ಹಡಗಿನಂತೆ ಸಂಸಾರ ಸಮುದ್ರದಲ್ಲಿ ತೇಲುತ್ತಿರಬೇಕು,ಮುಳುಗಬಾರದು ! : ಮುಕ್ಕಣ್ಣ ಕರಿಗಾರ

ರಾಮಕೃಷ್ಣ ಪರಮಹಂಸರು ಸಂಸಾರಿಗಳ ಬಗ್ಗೆ ಒಂದು ಒಳ್ಳೆಯ ದೃಷ್ಟಾಂತವನ್ನು ನೀಡುತ್ತಿದ್ದರು.ಸಂಸಾರಿಗಳು ಹೆಂಡತಿ ಮಕ್ಕಳ ಜೊತೆ ಆನಂದದಿಂದ ಬಾಳ್ವೆ ಮಾಡಬೇಕು,ಆದರೆ ಆ ಸಂಸಾರದಲ್ಲಿ ಸಿಕ್ಕಿಬೀಳಬಾರದು ಎನ್ನುತ್ತ ಪರಮಹಂಸರು ‘ ಹಡಗು ನೀರಿನಲ್ಲಿರಬೇಕು ಆದರೆ ಹಡಗಿನಲ್ಲಿ ನೀರಿರಬಾರದು’ ಎನ್ನುತ್ತಿದ್ದರು.ಹಡಗು ಸಮುದ್ರದ ನೀರಿನಲ್ಲಿ ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತದೆ.ಕಟ್ಟಿಗೆ ಮತ್ತು ಕಬ್ಬಿಣ ಇಲ್ಲವೆ ಹಗುರ ಲೋಹವನ್ನು ಬಳಸಿ ಹಡಗನ್ನು ನಿರ್ಮಿಸಿರುವುದರಿಂದ ಅದು ಸಮುದ್ರದ ನೀರಿನಲ್ಲಿ ತೇಲುತ್ತ ಸಾಗುತ್ತದೆ,ಸಮುದ್ರದ ಭೋರ್ಗರೆವ ಅಲೆಗಳೆದುರು ಈಜಿ ದಡಸೇರುತ್ತದೆ.ಹಡಗಿನಲ್ಲಿ ಸಮುದ್ರದ ಒಂದು ಹನಿ ನೀರು ಒಳಸೇರದಂತೆ ಅದನ್ನು ಭದ್ರವಾಗಿ ಕಟ್ಟಿರುವುದರಿಂದ ಎಷ್ಟೇ ದಿನಗಳ ಪ್ರಯಾಣವಾದರೂ ಸುರಕ್ಷಿತವಾಗಿ ದಡಸೇರುತ್ತದೆ.ಆದರೆ ಅದೇ ಹಡಗು ತೂತು ಬಿದ್ದರೆ? ಹಡಗಿನಲ್ಲಿ ರಂಧ್ರ ಉಂಟಾದರೆ ? ದೇವರೇ ಗತಿ!ತೂತುಬಿದ್ದ ಹಡಗಿನಲ್ಲಿ ಸಮುದ್ರದ ನೀರು ಒಳಹೊಕ್ಕು ಹಡಗು ಸಮುದ್ರದಲ್ಲಿ ಮುಳುಗುತ್ತದೆ,ಅದರಲ್ಲಿದ್ದವರೆಲ್ಲ ಸಮುದ್ರದ ಪಾಲು ಆಗುತ್ತಾರೆ.ಸಂಸಾರದಲ್ಲಿ ನಾವು ತೇಲುವ ಹಡಗುಗಳಾಗಿರಬೇಕು ಎನ್ನುತ್ತಾರೆ ರಾಮಕೃಷ್ಣ ಪರಮಹಂಸರು.

ನಾವು ಸಂಸಾರದಲ್ಲಿ ಇದ್ದೂ ಇಲ್ಲದಂತೆ ಇರಬೇಕು ಎನ್ನುವುದೇ ರಾಮಕೃಷ್ಣ ಪರಮಹಂಸರ ಈ ದೃಷ್ಟಾಂತದ ಸಾರ.ಸಂಸಾರವನ್ನು ಪರಮಾತ್ಮನೇ ಸೃಷ್ಟಿಸಿರುವುದರಿಂದ ಸಂಸಾರದಲ್ಲಿರುವುದು ತಪ್ಪಲ್ಲ ಆದರೆ ಸಂಸಾರವೇ ಸತ್ಯ,ಸಂಸಾರವೇ ಶಾಶ್ವತ ಎಂದು ಅದಕ್ಕೆ ಸಿಕ್ಕಿಬೀಳುವುದು ತಪ್ಪು.ಸಂಸಾರದಲ್ಲಿ ತಂದೆ ತಾಯಿಗಳಿಗೆ ಒಳ್ಳೆಯ ಮಗನಾಗಬೇಕು,ಅಣ್ಣ ತಮ್ಮಂದಿರಿಗೆ ,ಅಕ್ಕ ತಂಗಿಯರಿಗೆ ಒಳ್ಳೆಯ ಸಹೋದರನಾಗಬೇಕು.ಹೆಂಡತಿಗೆ ಒಳ್ಳೆಯ ಗಂಡನಾಗಬೇಕು,ಮಕ್ಕಳಿಗೆ ಒಳ್ಳೆಯ ತಂದೆಯಾಗಬೇಕು.ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಇರಬೇಕು.ಬಂಧು ಬಾಂಧವರಲ್ಲಿ ಪ್ರೀತಿ,ಅಕ್ಕರೆಯಿರಬೇಕು.ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಪ್ರೀತಿ,ಸೌಜನ್ಯದಿಂದ ವರ್ತಿಸಬೇಕು.ಅದೃಷ್ಟವಶಾತ್ ಒದಗಿ ಬರುವ ಕೋಟಿ ಕೋಟಿ ಹಣ,ದೊಡ್ಡ ದೊಡ್ಡ ಹುದ್ದೆಗಳನ್ನು ಅನುಭವಿಸಬೇಕು,ಜೀವನದ ಸೌಂದರ್ಯವನ್ನು ಆನಂದಿಸಬೇಕು.ಆದರೆ ‘ಕೊನೆಗೊಂದು ದಿನ ನಾನು ಈ ಎಲ್ಲವನ್ನೂ ಬಿಟ್ಟುಹೋಗುತ್ತೇನೆ’ ಎನ್ನುವ ಎಚ್ಚರ ಇರಬೇಕು.ಈ ಎಚ್ಚರವೇ ಜೀವನದ ಸಾರ್ಥಕತೆ.

ಸಂಸಾರಿಯಾಗಿ ವೃದ್ಧಾಪ್ಯದೊಳಿರುವ ತಂದೆ ತಾಯಿಗಳ ಸೇವೆ- ಶುಶ್ರೂಷೆ ಮಾಡುವುದು ಮಗನ ಆದ್ಯಕರ್ತವ್ಯ.ಹೆಂಡತಿ ಮಕ್ಕಳ ಭವಿಷ್ಯವನ್ನು ಚೆನ್ನಾಗಿರುವಂತೆ ನೋಡಿಕೊಳ್ಳುವುದು ಸದ್ಗೃಹಸ್ಥನ ಲಕ್ಷಣ.ಆದರೆ ನಾವು ಸತ್ತಾಗ ನಮ್ಮ ಹೆಂಡತಿ ಮಕ್ಕಳು ಸೇರಿದಂತೆ ನಮ್ಮ‌ಪ್ರೀತಿಪಾತ್ರರು ಯಾರೂ ನಮ್ಮ ಜೊತೆಗೆ ಬರುವುದಿಲ್ಲ ಎನ್ನುವುದನ್ನು ಮಾತ್ರ ಮರೆಯಬಾರದು.ನಾವು ಈ ಪ್ರಪಂಚಕ್ಕೆ ಒಂಟಿಯಾಗಿಯೇ ಬಂದಿರುತ್ತೇವೆ,ಹೋಗುವಾಗಲು ಒಂಟಿಯಾಗಿಯೇ ಹೋಗುತ್ತೇವೆ.ನಾವು ಪ್ರಪಂಚದಲ್ಲಿ ದೊಡ್ಡದೊಡ್ಡ ಹುದ್ದೆಗಳನ್ನು ಪಡೆದು ಆನಂದಿಸಬಹುದು,ಬಂಗಾರ ಬೆಳ್ಳಿಯ ಖುರ್ಚಿಗಳ ಮೇಲೆ ಕುಳಿತುಕೊಳ್ಳಬಹುದು.ಮಿಲಿಯನೇರ್,ಬಿಲಿಯನೇರ್ ಗಳಾಗಿ ಮೆರೆಯಬಹುದು.ಆದರೆ ನಾವು ಹೋಗುವಾಗ ನಮ್ಮ ಬಂಗಾರ ಬೆಳ್ಳಿಯ ಖುರ್ಚಿಗಳಾಗಲಿ,ತಲೆಗೆ ಮುಡಿದ ವಜ್ರದ ಕಿರೀಟವಾಗಲಿ ಇಲ್ಲವೆ ಸಂಪಾದಿಸಿದ ನೋಟುಗಳ ರಾಶಿಯಾಗಲಿ ನಮ್ಮೊಂದಿಗೆ ಬರುವುದಿಲ್ಲ.ಬರುವಾಗ ಬರಿ ಕೈ,ಹೋಗುವಾಗ ಬರಿ ಕೈ! ಹಾಗಿದ್ದೂ ಎಷ್ಟೊಂದು ಜಡರು ಜಂಜಾಟ! ಸ್ಪರ್ಧೆ,ಕಚ್ಚಾಟ ! ಇದೆ ಮಾಯೆ,ಇದೇ ವಿಧಿ.ಇದುವೆ ಪರಮಾತ್ಮನು ಆಡಿಸುತ್ತಿರುವ ಪ್ರಪಂಚದ ಆಟ !

ಸಂಸಾರ ಎನ್ನುವ ಸಮುದ್ರದಲ್ಲಿ ನಾವು ತೇಲುವ ಹಡಗು ಆಗಬೇಕೇ ಹೊರತು ಮುಳುಗಿ ನಾಶವಾಗುವ ಹಡಗು ಆಗಬಾರದು.ಸಂಸಾರದ ಮೋಹ ಮಮಕಾರಗಳಿಗೆ ಸಿಕ್ಕಿಬಿದ್ದರೆ ಹಡಗು ತೂತು ಬಿದ್ದಂತೆ.ಸಂಸಾರದಲ್ಲಿ ಮೋಹ ಮಮಕಾರ ಮುಕ್ತನಾಗಿ ನಿರ್ಲಿಪ್ತನಾಗಿರುವುದೇ ತೇಲುವ ಹಡಗು ಆಗುವ ಪರಿ.ಸಾಧು- ಸಂತರು,ಶರಣರು- ಸತ್ಪುರುಷರುಗಳು ಸಂಸಾರದಲ್ಲಿ ಇರುತ್ತಾರೆ ಆದರೆ ಸಂಸಾರದ ಬಂಧನಕ್ಕೆ ಸಿಲುಕಿರುವುದಿಲ್ಲ.ಹಣಗಳಿಸುವ ಆಸೆ ಇರಬೇಕು.ತಾನು ತನ್ನ ಹೆಂಡತಿ ಮಕ್ಕಳ ಯೋಗಕ್ಷೇಮಕ್ಕೆ ಆಗುವಷ್ಟು ಕೂಡಿಟ್ಟರೆ ಸಾಕು.ತನ್ನ ವಂಶದ ನೂರಾರು ತಲೆಮಾರುಗಳು ಕುಳಿತು ತಿಂದರೂ ತೀರದಷ್ಟು ಸಂಪಾದಿಸಬೇಕು ಎನ್ನುವ ದುರಾಲೋಚನೆಯು ತೂತು ಬಿದ್ದ ಹಡಗು.ಮುಖ್ಯಮಂತ್ರಿ,ಪ್ರಧಾನ ಮಂತ್ರಿ ಆಗುವ ಕನಸಿರಬೇಕು.ಆದರೆ ಸಾಯುವವರೆಗೆ ನಾನೇ ಮುಖ್ಯಮಂತ್ರಿಯಾಗಿರಬೇಕು,ಪ್ರಧಾನ ಮಂತ್ರಿಯಾಗಿರಬೇಕು,ನನ್ನ ನಂತರ ನನ್ನ ಮಕ್ಕಳು,ಮೊಮ್ಮಕ್ಕಳು ಮುಖ್ಯಮಂತ್ರಿಯಾಗಬೇಕು,ಪ್ರಧಾನ ಮಂತ್ರಿಯಾಗಬೇಕು ಎಂದು ಬಯಸುವುದೇ ಸಮುದ್ರದ ನೀರು ತುಂಬಿಕೊಂಡು ಮುಳುಗುವ ಹಡಗು.

ಆಸೆ ಇರಲಿ,ಆದರೆ ದುರಾಸೆ ಬೇಡ.ಬಯಕೆಗಳಿರಲಿ ಆದರೆ ಹೊರದಷ್ಟು ಭಾರವಾದ ಬಯಕೆಗಳು ಬೇಡ. Live and Let Live ಎನ್ನುವಂತೆ ತಾನು ಬದುಕಬೇಕು, ಇತರರು ಬದುಕಲು ಅವಕಾಶ ನೀಡಬೇಕು.ಸಂಪಾದಿಸಿದ ಎಲ್ಲವನ್ನು ತಾನೊಬ್ಬನೇ ಅನುಭವಿಸುವ ಬದಲು ಸಮಾಜದ ಅವಕಾಶವಂಚಿತರಿಗೆ ಸಂಪಾದನೆಯಲ್ಲಿ ಒಂದಿಷ್ಟನ್ನಾದರೂ ಖರ್ಚು ಮಾಡಬೇಕು.ಇದೆಲ್ಲದರ ಜೊತೆಗೆ ಹೆಂಡತಿ ಮಕ್ಕಳು ಬಂಧು ಬಾಂಧವರುಗಳು ನನ್ನ ನಿಜವಾದ ನೆಂಟರಲ್ಲ,ನನ್ನ ನಿಜವಾದ ನೆಂಟ,ಎಂದೆಂದೂ ಅಗಲದ ಬಂಧು,ತಂದೆ ಪರಮಾತ್ಮ ಎನ್ನುವುದು ಅರ್ಥ ಮಾಡಿಕೊಳ್ಳಬೇಕು.ಇದ್ದು ಇಲ್ಲವಾಗುವ ಮನುಷ್ಯ ಸಂಬಂಧಗಳಲ್ಲಿ ಬಿದ್ದು ಸಾಯದೆ ನಿತ್ಯನೂ ಶಾಶ್ವತನೂ ಆದ ಪರಮಾತ್ಮನಲ್ಲಿ ಒಂದುಗೂಡಿ ಮುಕ್ತರಾಗಿ ಗೆಲ್ಲುವ ಮಾರ್ಗ ಕಂಡುಕೊಳ್ಳಬೇಕು.ಪರಮಾತ್ಮನ ಪಥದಲ್ಲಿ ನಡೆಯುವವರೇ ತೇಲುವ ಹಡಗುಗಳು.ಪರಮಾತ್ಮನ ಪಥದಿಂದ ವಿಮುಖರಾಗುವವರೇ ಸಮುದ್ರದಲ್ಲಿ ಮುಳುಗುವ ಹಡಗುಗಳು.ನಾವು ಎಷ್ಟೇ ಬುದ್ಧಿವಂತರಿರಬಹುದು,ಎಷ್ಟೇ ಪ್ರಭಾವಶಾಲಿಗಳಾಗಿರಬಹುದು,ಎಂತಹದೆ ಪರಾಕ್ರಮಶಾಲಿಗಳಾಗಿರಬಹುದು ಕೊನೆಗೊಂದು ದಿನ ನಮ್ಮ ಪ್ರತಿಭೆ,ಪ್ರಭಾವ ಮತ್ತು ಪರಾಕ್ರಮಗಳು ಮಣ್ಣು ಪಾಲಾಗುತ್ತವೆ ಇಲ್ಲವೆ ಬೆಂಕಿಯಲ್ಲಿ ಸುಟ್ಟುಹೋಗುತ್ತವೆ.ಐನ್ ಸ್ಟೀನ್ನನ ಬುದ್ಧಿಮತ್ತೆ ಎಷ್ಟೇ ದೊಡ್ಡದಿದ್ದರೂ ಆತ ಸತ್ತೊಡನೆ ಆತನ ಮೆದುಳು ಸತ್ತುಹೋಯಿತು.ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಐನ್ ಸ್ಟಿನ್ ನ ಮೆದುಳು ಸತ್ತಬಳಿಕ ಆತನ ದೇಹಾವಸಾನವಾಯಿತು.ಇಂದಿಗೂ ವೈದ್ಯರು ಮೆದುಳು ನಿಷ್ಕ್ರೀಯಗೊಂಡಾಗಲೆ ಒಬ್ಬ ವ್ಯಕ್ತಿ ಸತ್ತಿದ್ದಾನೆ ಎಂದು ಘೋಷಿಸುತ್ತಾರೆ.ಜಗತ್ತಿನ ಅತ್ಯಂತ ಬುದ್ಧಿವಂತ ಮನುಷ್ಯ ಎಂದು ಆತನ ಮೆದುಳೇನೂ ಸ್ವರ್ಗಕ್ಕೆ ಹೋಗುವುದಿಲ್ಲ.ದೇಹ ಮತ್ತು ಅದಕ್ಕೆ ಅಂಟಿಕೊಂಡ ಎಲ್ಲವೂ ಇಲ್ಲಿಯೇ ಮಣ್ಣಲ್ಲಿ ಮಣ್ಣಾಗುತ್ತದೆ.ನಾನು ದೇಹವಲ್ಲ ಆತ್ಮ ಎನ್ನುವ ಭಾವ ಅಂಕುರಿಸಿದೊಡೆ ಆ ಭಾವವೇ ಗಟ್ಟಿಗೊಂಡು ಭಗವಂತನ ಸಾನ್ನಿಧ್ಯಕ್ಕೆ ನಮನ್ನು ಕರೆದುಕೊಂಡು ಹೋಗುತ್ತದೆ.

ಸಂಸಾರ ಸಮುದ್ರದಲ್ಲಿ ನಾವು ತೇಲುವ ಹಡಗುಗಳಾಗಬೇಕಾದರೆ ಪ್ರಪಂಚದಲ್ಲಿ ಪರಿಮಿತ ಆಸೆಗಳಿರಬೇಕು,ಭಗವಂತನಲ್ಲಿ ಅಪರಿಮಿತ ಭಕ್ತಿ,ಶ್ರದ್ಧೆಗಳಿರಬೇಕು.

About The Author