ವಲಸೆ ಕುರಿಗಾರರಿಗೆ ಸಚಿವರಿಂದ ಸಂಚಾರಿ ಕಿಟ್ ವಿತರಣೆ | ಕುರಿಗಾರರ ಸಹಾಯಕ್ಕೆ ಸರಕಾರ ಬದ್ಧ

ಶಹಾಪುರ : ತಾಲೂಕಿನ ಪಶು ಆಸ್ಪತ್ರೆಯ ಆವರಣದಲ್ಲಿ ಇಂದು ಪಶುಪಾಲನ ಮತ್ತು ಪಶು ವೈದ್ಯಸೇವಾ ಇಲಾಖೆ, ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಮಹಾಮಂಡಳಿ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ವಲಸೆ ಕುರಿಗಾರರಿಗೆ ಸಂಚಾರಿ ಟೆಂಟ್ ಮತ್ತು ಕಿಟ್ ಗ ಳನ್ನು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ವಿತರಿಸಿದರು. ಜಾನುವಾರುಗಳಿಗೆ ಯಾವುದೇ ಕಾಯಿಲೆಗಳು ಬಾರದಂತೆ ಪಶು ಆಸ್ಪತ್ರೆಯಲ್ಲಿ ಲಸಿಕೆಗಳನ್ನು ಉಚಿತವಾಗಿ ಹಾಕಿಸಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುತ್ತಾ ಹೋಗುವ ಕುರಿಗಾರರಿಗೆ ಅನುಕೂಲವಾಗಲೆಂದು ಸರಕಾರ ಸಂಚಾರಿ ಕಿಟ್ ಗಳನ್ನು ನೀಡಿದೆ. ಇದರಿಂದ ಕುರಿಗಾರರಿಗೆ ಅನುಕೂಲವಾಗುತ್ತದೆ ಎಂದು ಸಚಿವರು ತಿಳಿಸಿದರು. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಪಶು ಸಂಗೋಪನ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಮಂಡಗಳ್ಳಿಯಲ್ಲಿ ವೈಷ್ಯಮ್ಯಕ್ಕಾಗಿ ಕುರಿಗಳನ್ನು ಸಾಯಿಸಲಾಗಿದೆ.ಇದು ಒಳ್ಳೆಯ ಬೆಳವಣಿಗೆಯಲ್ಲ.ಸರಕಾರದಿಂದ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದು ಹೇಳಿದರು.
 ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ನಿರ್ದೇಶಕರಾದ ಶಾಂತಗೌಡ ನಾಗನಟಗಿ ಮಾತನಾಡಿ, ಕುರಿಗಾರರಿಗೆ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗ ಪಡೆಸಿಕೊಳ್ಳಬೇಕು. ಸಂಚಾರಿ ಕುರಿಗಾರರಿಗೆ ಅನುಕೂಲವಾಗಲೆಂದು ಟೆಂಟ್ ಮತ್ತು ಕಿಟ್ ಗಳನ್ನು ನೀಡಲಾಗಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಸಂಚಾರಿ ಕಿಟ್ ಗಳನ್ನು ನಮ್ಮ ಜಿಲ್ಲೆಗೆ ಒದಗಿಸಿಕೊಡುವಂತೆ ಪಶುಸಂಗೋಪನಾ
ಸಚಿವರಿಗೆ ಸೂಚಿಸಬೇಕೆಂದು ಮನವಿ ಮಾಡಿದರು. ಕುರಿಗಾರರಿಗೆ ಸರಿಯಾಗಿ ಔಷಧಿ ಒದಗಿಸಲಾಗುತ್ತಿಲ್ಲ. ಕುರಿಗಾರರ ರಕ್ಷಣೆಗೆ ಸರಕಾರ ಸಹಾಯ ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಯಾದಗಿರಿ ಜಿಲ್ಲಾ ಸಹಾಯಕ ನಿರ್ದೇಶಕರಾದ ಡಾ. ರಾಜಶೇಖರ್ ಕಾಸ್ಬಾಗ್, ಮಾಳಪ್ಪ ಸುಂಕದ ಕೆಂಭಾವಿ, ನಿಂಗಣ್ಣ ಹಂಚಿನಾಳ ರಾಜಪುರ,ಬಲಭೀಮ ಮಡ್ನಾಳ್, ಬೀರಲಿಂಗ, ನರಸಪ್ಪ ವಿಭೂತಿಹಳ್ಳಿ, ಮಹೇಶ ರಸ್ತಾಪುರ, ನಾಗರಾಜ ಹಾಗೂ ತಾಲೂಕಿನ ಕುರಿ ಮತ್ತು ಉಣ್ಣೆ ಸಹಕಾರ ಸಂಘಗಳ ಅಧ್ಯಕ್ಷರು ಕಾರ್ಯದರ್ಶಿಗಳು ಸದಸ್ಯರು ಪಶು ಆಸ್ಪತ್ರೆಯ ಸಿಬ್ಬಂದಿ ವರ್ಗದವರುಪಾಲ್ಗೊಂಡಿದ್ದರು. ಶರಬಣ್ಣ ರಸ್ತಾಪುರ ಸ್ವಾಗತಿಸಿದರು. ಅಮರಣ್ಣ ಕೋಬ್ರರಿ ನಿರೂಪಿಸಿದರು. ರವಿಕುಮಾರ ವಂದಿಸಿದರು.
ಶಹಪುರ ತಾಲೂಕಿನಲ್ಲಿ ರೇಬಿಸ್ ರೋಗದ ವಿರುದ್ಧ ಸಾಕು ನಾಯಿಗಳಿಗೆ ಉಚಿತ ಲಸಿಕೆ ಹಾಕಲಾಗುವುದು. ತಾಲೂಕಿನಲ್ಲಿ 635 ರೇಬೀಸ್ ಲಸಿಕೆಯ ಗುರಿ ನೀಡಲಾಗಿದ್ದು, ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದರು. ಸಪ್ಟೆಂಬರ್ 26ರಿಂದ ಅಕ್ಟೋಬರ್ 25 ರವರೆಗೆ ಕಾಲುಬಾಯಿ ರೋಗದ ವಿರುದ್ಧ ಲಸಿಕೆ ಕಾರ್ಯಕ್ರಮವಿದೆ.  ಶಹಪುರದಲ್ಲಿ 20ನೇ ಜಾನುವಾರು ಗಣತಿಯಲ್ಲಿ 55,230ಗಳಿವೆ. 37 ಜನ ಲಸಿಕೆ ಹಾಕುತ್ತಿದ್ದಾರೆ. ಅಕ್ಟೋಬರ್ ಒಂಬತ್ತರವರೆಗೆ 37, 800 ಜಾನುವಾರಗಳಿಗೆ ಕಾಲುಬಾಯಿ ಲಸಿಕೆ ಹಾಕಲಾಗಿದೆ.
 ಡಾ.ಷಣ್ಮುಖ ಗೊಂಗಡಿ 
ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಶಹಾಪುರ

About The Author