ಶ್ರೀದೇವಿ ಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಾಯ

ಶ್ರೀದೇವಿ ಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಾಯ : ಮುಕ್ಕಣ್ಣ ಕರಿಗಾರ

( ನಿನ್ನೆಯಿಂದ ಮುಂದುವರೆದಿದೆ )

ಮಂಡಲೆರಡೆ ಮಂಡಲೋದಲು
ಚಂಡಫಲ ತಾನಹುದು ಆರೇ
ಮಂಡಲೋದಲು ದೇವರಂದದಿ ಪೂಜೆಗೊಳುತಿಹಾ//
ಖಂಡಿತದಲವ ಬಿಡದೆ ತ್ರೈವರು
ಷಂಡಲೆದು ಓದಿದವನಾದಡೆ
ಚಂಡಿಯೇ ತಾನಾಗಿ ಘನಚಿಚ್ಛಕ್ತಿಯೆನಿಸುವನು //೧೪//

ಒಂದು ವರ್ಷ ಅಖಂಡ ಪಾರಾಯಣ ಮಾಡಿದರೆ ದೇವಿಯ ಸಾಕ್ಷಾತ್ಕಾರವಾಗುತ್ತದೆ.ಒಂದು ವರ್ಷ ಅಖಂಡ ಪಾರಾಯಣ ಮಾಡಲು ಅನುಕೂಲ ಇಲ್ಲದೆ ಇದ್ದವರು ಒಂದು ಮಂಡಲ,ಎರಡು ಮಂಡಲ,ಮೂರು ಮಂಡಲ ಹೀಗೆ ದೇವಿಪುರಾಣವನ್ನು ಪಾರಾಯಣ ಮಾಡಬಹುದು.ಒಂದು ಮಂಡಲ ಎಂದರೆ ನಲವತ್ತೆಂಟು ದಿನಗಳು.ಎರಡು ಮಂಡಲ ಎಂದರೆ ತೊಂಬತ್ತಾರು ದಿನಗಳು.ಕೆಲವರು ಮಂಡಲ ಎಂದರೆ ನಲವತ್ತೊಂದು ದಿನ ಎಂಬುದಾಗಿ ಭಾವಿಸಿದ್ದಾರೆ.ಅದು ತಪ್ಪು.ಮಂಡಲ ಎಂದರೆ ನಲವತ್ತೆಂಟು ದಿನಗಳು.ನಲವತ್ತೆಂಟು ದಿನಗಳು ಇಲ್ಲವೆ ತೊಂಬತ್ತಾರು ದಿನಗಳ ಕಾಲ ದೇವಿಪುರಾಣವನ್ನು ಓದಿದರೆ ಮಹಾಫಲವುಂಟು.ಆರು ಮಂಡಲ ಅಂದರೆ 288 ದಿನಗಳ ಕಾಲ ಈ ದೇವಿ ಪುರಾಣವನ್ನು ಓದಿದವನು ಲೋಕದ ಜನರಿಂದ ದೇವರಂತೆ ಪೂಜೆಗೊಳ್ಳುತ್ತಾನೆ.ಮೂರುವರ್ಷಗಳ ಕಾಲ ಬೇಸರಿಸದೆ ಅಖಂಡ ದೇವಿಪುರಾಣವನ್ನು ಪಾರಾಯಣ ಮಾಡಿದ ವ್ಯಕ್ತಿಯು ಸ್ವಯಂ ದೇವಿ ಸ್ವರೂಪನಾಗುತ್ತಾನೆ.ದೇವಿಯು ಚಿಚ್ಛಕ್ತಿ ಎನ್ನಿಸಿಕೊಂಡಿದ್ದಾಳೆ.ಚಿತ್ ಶಕ್ತಿಯ ಪ್ರಭಾವದಿಂದಲೇ ಶಿವನಿಗೆ ಪ್ರಕೃತಿಯ ಮೇಲಣ ಪ್ರಭುತ್ವ ಪ್ರಾಪ್ತಿಯಾಗಿದೆ.ಚಿತ್ ಶಕ್ತಿ ಎಂದರೆ ಸಂಕಲ್ಪ ಮಾತ್ರದಿಂದ ಬೇಕಾದುದನ್ನು ಸೃಷ್ಟಿಸಬಲ್ಲ ಯೋಗಸಾಮರ್ಥ್ಯ ಇಲ್ಲವೆ ತಪೋಸಾಮರ್ಥ್ಯ.ನಮ್ಮ ಮನಸ್ಸಿಗೆ ಎಂತಹ ಅದ್ಭುತ ಶಕ್ತಿ ಇದೆ! ಅದು ಕ್ಷಣಾರ್ಧದಲ್ಲಿ ತಾನು ಬಯಸಿದಲ್ಲಿಗೆ ಓಡಬಲ್ಲದು.ಮನಸ್ಸು ವಾಯುವಿಗಿಂತ ವೇಗವಾಗಿ ಓಡಬಲ್ಲದು.ಉದಾಹರಣೆಗೆ ನಾವು ಕುಳಿತ ಸ್ಥಳದಿಂದಲೇ ಬೆಂಗಳೂರು,ದೆಹಲಿ ಮತ್ತು ಮುಂಬೈಗಳನ್ನು ಸ್ಮರಿಸಿಕೊಂಡರೆ ಮನಸ್ಸು ಆಗಲೇ ಅಲ್ಲಿರುತ್ತದೆ.ಬೆಂಗಳೂರು,ದೆಹಲಿ,ಮುಂಬೈಗಳಲ್ಲಿ ನೀವು ಕಂಡ ಸ್ಥಳಗಳು,ಭೇಟಿಯಾದ ವ್ಯಕ್ತಿಗಳು ತಕ್ಷಣ ನಿಮ್ಮ ಮನದಲ್ಲಿ ಗೋಚರಗೊಳ್ಳುತ್ತಾರೆ.ಇದೇ ಮನಸ್ಸಿನ ಸಾಮರ್ಥ್ಯ.ಮನಸ್ಸನ್ನೇ ಚಿತ್ತ ಎಂದು ಕರೆಯುವುದು.ಮನುಷ್ಯರ ಮನಸ್ಸಿಗೆ ಇಷ್ಟೊಂದು ಸಾಮರ್ಥ್ಯ ಇರಬೇಕಾದರೆ ಪರಮಾತ್ಮನ ಚಿತ್ತಕ್ಕೆ ಎಂತಹ ಅದ್ಭುತ ಸಾಮರ್ಥ್ಯ ಇರಬಹುದು.ಅದನ್ನೇ ಚಿತ್ ಶಕ್ತಿ ಎಂದು ಕರೆಯಲಾಗಿದೆ.ಪರಮಾತ್ಮನು ತನ್ನ ಚಿತ್ ಶಕ್ತಿಯ ಬಲದಿಂದ ತಾನು ಎಲ್ಲೇ ಇದ್ದರೂ ತನ್ನ ಭಕ್ತರನ್ನು ಕಾಣಬಲ್ಲನು.ಹಾಗೆಯೇ ದೇವಿಪುರಾಣವನ್ನು ಮೂರು ವರ್ಷಗಳ ಕಾಲ ಒಂದು ದಿನವೂ ತಪ್ಪದೆ,ಬೇಸರಪಟ್ಟುಕೊಳ್ಳದಂತೆ ಓದಿದರೆ ಆತನು ದೇವಿಯೇ ತಾನಾಗಿ ಚಿತ್ ಶಕ್ತಿಸ್ವರೂಪನಾಗುವನು.ಅಂದರೆ ಅವನೇ ದೇವಿಯಾಗುವನು.ದೇವಿಯು ಅವನ ಸರ್ವಾಂಗವ್ಯಾಪಿಸಿ ಲೀಲೆಯಾಡುವಳು.ಮೂರುವರ್ಷಗಳ ಕಾಲ ‘ ಅಂಡಲೆದು’ ಓದಬೇಕು ಎನ್ನುತ್ತಾರೆ ಚಿದಾನಂದಾವಧೂತರು.ಬೇಸರಪಟ್ಟುಕೊಳ್ಳದೆ ಮೂರು ವರ್ಷಗಳ ಕಾಲ ಓದಬೇಕು.ಬೇಸರಪಟ್ಟುಕೊಂಡು ಓದಿದರೆ ಫಲಪ್ರಾಪ್ತಿಯಾಗುವುದಿಲ್ಲ.ಓದಬೇಕಲ್ಲ ಎನ್ನುವ ಕಾಟಾಚಾರದಿಂದ ಪುರಾಣವನ್ನು ಓದಿದರೂ ಫಲವಿಲ್ಲ.ದೇವಿಯ ಅನುಗ್ರಹವನ್ನು ಪಡೆಯಲೇಬೇಕು ಎನ್ನುವ ದೃಢನಿಶ್ಚಯದಿಂದ,ಶ್ರದ್ಧಾಪೂರ್ವಕವಾಗಿ ಓದಿದರೆ ಮಾತ್ರ ಫಲ ಉಂಟು.

ಆಸನವ ದಿಕ್ಕುಗಳನರಿದೇ
ಆಸನದೆ ಕಾಮ್ಯಂತೆ ಓದಲು
ವಾಸವಾಹುದು ಫಲವು ಸಂಶಯವಿಲ್ಲದಂದದಲೀ /
ವಾಸನೆಯ ಪರಿಮಳದ ಪುಷ್ಪಗ
ಳಾಸು ಧೂಪಾ ದೀಪವಿಧದಲಿ
ಈಸುಪರಿಯಲಿ ದೇವಿಮಹಿಮೆಯನೋದುವದು ಮುದದಿ //೧೫//

ತಮಗೆ ಅನುಕೂಲಕರವಾದ ಯಾವುದಾದರೂ ಒಂದು ಆಸನದ ಮೇಲೆ ಕುಳಿತುಕೊಂಡು ತಮ್ಮ ಮನದ ಉದ್ದೇಶಕ್ಕೆ ಅನುಗುಣವಾದ ದಿಕ್ಕಿನತ್ತ ಮುಖಮಾಡಿ ಕುಳಿತು ದೇವಿ ಪುರಾಣವನ್ನು ಓದಬೇಕು.ಹನ್ನೆರಡನೆಯ ಷಟ್ಪದಿಯ ಅರ್ಥವಿವರಣೆಯಲ್ಲಿ ಇದನ್ನು ವಿವರಿಸಲಾಗಿದೆ.ಆಸನಗಳಲ್ಲಿ ಪದ್ಮಾಸನವು ಅತ್ಯಂತ ಶ್ರೇಷ್ಠ ಆಸನವಾಗಿದ್ದು ಈ ಆಸನದ ಬಲದಿಂದ ಸಮಸ್ತಯೋಗಸಿದ್ಧಿಗಳುಂಟಾಗುತ್ತವೆ.ಪದ್ಮಾಸನದಲ್ಲಿ ಪಳಗಿದ ಯೋಗಿಯು ಕುಂಭಕವನ್ನು ಮಾಡುತ್ತ ನೆಲದಿಂದ ಹನ್ನೆರಡರಿಂದ ಹದಿನಾರು ಅಂಗುಲ ಮೇಲೇರಬಲ್ಲನು.ಎರಡು ತೊಡೆಗಳನ್ನು ಒಂದರ ಮೇಲೆ ಇನ್ನೊಂದನ್ನಿಟ್ಟು ಅಂದರೆ ಎಡತೊಡೆಯ ಮೇಲೆ ಬಲಗಾಲಿನ ಪಾದವನ್ನೂ,ಬಲತೊಡೆಯ ಮೇಲೆ ಎಡಗಾಲಿನ ಪಾದವನ್ನು ಇಟ್ಟು ನೇರವಾಗಿ ಕುಳಿತುಕೊಳ್ಳುವುದೇ ಪದ್ಮಾಸನವು.ಸಂನ್ಯಾಸಿಗಳು,ಬ್ರಹ್ಮಚರ್ಯವ್ರತವನ್ನು ಪಾಲಿಸುವವರಿಗೆ ಸಿದ್ಧಾಸನವು ಶ್ರೇಷ್ಠ.ಬಲಗಾಲಿನ ಹಿಮ್ಮಡವನ್ನು ಲಿಂಗ( ಶಿಶ್ನ) ದ ಮೇಲಿರಿಸಿ ದೇಹವನ್ನು ಸರಳವಾಗಿ ಎಡದ ಹಿಮ್ಮಡದಿಂದ ಬಲದೊಡೆಯ ಮೂಲಭಾಗವನ್ನು ಒತ್ತಿ ನೆಟ್ಟಗೆ ಕುಳಿತುಕೊಳ್ಳುವುದೇ ಸಿದ್ಧಾಸನವು.ಇದು ಜನನೇಂದ್ರಿಯದ ಮೇಲೆ ಒತ್ತಡವನ್ನು ಹಾಕುವ ಆಸನವಾಗಿರುವದರಿಂದ ಕಾಮವನ್ನು ನಿಗ್ರಹಿಸಲು ಅನುಕೂಲಕರವಾದ,ಇಂದ್ರಿಯವಿಜಯ ಆಸನವಾಗಿದೆ.ಸಂನ್ಯಾಸಿಗಳಿಗೆ ಸಿದ್ಧಾಸನವನ್ನೇ ವಿಧಿಸಲಾಗಿದೆ.ಸಂಸಾರಿಗಳಾದವರು,ವಯಸ್ಕರು ,ಅನಾರೋಗ್ಯದಿಂದ ಬಳಲುತ್ತಿರುವವರು ತಮಗೆ ಯಾವರೀತಿ ಕುಳಿತುಕೊಳ್ಳಲು ಸಾಧ್ಯವೋ ಆ ಭಂಗಿಯಲ್ಲಿ ಕುಳಿತುಕೊಂಡು ಪುರಾಣವನ್ನು ಓದಬಹುದು.ದೇಹಕ್ಕೆ ಅನುಕೂಲವಾದ ಭಂಗಿಯಲ್ಲಿ ಕುಳಿತುಕೊಳ್ಳುವುದೇ ಸುಖಾಸನವು.ಪದ್ಮಾಸನ,ಸಿದ್ಧಾಸನ ಮತ್ತು ಸುಖಾಸನ ಈ ಮೂರು ಆಸನಗಳಲ್ಲಿ ತಮಗೆ ಅನುಕೂಲವಾದ ಆಸನವನ್ನು ಹಾಕಿ‌ಕುಳಿತು ದೇವಿ ಪುರಾಣದ ಪಾರಾಯಣ ಮಾಡಬೇಕು.ಈ ಹಿಂದೆ ವಿವರಿಸಿದಂತೆ ಶ್ರೀದೇವಿಯ ಸಾಕ್ಷಾತ್ಕಾರ ಬಯಸುವವರು ಪೂರ್ವಾಭಿಮುಖವಾಗಿ,ಮಂತ್ರಸಿದ್ಧಿಯನ್ನಪೇಕ್ಷಿಸುವವರು ಪಶ್ಚಿಮಾಭಿಮುಖವಾಗಿ,ಸಂಪತ್ತನ್ನು ಬಯಸವವರು ಉತ್ತರಾಭಿಮುಖವಾಗಿ ಹಾಗೂ ಶತ್ರುಗಳು ನಾಶವಾಗಬೇಕು ಎಂದು ಬಯಸುವವರು ದಕ್ಷಿಣದಿಕ್ಕಿಗೆ ಮುಖಮಾಡಿಕೊಂಡು ಪುರಾಣವನ್ನು ಓದಬೇಕು.

ನಿಮ್ಮ ಉದ್ದೇಶ ಸಾಧನೆಗೆ ತಕ್ಕ ಆಸನ ಹಾಗೂ ದಿಕ್ಕನ್ನು ಆಯ್ದುಕೊಂಡು ಪುರಾಣವನ್ನು ಪಾರಾಯಣ ಮಾಡಬೇಕು.ಪದ್ಮಾಸನದಲ್ಲಿ ಪೂರ್ವಕ್ಕೆ ಮುಖಮಾಡಿ ಕುಳಿತು ಪುರಾಣ ಓದುವದರಿಂದ ದೇವಿಯ ಸಾಕ್ಷಾತ್ಕಾರವಾಗುತ್ತದೆ.ಪದ್ಮಾಸನದಲ್ಲಿ ಪಶ್ಚಿಮಕ್ಕೆ ಮುಖಮಾಡಿಕೊಂಡು ಕುಳಿತು ಓದಿದರೆ ನಿಮಗೆ ಎಲ್ಲ ಮಂತ್ರಗಳ ಸಿದ್ಧಿ ದೊರೆಯುತ್ತದೆ.ಪದ್ಮಾಸನದಲ್ಲಿ ಉತ್ತರದಿಕ್ಕಿಗೆ ಮುಖಮಾಡಿ ಓದಿದರೆ ಸಂಪತ್ತು ಲಭಿಸುತ್ತದೆ.ಪದ್ಮಾಸನದಲ್ಲಿ ದಕ್ಷಿಣ ದಿಕ್ಕಿನತ್ತ ಮುಖಮಾಡಿ ಓದಿದರೆ ನಿಮ್ಮ ಶತ್ರುಗಳು ನಾಶವಾಗುತ್ತಾರೆ.ದೇವಿಪುರಾಣ ಪಾರಾಯಣದ ಸಂದರ್ಭದಲ್ಲಿ ಸುಗಂಧ ಪರಿಮಳಯುಕ್ತ ಗಂಧ,ಬತ್ತಿಗಳನ್ನು ಹಚ್ಚಬೇಕು.ಧೂಪ ದೀಪ ನೈವೇದ್ಯಾದಿಗಳನ್ನು ದೇವಿಗೆ ಸಮರ್ಪಿಸಿ ಪೂಜಿಸಬೇಕು.

ದೇವಿಯೆದುರು ದೀಪಬೆಳಗಿಸಲೇ ಬೇಕು.ತುಪ್ಪದ ದೀಪ ಅದರಲ್ಲೂ ಆಕಳದ ತುಪ್ಪದ ದೀಪ ಇದ್ದರೆ ಸರ್ವೋತ್ಕೃಷ್ಟವಾದುದು.ಇಲ್ಲದಿದ್ದರೆ ಎಣ್ಣೆಯ ದೀಪ ಬೆಳಗಿಸಬಹುದು.ದೇವಿಯು ಪ್ರಕಾಶಸ್ವರೂಪಳಾದ್ದರಿಂದ ದೇವಿಯನ್ನು ದೀಪದುರ್ಗಾ ಎಂದು ಭಾವಿಸಿ ಪೂಜಿಸುವ ಪರಿಪಾಟ ಇದ್ದುದರಿಂದ ಪುರಾಣ ಪಾರಾಯಣದ ಸಂದರ್ಭದಲ್ಲಿ ದೀಪವನ್ನು ಹೊತ್ತಿಸಬೇಕು.ಈ ದೀಪವು ಪುರಾಣ ಪಾರಾಯಣ ಮುಗಿಯುವವರೆಗೆ ಅಂದರೆ ಮೂರು ತಾಸುಗಳ ಕಾಲ ನಂದದೆ ನಿರಂತರವಾಗಿ ಉರಿಯುತ್ತಿರಬೇಕು.

ಸುಗಂಧವಾಸನೆಯುಕ್ತ ಹೂಮಾಲೆಯನ್ನು ದೇವಿಯ ವಿಗ್ರಹ ಇಲ್ಲವೆ ಚಿತ್ರಪಟಕ್ಕೆ ಹಾಕಿ ಮತ್ತೊಂದು ಹೂಮಾಲೆಯನ್ನು ದೇವಿಪುರಾಣ ಗ್ರಂಥಕ್ಕೆ ಹಾಕಬೇಕು.ಪರಿಮಳಯುಕ್ತ ಬಿಡಿ ಸುಗಂಧ ಪುಷ್ಪಗಳನ್ನು ದೇವಿಯ ವಿಗ್ರಹ ಮತ್ತು ಪುರಾಣಕ್ಕೆ ಅರ್ಪಿಸಬೇಕು.ಸುವಾಸನೆ ಭರಿತ ಊದುಬತ್ತಿಗಳನ್ನು ಹಚ್ಚಬೇಕು.ಇದರಿಂದ ಮನಸ್ಸು ಆನಂದಿತವಾಗಿ ಪುರಾಣದ‌ ಪಾರಾಯಣವು ಆನಂದಕರವಾಗಿ ಸಾಗುತ್ತದೆ.ಈ ತೆರನಾಗಿ ಸಂತೋಷಭರಿತ ಮನಸ್ಸಿನಿಂದ ದೇವಿಪುರಾಣವನ್ನು ಓದಬೇಕು.

ಪೂಜೆಮಾಡಿಯೇ ಓದಬೇಕಿದ
ಪೂಜಿಸದಲಿದನೋದಬಾರದು
ಪೂಜಿಸುತಲಧ್ಯಾಯ ಅಧ್ಯಾಯಗಳ ಭಕ್ತಿಯಲೀ
ಪೂಜಿಸುತಲೋದುತಿಹನಾದಡೆ
ರಾಜನಾಹನು ದೇವಿದಯದಲಿ
ಸೋಜಿಗವೆ ತಾನೇನು ಪರಮೇಶ್ವರಿಯ ಕರುಣದಲಿ //೧೬//

ಶ್ರೀದೇವಿ ಪುರಾಣವನ್ನು ಓದುವವರು ಮೊದಲು ದೇವಿಪುರಾಣದ ಗ್ರಂಥವನ್ನು ಪೂಜಿಸಿಯೇ ಓದಲು ಪ್ರಾರಂಭಿಸಬೇಕು.ಶ್ರೀದೇವಿ ಪುರಾಣವು ದೇವಿಸ್ವರೂಪವಾದುದರಿಂದ ಅದನ್ನು ಪೂಜಿಸದೆ ಓದಬಾರದು.ಪೀಠಿಕಾ ಅಧ್ಯಾಯ ಸೇರಿ ಗ್ರಂಥದಲ್ಲಿ ಒಟ್ಟು ಹತ್ತೊಂಬತ್ತು ಅಧ್ಯಾಯಗಳಿವೆ.ಈ ಹತ್ತೊಂಬತ್ತು ಅಧ್ಯಾಯಗಳನ್ನು ಓದುವಾಗ ಪ್ರತಿ ಅಧ್ಯಾಯವನ್ನು ಪೂಜಿಸುತ್ತ ಓದಿದರೆ ಆತನು ರಾಜನೇ ಆಗುವನು ಅಂದರೆ ರಾಜಕೀಯ ಪದವಿಯನ್ನು ಹೊಂದುವನು,ಗಣ್ಯ ಪದವಿಯನ್ನು ಪಡೆಯುವನು,ರಾಜನಂತೆ ಸಮಾಜದಲ್ಲಿ ಗೌರವಾದರಗಳಿಗೆ ಪಾತ್ರನಾಗುವನು.

ದೇವಿ ಪುರಾಣವನ್ನು ಶ್ರೀಗಂಧ,ಅಷ್ಟಗಂಧ,ವಿಭೂತಿ,ಕುಂಕುಮ ಮತ್ತು ಅರಷಿಣಗಳಿಂದ ಪೂಜಿಸಬೇಕು.ಪರಿಮಳಯುಕ್ತಪುಷ್ಪಗಳನ್ನು ಅರ್ಪಿಸಬೇಕು.ಊದು ಬತ್ತಿ ಬೆಳಗಿ,ದೀಪ ಹೊತ್ತಿಸಬೇಕು ಮತ್ತು ಬೆಲ್ಲ ಅಥವಾ ಕಲ್ಲುಸಕ್ಕರೆಯ ನೈವೇದ್ಯ ಸಮರ್ಪಿಸಿ,ಮಂಗಳಾರತಿಯನ್ನರ್ಪಿಸಿ ಓದಬೇಕು.ಈ ತೆರನಾಗಿ ಪ್ರತಿ ಅಧ್ಯಾಯವನ್ನು ಓದುವವರಲ್ಲಿ ಶ್ರೀದೇವಿ ದುರ್ಗೆಯು ಪರಮಸಂತುಷ್ಟಳಾಗಿ ಅವರಿಗೆ ರಾಜಕೀಯ ಅಥವಾ ಸರಕಾರದಲ್ಲಿ ಉನ್ನತೋನ್ನತ ಸ್ಥಾನಮಾನಗಳನ್ನು ನೀಡುತ್ತಾಳೆ.

ಓದುವುದು ನಿತ್ಯಾಗದಿದರ್ದೊಡೆ
ಓದುವುದು ತದಿಗಷ್ಟಮಿಯಲಿ ಮ
ತ್ತೋದುವುದು ನವಮಿಯಲಿ ಚತುರ್ದಶಿ ಪೌರ್ಣಿಮ್ಯಮವಶದೀ/
ಓದುವುದು ಭೃಗುಭೌಮವಾರದ
ಲೋದುವದು ನವರಾತ್ರಿಯಲ್ಲಿಂ
ತೋದಿದಡೆ ಮಹಪುಣ್ಯ ನಿತ್ಯದಲೋದೆ ಫಲವಹುದು //೧೭//

ಶ್ರೀದೇವಿ ಚರಿತ್ರೆಯನ್ನು ಪ್ರತಿದಿನ ಓದಲು ಆಗದವರು ತದಗಿ( ತೃತಿಯಾ) ಅಷ್ಟಮಿ,ನವಮಿ,ಚತುರ್ದಶಿ ಹುಣ್ಣಿಮೆ ಅಮವಾಸೆಗಳಂದು,ಮಂಗಳವಾರ ಶುಕ್ರವಾರಗಳಂದು ಹಾಗೂ ನವರಾತ್ರಿಯಲ್ಲಿ ಓದಬಹುದು ಎನ್ನುವ ಚಿದಾನಂದಾವಧೂತರು ಪ್ರತಿದಿನ ಪುರಾಣವನ್ನು ಓದುವುದರಿಂದ ಮಹಾಫಲವು ದೊರೆಯುತ್ತದೆ ಎಂದಿದ್ದಾರೆ.

ಮಂಗಳವಾರ,ಶುಕ್ರವಾರ,ನವರಾತ್ರಿಯ ದಿನಗಳಲ್ಲಿ ಓದಿರಿ ಎಂದರೆ ಅವು ದೇವಿಯ ವಾರ ಮತ್ತು ಪರ್ವದ ದಿನಗಳಾದುದರಿಂದ ಒಪ್ಪಬಹುದು.ಇತರ ತಿಥಿಗಳು ಹಾಗೂ ಅಮವಾಸೆ,ಹುಣ್ಣಿಮೆಗಳಂದು ಓದಿರಿ ಎಂದು ಅವಧೂತರು ಹೇಳಿರಲು ಕಾರಣವೇನಿರಬಹುದು ? ಚಿದಾನಂದಾವಧೂತರಿಗೆ ಜ್ಯೋತಿಷ ಶಾಸ್ತ್ರದಲ್ಲಿ ಕೂಡ ಪರಿಣತಿ ಇತ್ತು ಎನ್ನುವುದು ಇದರಿಂದ ಗೊತ್ತಾಗುತ್ತದೆ.ಜ್ಯೋತಿಷಶಾಸ್ತ್ರದಂತೆ 3 ಮತ್ತು 8 ನೇ ತಿಥಿಗಳು ( ತದಗಿ,ಅಷ್ಟಮಿ) ಜಯ ತಿಥಿಗಳಾಗಿದ್ದು ಆ ದಿನಗಳಲ್ಲಿ ಓದುವುದರಿಂದ ಕೆಲಸ ಕಾರ್ಯಗಳಲ್ಲಿ ಜಯಪ್ರಾಪ್ತಿಯಾಗುತ್ತದೆ.ಚತುರ್ದಶಿ,ನವಮಿ ತಿಥಿಗಳು ರಿಕ್ತ ತಿಥಿಗಳಾಗಿದ್ದು ಆ ತಿಥಿಗಳಲ್ಲಿ ಶ್ರೀದೇವಿ ಪುರಾಣವನ್ನು ಓದುವುದರಿಂದ ಋಣಬಾಧೆ,ಶತ್ರುಬಾಧೆ ಮತ್ತು ರೋಗಬಾಧೆಗಳು ನಿವಾರಣೆಯಾಗುತ್ತದೆ.ಹುಣ್ಣಿಮೆ ಮತ್ತು ಅಮವಾಸೆಗಳು ಪೂರ್ಣತಿಥಿಗಳಾಗಿದ್ದು ಆ ದಿನಗಳಲ್ಲಿ ಮಾಡುವ ಪಾರಾಯಣದಿಂದ ಭೋಗ ಮೋಕ್ಷಗಳು ಲಭಿಸುತ್ತವೆ.ಮಂಗಳವಾರ ಶುಕ್ರವಾರಗಳೆರಡು ದೇವಿಯವಾರಗಳಾಗಿದ್ದು ಆ ದಿನಗಳಲ್ಲಿ ದೇವಿಯ ಶಕ್ತಿಯು ವಿಶೇಷವಾಗಿ ಪ್ರಕಟವಾಗುವುದರಿಂದ ಮಂಗಳವಾರ ಮತ್ತು ಶುಕ್ರವಾರಗಳಂದು ದೇವಿಪುರಾಣವನ್ನು ಓದಬೇಕು.ನವರಾತ್ರಿಯಂತೂ ಸರಿಯೇ ಸರಿ.ವಿಶ್ವಮಾತೆಯಾದ ದುರ್ಗಾದೇವಿಯು ನವರಾತ್ರಿಯ ಒಂಬತ್ತುದಿನಗಳಂದು ಭೂಲೋಕದಲ್ಲಿಯೇ ಇದ್ದು ತನ್ನನ್ನು ಪೂಜಿಸಿ,ಸೇವಿಸುವವರನ್ನು ಅನುಗ್ರಹಿಸಿ,ಉದ್ಧರಿಸುತ್ತಾಳೆ.ವರ್ಷದಲ್ಲಿ ಎರಡು ನವರಾತ್ರಿಗಳಿವೆ.ಚೈತ್ರನವರಾತ್ರಿ ಮತ್ತು ಶರನ್ನವರಾತ್ರಿ ಎಂದು ಎರಡು ನವರಾತ್ರಿಗಳಿದ್ದು ನಮ್ಮಲ್ಲಿ ಶರನ್ನವರಾತ್ರಿಯನ್ನು ಮಾತ್ರ ಆಚರಿಸಲಾಗುತ್ತಿದೆ.ಯುಗಾದಿಯ ಪಾಡ್ಯದಿಂದ ಒಂಬತ್ತುದಿನಗಳ ಕಾಲವನ್ನು ಚೈತ್ರನವರಾತ್ರಿ ಎಂದು ಆಚರಿಸಲಾಗುತ್ತಿದೆ.ಉತ್ತರ ಭಾರತದಲ್ಲಿ ಚೈತ್ರನವರಾತ್ರಿಯನ್ನು ಆಚರಿಸಲಾಗುತ್ತಿದೆ.ಎರಡು ನವರಾತ್ರಿಗಳಲ್ಲಿ ಸಾಧ್ಯವಾಗದಿದ್ದರೆ ಶರನ್ನವರಾತ್ರಿಯ ದಿನಗಳಲ್ಲಿ ಆದರೂ ದೇವಿಪುರಾಣವನ್ನು ಓದಬೇಕು.

ಸಂಕಲ್ಪಸಹಿತವಾಗಿ ಶ್ರೀದೇವಿ ಪುರಾಣವನ್ನು ಓದುವವರು ಮೈಸೂರು ದಸರಾಹಬ್ಬದಂತೆಯೇ ಪುರಾಣ ಪ್ರಾರಂಭ ಮತ್ತು ಮಂಗಲ ಮಾಡಬೇಕು.ಕೆಲವು ಕಡೆ ಶೈವ,ವೀರಶೈವ ಮತ್ತು ವೈಷ್ಣವ ಪರಂಪರೆಗಳವರು ತಮ್ಮ ಅನುಕೂಲಕ್ಕೆ ತಕ್ಕಂತೆ ನವರಾತ್ರಿ ಮತ್ತು ವಿಜಯದಶಮಿಯನ್ನು ಆಚರಿಸುತ್ತಾರೆ.ಇದರಿಂದ ವಿಜಯದಶಮಿಯ ಫಲಪ್ರಾಪ್ತಿ ಆಗುವುದಿಲ್ಲ.ನವರಾತ್ರಿಯು ಕರ್ನಾಟಕದ ನಾಡಹಬ್ಬವಾಗಿದ್ದು ಮೈಸೂರು ದಸರಾಹಬ್ಬವು ಕರ್ನಾಟಕದ ನಾಡಹಬ್ಬವಾಗಿದೆ.ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡಿದೇವಿಯು ಕರ್ನಾಟಕದ ನಾಡದೇವಿಯಾಗಿದ್ದಾಳೆ.ಐತಿಹಾಸಿಕವಾಗಿ ವಿಜಯನಗರ ಸಾಮ್ರಾಜ್ಯಪತನಗೊಂಡ ನಂತರ ವಿಜಯನಗರದ ಅರಸರಿಂದ ನಿತ್ಯಪೂಜೆಗೊಳ್ಳುತ್ತಿದ್ದ ಪಂಪಾಂಬಿಕೆಯು ವಿಜಯನಗರ ಸಾಮ್ರಾಜ್ಯದ ಪತನಾನಂತರ ಮೈಸೂರಿಗೆ ಹೋಗಿ ಅಲ್ಲಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿಯಾಗಿ ನೆಲೆನಿಲ್ಲುತ್ತಾಳೆ.ಪುರಾಣ ಕಾಲದಲ್ಲಿ ದುರ್ಗಾದೇವಿಯು ಚಂಡ ಮುಂಡರನ್ನು ಮತ್ತು ಮಹಿಷಾಸುರನನ್ನು ಕೊಂದ ಸ್ಥಳವೇ ಮೈಸೂರಿನ ಚಾಮುಂಡಿ ಬೆಟ್ಟವಾಗಿದೆ.ಅಲ್ಲಿ ತನ್ನನ್ನು ಪೂಜಿಸಿದ ಯಾದವಕುಲದವರಿಗೆ ರಾಜ್ಯಪದವಿಯನ್ನಿತ್ತು ತಾನು ಕರ್ನಾಟಕದ ರಾಜರಾಜೇಶ್ವರಿ ಎನ್ನುವ ಅಭಿದಾನದಿಂದ ಪೂಜೆಗೊಳ್ಳುತ್ತಿದ್ದಾಳೆ.ದುರ್ಗಾದೇವಿಯು ಮಹಿಷಾಸುರನನ್ನು ಕೊಂದ ಮುಹೂರ್ತವೇ ‘ ವಿಜಯಮುಹೂರ್ತ’ ಎಂದು ಕರೆಯಿಸಿಕೊಳ್ಳುತ್ತಿದ್ದು ಆ ದಿನವೇ ವಿಜಯದಶಮಿಯನ್ನು ಆಚರಿಸಬೇಕು.ಹಾಗಾಗಿ ನವರಾತ್ರಿಯಲ್ಲಿ ದೇವಿಪುರಾಣವನ್ನು ಪಾರಾಯಣ ಮಾಡುವವರು ಮೈಸೂರಿನಲ್ಲಿ ವಿಜಯದಶಮಿ ಹಬ್ಬವನ್ನು ಆಚರಿಸುವ ದಿನದ ವಿಜಯಮುಹೂರ್ತದಲ್ಲಿ ಪುರಾಣ ಮಂಗಲ ಮಾಡಬೇಕು.ಯಾರೋ ಪುಣ್ಯಾತ್ಮರು ಹೇಳಿದರೆಂದು ವಿಜಯಮುಹೂರ್ತ ಇಲ್ಲದ ದಿನದಂದು ವಿಜಯದಶಮಿಯನ್ನು ಆಚರಿಸಬಾರದು.ಅಷ್ಟಾದಶ ಶಕ್ತಿಪೀಠದಲ್ಲಿ ದುರ್ಗಾದೇವಿಯ ಶಕ್ತಿ,ಕಳೆ ಪ್ರಕಟಗೊಂಡಿರುತ್ತದೆ. ಕರ್ನಾಟಕದ ಚಾಮುಂಡೇಶ್ವರಿಯು ಅಷ್ಟಾದಶ ಶಕ್ತಿಗಳಲ್ಲಿ ಒಬ್ಬಳಾಗಿದ್ದು,ಚಾಮುಂಡಿ ಬೆಟ್ಟವು ಅಷ್ಟಾದಶ ಶಕ್ತಿ ಪೀಠಗಳಲ್ಲಿ ಒಂದಾಗಿದೆ.ಕರ್ನಾಟಕದ ನಾಡದೇವಿಯಾಗಿರುವ ಚಾಮುಂಡೇಶ್ವರಿಯು ನವರಾತ್ರಿಯ ಹಬ್ಬದಲ್ಲಿ ಕರ್ನಾಟಕದಾದ್ಯಂತ ತನ್ನನ್ನು ಪೂಜಿಸುವ ಭಕ್ತರತ್ತ ಕರುಣಾಕಟಾಕ್ಷ ಬೀರುತ್ತಾಳೆ.ಆದ್ದರಿಂದಲೇ ಚಾಮುಂಡೇಶ್ವರಿಯ ಶಕ್ತಿಮಂತ್ರವಾದ ” ಓಂ ಐಂ ಹ್ರೀಂ‌ ಕ್ಲೀಂ ಚಾಮುಂಡಾಯೈ ವಿಚ್ಚೆ” ಎನ್ನುವ ದೇವಿಯ ನವಾರ್ಣಮಂತ್ರವು ಮಹಿಷಮಂಡಲದ ದೇವಿ ಮಂತ್ರವಾಗಿದೆ.ಮಹಿಷಮಂಡಲವು ಇಡೀದಕ್ಷಿಣಭಾರತವಾಗಿದ್ದು ಕರ್ನಾಟಕ,ಆಂಧ್ರಪ್ರದೇಶ,ತಮಿಳುನಾಡು,ಕೇರಳ ರಾಜ್ಯಗಳ ವ್ಯಾಪ್ತಿಯನ್ನು ಹೊಂದಿದೆ.ಆದ್ದರಿಂದ ಮಹಿಷಮಂಡಲ ವ್ಯಾಪ್ತಿಯ ಪ್ರದೇಶದ ಜನರೆಲ್ಲರೂ ಮೈಸೂರು ದಸರಾ ಹಬ್ಬಕ್ಕೆ ಅನುಗುಣವಾಗಿ ದುರ್ಗಾದೇವಿಯ ಪೂಜೆ ಮಾಡಬೇಕು,ದೇವಿ ಪುರಾಣವನ್ನು‌ ಓದಬೇಕು.

( ಮುಂದುವರೆಯುತ್ತದೆ)
‌‌

About The Author