ಹಣೆಬರಹವನ್ನು ಬದಲಿಸಲಿರುವ ಜಾತಿಗಣತಿಯ ವರದಿಯನ್ನು ಬೇಗ ಬಹಿರಂಗಪಡಿಸಬೇಕು

 ಮೂರನೇ ಕಣ್ಣು 

ಹಣೆಬರಹವನ್ನು ಬದಲಿಸಲಿರುವ ಜಾತಿಗಣತಿಯ ವರದಿಯನ್ನು ಬೇಗ ಬಹಿರಂಗಪಡಿಸಬೇಕು : ಮುಕ್ಕಣ್ಣ ಕರಿಗಾರ

ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರೂ ಅಕ್ಟೋಬರ್ 02 ರಂದು ಬಿಹಾರದ ಜಾತಿ ಗಣತಿಯ ವಿವರಗಳನ್ನು ಬಿಡುಗಡೆ ಮಾಡಿದ ಬಳಿಕ ಜಾತಿಗಣತಿಯ ಕೂಗು ದೇಶವ್ಯಾಪಿಅನುರಣಗೊಳ್ಳುತ್ತಿದೆ.ಕರ್ನಾಟಕದಲ್ಲೂ ಜಾತಿಗಣತಿಯ ವಿವರಗಳನ್ನು ಬಹಿರಂಗಪಡಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಒತ್ತಡ ಹೆಚ್ಚಿದೆ.ಸಿದ್ಧರಾಮಯ್ಯನವರು ಈಗ ಆ ಈ ಸಬೂಬುಗಳನ್ನು ಹುಡುಕುವ ಬದಲು ಆದಷ್ಟು ಶೀಘ್ರವಾಗಿ ಜಾತಿಗಣತಿಯ ವರದಿಯನ್ನು ಬಹಿರಂಗಪಡಿಸಬೇಕು.ಬೆಳಗಾವಿಯಲ್ಲಿ ಮಾತನಾಡುತ್ತ ತಾವು ‘ಸಾಮಾಜಿಕ ನ್ಯಾಯ’ದ ಪರವಾಗಿ ಇರುವುದಾಗಿ ಸಿದ್ಧರಾಮಯ್ಯನವರು ಹೇಳಿಕೊಂಡಿದ್ದಾರೆ.ಒಂದು ವೇಳೆ ಅವರು ‘ಸಾಮಾಜಿಕ ನ್ಯಾಯ’ದ ಪರವಾಗಿ ಇದ್ದದ್ದೇ ಅದರೆ ಆದಷ್ಟು ಬೇಗನೆ ಜಾತಿಗಣತಿಯ ವರದಿಯನ್ನು ಬಹಿರಂಗಪಡಿಸಬೇಕು. ಹಿಂದೆ ಅವರೇ ಮುಖ್ಯಮಂತ್ರಿಯಾಗಿದ್ದ ಅವಧಿಯ 2013 ರಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಜಾತಿಗಣತಿ ನಡೆಸಲು ಆದೇಶ ನೀಡಲಾಗಿತ್ತು.ಕಾಂತರಾಜ ಅವರು ಅಧ್ಯಕ್ಷರಾಗಿದ್ದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು 2015 ರಲ್ಲಿ ಜಾತಿಗಣತಿಯ ವರದಿಯನ್ನು ಪೂರ್ಣಗೊಳಿಸಿತ್ತು.ಅಲ್ಲಿಂದ ಇಲ್ಲಿಯವರೆಗೆ ಒಂದಿಲ್ಲ ಒಂದು ಕುಂಟು ನೆಪ ಹೇಳುತ್ತ ವರದಿಯನ್ನು ಬಹಿರಂಗಪಡಿಸಿಲ್ಲ.

ಕಾಂತರಾಜ ಅವರ ಅಧ್ಯಕ್ಷತೆಯಲ್ಲಿನ ಹಿಂದುಳಿದ ವರ್ಗಗಳ ಆಯೋಗದ ವರದಿಯು ಬಿಡುಗಡೆ ಆಗದೆ ಇರಲು ಆ ವರದಿಯ ಮಾಹಿತಿಯು ಸೋರಿಕೆ ಆದದ್ದೇ ಕಾರಣ.ಪ್ರಭಾವಿ ರಾಜಕಾರಣಿಗಳು ಜಾತಿಗಣತಿಯ ವರದಿಯ ವರದಿಗಳನ್ನು ಕಂಡು ಕಂಗಾಲಾಗಿದ್ದರು.ಇದುವರೆಗೆ ಪ್ರಚಾರದಲ್ಲಿದ್ದ ಒಕ್ಕಲಿಗರು ರಾಜ್ಯದ ಜನಸಂಖ್ಯೆಯಲ್ಲಿ ಒಂದನೇ ಸ್ಥಾನದಲ್ಲಿ ನಂತರದ ಎರಡನೇ ಸ್ಥಾನದಲ್ಲಿ ಲಿಂಗಾಯತರು ಇದ್ದಾರೆ ಎನ್ನುವ ಸುಳ್ಳುವರದಿಗಳಿಗೆ ಜಾತಿಗಣತಿಯ ವರದಿಯು ಶಾಕ್ ಕೊಟ್ಟಿತ್ತು.ಜಾತಿಗಣತಿಯ ವರದಿಯಂತೆ ರಾಜ್ಯದ ಜನಸಂಖ್ಯೆಯಲ್ಲಿ ದಲಿತರು ಮೊದಲ ಸಂಖ್ಯೆಯಲ್ಲಿಯೂ ನಂತರ ಕುರುಬರು,ಮುಸ್ಲಿಮರು ಇದ್ದುದಾಗಿ ತಿಳಿದು ಬಂದಿತ್ತು.ಒಕ್ಕಲಿಗರು ಲಿಂಗಾಯತರು ನಾಲ್ಕು,ಐದನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.ಈ ಕಾರಣದಿಂದ ಕುಮಾರಸ್ವಾಮಿ,ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕುಂಟುನೆಪಗಳನ್ನು ಹೇಳುತ್ತಲೇ ಜಾತಿಗಣತಿಯ ವರದಿಗಳನ್ನು ಬಹಿರಂಗಗೊಳಿಸದಂತೆ ತಡೆಹಿಡಿದಿದ್ದರು.ಒಕ್ಕಲಿಗರು ಮತ್ತು ಲಿಂಗಾಯತರು ರಾಜ್ಯದ ಜನಸಂಖ್ಯೆಯಲ್ಲಿ ದಲಿತರು,ಕುರುಬರು ಮತ್ತು ಮುಸ್ಲಿಮರ ನಂತರದ ಸ್ಥಾನದಲ್ಲಿದ್ದಾರೆ ಎಂದರೆ ಒಕ್ಕಲಿಗ ಮತ್ತು ಲಿಂಗಾಯತ ಜಾತಿಗಳ ಮುಖ್ಯಮಂತ್ರಿಗಳ ಪ್ರತಿಷ್ಠೆಗೆ ಧಕ್ಕೆ ಬರುವುದಿಲ್ಲವೆ ?

ಕರ್ನಾಟಕದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ನಡೆದ ಸಮೀಕ್ಷೆಯು ಬಿಹಾರ ರಾಜ್ಯಕ್ಕಿಂತ ಉತ್ತಮ ಸಮೀಕ್ಷೆಯಾಗಿದ್ದು ಈ ಸಮೀಕ್ಷೆಗಾಗಿ ₹180 ಕೋಟಿ ಖರ್ಚಾಗಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉಪಮುಖ್ಯಮಂತ್ರಿ ಮತ್ತು ರಾಜ್ಯಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ತೊಡರುಗಾಲು ಹಾಕಬಹುದು ಎಂದು ಹಿಂಜರಿಯಬಾರದು.ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿಗಣತಿಯನ್ನು ಬಹಿರಂಗಪಡಿಸುವುದಾಗಿ ಆಶ್ವಾಸನೆ ನೀಡಲಾಗಿದೆ ಎನ್ನುವುದನ್ನು ಮರೆಯದೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಷ್ಟು ಸಾಧ್ಯವೋ ಅಷ್ಟು ಬೇಗನೆ ಜಾತಿಗಣತಿಯ ವಿವರಗಳನ್ನು ಬಹಿರಂಗಪಡಿಸಬೇಕು.ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ ಹೆಗ್ಡೆಯವರು ನವೆಂಬರ್ ತಿಂಗಳಲ್ಲಿ ಆ ಹುದ್ದೆಯಿಂದ ನಿವೃತ್ತರಾಗುತ್ತಿದ್ದು ಅಷ್ಟರ ಒಳಗೆ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ.ಅಷ್ಟುದಿನಗಳವರೆಗೆ ಕಾಯುವ ಅಗತ್ಯ ಏನೂ‌ ಇಲ್ಲ.ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡ ಜಯಪ್ರಕಾಶ ಹೆಗ್ಡೆಯವರು ಕಾಂತರಾಜ ಆಯೋಗದ ವರದಿಯಲ್ಲಿ ಕೆಲವು ಮಾರ್ಪಾಟು,ತಿದ್ದುಪಡಿಗಳನ್ನು ಮಾಡಿದ್ದಾರೆ ಆಳುವವರ ಮೂಗಿನ ನೇರಕ್ಕೆ ತಕ್ಕಂತೆ ಕುಣಿದು.ಈಗ ಆ ಮಾರ್ಪಾಟುಗಳನ್ನು ಸರಿಪಡಿಸಿದರೆ ಒಂದೆರಡು ದಿನಗಳಲ್ಲಿಯೇ ವರದಿ ಪೂರ್ಣಗೊಳ್ಳುತ್ತದೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೆಚ್ಚು ದಿನಗಳ ಕಾಲಾವಕಾಶ ನೀಡದೆ ಅಕ್ಟೋಬರ್ 20 ರ ಒಳಗೆ ಆಯೋಗದಿಂದ ವರದಿಯನ್ನು ಪಡೆದು,ವರದಿಯನ್ನು ಓದಿ,ಸಚಿವ ಸಹೋದ್ಯೋಗಿಗಳು,ತಜ್ಞರುಗಳೊಂದಿಗೆ ಚರ್ಚಿಸಿ ರಾಜ್ಯೋತ್ಸವದ ದಿನವಾದ ನವೆಂಬರ್ 1 ರಂದೇ ವರದಿಯನ್ನು ಬಿಡುಗಡೆ ಮಾಡಿ,ಜಾತಿವಾರು ಜನಸಂಖ್ಯೆಯ ವಿವರಗಳನ್ನು ಬಹಿರಂಗಪಡಿಸಬೇಕು.

ಜಾತಿಗಣತಿಯನ್ನು ಬಿಡುಗಡೆ ಮಾಡುವುದರಿಂದ ಒಕ್ಕಲಿಗರು,ಲಿಂಗಾಯತರ ಪ್ರತಿಷ್ಠೆಗೆ ಧಕ್ಕೆ ಏನೂ ಬರುವುದಿಲ್ಲ.ಮೊನ್ನೆ ಹೇಳಿದ್ದರಲ್ಲ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕ್ರಪ್ಪ,ನಾವು ಲಿಂಗಾಯತರು 72 ಜನ ಎಂ ಎಲ್ ಎ ಗಳು ಇದ್ದೇವೆ,ಬೇಕಾದರೆ ಸರಕಾರವನ್ನೇ ರಚಿಸಬಲ್ಲೆವು ಎಂದು.ಜಾತಿಗಣತಿಯ ವಿವರಗಳು ಬಹಿರಂಗಗೊಂಡರೆ ಶಾಮನೂರು ಶಿವಶಂಕ್ರಪ್ಪನವರಂಥವರ ಹುಸಿಪೊಗರು ತನ್ನಿಂದ ತಾನೇ ಇಳಿದು ಹೋಗುತ್ತದೆ.ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಎಂ ಎಲ್ ಎ ಸ್ಥಾನಗಳನ್ನು ಹಿಂದುಳಿದ ವರ್ಗಗಳ ಜನರಿಗೆ ಅನ್ಯಾಯ ಮಾಡಿ ಎಂ ಎಲ್ ಎ ಗಳ ಸಂಖ್ಯೆ ಹೆಚ್ಚಿಸಿಕೊಂಡ ಲಿಂಗಾಯತರು ಮತ್ತು ಒಕ್ಕಲಿಗರಿಗೆ ನಿಜವಾಗಿ ಸಿಗಬೇಕಾದ ಸ್ಥಾನಗಳೆಷ್ಟು,ಅವರು ಎಷ್ಟು ಹಿಂದುಳಿದ ಜಾತಿಗಳಿಗೆ ಅನ್ಯಾಯ ಮಾಡಿ ಸ್ಥಾನಾಕ್ರಮಣ ಮಾಡಿದ್ದಾರೆ ಎನ್ನುವ ಸತ್ಯ ನಾಡಜನತೆಗೆ ತಿಳಿಯುತ್ತದೆ.ರಾಜ್ಯದಲ್ಲಿ ಒಕ್ಕಲಿಗರು,ಲಿಂಗಾಯತರು ಮತ್ತು ಕುರುಬರ ಜಾತಿಯ ಅಭ್ಯರ್ಥಿಗಳಿಗೆ ಸಿಕ್ಕಷ್ಟು ರಾಜಕೀಯ ಪ್ರಾತಿನಿಧ್ಯ ಕಡಿಮೆ ಜನಸಂಖ್ಯೆಯುಳ್ಳ ಜನಾಂಗಗಳಿಗೆ ದೊರೆತಿಲ್ಲ.ಮುಸ್ಲಿಮರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದರೂ ಅವರಿಗೆ ಎಲ್ಲ ರಾಜಕೀಯ ಪಕ್ಷಗಳು ಐದರಿಂದ ಹತ್ತರ ಒಳಗೆ ಎಂ ಎಲ್ ಎ ಟಿಕೆಟ್ ನೀಡಿವೆ.ರಾಜ್ಯದಲ್ಲಿ ಕುಂಬಾರರು,ನೇಕಾರರು,ಹೂಗಾರರು,ಕಬ್ಬೇರು,ಉಪ್ಪಾರರು,ಈಡಿಗರು ಸೇರಿದಂತೆ ಕಡಿಮೆ ಜನಸಂಖ್ಯೆಯ ಬಹಳಷ್ಟು ಜಾತಿಗಳಿವೆ.ಅವರಿಗೂ ರಾಜಕೀಯ ಮತ್ತು ಇತರ ಅವಕಾಶಗಳು ಸಿಕ್ಕಬೇಕಲ್ಲ.ಬರಿ ಒಕ್ಕಲಿಗರು,ಲಿಂಗಾಯತರುಗಳಷ್ಟೇ ರಾಜಕೀಯದಲ್ಲಿ ಸಿಂಹಪಾಲು ಅವಕಾಶಗಳನ್ನು ಪಡೆದರೆ ಹೇಗೆ?

‌ ಸಿದ್ಧರಾಮಯ್ಯನವರು ಈಗ ತುರ್ತಾಗಿ ಜಾತಿಗಣತಿಯನ್ನು ಬಿಡುಗಡೆ ಮಾಡಬೇಕು.ವರದಿಯು ಬಿಡುಗಡೆ ಆದ ಕೂಡಲೆ ಹಿಂದುಳಿದ ವರ್ಗಗಳಲ್ಲಿಯೇ ಅತಿಹಿಂದುಳಿದ ವರ್ಗಗಳಿಗಾಗಿ ಮೀಸಲಾತಿಯನ್ನು ಕಲ್ಪಿಸುವುದು ಸೇರಿದಂತೆ ಅತಿಹಿಂದುಳಿದ ವರ್ಗಗಳ ಜನತೆಯ ಅಭ್ಯುದಯಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು.ಹಿಂದುಳಿದ ವರ್ಗಗಳು,ಅತಿಹಿಂದುಳಿದ ವರ್ಗಗಳು ಇನ್ನು ಮೇಲೆ ತಮಗೂ ರಾಜಕೀಯಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಾತಿನಿಧ್ಯ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳನ್ನು ಒತ್ತಾಯಿಸಬೇಕು.

About The Author