ಮೂರನೇ ಕಣ್ಣು : ಆಳುವ ಸರ್ಕಾರ ಮತದಾರಪ್ರಭುಗಳ ನಿರ್ಣಯವನ್ನು ಗೌರವಿಸುವುದು ರಾಜಕೀಯ ಸನ್ನಡತೆ

ಮೂರನೇ ಕಣ್ಣು : ಆಳುವ ಸರ್ಕಾರ ಮತದಾರಪ್ರಭುಗಳ ನಿರ್ಣಯವನ್ನು ಗೌರವಿಸುವುದು ರಾಜಕೀಯ ಸನ್ನಡತೆ : ಮುಕ್ಕಣ್ಣ ಕರಿಗಾರ

ರಾಜ್ಯದಲ್ಲಿಂದು ಎರಡು ಸ್ವಾರಸ್ಯಕರ,ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ಪ್ರಸಂಗಗಳು ನಡೆದಿವೆ.ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ತಡೆಹಿಡಿಯಲಾದ ಅನುದಾನವನ್ನು ಪುನಃ ಬಿಡುಗಡೆ ಮಾಡಬೇಕು ಎಂದು ಕೋರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಕಾಲಿಗೆ ಬಿದ್ದು ಮನವಿಸಲ್ಲಿಸಿದ್ದಲ್ಲದೆ ವಿಧಾನಸೌಧದ ಗಾಂಧಿ ಪ್ರತಿಮೆಯೆದುರು ಧರಣಿ ನಡೆಸಿದ್ದಾರೆ.ಮತ್ತೊಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ‘ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿದ ಪ್ರದೇಶಗಳಲ್ಲಿ ಮಾತ್ರ ಅಭಿವೃದ್ಧ ಕಾಮಗಾರಿಗಳನ್ನು ಮಾಡುತ್ತೇವೆ,ಉಳಿದ ಪ್ರದೇಶಗಳಲ್ಲಿ ಕೆಲಸ ಮಾಡಲು ಆಲೋಚಿಸುತ್ತೇವೆ’ ಎಂದಿರುವ ಹೇಳಿಕೆಯ ವಿಡಿಯೋ ವೈರಲ್ ಆಗಿರುವುದು.ಈ ಎರಡು ಪ್ರಕರಣಗಳು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎನ್ನುವದರತ್ತ ಬೆರಳು ಮಾಡಿ ತೋರಿಸುತ್ತಿವೆ.ಇದು ಕಾಂಗ್ರೆಸ್ ಸರಕಾರದ ಕಥೆ ಮಾತ್ರವಲ್ಲ,ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಹೀಗೆಯೇ ಆಗಿದೆ.ಸಮ್ಮಿಶ್ರ ಸರ್ಕಾರದ ಆಡಳಿತದಲ್ಲೂ ಇದೇ ಆಗಿದೆ.ಈಗ ಕಾಂಗ್ರೆಸ್ ಪಕ್ಷವು ಆಡಳಿತ ಪಕ್ಷವಾಗಿದ್ದು ಬಿಜೆಪಿ ಶಾಸಕರುಗಳ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ,ಅವರು ಹೇಳಿದ ಸರಕಾರಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರಕಾರವು ಮಾಡಿದ್ದು ಇದನ್ನೆ.ಅವರು ಕಾಂಗ್ರೆಸ್ ಪಕ್ಷದ ಶಾಸಕರುಗಳನ್ನು ಕಡೆಗಣಿಸಿದರು.

ಆಡಳಿತದಲ್ಲಿರುವ ಯಾವುದೇ ಪಕ್ಷವಾಗಿರಲಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆ,ಪಕ್ಷದ ಸಿದ್ಧಾಂತವನ್ನು ಜಾರಿಗೆ ತರುವ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಿ.ಬೇಕಿದ್ದರೆ ತಮ್ಮ ಪಕ್ಷದ ಶಾಸಕರುಗಳಿಗೆ ಸ್ವಲ್ಪ ಹೆಚ್ಚಿನ ಅನುದಾನ ನೀಡಲಿ.ಆದರೆ ವಿರೋಧ ಪಕ್ಷದ ಶಾಸಕರುಗಳಿಗೆ ಅನುದಾನ ನೀಡದೆ ಇರುವುದು,ನೀಡಿದರೂ ತೀರ ಕಡಿಮೆ ಅನುದಾನ ನೀಡುವುದು ಸರಿಯಾದ ನಡೆಯಲ್ಲ.ಅದಕ್ಕಿಂತ ಬೇಸರದ ಸಂಗತಿ ಎಂದರೆ ಆಡಳಿತ ಪಕ್ಷದ ಪರಾಜಿತ ಅಭ್ಯರ್ಥಿಗಳು ಹೇಳಿದ ಕೆಲಸ ಕಾರ್ಯಗಳನ್ನು ಮಾಡಿಕೊಡುವುದು.ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಇಂದು ಮಾಧ್ಯಮಗಳೆದುರು ಮಾತನಾಡುತ್ತ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂ ಎಲ್ ಎ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಹೇಳಿದ ಕೆಲಸ ಕಾರ್ಯಗಳು ಆಗುತ್ತವೆಯೇ ಹೊರತು ಶಾಸಕನಾಗಿರುವ ನಾನು ಹೇಳಿದ ಯಾವ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದ ಮಾತು ಪ್ರಜಾಪ್ರಭುತ್ವದ ಆಶಯಗಳ ಅಪಮೌಲ್ಯಕ್ಕೆ ನಿದರ್ಶನವಾಗಿದೆ.ಬಿಜೆಪಿ ಸರಕಾರದಲ್ಲೂ ಹೀಗೆ ಆಗಿತ್ತು.ನಿಜ,ಈಗ ಅದೇ ತಪ್ಪನ್ನು ಕಾಂಗ್ರೆಸ್ಸಿನವರು ಏಕೆ ಮಾಡಬೇಕು?ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದಾನೆ ಎಂದರೆ ಆ ಸೋಲಿಗೆ ಕಾರಣವಾದ ಅಂಶಗಳನ್ನು ಅವಲೋಕನ ಮಾಡಬೇಕು.ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದನೆ? ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದನೆ? ಆ ಅಭ್ಯರ್ಥಿ ಕ್ಷೇತ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿಯೂ ಸೋತಿದ್ದಾನೆಯೆ ಅಥವಾ ಸರಕಾರದ ಅನುದಾನವನ್ನು ಕೊಳ್ಳೆಹೊಡೆಯುವ ಘನಕಾರ್ಯ ಮಾಡಿದ್ದಾನೆಯೆ? ಎನ್ನುವಂತಹ ಅಂಶಗಳನ್ನು ಪರಿಶೀಲಿಸಬೇಕು.ವಿಧಾನಸಭಾ ಕ್ಷೇತ್ರದ ಮತದಾರರು ಆತನನ್ನು ಸೋಲಿಸಿದ್ದಾರೆ ಎಂದರೆ ಆ ಸೋಲಿನ ಕಾರಣ ಏನೇ ಇರಲಿ ಆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿ ಕ್ಷೇತ್ರದ ಜನತೆಯನ್ನು ಪ್ರತಿನಿಧಿಸುವುದರಿಂದ ಗೆದ್ದು ಶಾಸಕನಾದ ವ್ಯಕ್ತಿಗೆ ಗೌರವ ಕೊಡುವುದು,ಅವರ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುವುದು ಆಡಳಿತ ಪಕ್ಷದ ಮುಖ್ಯಸ್ಥರ ಕರ್ತವ್ಯ,ಪ್ರಬುದ್ಧ ರಾಜಕಾರಣಿಯ ಪಕ್ಷಾತೀತ ನಡೆ.ಅದನ್ನು ಬಿಟ್ಟು ನಮ್ಮ ಪಕ್ಷದ ಸೋತ ಅಭ್ಯರ್ಥಿಯ ಕೆಲಸ ಕಾರ್ಯಗಳನ್ನೇ ಮಾಡುತ್ತೇವೆ ಎಂದರೆ ಅದು ಮತದಾರರಿಗೆ ಮಾಡುವ ಅಪಮಾನ ಮತ್ತು ಪ್ರಜಾಪ್ರಭುತ್ವದ ತತ್ತ್ವಗಳಿಗೆ ವಿರುದ್ಧವಾದ ಸಂಕುಚಿತ ನಡೆ.ಮತದಾರರು ಬೇಡವೆಂದು ಮನೆಗೆ ಕಳಿಸಿದ ವ್ಯಕ್ತಿಗೆ ನಾವು ಮನ್ನಣೆ ನೀಡುತ್ತೇವೆ ಎಂದರೆ ಮತದಾನಕ್ಕೆ ಏನು ಪಾವಿತ್ರ್ಯ ಇದ್ದ ಹಾಗಾಯಿತು? ಜನರಿಂದ ತಿರಸ್ಕರಿಸಲ್ಪಟ್ಟ ವ್ಯಕ್ತಿಯನ್ನು ನಾವು ಪುರಸ್ಕರಿಸುತ್ತೇವೆ ಎಂದರೆ ಆ ಕ್ಷೇತ್ರದ ಮತದಾರರಿಗೆ ಮಾಡುವ ಅಪಮಾನವಷ್ಟೇ ಅಲ್ಲ,ಪ್ರಜಾಪ್ರಭುತ್ವಕ್ಕೆ ಸಲ್ಲದ ನಡೆ.

ಯಾವುದೇ ಪಕ್ಷ ಆಡಳಿತದಲ್ಲಿರಲಿ,ವಿಧಾನಸಭೆಯ ಸದಸ್ಯರಾದ ಎಲ್ಲ ಶಾಸಕರು ಶಾಸಕರೆ! ಅವರನ್ನು ಇಂಥ ಪಕ್ಷದ ಶಾಸಕರು ಎಂದು ಗುರುತಿಸಬಹುದೆ ವಿನಃ ಶಾಸಕ ಸ್ಥಾನದ ಹಕ್ಕು,ಅಧಿಕಾರಗಳಲ್ಲಿ ಎಲ್ಲ ಶಾಸಕರು ಸಮಾನರೆ‌.ಶಾಸಕರಲ್ಲದ ಯಾರೂ ವಿಧಾನಸಭೆಯ ಕಲಾಪಗಳಲ್ಲಿ ಭಾಗವಹಿಸುವಂತಿಲ್ಲ ಎನ್ನುವುದು ಶಾಸಕರ ವಿಶೇಷ ಗೌರವ,ಸ್ಥಾನಮಾನ.ಅಧಿವೇಶನದಲ್ಲಿ ಗೆದ್ದ ವಿರೋಧ ಪಕ್ಷದ ಶಾಸಕರು ಕುಳಿತುಕೊಂಡಿರುತ್ತಾರೆಯೇ ಹೊರತು ಆಡಳಿತ ಪಕ್ಷದ ಸೋತ ಅಭ್ಯರ್ಥಿಗಳು ಕುಳಿತುಕೊಂಡಿರುವುದಿಲ್ಲವಾದ್ದರಿಂದ ತಮ್ಮೊಂದಿಗೆ ವಿಧಾನಸಭೆಯ ಕಲಾಪಗಳಲ್ಲಿ ಪಾಲ್ಗೊಳ್ಳಲು ಜನತೆಯಿಂದ ಆರಿಸಲ್ಪಟ್ಟವರು ಎಂದು ಅವರನ್ನು ಗೌರವಿಸಿದರೆ ಆ ಕ್ಷೇತ್ರದ ಜನತೆಯನ್ನು ಗೌರವಿಸಿದಂತೆ.ಇಂತಹ ಪ್ರಬುದ್ಧ ರಾಜಕೀಯ ನಡೆಯನ್ನು ನಮ್ಮ ರಾಜಕಾರಣಿಗಳು ರೂಢಿಸಿಕೊಳ್ಳಬೇಕಿದೆ.

ಮುನಿರತ್ನ ಅವರು ಆರೋಪಿಸಿದಂತೆ ರಾಜರಾಜೇಶ್ವರಿ ನಗರದ ಅನುದಾನ ಹಿಂಪಡೆದಿದ್ದು ಮತ್ತು ಅದನ್ನು ಬೆಂಗಳೂರಿನ ಇತರ ವಿಧಾನ ಸಭಾ ಕ್ಷೇತ್ರಗಳಲ್ಲಿ ಹಂಚಿಕೆ ಮಾಡಿರುವುದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ದುರುದ್ದೇಶದ ನಡೆ ಎನ್ನಲಾಗದು.ಬಿಜೆಪಿ ಸರಕಾರ ಚುನಾವಣೆಯು ಘೋಷಣೆಯಾದ ಬಳಿಕವೂ ಹಿಂದಿನ ದಿನಾಂಕಗಳನ್ನು ನಮೂದಿಸಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿತ್ತು,ಅಕ್ರಮಗಳನ್ನು ಎಸಗಿತ್ತು.ಅಂತಹ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕ್ರಮ ಕೈಗೊಂಡಿದ್ದರೆ ಅದು ಸ್ವಾಗತಾರ್ಹ.ಆದರೆ ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ಅವರು ಕೊಚ್ಚಿಕೊಂಡಂತೆ ಕಾಂಗ್ರೆಸ್ ಗೆ ಓಟುಹಾಕಿದ ಕಡೆಗಳಲ್ಲಿ ಮಾತ್ರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಪಕ್ಷದ ಶಾಸಕರುಗಳ ನಿಲುವನ್ನು ಬೆಂಬಲಿಸಿದರೆ ಅದು ಸರಿಯಲ್ಲ.ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಪಕ್ಷಾತೀತವಾಗಿ ಎಲ್ಲ ಪಕ್ಷಗಳ ಶಾಸಕರುಗಳು ಗೌರವಿಸುತ್ತಾರೆ,ಇಷ್ಟಪಡುತ್ತಾರೆ.ಸಿದ್ಧರಾಮಯ್ಯನವರು ಇತರ ಪಕ್ಷದ ಶಾಸಕರುಗಳಿಗೂ ಅನುದಾನ ನೀಡುವ ಮೂಲಕ ಆ ಗೌರವವನ್ನು ಉಳಿಸಿಕೊಳ್ಳಬೇಕು.

ವಿಧಾನಸಭಾ ಸ್ಪೀಕರ್ ಅವರು ಕೂಡ ಶಾಸಕರು ಕ್ಷೇತ್ರದ ಬಗ್ಗೆ ಹೇಳಿಕೊಳ್ಳುವ ಅಹವಾಲುಗಳಿಗೆ ಸ್ಪಂದಿಸಿ ವಿರೋಧ ಪಕ್ಷಗಳ ಶಾಸಕರುಗಳ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಸಂಬಂಧಪಟ್ಟವರಿಗೆ ಸೂಚಿಸಬೇಕು.ವಿಧಾನಸಭಾ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಶಾಸಕರೇ ಆಗಿದ್ದರೂ ಅವರು ವಿಧಾನಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಕ್ಷಣದಿಂದಲೇ ಪಕ್ಷರಾಜಕಾರಣದಲ್ಲಿ ನಿರ್ಲಿಪ್ತನೀತಿಯನ್ನು ತಳೆಯುವುದು ಸಾಧ್ಯವಾಗದೆ ಇದ್ದರೂ ಎಲ್ಲ ಪಕ್ಷಗಳ ಶಾಸಕರುಗಳ ಹಿತಕಾಯುವ ಸದನದ ಮುಖ್ಯಸ್ಥರ ಜವಾಬ್ದಾರಿಯನ್ನು ನಿರ್ವಹಿಸಬೇಕು.ಅಧಿವೇಶನದ ದಿನಗಳಲ್ಲಿ ಕೆಲವು ಸಂದರ್ಭಗಳಲ್ಲಿ ಆಡಳಿತ ಪಕ್ಷದ ಹಿತವನ್ನು ಕಾಯುವುದು ವಿಧಾನಸಭಾ ಅಧ್ಯಕ್ಷರಿಗೆ ಅನಿವಾರ್ಯವಾಗಬಹುದು; ಆದರೆ ಮುನಿರತ್ನ ಅವರು ಅವರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವುದಕ್ಕಾಗಿಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಕಾಲಿಗೆ ಬಿದ್ದಂತಹ ದೈನೇಸಿ ಸ್ಥಿತಿಗೆ ಯಾವುದೇ ಪಕ್ಷದ ಶಾಸಕ ತಲುಪದಂತೆ ನೋಡಿಕೊಳ್ಳುವ,ಶಾಸಕರ ಆತ್ಮಗೌರವವನ್ನು ರಕ್ಷಿಸುವ ಕೆಲಸವನ್ನು ಸ್ಪೀಕರ್ ಅವರು ಮಾಡಲೇಬೇಕು.

ಮುನಿರತ್ನ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಕಾಲುಗಳಿಗೆ ನಮಸ್ಕರಿಸಿದ ದೃಶ್ಯವನ್ನು ನಾನು ವಾಹಿನಿಗಳಲ್ಲಿ ನೋಡಿದೆ.ಮುನಿರತ್ನ ಅವರು ಡಿ.ಕೆ.ಶಿವಕುಮಾರ ಅವರ ಕಾಲುಗಳಿಗೆ ನಮಸ್ಕರಿಸುವ ಅಗತ್ಯ ಇರಲಿಲ್ಲ.ಯಾರು ಯಾರ ಕಾಲುಗಳಿಗೂ ನಮಸ್ಕರಿಸಬೇಕಿಲ್ಲ ಶಾಸಕರುಗಳಾಗಿ ಎಲ್ಲರಿಗೂ ಅವರವರ ಸಂವಿಧಾನಬದ್ಧ ಹೊಣೆಗಾರಿಕೆ ಇರುವುದರಿಂದ.ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಜನರ ಮನಗೆಲ್ಲಲು ಮುನಿರತ್ನ ಅವರು ಹೀಗೆ ಮಾಡಿರಬಹುದೇ ಹೊರತು ಅದು ಸಮರ್ಥನೀಯ ನಡೆಯಲ್ಲ.ಮುನಿರತ್ನ ಅವರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ತಮಗೆ ಅನ್ಯಾಯವಾಗುತ್ತಿದೆ ಎನ್ನಿಸಿದರೆ ಮುಖ್ಯಮಂತ್ರಿಯವರಿಗೆ ಮತ್ತು ವಿಧಾನಸಭೆಯ ಸ್ಪೀಕರ್ ಅವರಿಗೆ ಲಿಖಿತ ಮನವಿ ಸಲ್ಲಿಸಬೇಕು.ಅವರಿಬ್ಬರೂ ಸ್ಪಂದಿಸದೆ ಇದ್ದರೆ ತಮ್ಮ ಪಕ್ಷದ ಹಿರಿಯರ ಮೂಲಕ( ಬಿಜೆಪಿಯು ಇದುವರೆಗೂ ವಿರೋಧಪಕ್ಷದ ನಾಯಕನ ಸ್ಥಾನವನ್ನು ತುಂಬಿಲ್ಲವಾದ್ದರಿಂದ) ರಾಜ್ಯಪಾಲರಿಗೆ ದೂರು ನೀಡಬೇಕು.ರಾಜ್ಯಪಾಲರು ಕೂಡಲೆ ಸರಕಾರದ ಮುಖ್ಯಕಾರ್ಯದರ್ಶಿಯವರಿಗೆ ಸೂಚನೆ ನೀಡುತ್ತಾರೆ.ರಾಜ್ಯಪಾಲರ ಸೂಚನೆಯನ್ನು ಮುಖ್ಯಮಂತ್ರಿಯವರಾಗಲಿ ಅಥವಾ ಮುಖ್ಯಕಾರ್ಯದರ್ಶಿಯವರಾಗಲಿ ಲಘುವಾಗಿ ಪರಿಗಣಿಸಲಾಗದು.ಒಂದು ವೇಳೆ ರಾಜ್ಯಪಾಲರ ಸೂಚನೆಯ ಮೇರೆಗೂ ಮುನಿರತ್ನ ಅವರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗದೆ ಇದ್ದರೆ ಅವರು ಸರಕಾರದ ಹಣಕಾಸು ಇಲಾಖೆ,ಯೋಜನಾ ಇಲಾಖೆ ಮತ್ತಿತರ ಇಲಾಖೆಗಳಿಂದ ಆಡಳಿತ ಪಕ್ಷದ ಶಾಸಕರುಗಳ ಕ್ಷೇತ್ರಗಳಿಗೆ ಬಿಡುಗಡೆ ಮಾಡಿದ ಅನುದಾನ ಮತ್ತು ವಿರೋಧಪಕ್ಷಗಳ ಶಾಸಕರುಗಳ ಕ್ಷೇತ್ರಗಳಿಗೆ ಬಿಡುಗಡೆ ಮಾಡಿದ ಅನುದಾನದ ವಿವರಗಳೊಂದಿಗೆ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ವಿರೋಧಪಕ್ಷದ ಶಾಸಕರಾದ ತಮ‌ಕ್ಷೇತ್ರಗಳಿಗೂ ಸಮಾನ ಅನುದಾನ ಬಿಡುಗಡೆ ಮಾಡಲು ಸರಕಾರಕ್ಕೆ ನಿರ್ದೇಶನ ನೀಡಲು ಕೋರಬೇಕು.ಹೈಕೋರ್ಟ್ ಖಂಡಿತವಾಗಿಯೂ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಲು ಸರಕಾರಕ್ಕೆ ಸೂಚಿಸುತ್ತದೆ.ಮುನಿರತ್ನ ಅವರು ಡಿ.ಕೆ.ಶಿವಕುಮಾರ ಅವರ ಕಾಲುಗಳಿಗೆ ನಮಸ್ಕರಿಸುವ ‘ ಶರಣಾಗತಿ ಭಾವ’ ವನ್ನು ಪ್ರದರ್ಶಿಸುವ ಬದಲು ಹೈಕೋರ್ಟಿನ ಮೊರೆಹೋಗಿ ತಮ್ಮ ಸಂವಿಧಾನದತ್ತ ಹಕ್ಕು ಅಧಿಕಾರವನ್ನು ಪ್ರತಿಷ್ಠಾಪಿಸಬೇಕಿತ್ತು.ಆಡಳಿತ ಪಕ್ಷದ ಶಾಸಕರುಗಳಿಗೆ ಮಾತ್ರ ಅನುದಾನ ನೀಡುತ್ತೇವೆ,ಸೋತ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅನುದಾನ ನೀಡುತ್ತೇವೆ ಎನ್ನಲು ಸರಕಾರವು ಕಾಂಗ್ರೆಸ್ ಪಕ್ಷದ ನಿಧಿಯಿಂದ ಅನುದಾನ ನೀಡುತ್ತಿಲ್ಲ; ಸಾರ್ವಜನಿಕ ಸಂಪನ್ಮೂಲದಿಂದ ನೀಡುವ ಅನುದಾನ ಎಲ್ಲ ಶಾಸಕರುಗಳಿಗೂ ಸಮಾನವಾಗಿ ಹಂಚಿಕೆಯಾಗಬೇಕು.ಇಲ್ಲಿ ಮುಖ್ಯಮಂತ್ರಿಯವರಿಗಾಗಲಿ ಅಥವಾ ಮತ್ತೆ ಯಾರಿಗೆ ಆಗಲಿ ವಿವೇಚನಾಧಿಕಾರ ಇಲ್ಲ.ವಿರೋಧಪಕ್ಷದ ಶಾಸಕರುಗಳು ಸ್ವಲ್ಪ ಶ್ರಮಪಡಬೇಕು,ಮಾಹಿತಿಯನ್ನು ಸಂಗ್ರಹಿಸಿ‌ಕೋರ್ಟ್ ಮೆಟ್ಟಿಲೇರಬೇಕು.ಸಂವಿಧಾನಾತ್ಮಕ ಹಕ್ಕು ಅವಕಾಶಗಳಿಗೆ ನಮ್ಮ ಸಂವಿಧಾನವು ಸಂವಿಧಾನಾತ್ಮಕ ಪರಿಹಾರಗಳನ್ನೇ ನೀಡಿರುವಾಗ ಅವರಿವರ ಕಾಲುಗಳಿಗೆ ನಮಸ್ಕರಿಸುವ ದೈನೇಸಿ ಸ್ಥಿತಿಯಾದರೂ ಏಕೆ ?.

About The Author