ಅನುಭಾವ ಸಾಹಿತ್ಯ :ನವರಾತ್ರಿಯ ನವದುರ್ಗಾ ಪೂಜೆ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದಲ್ಲಿ‌ ಪ್ರತಿವರ್ಷವೂ ” ಶಕ್ತಿಸಂಪಾದನೆ” ಗಾಗಿ ಆಚರಿಸುವ ಶರನ್ನವರಾತ್ರಿಯ ” ಮಹಾಶೈವ ನವರಾತ್ರಿ ಉತ್ಸವ” ದ ಅಂಗವಾಗಿ ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿಯನ್ನು ‘ ನವದುರ್ಗೆಯರ’ ರೂಪದಲ್ಲಿ ಪೂಜಿಸುವುದಲ್ಲದೆ ಒಂದೊಂದು ರಾತ್ರಿ ಒಬ್ಬೊಬ್ಬ ದೇವಿ,ಶಕ್ತಿಯರನ್ನು ಆಹ್ವಾನಿಸಲಾಗುತ್ತದೆ.ನವರಾತ್ರಿಯ ಆ ದಿನಗಳಲ್ಲಿ ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ಮತ್ತು ನನ್ನ ಅಳಿಯ ತ್ರಯಂಬಕೇಶ ವಿಶ್ವೇಶ್ವರಿ ದುರ್ಗಾದೇವಿಯನ್ನು ವಿಶೇಷ ಅಲಂಕಾರದೊಂದಿಗೆ ಪೂಜೆ,ಸೇವೆ ಸಲ್ಲಿಸುತ್ತಿದ್ದರೆ ನನ್ನ ಶಿಷ್ಯಂದಿರುಗಳಾದ ಷಣ್ಮುಖ ಹೂಗಾರ ಮತ್ತು ಬಸವಲಿಂಗ ಕರಿಗಾರ ದುರ್ಗಾದೇವಿಗೆ ಬಗೆಬಗೆಯ ಹೂವುಗಳಿಂದ ಪುಷ್ಪಾಲಂಕಾರ ಸೇವೆ ಮಾಡುತ್ತಾರೆ.ಶರನ್ನವರಾತ್ರಿಯ ದಿನಗಳಲ್ಲಿ ವಿಶ್ವೇಶ್ವರಿ ದುರ್ಗಾದೇವಿಯ ಪೂಜೆ,ಅಲಂಕಾರ ಸೇವೆಯನ್ನು ನೋಡಿ,ಆನಂದಿಸುವುದೇ ಸೌಭಾಗ್ಯ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಯಾವ ಪ್ರದೇಶದಲ್ಲಿಯೂ ಈ ತೆರನಾದ ಶ್ರೀ ದುರ್ಗಾ ಪೂಜೆ,ಸೇವೆ,ಉಪಾಸನೆಗಳು ನಡೆಯುವುದಿಲ್ಲ.ಪರಾಶಕ್ತಿ,ಪರಬ್ರಹ್ಮೆಯು ವಿಶ್ವೇಶ್ವರಿ ದುರ್ಗಾದೇವಿಯ ರೂಪದಲ್ಲಿ ನೆಲೆಸಿರುವ ಶ್ರೀಕ್ಷೇತ್ರ ಕೈಲಾಸಕ್ಕೆ ಸರಿಮಿಗಿಲು ಕ್ಷೇತ್ರಗಳಿಲ್ಲ. ವಿಶ್ವೇಶ್ವರಿ ದುರ್ಗಾದೇವಿಯು ನವರಾತ್ರಿಯ ದಿನಗಳಲ್ಲಿ ಒಂದೊಂದು ರೂಪದಲ್ಲಿ ಪ್ರಕಟಗೊಂಡು ಲೋಕವನ್ನು ಅನುಗ್ರಹಿಸುವ ‘ಲೋಕಹಿತೈಷಿಣಿ’ ರೂಪದಲ್ಲಿ ಲೋಕಮಾತೆಯಾಗಿ ಪ್ರಕಟಗೊಂಡು ಲೋಕಾನುಗ್ರಹಲೀಲೆಯನ್ನಾಡುತ್ತಾಳೆ.ನವರಾತ್ರಿಯ ನವ ದಿನಗಳಲ್ಲಿ ಶ್ರೀಕ್ಷೇತ್ರ ಕೈಲಾಸದಲ್ಲಿ ‘ ದುರ್ಗಾಸಪ್ತಶತಿ’ , ದುರ್ಗಾ ಸಹಸ್ರನಾಮ’ ಮತ್ತು ಚಿದಾನಂದಾವಧೂತರ ‘ಶ್ರೀದೇವಿ ಪುರಾಣ’ ವನ್ನು ಪ್ರತಿದಿನವೂ ಪೂರ್ಣ ಪಾರಾಯಣ ಮಾಡುತ್ತಿರುವುದರಿಂದ ದುರ್ಗಾಶಕ್ತಿಯು ಪ್ರಕಟಗೊಂಡು ಭಕ್ತರನ್ನು ಉದ್ಧರಿಸುತ್ತಾಳೆ ವಿಶ್ವಮಾತೆ.ಅಗ್ನಿಸ್ವರೂಪಳಾಗಿರುವ ದುರ್ಗಾದೇವಿಯನ್ನು ನವರಾತ್ರಿಯ ದಿನಗಳಲ್ಲಿ ‘ಮಂತ್ರಾಗ್ನಿಪ್ರಜ್ವಲನಕಾರ್ಯ’ ದಿಂದ ಆಹ್ವಾನಿಸುತ್ತಿರುವುದು ಶ್ರೀಕ್ಷೇತ್ರ ಕೈಲಾಸದ ವೈಶಿಷ್ಟ್ಯ.

ಪ್ರತಿವರ್ಷ ನವರಾತ್ರಿಯ ದಿನಗಳಲ್ಲಿ ವಿಶ್ವೇಶ್ವರಿ ದುರ್ಗಾದೇವಿಯ ಪುಷ್ಪಾಲಂಕಾರ ಸೇವೆ ನಿರ್ವಹಿಸುತ್ತಿರುವ ಶಿಷ್ಯ ಷಣ್ಮುಖ ಹೂಗಾರರಿಗೆ ನವದುರ್ಗೆಯರ ಬಗ್ಗೆ ತಿಳಿದುಕೊಳ್ಳುವ ಕುತೂಹಲ; ‘ ಗುರುವರ್ಯ,ನವದುರ್ಗಾ ತತ್ತ್ವಾರ್ಥ ತಿಳಿಸಿ’ ಎಂದು ಕೋರಿದ್ದಾರೆ.ಶಿಷ್ಯ ಷಣ್ಮುಖ ಹೂಗಾರ ಅವರ ಪ್ರಶ್ನೆಯು ಶಕ್ತಿ ಉಪಾಸಕರುಗಳಿಗೆಲ್ಲ ಉಪಯುಕ್ತ ಪ್ರಶ್ನೆಯಾದುದರಿಂದ ತಾಯಿ ದುರ್ಗಾದೇವಿಯ ನವಶಕ್ತಿರೂಪತತ್ತ್ವಾರ್ಥ ವಿವರಣೆಯನ್ನು ನೀಡುತ್ತಿದ್ದೇನೆ ಇಲ್ಲಿ,ಈ ಪುಟ್ಟಕೃತಿಯಲ್ಲಿ.

About The Author