಲೂ ವಿದ್ಯಾವಂತರನ್ನಾಗಿ ಮಾಡುತ್ತಾರೆ. ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಹೆತ್ತ ತಂದೆ ತಾಯಿಯನ್ನೇ ಮರೆಯುತ್ತಾರೆ.ಈ  ಸಂದರ್ಭದಲ್ಲಿ ವೃದ್ಧಾಶ್ರಮ ನೆರವಿಗೆ ಬರುತ್ತದೆ.ಮುಂದೊಂದು ದಿನ ತಂದೆ ತಾಯಿಯರನ್ನು ಹೊರಗೆ ಹಾಕಿದ ಮಕ್ಕಳಿಗೂ ವೃದ್ಧಾಶ್ರಮವೇ ಗತಿ ಎನ್ನುವುದನ್ನು ಅವರು ಮರೆಯುತ್ತಾರೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಸಂತೋಷ್ ದೇಶಮುಖ್, ಕಾರ್ಯದರ್ಶಿ ಭೀಮನಗೌಡ ಪಾಟೀಲ, ಸರಕಾರಿ ಸಹಾಯಕ ಅಭಿಯೋಜಕರಾದ ದಿವ್ಯರಾಣಿ, ವೈ.ಬಿ.ದೇಸಾಯಿ, ಪ್ಯಾನಲ್ ವಕೀಲೆ ಸತ್ಯಮ್ಮ ಸೇರಿದಂತೆ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಮತ್ತು ಹಿರಿಯ ನಾಗರಿಕರು ಭಾಗವಹಿಸಿದ್ದರು.