ದೇವಿಯ ಪ್ರೇರಣೆ,ಚಿದಾನಂದಾವಧೂತರ ಜೀವನ ಚರಿತ್ರೆ ರಚನೆಗೆ ಒದಗಿ ಬಂದ ಅವಕಾಶ ! : ಮುಕ್ಕಣ್ಣ ಕರಿಗಾರ

 

ಚಿದಾನಂದಾವಧೂತರಿಗೆ ದರ್ಶನ ನೀಡಿ ಉದ್ಧರಿಸಿದ ಸಿದ್ಧಪರ್ವತವಾಸಿನಿ ತಾಯಿ ಬಗಳಾಮುಖಿಗೆ ನನ್ನ ‘ ಶ್ರೀದೇವಿ ಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಾಯ ಕೃತಿಯು ಆನಂದವನ್ನುಂಟು ಮಾಡಿದಂತೆ ಕಾಣುತ್ತದೆ.ಚಿದಾನಂದಾವಧೂತರ ದೇವಿಪುರಾಣಕ್ಕೆ ನಾನು ಬರೆದ ಈ ಪುಟ್ಟವ್ಯಾಖ್ಯಾನ ಗ್ರಂಥಕ್ಕೆ ತನ್ನ ದಿವ್ಯ ಅಂಕಿತಮುದ್ರೆಯನ್ನೊತ್ತಿದ ಪರಾಶಕ್ತಿ ಬಗಳಾಂಬೆಯು ನನ್ನಿಂದಲೇ ತನ್ನ ಭಕ್ತ ಚಿದಾನಂದಾವಧೂತರ ಚರಿತ್ರೆ ಬರೆಯಿಸಲು ಸಂಕಲ್ಪಿಸಿದ್ದಾಳೆ.

‘ಶ್ರೀದೇವಿ ಪುರಾಣದ ಪ್ರವೇಶದ್ವಾರ ಪೀಠಿಕಾ ಅಧ್ಯಾಯ’ ಕೃತಿಯನ್ನು ಮುದ್ರಿಸುತ್ತಿರುವ ಬೆಂಗಳೂರಿನ ಯಂತ್ರೋದ್ಧಾರಕ ಪ್ರಿಂಟಿಂಗ್ ಪ್ರೆಸ್ಸಿನ ಮಾಲಕರಾಗಿರುವ ಅನಿಲಕುಮಾರ ಅವರು ಇಂದು ಬೆಳಿಗ್ಗೆ ನನ್ನ ವಾಟ್ಸಾಪ್ ಗೆ ಒಂದು ಮೆಸೇಜ್ ಕಳುಹಿಸಿ’ ಗುರುಗಳೆ,ಚಿದಾನಂದಾವಧೂತರ ಜೀವನ ಚರಿತ್ರೆ ಪುಸ್ತಕ ಬರೆಯಿರಿ.ಅದರ ಮುದ್ರಣವೆಚ್ಚವನ್ನು ನಾನೇ ಭರಿಸಿ,ಅಚ್ಚುಕಟ್ಟಾಗಿ ಮುದ್ರಿಸುವೆ’ ಎಂದು ತಿಳಿಸಿದ್ದರು.ಇದಲ್ಲವೆ ತಾಯಿ ಬಗಳಾಮುಖಿಯ ಸಂಕಲ್ಪ,ಆಶೀರ್ವಾದ!.ನನಗೂ ಚಿದಾನಂದಾವಧೂತರ ಬಗ್ಗೆ ಒಂದು ಪುಸ್ತಕ ಬರೆಯುವ ಬಯಕೆ ಇತ್ತು.ಚಿದಾನಂದಾವಧೂತರ ಬಗ್ಗೆ ಕೆಲವರು ಪುಸ್ತಕಗಳನ್ನು ಬರೆದಿದ್ದಾರೆ.ಆದರೆ ಆ ಯಾವ ಪುಸ್ತಕವೂ ಚಿದಾನಂದಾವಧೂತರ ಋಷಿಸದೃಶ ದಾರ್ಶನಿಕ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಿಲ್ಲ.ಈ ಕಾರಣದಿಂದಲೇ ತಾಯಿ ಬಗಳಾಮುಖಿಯು ತನ್ನ ಮಗನ ಜೀವನ ಚರಿತ್ರೆಯನ್ನು ತನ್ನ ಮತ್ತೊಬ್ಬ ಮಗನಿಂದಲೇ ಬರೆಯಿಸಬೇಕು ಎಂದು ಸಂಕಲ್ಪಿಸಿದ್ದಾಳೆ.ಲೋಕಮಾತೆ ಬಗಳಾಮುಖಿಯೇ ಅನಿಲಕುಮಾರ ಅವರಲ್ಲಿ ಪ್ರೇರಣೆ ಉಂಟು ಮಾಡಿದ್ದಾಳೆ.ಶ್ರೀದೇವಿ ಪುರಾಣದ ಯಾವುದೇ ವ್ಯಾಖ್ಯಾನ ಇಲ್ಲವೆ ಚಿದಾನಂದಾವಧೂತರ ಕೃತಿ ಪ್ರಕಟಣೆಯ ವೆಚ್ಚಭರಿಸುವ ಬುದ್ಧಿ ಬರುವುದು ದೇವಿ ಬಗಳಾಮುಖಿಯ ಅನುಗ್ರಹವಿದ್ದವರಲ್ಲಿ ಮಾತ್ರ.ಅನಿಲಕುಮಾರ ಅವರಲ್ಲಿ ತಾಯಿ ಬಗಳಾಮುಖಿಯೇ ಈ ಸ್ಫೂರ್ತಿ,ಪ್ರೇರಣೆಗಳನ್ನು ನೀಡಿದ್ದಾಳೆ.

ನಾನು ನನ್ನ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ನಂತರ ಅತ್ಯಂತ ಪೂಜ್ಯಭಾವನೆಯಿಂದ ಕಾಣುವ ಇಬ್ಬರು ಮಹಾನ್ ಸಿದ್ಧರು, ತಪಸ್ವಿಗಳಲ್ಲಿ ಚೇಳ್ಳಗುರ್ಕಿಯ ಶ್ರೀ ಎರ್ರಿತಾತನವರು ಒಬ್ಬರಾದರೆ ಮತ್ತೊಬ್ಬರೇ ಶ್ರೀ ಚಿದಾನಂದಾವಧೂತರು.ಎರ್ರಿತಾತನವರು ನನ್ನ ಭಾಗ್ಯವಿಧಾತರು.ಇಂದಿಗೂ ನಾನು ಕರೆದಾಗ ನನ್ನ ನೆರವಿಗೆ ಬಂದು,ಉದ್ಧರಿಸುತ್ತಿರುವ ಮಹಾಋಷಿಗಳು,ಸಿದ್ಧಚಕ್ರವರ್ತಿಗಳು.ನಾನು ಬಳ್ಳಾರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಎರ್ರಿತಾತನವರು ದಿವ್ಯವ್ಯಕ್ತಿತ್ವದ ಪ್ರಭಾವಕ್ಕೆ ಒಳಗಾದೆ.ಚೇಳ್ಳಗುರ್ಕಿಯ ಅವರ ಜೀವ ಸಮಾಧಿ ಮಠದಲ್ಲಿ ಅವರ ಜೀವಸಮಾಧಿಯೆದುರು ಕುಳಿತಾಗ ಅವರು ಸ್ಪಷ್ಟವಾಗಿ ಮಾತನಾಡಿ,ನನ್ನ ಬದುಕಿನ ಘಟನೆಗಳ ಬಗ್ಗೆ ಹೇಳಿದ್ದು ನನ್ನ ಬದುಕಿನ ಅವಿಸ್ಮರಣೀಯ ಘಟನೆಗಳೊಂದು.ನಾನು ಚೇಳ್ಳಗುರ್ಕಿಗೆ ಹೋದಾಗಲೆಲ್ಲ ಅಥವಾ ಅವರು ನನಗೆ ಏನನ್ನಾದರೂ ಹೇಳಬೇಕು ಎನ್ನಿಸಿದಾಗ ಸ್ವತಃ ಎರ್ರಿತಾತನವರೇ ತಮ್ಮ ಸನ್ನಿಧಿಗೆ ಕರೆಯಿಸಿಕೊಂಡು ಸಂಕಲ್ಪವನ್ನರಹುತ್ತಾರೆ.ಧಾರವಾಡದ ತಪೋವನದ ನನ್ನ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳ ಸಮಾಧಿಯ ಬಳಿ ಪಡೆಯುವ ಸ್ಫೂರ್ತಿ,ಪ್ರೇರಣೆಗಳನ್ನೇ ನಾನು ಎರ್ರಿತಾತನವರ ಜೀವಸಮಾಧಿಯ ಬಳಿ ಪಡೆಯುತ್ತೇನೆ.ಇದೇನು ಕನಸಲ್ಲ,ಕಲ್ಪನೆಯಲ್ಲ.ಉನ್ನತ ಯೋಗಿಗಳು ಯೋಗಸಿದ್ಧರೊಡನೆ ಮಾತನಾಡುವ ಅಲೌಕಿಕಸಿದ್ಧಿಗಳಿವೆ.

ಚಿದಾನಂದಾವಧೂತರು ಎರ್ರಿತಾತನವರಿಗಿಂತ ಮುಂಚೆಯೇ ನನ್ನ ಬಾಳಿನಲ್ಲಿ ಪ್ರವೇಶಿಸಿದ್ದರು.ನಾನು ದೇವಿ ಪುರಾಣವನ್ನು ಓದಲು ಪ್ರಾರಂಭಿಸಿದ್ದು ಪಿಯುಸಿ ಮೊದಲ ವರ್ಷದಲ್ಲಿ‌ ಓದುತ್ತಿದ್ದ ೧೯೮೯ ರಲ್ಲಿ.ಚಿದಾನಂದಾವಧೂತರ ಶ್ರೀದೇವಿ ಪುರಾಣವನ್ನು ಓದಿಯೇ ನಾನು ತಾಯಿ ದುರ್ಗಾದೇವಿಯ ಅನುಗ್ರಹ ಪಡೆದದ್ದು ಮತ್ತು ದುರ್ಲಭಲಭ್ಯರಾಗಿದ್ದ ಯುಗಯೋಗಿ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರನ್ನು ಗುರುಗಳನ್ನಾಗಿ ಪಡೆದದ್ದು.ದೇವಿ ಪುರಾಣವು ನನಗೆ ಕಾಮಧೇನು- ಕಲ್ಪವೃಕ್ಷವಿದ್ದಂತೆ.ನನ್ನೆಲ್ಲ ವೃದ್ಧಿ ಸಿದ್ಧಿಗಳ ಮೂಲವೇ ಶ್ರೀದೇವಿ ಪುರಾಣ.ಲೋಕೋದ್ಧಾರಕ್ಕಾಗಿ ಸಿದ್ಧಪರ್ವತದಲ್ಲಿ ಬಗಳಾಮುಖಿಯ ರೂಪದಲ್ಲಿ ನೆಲೆನಿಂತು,ಚಿದಾನಂದಾವಧೂತರ ತಪಸ್ಸಾಧನೆಗೆ ಒಲಿದು ಅವರ ಮೂಲಕ ಶ್ರೀದೇವಿ ಪುರಾಣದಲ್ಲಿ ಅಕ್ಷರದೇವಿಯಾಗಿ ಮೂರ್ತಗೊಂಡು ಭಕ್ತರನ್ನು ಅನುಗ್ರಹಿಸುತ್ತಿರುವ ತಾಯಿ ಪಾರ್ವತಿದೇವಿಯು ಚಿದಾನಂದಾವಧೂತರ ಸಿದ್ಧವ್ಯಕ್ತಿತ್ವವನ್ನು ತನ್ನ ಮಗನಾದ ನನ್ನಿಂದ ಬರೆಯಿಸಲು ಸಂಕಲ್ಪಿಸಿದ ಬೆಡಗಿಗೆ ಶರಣೆಂದು ದಸರೆಯ ನಂತರ ಚಿದಾನಂದಾವಧೂತರ ಜೀವನ ಚರಿತ್ರೆ ಬರೆಯಲು ಸಂಕಲ್ಪಿಸಿ,ಅನಿಲಕುಮಾರ ಅವರಿಗೆ ಅದನ್ನು ತಿಳಿಸಿದೆ.

About The Author