ಸಾಧಿಸುವ ಛಲ ಇದ್ದರೆ ಪ್ರಪಂಚದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ! : ಮುಕ್ಕಣ್ಣ ಕರಿಗಾರ

‘ ಮಗು,ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ,ಆದರೆ ಸಾಧಿಸುವ ಛಲ ಮಾತ್ರ ಮನುಷ್ಯನಿಗೆ ಬೇಕು’ .ಇದು ನಲವತ್ತೈದು ವರ್ಷಗಳ ಹಿಂದೆ ನಾನು ಐದನೆಯ ತರಗತಿಯಲ್ಲಿ ಓದುತ್ತಿದ್ದಾಗ ನಮ್ಮ ಕನ್ನಡ ಪುಸ್ತಕದಲ್ಲಿದ್ದ ಮಾತು.’ಧ್ರುವ’ ಎನ್ನುವ ಕನ್ನಡ ಪಠ್ಯಪುಸ್ತಕದ ಒಂದು ಪಾಠದಲ್ಲಿ ಈ ಮಾತು ಇತ್ತು.ಆ ಕಥೆಯ ಲೇಖಕರು ಯಾರು,ಯಾವ ಪುಸ್ತಕದಿಂದ ಅದನ್ನು ಆಯ್ದುಕೊಂಡಿದ್ದರು ಮತ್ತು ಕಥೆಯ ಪೂರ್ಣವಿವರಗಳು ನೆನಪಿಲ್ಲವಾದರೂ ಈ ಮೇಲಿನ ಮಾತು ಇಂದಿಗೂ ನೆನಪಿನಲ್ಲಿದೆ,ಮುಂದೆಯೂ ಎಂದೆಂದಿಗೂ ನೆನಪು ಇರುತ್ತದೆ.

ರಾಮಾಚಾರ್ಯ ಎನ್ನುವ ಕನ್ನಡ ಮೇಷ್ಟ್ರು ನಮಗೆ ಐದನೆಯ ತರಗತಿಯಲ್ಲಿ ಈ ಪಾಠ ಹೇಳಿದ ನೆನಪು ಇಂದಿಗೂ ಇದೆ.ಎಲೆ ಜಿಗಿಯುವ ಅಭ್ಯಾಸ ಇದ್ದ,ಬಿಳಿಯ ಅಂಗಿ ಪಂಚೆಯನ್ನು ಉಡುತ್ತಿದ್ದ ರಾಮಾಚಾರ್ಯ ಮೇಷ್ಟ್ರು ಕನ್ನಡವನ್ನು ಮನಮುಟ್ಟುವಂತೆ ಹೇಳುತ್ತಿದ್ದರು,ಕೆಲವು ಪದ್ಯ,ಸೂಕ್ತಿಗಳನ್ನು ಕಂಠಪಾಠ ಮಾಡಿಸುತ್ತಿದ್ದರು.ಆಗ ಅವರು ಕಂಠಪಾಠ ಮಾಡಿಸಿದ ಮಾತು ನನ್ನ ಬದುಕಿನ ಧ್ಯೇಯವಾಕ್ಯವಾಯಿತು,ನನ್ನೆಲ್ಲ ಸಾಧನೆಗಳಿಗೆ ಸ್ಫೂರ್ತಿಯಾಯಿತು.ಉತ್ತಾನಪಾದ ಎನ್ನುವ ಅರಸನಿಗೆ ಇಬ್ಬರು ಹೆಂಡತಿಯರಿದ್ದು ಮೊದಲ ಹೆಂಡತಿಯ ಮಗ ಧ್ರುವ( ಆತನ ತಾಯಿಯ ಹೆಸರು ನೆನಪಿಲ್ಲ)ಉತ್ತಾನಪಾದನು ಎರಡನೆಯ ಹೆಂಡತಿಯಲ್ಲಿಯೇ ಹೆಚ್ಚು ಅನುರಕ್ತನಾಗಿ ಮೊದಲ ಹೆಂಡತಿ ಮತ್ತು ಐದುವರ್ಷದ ಮಗ ಧ್ರುವನನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಾನೆ.

ಒಂದು ಸಾರೆ ಉತ್ತಾನಪಾದನು ಆಸ್ಥಾನದಲ್ಲಿ ಕುಳಿತಿರುತ್ತಾನೆ.ಎರಡನೆ ಹೆಂಡತಿ ಅರಸನ ಪಕ್ಕದಲ್ಲಿ ಕುಳಿತಿದ್ದರೆ ಅವಳ ಮಗ ತಂದೆಯ ತೊಡೆಯ ಮೇಲೆ ಕುಳಿತಿದ್ದ.ತಂದೆಯ ಆಸ್ಥಾನಕ್ಕೆ ಬಂದ ಬಾಲಕ ಧ್ರುವನು ತಂದೆಯ ತೊಡೆಯಮೇಲೆ ತಾನೂ ಕುಳಿತುಕೊಳ್ಳುವೆ ಎನ್ನುವ ಬಾಲಕಸಹಜ ಬಯಕೆಯಿಂದ ಕುಳಿತುಕೊಳ್ಳ ಹೋದಾಗ ಉತ್ತಾನಪಾದನ ಎರಡನೇ ಹೆಂಡತಿ ಧ್ರುವನನ್ನು ದರದರನೆ ಎಳೆದು ತರುತ್ತಾಳೆ.

‘ ಯಾಕಮ್ಮ ನಾನೇನು ತಪ್ಪು ಮಾಡಿದೆ?’ ಎಂದು ಅಳುತ್ತ ಪ್ರಶ್ನಿಸುತ್ತಾನೆ ಧ್ರುವ.
‘ ರಾಜನ ತೊಡೆಯ ಮೇಲೆ ಕುಳಿತುಕೊಳ್ಳಲು ಹೋದದ್ದು ನಿನ್ನ ತಪ್ಪು’ ಗದರುತ್ತಾಳೆ ಉತ್ತಾನಪಾದನ ಎರಡನೇ ಹೆಂಡತಿ.
‘ ಅವರು ನನ್ನ ತಂದೆ.ತಮ್ಮ ಕುಳಿತಿರುವ ಹಾಗೆ ನಾನು ಕುಳಿತುಕೊಳ್ಳುವೆ’ ಧ್ರುವನ ಉತ್ತರ.
‘ ಆ ಹಕ್ಕು ನಿನಗಿಲ್ಲ’ ಎಂದು ಅರಚುವ ಉತ್ತಾನಪಾದನ ಎರಡನೇ ಹೆಂಡತಿ ತನ್ನ ಮಗನಿಗೆ ಮಾತ್ರ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುವ ಹಕ್ಕು ಇದೆ,ನಿನಗಿಲ್ಲ ನಡೆ’ ಎಂದು ಅರಚುತ್ತಾಳೆ.

ಅಪಮಾನ,ದುಃಖದಿಂದ ಮನೆಗೆ ಬಂದ ಧ್ರುವ ತನ್ನ ತಾಯಿಯೆದುರು ಆಸ್ಥಾನದಲ್ಲಿ ನಡೆದ ಘಟನೆಯನ್ನೆಲ್ಲ ವಿವರಿಸಿ ನಾನು ತಪಸ್ಸು ಮಾಡಿ ಭಗವಂತನನ್ನು ಒಲಿಸಿ,ರಾಜ್ಯವನ್ನಾಳುವ ಹಕ್ಕು ಪಡೆಯುತ್ತೇನೆ’ ಎನ್ನುತ್ತಾನೆ.ಐದು ವರ್ಷದ ಪುಟ್ಟ ಬಾಲಕನಲ್ಲಿ ಅದೆಂತಹ ಉತ್ಕಟೇಚ್ಛೆ! ತಾಯಿ ಎಷ್ಟು ಪರಿಯಿಂದ ಬೇಡವೆಂದರೂ ಕೇಳದೆ ಹೊರನಡೆದೇ ಬಿಡುತ್ತಾನೆ ಅರಣ್ಯದ ಮಾರ್ಗವಾಗಿ.ದಾರಿಯಲ್ಲಿ ನಾರದರು ಸಿಕ್ಕು ಬಾಲಕನನ್ನು ಪರೀಕ್ಷಿಸಿ ,ಅವನ ಸಂಕಲ್ಪ ದೃಢವಾಗಿದೆ ಎಂದರಿತು ವಿಷ್ಣುವಿನ ಅನುಗ್ರಹ ಪಡೆಯಲು ಸೂಚಿಸಿ,ವಿಷ್ಣುವಿನ ಮಂತ್ರ,ಧ್ಯಾನಾದಿಗಳನ್ನು ಉಪದೇಶಿಸುತ್ತಾರೆ.ನಾರದರ ದೀಕ್ಷಾನುಗ್ರಹದಂತೆ ದಟ್ಟಕಾಡಿನಲ್ಲಿ ತಪೋನುಷ್ಠಾನ ಕೈಗೊಂಡ ಪುಟ್ಟಬಾಲಕ ಧ್ರುವನ ಭಕ್ತಿಗೆ ಮೆಚ್ಚಿ ವಿಷ್ಣುವು ಪ್ರತ್ಯಕ್ಷನಾಗುತ್ತಾನೆ.ಧ್ರುವನಿಗೆ ಸುದೀರ್ಘಕಾಲ ಚಕ್ರವರ್ತಿಯ ಪದವಿಯನ್ನು ಅನುಗ್ರಹಿಸಿದ ವಿಷ್ಣುವು ಮರಣಾನಂತರ ತನ್ನ ವೈಕುಂಠದಲ್ಲಿ ಧ್ರುವನಿಗೆ ಸ್ಥಾನ ನೀಡಿದ್ದಲ್ಲದೆ ಉತ್ತರ ದಿಕ್ಕಿನಲ್ಲಿ ನಕ್ಷತ್ರನಾಗಿ ಶಾಶ್ವತವಾಗಿ ನೆಲೆ ನಿಲ್ಲುವ ವರವನ್ನು ಕರುಣಿಸುತ್ತಾನೆ.ಇಂದಿಗೂ ಉತ್ತರ ದಿಕ್ಕಿನಲ್ಲಿ ಪ್ರಕಾಶಮಾನವಾದ ಧ್ರುವ ನಕ್ಷತ್ರ ಹೊಳೆಯುತ್ತಿರುವುದನ್ನು ಕಾಣಬಹುದು.ಬ್ರಹ್ಮಾಂಡದ ಅಸ್ತಿತ್ವ ಇರುವವರೆಗೆ ಧ್ರುವ ನಕ್ಷತ್ರ ಇರುತ್ತದೆ ಎನ್ನುವ ನಂಬಿಕೆ ಇದೆ.ಶಾಶ್ವತವಾದ ಪದವಿಯನ್ನು ಬಯಸುವವರಿಗೆ ಧ್ರುವನು ಸ್ಫೂರ್ತಿ,ಪ್ರೇರಣೆಗಳನ್ನು ನೀಡುತ್ತಾನೆ.ಐದು ವರ್ಷದ ಬಾಲಕನು ಮಹಾವಿಷ್ಣುವಿನ ಅನುಗ್ರಹ ಪಡೆದು ಲೋಕೋತ್ತರ ಸಾಧನೆ ಮಾಡಬಹುದಾದರೆ ಪ್ರೌಢವಯಸ್ಕರಿಗೆ ಸಾಧನೆ ಮಾಡಲು ಅಡ್ಡಿ ಏನು?

ಬಹಳಷ್ಟು ಜನರಿಗೆ ಸಾಧನೆ ಮಾಡುವ ಬಯಕೆಯೇ ಇರುವುದಿಲ್ಲ! ಬಯಕೆಯೇ ಇಲ್ಲವೆಂದ ಮೇಲೆ ಸಾಧಿಸುವುದಾದರೂ ಏನನ್ನು? ಮುಂದೆ ಗುರಿ ಇದೆ,ದಾರಿಯೂ ಇದೆ.ನಡೆದು ಹೋದರೆ ತಲುಪಬಹುದು ಗುರಿಯನ್ನು.ಆದರೆ ನಡೆಯುವ ಮನಸ್ಸೇ ಇಲ್ಲದಿದ್ದರೆ?ಸೋಮಾರಿಗಳು,ಆಲಸಿಗಳು,ಕನಸುಗಳು ಇಲ್ಲದವರು ಏನನ್ನೂ ಸಾಧಿಸಲಾರರು.ಜೀವನದಲ್ಲಿ ಸುಂದರವಾದ ಕನಸುಗಳಿರಬೇಕು.ನಾನು ಅದನ್ನು ಮಾಡುವೆ, ಇದನ್ನು ಮಾಡುವೆ ಎಂದು ದೊಡ್ಡದೊಡ್ಡ ಕನಸುಗಳನ್ನು ಕಾಣಬೇಕು.ಕನಸುಗಳನ್ನು ಕಾಣಲು ತೆರಿಗೆಯನ್ನು ಕಟ್ಟಬೇಕಾಗಿಲ್ಲ.ಜಿ.ಎಸ್.ಟಿ ಯ ಯಾವ ಸ್ಲ್ಯಾಬಿನ ಅಂಕೆಗೂ ಒಳಗಾಗಿಲ್ಲ ಕನಸುಗಳು.ಆದರೂ ಕನಸುಕಾಣಲಾಗುತ್ತಿಲ್ಲ ಬಹಳಷ್ಟು ಜನರಿಗೆ.ಯೌವ್ವನದ ಪ್ರವೇಶವಾಗುತ್ತಿದ್ದಂತೆಯೇ ಏನೇನು ತೆವಲುಗಳು..ತುಮಲಗಳು..ಉದ್ರೇಕಕಾರಿ ಭಾವನೆಗಳಿಗೆ ಸಿಕ್ಕು ಜೀವನವನ್ನು ಹಾಳು ಮಾಡಿಕೊಳ್ಳುವುದು.ಇದು ಬಹಳಷ್ಟು ಜನ ಯುವಕರ ಪಾಡು.ಪ್ರೀತಿ,ಪ್ರೇಮ ಎಂದು ಏನೆಲ್ಲ ಗೊಣಗಾಟ,ಗುನುಗುಟ್ಟುವುದು.ಇದಿಷ್ಟೇ ಕೆಲವರ ಜೀವನ.ಪ್ರೀತಿ ಪ್ರೇಮಗಳು ಜೀವನದ ಸರ್ವಸ್ವವಲ್ಲ,ಅಖಂಡ ಜೀವನದ ಒಂದು ತುಂಡು,ತುಣುಕಷ್ಟೆ.ಆದರೆ ಆ ತುಣುಕು ಜೀವನವೇ ಸರ್ವಸ್ವ ಎಂದು ಭ್ರಮಿಸುವ ತರುಣ ತರುಣಿಯರು ಜೀವನದ ನಿಜಾನಂದ,ಶ್ರೇಯಸ್ಸಿನ ಅವಕಾಶವಂಚಿತರಾಗುತ್ತಾರೆ.ಕಾಮಾಪೇಕ್ಷೆ ಇರಲಿ, ಆದರೆ ಜೀವನದಲ್ಲಿ ಏನನ್ನಾದರೂ ಮಹತ್ವದ ಸಾಧನೆಯನ್ನು ಮಾಡಿದ ಬಳಿಕ ಮದುವೆಯಾಗಿ ಹೆಂಡತಿಯನ್ನು ಪ್ರೀತಿಸಬಹುದಲ್ಲ? ಸಂಸಾರದಲ್ಲಿ ಸುಖವನ್ನು ಅನುಭವಿಸಬಹುದಲ್ಲ? ಆ ವಿಚಾರ,ವಿವೇಕ ಬಹಳಷ್ಟು ತರುಣ ತರುಣಿಯರಲ್ಲಿ ಇರುವುದಿಲ್ಲವಾಗಿ ಅವರು ಜೀವನದಲ್ಲಿ ಏನನ್ನೂ ಸಾಧಿಸದ ಬುರುಡೆಗಳು ಆಗುತ್ತಾರೆ.

ಸಾಧನೆಯಿಂದಲೇ ನಮ್ಮ ಜೀವನಕ್ಕೆ ಬೆಲೆ,ಗೌರವಗಳು ಒದಗಿಬರುತ್ತವೆ.ಬದುಕಿನ ಯಾವುದೇ ಕ್ಷೇತ್ರವಾಗಿರಲಿ ಸಾಧಕರೇ ಸಿದ್ಧಪುರುಷರಾಗಿ ಲೋಕವಂದಿತರಾಗುತ್ತಾರೆ.ಮನುಷ್ಯ ಪ್ರಯತ್ನಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ.ಸಾಧಿಸುವ ದೃಢಸಂಕಲ್ಲವು ನಮ್ಮಲ್ಲಿ ಇದ್ದುದಾದರೆ ಪ್ರಪಂಚದಲ್ಲಿ ನಮಗೆ ಅಸಾಧ್ಯವಾದುದು ಯಾವುದೂ ಇಲ್ಲ.ಮೊದಲ ಪ್ರಯತ್ನದಲ್ಲಿಯೇ ಹಿಡಿದ ಕಾರ್ಯದಲ್ಲಿ ಯಶಸ್ಸು ಸಿಗಲಿಕ್ಕಿಲ್ಲ.ಹಾಗಂತ ಎದೆಗುಂದಬಾರದು,ನಿರಾಶರಾಗಬಾರದು.ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರಬೇಕು ಗುರಿ ತಲುಪವರೆಗೆ.ತೇನ್ ಸಿಂಗ್ ಒಮ್ಮೆಲೆ ಹಿಮಾಲಯದ ಗೌರಿಶಂಕರ ಶಿಖರದ ಶೃಂಗವನ್ನು ತಲುಪಲಿಲ್ಲ.ತೇನ್ಸಿಂಗ್ ಹಿಮಾಲಯ ಪರ್ವತದ ತುಟ್ಟತುದಿಯನ್ನು ಮುಟ್ಟಿದ್ದು ತನ್ನ ಹದಿನೇಳನೆಯ ಪ್ರಯತ್ನದಲ್ಲಿ.ಹದಿನಾರು ಬಾರಿ ಗುರಿ ತಲುಪಲು ವಿಫಲನಾಗಿಯೂ ಶರ್ಪಾ ಜನಾಂಗದ ತೇನಸಿಂಗ್ ನೋರ್ಕೆ ತನ್ನ ಹದಿನೇಳನೆಯ ಪ್ರಯತ್ನದಲ್ಲಿ ಎಡ್ಮಂಡ್ ಹಿಲರಿಯ ಜೊತೆ ಗೌರಿಶಂಕರ ಶಿಖರದ ಮೇಲೆ ಪಾದಾರ್ಪಣೆ ಮಾಡಿ ಮನುಕುಲದ ಇತಿಹಾಸದಲ್ಲಿ ಒಂದು ಅದ್ಭುತ ಸಾಧನೆಗೆ ಕಾರಣನಾದ,ಜಗದ್ವಿಖ್ಯಾತನಾದ.ಛಲಬಿಡದೆ ಹೋರಾಡುವ ಎದೆಗಾರ್ಕೆ ಇದ್ದರೆ ಪ್ರಪಂಚದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ.

‌‌ದೊಡ್ಡದೊಡ್ಡ ಕನಸುಗಳನ್ನು ಕಾಣಬೇಕು.ಹಿಮಾಲಯ ಪರ್ವತವನ್ನು ಏರುವ ಕನಸುಕಂಡರೆ ಕೊನೆಯಪಕ್ಷ ತಲೆದಿಂಬನ್ನಾದರೂ ಹತ್ತಬಹುದು! ತಲೆದಿಂಬನ್ನು ಹತ್ತುವುದೇ ದೊಡ್ಡಸಾಧನೆ ಎಂದುಕೊಂಡವರಿಂದ ಏನನ್ನು ನಿರೀಕ್ಷಿಸಬಹುದು ? ರೈತರ ಮಕ್ಕಳು ರೈತರು ಆಗುವುದು,ಶಿಕ್ಷಕರ ಮಕ್ಕಳು ಶಿಕ್ಷಕರು ಆಗುವುದು,ಪೋಲೀಸಪೇದೆಯ ಮಗ ಪೋಲೀಸ್ ಪೇದೆಯಾಗುವುದು ದೊಡ್ಡಸಾಧನೆಯಲ್ಲ.ರೈತನ ಮಗ ಐಎಎಸ್,ಕೆಎಎಸ್ ಅಧಿಕಾರಿಯಾಗುವ ಇಲ್ಲವೆ ದೊಡ್ಡರಾಜಕಾರಣಿಯಾಗುವ ಕನಸು ಕಾಣಬೇಕು ಮತ್ತು ಅದನ್ನು ಈಡೇರಿಸಿಕೊಳ್ಳಲು ಶ್ರಮಿಸಬೇಕು.ಕಲೆ,ಸಾಹಿತ್ಯ,ಸಂಗೀತ,ನೃತ್ಯ,ಅಭಿನಯ,ವಿಜ್ಞಾನ,ವೈದ್ಯಕೀಯ,ಖಗೋಳ ವಿಜ್ಞಾನ,ಯೋಗ ಹೀಗೆ ಯಾವುದಾದರೂ ಆಸಕ್ತಿಯ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿ ಕೀರ್ತಿಶಾಲಿಗಳಾಗಬೇಕು.ಬಣ್ಣಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಜೀವನ ರಂಗೇರುವುದಿಲ್ಲ; ಬಣ್ಣಬಣ್ಣದ ಕನಸುಗಳನ್ನು ಕಾಣುವುದರಿಂದ ಜೀವನವು ವರ್ಣರಂಜಿತವಾಗುತ್ತದೆ

About The Author