ಮೂರನೇ ಕಣ್ಣು : ಪ್ರದೀಪ ಈಶ್ವರ ಬಿಗ್ ಬಾಸ್ ಆಗೋದು ಬೇಡ; ಜನತೆಯ ವಿನಮ್ರಸೇವಕರಾಗಬೇಕು

ಮೂರನೇ ಕಣ್ಣು : ಪ್ರದೀಪ ಈಶ್ವರ ಬಿಗ್ ಬಾಸ್ ಆಗೋದು ಬೇಡ; ಜನತೆಯ ವಿನಮ್ರಸೇವಕರಾಗಬೇಕು

ಮುಕ್ಕಣ್ಣ ಕರಿಗಾರ

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಪಾಲ್ಗೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.ಪ್ರದೀಪ ಈಶ್ವರ ಅವರ ಪರವಾಗಿ ಕೆಲವರು ಮಾತನಾಡಿದರೆ ಅವರ ವಿರುದ್ಧವಾಗಿಯೂ ಕೆಲವರು ಮಾತನಾಡುತ್ತಿದ್ದಾರೆ.ಪ್ರದೀಪ ಈಶ್ವರ ಒಬ್ಬ ಶಾಸಕರಾಗಿ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದು ತಪ್ಪು ಎನ್ನುವ ನಿರ್ಣಾಯಾತ್ಮಕ ಮಾತಿನಿಂದಲೇ ನಾನು ಈ ಲೇಖನವನ್ನು ಪ್ರಾರಂಭಿಸುತ್ತಿದ್ದೇನೆ.

ಪ್ರದೀಪ ಈಶ್ವರ್ ಒಬ್ಬ ಪ್ರಬುದ್ಧ ರಾಜಕಾರಣಿಯಲ್ಲ.ಆಕರ್ಷಕವಾದ ಮಾತುಗಳನ್ನೇ ಬಂಡವಾಳವಾಗಿಟ್ಟುಕೊಂಡಿರುವ ಈ ವ್ಯಕ್ತಿ ಶಾಸಕರಾಗಿ ಈ ಐದಾರು ತಿಂಗಳುಗಳಲ್ಲಿ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಯಾವ ಕೆಲಸವನ್ನು ಮಾಡಿಲ್ಲ. ಪ್ರದೀಪ ಈಶ್ವರ ಬಿಜೆಪಿಯ ಡಾ.ಕೆ.ಸುಧಾಕರ ಅವರನ್ನು ಸೋಲಿಸಲಿಲ್ಲ; ಬದಲಿಗೆ ಡಾ.ಕೆ.ಸುಧಾಕರ ಅವರು ಕೊವಿಡ್ ನಿರ್ವಹಣೆಯ ಹೆಸರಿನಲ್ಲಿ ಜನರ ಜೀವನಗಳೊಂದಿಗೆ ಚೆಲ್ಲಾಟವಾಡಿ ಅಮಾಯಕ ಜನರ ಸಾವಿಗೆ ಕಾರಣರಾದ ಪಾಪದಿಂದ ಸೋಲಿಸಲ್ಪಟ್ಟರು.ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನಸಾಮಾನ್ಯರೊಂದಿಗೆ ಬೆರೆಯದ,ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸದ decency and dignity maintain ಮಾಡಲು ಹೋದ ಡಾ.ಕೆ.ಸುಧಾಕರ ಅವರ ವಿಚಿತ್ರವರ್ತನೆಯೂ ಅವರ ಸೋಲಿಗೆ ಕಾರಣವಾಯಿತು.ಡಾ. ಕೆ.ಸುಧಾಕರ ಅಂಥವರನ್ನು ಸೋಲಿಸಿದೆ ಎನ್ನುವ ಹುಂಬ ಹುಮ್ಮಸ್ಸು ಒಳ್ಳೆಯದಲ್ಲ ಪ್ರದೀಪ ಈಶ್ವರ ಅವರಿಗೆ.

ಶಾಸಕರಾದವರು ಸಾರ್ವಜನಿಕ ಸೇವಕರು( Public Servant). ಸಾರ್ವಜನಿಕ ಸೇವಕರು ಆದವರಿಗೆ ಪಾಲಿಸಲೇಬೇಕಾದ ಕೆಲವು ಶಿಷ್ಟಾಚಾರ,ನಿಯಮ ನಿರ್ಬಂಧನೆಗಳಿವೆ.ಪ್ರದೀಪ ಈಶ್ವರ ಶಾಸಕರಾದ ಮಾತ್ರಕ್ಕೆ ಸ್ವೇಚ್ಛಾಚಾರಿಯಾಗಿ ವರ್ತಿಸಲು ಅವಕಾಶವಿಲ್ಲ.ಸರಕಾರಿ ನೌಕರರುಗಳು,ಅಧಿಕಾರಿಗಳು ಮಾತ್ರ ‘ ಸಾರ್ವಜನಿಕ ಸೇವಕರು’ ರಾಜಕಾರಣಿಗಳು ಸಾರ್ವಜನಿಕ ಸೇವಕರಲ್ಲ ಎನ್ನುವ ಸುಳ್ಳು ಸಮರ್ಥನೆಯನ್ನು ರಾಜಕಾರಣಿಗಳ ಹಿಂಬಾಲಕರು ನೀಡುತ್ತಾರೆ.ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ- ಸವಲತ್ತುಗಳನ್ನು ಪಡೆಯುವ ಎಲ್ಲರೂ ಸಾರ್ವಜನಿಕ ಸೇವಕರು.ಪ್ರದೀಪ ಈಶ್ವರ ಚಿಕ್ಕಬಳ್ಳಾಪುರದ ಶಾಸಕರಾಗಿ ಪ್ರತಿ ತಿಂಗಳು ಸಂಬಳ ಪಡೆಯುತ್ತಾರೆ,ಕಛೇರಿ ಭತ್ತೆ,ಕ್ಷೇತ್ರ ಪ್ರವಾಸ ಭತ್ತೆ, ಅಸೆಂಬ್ಲಿ ನಡೆದಾಗ ವಿಧಾನಸೌಧದಲ್ಲಿ ಕುಳಿತಿರುವ ದಿನಗಳಿಗೆ ಆಸನಭತ್ತೆಯನ್ನು ಪಡೆದಿದ್ದಾರೆ ಸಾರ್ವಜನಿಕ ತೆರಿಗೆಯ ಹಣದಿಂದ.ಹಾಗಾಗಿ ಸರಕಾರಿ ನೌಕರರಿಗೆ ಅನ್ವಯವಾಗುವ ಸಾರ್ವಜನಿಕ ಜೀವನದ ಶಿಸ್ತಿನ ನಿಯಮಗಳು ಪ್ರದೀಪ ಈಶ್ವರ ಅವರಿಗೂ ಅನ್ವಯವಾಗುತ್ತವೆ.

ನಿನ್ನೆ ಬಿಡುಗಡೆಗೊಂಡ ಮತ್ತಷ್ಟು ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಸೇರಿ ರಾಜ್ಯದ 236 ತಾಲೂಕುಗಳಲ್ಲಿ 208 ತಾಲೂಕುಗಳು ಬರಪೀಡಿತ ತಾಲೂಕುಗಳಾಗಿವೆ.ರಾಜ್ಯದ ಕೇವಲ 28 ತಾಲೂಕುಗಳಲ್ಲಿ ಮಾತ್ರ ಬರದ ಛಾಯೆ ಕಾಣಿಸಿಕೊಂಡಿಲ್ಲ.ರಾಜ್ಯಕ್ಕೆ ರಾಜ್ಯವೇ ಬರದ ಬವಣೆಗೆ ಸಿಕ್ಕು ಬಳಲುತ್ತಿರುವಾಗ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಪ್ರದೀಪ ಈಶ್ವರ ಕುಣಿದು ಕುಪ್ಪಳಿಸುವ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿರುವುದು ಸರಿಯಲ್ಲ,ಸಮರ್ಥನೀಯವೂ ಅಲ್ಲ.ಕಷ್ಟದ ದಿನಗಳಲ್ಲಿ ಜನತೆಯ ಜೊತೆಗೆ ಇರಬೇಕಾದ ಶಾಸಕರೊಬ್ಬರು ಹೀಗೆ ಮಾಡಿದ್ದು ಪ್ರಜಾಪ್ರತಿನಿಧಿಗಳಿಗೆ ಸಲ್ಲದ ನಡತೆ.ಅಷ್ಟಕ್ಕೂ ಶಾಸಕರಾಗಿ ಪ್ರದೀಪ ಈಶ್ವರ ಕಾನೂನು ನಿಯಮಗಳಿಗಿಂತ ದೊಡ್ಡವರಲ್ಲ.ಶಾಸಕರಾಗಿ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದಲೇ ಅವರಿಗೆ ಶಾಸಕಸ್ಥಾನದ ಹಕ್ಕು- ಸೌಲಭ್ಯಗಳು ಸಿಗುವಂತೆಯೇ ಅದೇ ಕ್ಷಣದಿಂದಲೇ ವಿಧಾನಸಭೆಯ ನೀತಿ ನಿಯಮಗಳು ಅನ್ವಯವಾಗುತ್ತವೆ.ಶಾಸನಸಭೆಯಲ್ಲಿ ಭಾಗವಹಿಸಲು ಆಗದೆ ಇದ್ದಾಗ ,ಪ್ರವಾಸ ಹೋಗುವಾಗ ಇಲ್ಲವೆ ದೀರ್ಘಕಾಲ ಜನರಿಂದ ದೂರ ಉಳಿಯುವ ಪ್ರಸಂಗ ಬಂದಾಗ ಶಾಸಕರಾದವರು ವಿಧಾನಸಭೆಯ ಸ್ಪೀಕರ್ ಅವರ ಅನುಮತಿ ಪಡೆಯಬೇಕು.ಈಗ ವಿಧಾನಸಭೆಯ ಸ್ಪೀಕರ್ ವಿದೇಶ ಪ್ರವಾಸದಲ್ಲಿದ್ದಾರೆ.ನೂರುದಿನಗಳ ಕಾಲ ನಡೆಯುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲು ಪ್ರದೀಪ ಈಶ್ವರ ಅವರಿಗೆ ಅನುಮತಿ ನೀಡಿದವರು ಯಾರು? ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಪ್ರದೀಪ ಈಶ್ವರ ಮೇಲೆ ನಿಯಂತ್ರಣ ಇಲ್ಲವೆ? ಪ್ರದೀಪ ಈಶ್ವರ ಜವಾಬ್ದಾರಿಯುತ ಶಾಸಕರಾಗಿ ಜನರು ಬರದ ಬವಣೆಗೊಳಗಾದ ಸಂದರ್ಭದಲ್ಲಿ ರಿಯಾಲಿಟಿ ಶೋ ನಲ್ಲಿ ಪಾಲ್ಗೊಂಡಿರುವುದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮುಜುಗರ ಉಂಟು ಮಾಡುವುದಿಲ್ಲವೆ? ಡಿ.ಕೆ.ಶಿವಕುಮಾರ ಮತ್ತು ಸಿದ್ಧರಾಮಯ್ಯನವರು ಕೂಡಲೆ ಪ್ರದೀಪ ಈಶ್ವರ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕರೆಯಿಸಿ,ಜನರ ಬಳಿ ಕಳಿಸಬೇಕು.ಇಲ್ಲದಿದ್ದರೆ ಪ್ರದೀಪ ಈಶ್ವರ ಅವರನ್ನು ಕಾಂಗ್ರೆಸ್ ಪಕ್ಷದ ಸದಸ್ಯತ್ವದಿಂದ ಉಚ್ಛಾಟಿಸಬೇಕು.ಹೌದು,ಪ್ರದೀಪ ಈಶ್ವರ ಶಾಸಕರಾಗಿ ಜನಪ್ರತಿನಿಧಿಗಳಿಗೆ ತಕ್ಕುದಲ್ಲದ,ವಿಧಾನಸಭೆಯ ಗೌರವಕ್ಕೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಾರೆ.ಸಾರ್ವಜನಿಕ ಸೇವಕರು ಸಿನೆಮಾಗಳಲ್ಲಿ ನಟಿಸಲು,ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುವ ಸಾಕಷ್ಟು ಮುಂಚಿತವಾಗಿತೇ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕು.ಅಂಥಹ ಯಾವ ಅನುಮತಿಯನ್ನು ಪಡೆಯದೆ ಶಾಸಕನಾಗಿ ಏನನ್ನುಬೇಕಾದರೂ ಮಾಡಬಹುದು ಎನ್ನುವ ಸ್ವೇಚ್ಛಾಪ್ರವೃತ್ತಿಯ ಪ್ರದೀಪ ಈಶ್ವರ ಅವರು ವಿಧಾನಸಭೆಯ ಘನತೆ ಗೌರವಗಳನ್ನು ಹಾಳು ಮಾಡಿದ್ದು ಶಾಸಕರಾಗಿ ಮುಂದುವರೆಯುವ ನೈತಿಕ ಹಕ್ಕು ಇಲ್ಲ ಅವರಿಗೆ.

‌ ಶಾಸಕರಾದವರು ತಮ್ಮ ಕಷ್ಟ ಸುಖಗಳಿಗೆ ಸ್ಪಂದಿಸಲಿ,ಕ್ಷೇತ್ರದ ಅಭಿವೃದ್ಧಿಯನ್ನು ಸಾಧಿಸಲಿ ಎನ್ನುವ ಕಾರಣದಿಂದ ಜನರು ತಾವು ಇಷ್ಟಪಟ್ಟ ವ್ಯಕ್ತಿಗೆ ಮತಹಾಕುತ್ತಾರೆ.ಡಾ.ಕೆ.ಸುಧಾಕರ ಅವರನ್ನು ತಿರಸ್ಕರಿಸಿ ಚಿಕ್ಕಬಳ್ಳಾಪುರದ ಮತದಾರರು ಪ್ರದೀಪ ಈಶ್ವರ ಅವರನ್ನು ಗೆಲ್ಲಿಸಿದ್ದು ಪ್ರದೀಪ ಈಶ್ವರ ತಮ್ಮ ಸಮಸ್ಯೆಗಳಿಗೆ ಧ್ವನಿಯಾಗಬಹುದು ಎನ್ನುವ ಕಾರಣದಿಂದ.ಆದರೆ ಈಗ ವೈಯಕ್ತಿಕ ತೆವಲಿನಿಂದ ಪ್ರದೀಪ ಈಶ್ವರ ನೂರು ದಿನಗಳ ಕಾಲ ಕ್ಷೇತ್ರದ ಜನತೆಯಿಂದ ದೂರ ಉಳಿದರೆ ಅದು ಕ್ಷೇತ್ರದ ಜನತೆಗೆ ಮಾಡುವ ಅನ್ಯಾಯವಲ್ಲವೆ? ಐದು ವರ್ಷಗಳ ಶಾಸಕತ್ವದ ಅವಧಿಯಲ್ಲಿ ನೂರುದಿನಗಳ ಅವಧಿ ಸಣ್ಣ ಅವಧಿಯೇನಲ್ಲ.ಜನರ ಸಮಸ್ಯೆಗಳಿಗೆ ಸ್ಪಂದಿಸಿ,ಪರಿಹರಿಸಬೇಕಿರುವ ಒಬ್ಬ ಶಾಸಕ ಹೀಗೆ ನೂರು ದಿನಗಳ ಕಾಲ ಸ್ವಂತ ತೆವಲಿನಿಂದ ಜನರಿಂದ ದೂರ ಇರುವುದು,ಕುಣಿದು ಕುಪ್ಪಳಿಸುವುದು ಪ್ರಜಾಪ್ರಭುತ್ವ ಕರ್ನಾಟಕದ ನಾಗರಿಕ ಸಮಾಜಕ್ಕೆ ಶೋಭೆ ತರುವ ಸಂಗತಿಯಲ್ಲ,ಜನಪ್ರತಿನಿಧಿಗಳಿಗೆ ಭೂಷಣವಲ್ಲ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರದೀಪ ಈಶ್ವರ ಮೇಲೆ ಕ್ರಮ ಕೈಗೊಳ್ಳಬೇಕಲ್ಲದೆ ರಿಯಾಲಿಟಿ ಶೋಗೆ ಶಾಸಕರನ್ನು ಆಹ್ವಾನಿಸಿದ ರಿಯಾಲಿಟಿ ಶೋ ಸಂಘಟಿಸಿದ ಆಯೋಜಕರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು.ಸಿನೆಮಾ ನಟರುಗಳು,ಸೆಲೆಬ್ರಿಟಿಗಳಿಗೆ ಸಾಮಾಜಿಕ ಬದ್ಧತೆ ಇಲ್ಲವಾದ್ದರಿಂದ ಅವರು ಏನನ್ನಾದರೂ ಮಾಡಿಕೊಳ್ಳಲಿ.ಆದರೆ ಶಾಸಕರು ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತೇವೆ ಎಂದಾಗ ಬೇಡ ಎನ್ನುವುದು ಇಲ್ಲವೆ ಸಂಬಂಧಪಟ್ಟವರ ಗಮನಕ್ಕೆ ತರುವುದು ರಿಯಾಲಿಟಿ ಶೋ ಸಂಘಟಕರ ಕರ್ತವ್ಯ.ಹಾಗಾಗಿ ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರ ಬೇಜವಾಬ್ದಾರಿ ವರ್ತನೆಯೂ ಕಾನೂನು ಕ್ರಮಕ್ಕೆ ಅರ್ಹವಾದ ನಿಯಮೋಲ್ಲಂಘನೆ.

About The Author