ಕಾಲಮಾನದ ಅವಶ್ಯಕತೆಯಾಗಿ ಹುಟ್ಟಿದ ‘ ಶೂದ್ರಭಾರತಪಕ್ಷ’

ರಾಜಕಾರಣ : ಕಾಲಮಾನದ ಅವಶ್ಯಕತೆಯಾಗಿ ಹುಟ್ಟಿದ ‘ ಶೂದ್ರಭಾರತಪಕ್ಷ’ : ಮುಕ್ಕಣ್ಣ ಕರಿಗಾರ

ವಿಶ್ವನಿಯಾಮಕ ವಿಶ್ವೇಶ್ವರ ಶಿವನ ಪ್ರೇರಣೆಯಂತೆ ನಾವು ತಳಸಮುದಾಯಗಳು,ದಲಿತರು,ನಿರ್ಲಕ್ಷಿತ ಸಮುದಾಯಗಳ ರಾಜಕೀಯ ಉನ್ನತಿ ಮತ್ತು ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುವ ಸಂಕಲ್ಪದಿಂದ ‘ ಶೂದ್ರ ಭಾರತ ಪಕ್ಷ’ ವನ್ನು ಸ್ಥಾಪಿಸಿ ಎರಡು ತಿಂಗಳು ಮುಗಿಯುವುದರ ಒಳಗಾಗಿ ರಾಜ್ಯ,ರಾಷ್ಟ್ರದಲ್ಲಿ ಶೂದ್ರಭಾರತನಿರ್ಮಾಣ ಪರವಾದ ಘಟನೆಗಳು ನಡೆಯುತ್ತಿವೆ.ದೇಶದ ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳು ಮತ್ತು ಅತಿಹಿಂದುಳಿದ ವರ್ಗಗಳು,ಅವಕಾಶವಂಚಿತ ಸಮುದಾಯಗಳ ಜನಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದು ಊಹಿಸಿಯೇ ನಾವು ಮುಂದೆ ರಾಷ್ಟ್ರೀಯ ಪಕ್ಷವಾಗಿ ಇದನ್ನು ಬೆಳೆಸಬೇಕು ಎನ್ನುವ ಉದ್ದೇಶದಿಂದ ಸದ್ಯ ಕರ್ನಾಟಕ ರಾಜ್ಯವ್ಯಾಪ್ತಿಯ ಪ್ರಾದೇಶಿಕ ಪಕ್ಷವನ್ನಾಗಿ ‘ಶೂದ್ರಭಾರತಪಕ್ಷ’ ವನ್ನು ಸ್ಥಾಪಿಸಿದೆವು.

ಶೂದ್ರಭಾರತಪಕ್ಷವು ಸ್ಥಾಪನೆಯಾದ ತಿಂಗಳೊಳಗಾಗಿ ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತಾ ದಳವು ಬಿಜೆಪಿಯೊಂದಿಗೆ ಕೈಜೋಡಿಸಿ ಎನ್ ಡಿ ಎ ಒಕ್ಕೂಟದ ಭಾಗವಾಗಿದೆ.ಇದರಿಂದಾಗಿ ಸಹಜವಾಗಿಯೇ ಜೆಡಿಎಸ್ ಪಕ್ಷದಲ್ಲಿದ್ದ ಮುಸ್ಲಿಮರು ಮತ್ತು ತಳಸಮುದಾಯಗಳು,ದಲಿತ ಸಮುದಾಯಗಳ ನಾಯಕರು ಬೇರೆ ಪಕ್ಷಗಳತ್ತ ಮುಖಮಾಡಿದ್ದಾರೆ.ಕಾಂಗ್ರೆಸ್ ಪಕ್ಷವನ್ನು ಎಲ್ಲರೂ ಸೇರದೆ ಇದ್ದರೂ ಅವರುಗಳಿಗೆ ಬೇರೆ ಆಯ್ಕೆಗಳಿರಲಿಲ್ಲ.ಇಂಥಹ ಸಂದರ್ಭದಲ್ಲಿಯೇ ಮುಸ್ಲಿಮರು,ದಲಿತರುಗಳು ಸೇರಿದಂತೆ ಎಲ್ಲ ತಳಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಅವಕಾಶಗಳನ್ನು ಖಚಿತಪಡಿಸುವ ಧ್ಯೇಯದೊಂದಿಗೆ ನಮ್ಮ ‘ ಶೂದ್ರಭಾರತಪಕ್ಷ’ ಉದಯಿಸಿದೆ ಹೊಸಭರವಸೆಯಾಗಿ.

ಅಕ್ಟೋಬರ್ 02 ರಂದು ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಅವರು ಬಿಹಾರ ರಾಜ್ಯದ ಜಾತಿಗಣತಿಯ ವಿವರಗಳನ್ನು ಬಹಿರಂಗಪಡಿಸಿದರು.ಇದರಿಂದ ಬಿಹಾರ ರಾಜ್ಯದಲ್ಲಿ ಹಿಂದುಳಿದವರು ಮತ್ತು ಅತಿಹಿಂದುಳಿದ ಜನಾಂಗದವರ ಸಂಖ್ಯೆಯೇ 62% ರಷ್ಟು ಇದ್ದದು ಬೆಳಕಿಗೆ ಬಂದಿತು.ಬಿಹಾರ ರಾಜ್ಯದಂತೆಯೇ ಇತರ ರಾಜ್ಯಗಳಲ್ಲಿಯೂ ಜಾತಿಗಣತಿ ನಡೆಸಬೇಕು ಎನ್ನುವ ಕೂಗು ಕೇಳಿಬರುತ್ತಿದೆ,ಕೇಂದ್ರ ಸರಕಾರವು ಜಾತಿಗಣತಿಯನ್ನು ಮಾಡಬೇಕು ಎನ್ನುವ ಆಗ್ರಹವೂ ಜೋರಾಗಿದೆ.ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಾತಿಗಣತಿಯ ವಿವರಗಳನ್ನು ಬಹಿರಂಗಪಡಿಸಬೇಕು ಎನ್ನುವ ಒತ್ತಾಯ ಹೆಚ್ಚುತ್ತಿದೆ.

ಇಂತಹ ಘಟನೆಗಳು ಘಟಿಸುವ ಮುನ್ಸೂಚನೆ ಎನ್ನುವಂತೆ ‘ ಶೂದ್ರಭಾರತಪಕ್ಷ’ ವು ಜನ್ಮತಾಳಿದೆ.ಕರ್ನಾಟಕ ಸರಕಾರವು ಜಾತಿಗಣತಿಯ ವಿವರಗಳನ್ನು ಬಿಡುಗಡೆ ಮಾಡಿದರೆ ರಾಜ್ಯದ ಜನಸಂಖ್ಯೆಯಲ್ಲಿ ಶೂದ್ರಸಮುದಾಯಗಳ ಜನಸಂಖ್ಯೆ ಎಷ್ಟು ಎಂದು ನಿಖರವಾಗಿ ಗೊತ್ತಾಗುತ್ತದೆ.ಮುಂಬರುವ ಲೋಕಸಭಾ ಚುನಾವಣೆ ಮತ್ತು ಜಿಲ್ಲಾ ಪಂಚಾಯತಿ,ತಾಲ್ಲೂಕಾ ಪಂಚಾಯತಿ ಚುನಾವಣೆಗಳಿಗೆ ಶೂದ್ರಭಾರತಪಕ್ಷದಿಂದ ಹಿಂದುಳಿದ,ಅತಿಹಿಂದುಳಿದ,ಅವಕಾಶವಂಚಿತ ಸಮುದಾಯಗಳಿಗೆ ಹಾಗೂ ಮುಸ್ಲಿಸಮುದಾಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೇಟುಗಳು ನೀಡಿ ಆ ಜನಾಂಗಗಳಿಗೆ ರಾಜಕೀಯ ಅವಕಾಶ ನೀಡಲಾಗುತ್ತದೆ.ಪ್ರಬಲಜಾತಿಗಳ ಕೈಯಲ್ಲಿರುವ ರಾಜಕೀಯ ಅಧಿಕಾರವನ್ನು ಶೂದ್ರಸಮುದಾಯಗಳ ಕೈಗಿಡುವುದೇ ಶೂದ್ರಭಾರತಪಕ್ಷದ ಗುರಿ.ರಾಜಕೀಯ ರಂಗ ಮಾತ್ರವಲ್ಲ,ಸರಕಾರಿ ಉದ್ಯೋಗಗಳಲ್ಲಿಯೂ ಕೂಡ ಶೂದ್ರಸಮುದಾಯಗಳಿಗೆ ದೊರೆಯಬೇಕಾದ ಅವಕಾಶಗಳನ್ನು ಒದಗಿಸಿ ಕೊಡುವುದೇ ಶೂದ್ರಭಾರತ ಪಕ್ಷದ ಗುರಿ.ಮುಂಬರುವ ದಿನಗಳಲ್ಲಿ ಶೂದ್ರಭಾರತ ಪಕ್ಷವು ರಾಜ್ಯದ ಆಶೋತ್ತರಗಳನ್ನು ಪ್ರತಿನಿಧಿಸುವ,ರಾಜ್ಯಾಡಳಿತ ಸೂತ್ರ ಹಿಡಿಯುವ ಏಕೈಕ ಪಕ್ಷವಾಗಲಿದೆ.

ಭವಿಷ್ಯತ್ತಿನ ದಿನಗಳಲ್ಲಿ ದೇಶದಲ್ಲಿ ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ ಪಾತ್ರವನ್ನು ವಹಿಸಲಿರುವುದರಿಂದ ಕರ್ನಾಟಕದ ಆಡಳಿತ ಚುಕ್ಕಾಣಿ ಹಿಡಿಯಲಿರುವ ಶೂದ್ರಭಾರತಪಕ್ಷವು ಇತರ ಪ್ರಾದೇಶಿಕ ಪಕ್ಷಗಳಿಗೆ ಮಾದರಿ,ಸ್ಫೂರ್ತಿ ಆಗಲಿದೆ.ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡು ಮುಂಬರುವ ವರ್ಷಗಳಲ್ಲಿ ನೇಪಥ್ಯಕ್ಕೆ ಸರಿಯಲಿವೆ.ನರೇಂದ್ರ ಮೋದಿಯವರ ನೇತೃತ್ವದಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯೇ ನಿಚ್ಚಳ ಬಹುಮತದಿಂದ ಗೆದ್ದು ಅಧಿಕಾರಕ್ಕೆ ಬರಲಿದೆ.ಆದರೆ 2025 ರ ನಂತರ ಬಿಜೆಪಿಯು ತೀವ್ರಸಂಕಷ್ಟದ ದಿನಗಳನ್ನು ಎದುರಿಸಲಿದೆ.ಕಾಂಗ್ರೆಸ್ ಪಕ್ಷವು ವಿವಿಧ ರಾಜ್ಯಗಳಲ್ಲಿ ವಿಭಜನೆ ಹೊಂದುತ್ತ ಅದರಿಂದ ಹೊರಬರುವ ನಾಯಕರುಗಳು ಹಲವು ಪ್ರಾದೇಶಿಕ ಪಕ್ಷಗಳನ್ನು ಕಟ್ಟಲಿದ್ದಾರೆ.ಕರ್ನಾಟಕದಲ್ಲಿಯೂ ಕೂಡ ಕಾಂಗ್ರೆಸ್ ಪಕ್ಷವು ಆಂತರಿಕ ಕಚ್ಚಾಟದಿಂದ ಸಿಕ್ಕ ಅಧಿಕಾರವನ್ನು ಅನುಭವಿಸದೆ ಹಳಹಳಿಸುವಂತೆ ಆಗುತ್ತದೆ.ಕರ್ನಾಟಕದಲ್ಲಿ ಅವಧಿಪೂರ್ಣ ವಿಧಾನಸಭಾ ಚುನಾವಣೆ ಬರುವ ಸೂಚನೆಗಳು ದಟ್ಟವಾಗಿವೆ.

ರಾಜಕೀಯದಲ್ಲಿ ಉನ್ನತಿಯನ್ನು ಬಯಸುವ ಶೂದ್ರಸಮುದಾಯಗಳಿಗೆ ಸೇರಿದವರೆಲ್ಲರೂ ಶೂದ್ರಭಾರತಪಕ್ಷವನ್ನು ಸೇರಿ ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ಮೂಲಕ ಕರೆನೀಡುತ್ತಿದ್ದೇನೆ.

 ಲೇಖಕರು ಶೂದ್ರಭಾರತಪಕ್ಷದ ರಾಜ್ಯಾಧ್ಯಕ್ಷರು

About The Author