ಮೂರನೇ ಕಣ್ಣು : ಸರಾಕಾರಿ ಅಧಿಕಾರಿಗಳು ಸಾರ್ವಜನಿಕ ಸೇವಕರು,ಜಾತಿಗಳ ವಕ್ತಾರರುಗಳಲ್ಲ

ಲೇಖನ ;; ಮುಕ್ಕಣ್ಣ ಕರಿಗಾರ

ಶಾಮನೂರು ಶಿವಶಂಕ್ರಪ್ಪ ಅವರು ಹೇಳಿದ್ದ ‘ ಈ ಸರಕಾರದಲ್ಲಿ‌ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎನ್ನುವ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಲ್ಲಗಳೆದಿದ್ದಾರೆ.ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಶಾಸಕ ಬಿ.ಎಸ್ ವಿಜಯೇಂದ್ರ ಮತ್ತು ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಶಾಮನೂರು ಶಿವಶಂಕ್ರಪ್ಪನವರ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.ಮುಂಬರುವ ದಿನಗಳಲ್ಲಿ ಮತ್ತಷ್ಟು ಜನ ಲಿಂಗಾಯತ ಸಮುದಾಯದ ಮುಖಂಡರುಗಳು ಶಾಮನೂರು ಶಿವಶಂಕ್ರಪ್ಪನವರನ್ನು ಬೆಂಬಲಿಸಬಹುದು.ಎಚ್.ವಿಶ್ವನಾಥ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಬೆಂಬಲಿಸಿ ಶಿವಶಂಕ್ರಪ್ಪನವರಿಗೆ ತೀಕ್ಷಣವಾದ ತಿರುಗೇಟು ನೀಡಿದ್ದಾರೆ.ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂದರಿತ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಯವರು ಎಲ್ಲ ಜಾತಿಗಳ ಅಧಿಕಾರಿಗಳಿಗೂ ಆದ್ಯತೆ ನೀಡಿ,ಸಮತೋಲನ ಕಾಯ್ದುಕೊಂಡಿದ್ದಾರೆ ಎಂದು ಹೇಳಿದ್ದಾರೆ.ಆದರೆ ಅವರು ಹೀಗೆ ಹೇಳುವ ಬದಲು ಶಾಮನೂರು ಶಿವಶಂಕ್ರಪ್ಪನವರಿಗೆ ‘ ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರವಾಗುತ್ತದೆ.ಇಂತಹ ಹೇಳಿಕೆಗಳನ್ನು ನೀಡಬೇಡಿ’ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಬೇಕಿತ್ತು.ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರಿಗೆ ಆ ಅಧಿಕಾರವೂ ಇತ್ತು.ಶಾಮನೂರು ಶಿವಶಂಕ್ರಪ್ಪನವರು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಾಗಿರಬಹುದು,ಆದರೆ ಅವರು ಕಾಂಗ್ರೆಸ್ ಪಕ್ಷಕ್ಕಿಂತ ದೊಡ್ಡವರಲ್ಲ.ಶಾಮನೂರು ಶಿವಶಂಕ್ರಪ್ಪನವರಿಗೆ ಬುದ್ಧಿವಾದ ಹೇಳುವ ಅಧಿಕಾರವೂ ಡಿ.ಕೆ‌.ಶಿವಕುಮಾರ ಅವರಿಗೆ ಇತ್ತು.ಆದರೆ ಡಿ.ಕೆ.ಶಿವಕುಮಾರ ಹಾಗೆ ಮಾಡದೆ ಮಾಧ್ಯಮ ಪ್ರತಿನಿಧಿಗಳೆದುರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನಾನು ಈ ಹಿಂದೆಯೇ ಹೇಳಿದಂತೆ ಕಾಂಗ್ರೆಸ್ ಪಕ್ಷದಲ್ಲಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ‘ ಹಣ್ಣುಗಾಯಿ ನೀರುಗಾಯಿ’ ಮಾಡುವ ಪ್ರಯತ್ನ ನಡೆದಿದೆ.ಶಾಮನೂರು ಶಿವಶಂಕ್ರಪ್ಪನವರ ಹೇಳಿಕೆ ಸಿದ್ಧರಾಮಯ್ಯನವರನ್ನು ದುರ್ಬಲಗೊಳಿಸುವ ಪಿತೂರಿಯ ಒಂದು ಭಾಗವಷ್ಟೆ.

ಈಗ ಅಧಿಕಾರಿಗಳ ವಿಷಯಕ್ಕೆ ಬರೋಣ.ಲಿಂಗಾಯತ ಸಮುದಾಯದ ಅಧಿಕಾರಿಗಳು ಶಾಮನೂರು ಶಿವಶಂಕ್ರಪ್ಪನವರ ಬಳಿ ವಿಷಯ ಪ್ರಸ್ತಾಪಿಸಿದ್ದರಿಂದಲೇ ಅವರು ‘ ಈ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎನ್ನುವ ಹೇಳಿಕೆ ನೀಡಿದ್ದು.ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರು ಅದಕ್ಕೆ ಅಂಕಿ ಸಂಖ್ಯೆಗಳ ಸಮೇತ ಸರಿಯಾದ ಉತ್ತರ ನೀಡಬೇಕಿತ್ತು.ಅದರ ಬದಲಿಗೆ ‘ ನನ್ನಲ್ಲಿ ಅಂಕಿ ಸಂಖ್ಯೆಗಳಿವೆ’ ಎನ್ನುವ ಹಾರಿಕೆಯ ಉತ್ತರವನ್ನಷ್ಟೇ ಅವರು ನೀಡಿದರು.ಶಾಮನೂರು ಶಿವಶಂಕ್ರಪ್ಪನವರ ಹೇಳಿಕೆ ಹೊರಬಿದ್ದ ತಕ್ಷಣ ಸಿದ್ಧರಾಮಯ್ಯನವರು ಚೀಫ್ ಸೆಕ್ರೆಟರಿ ಮತ್ತು ಡಿಪಿಆರ್ ಪ್ರಿನ್ಸಿಪಾಲ್ ಸಿಕ್ರೆಟರಿ ಅಥವಾ ಸೆಕ್ರೆಟರಿಯವರನ್ನು ಕರೆದು ಸರಕಾರದಲ್ಲಿರುವ ಲಿಂಗಾಯತ ಅಧಿಕಾರಿಗಳ ಸಂಖ್ಯೆ ಮತ್ತು ಹುದ್ದೆಗಳನ್ನು ವಿವರಗಳನ್ನು ಪಡೆದು ಅದನ್ನು ಮಾಧ್ಯಮಪ್ರತಿನಿಧಿಗಳ ಎದುರು ಇಡಬೇಕಿತ್ತು.ಜೊತೆಗೆ ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಯಾವ ಯಾವ ಅಧಿಕಾರಿಗಳು ಯಾವ ಯಾವ ಹುದ್ದೆಯಲ್ಲಿದ್ದರು ಎನ್ನುವ ವಿವರಗಳನ್ನು ನೀಡಿದ್ದರೆ ಶಾಮನೂರು ಶಿವಶಂಕ್ರಪ್ಪ ಮರು ಮಾತನಾಡಲು ಅವಕಾಶ ಇರುತ್ತಿರಲಿಲ್ಲ.ವಿಜಯೇಂದ್ರ ಮತ್ತು ಯಡಿಯೂರಪ್ಪನವರು ಶಾಮನೂರಗೆ ಬೆಂಬಲ ಸೂಚಿಸುವ ಪ್ರಮೇಯವೂ ಬರುತ್ತಿರಲಿಲ್ಲ.ಆದರೆ ಸಿದ್ಧರಾಮಯ್ಯನವರ ಬುದ್ಧಿ ಮೊದಲಿನಷ್ಟು ‘ ಚುರುಕು’ ಆಗಿ ಉಳಿದಿಲ್ಲವಾದ್ದರಿಂದ ಸಂಭಾಳಿಸಿಕೊಂಡು ಹೋಗುವ ಹವ್ಯಾಸವನ್ನು ಮೈಗೂಡಿಸಿಕೊಂಡಿಸಿಕೊಂಡಿದ್ದಾರೆ.ಸಮಯ ಸಂದರ್ಭ ಬಂದಾಗ ಸಿದ್ಧರಾಮಯ್ಯನವರು ಸರಕಾರಿ ಅಂಕಿ ಸಂಖ್ಯೆಗಳಿಂದಲೇ ಅವರ ವಿರೋಧಿಗಳಿಗೆ ಸಮರ್ಥ ಉತ್ತರವನ್ನು ನೀಡುವ ಕೆಲಸ ಮಾಡಬೇಕು.ಸಂಭಾಳಿಸಿಕೊಂಡು ಹೋಗುವ ಪ್ರವೃತ್ತಿಯೇ ಅವರ ಅವನತಿಯ ಕಾರಣವಾಗುತ್ತದೆ.ಅದ್ಯಾರೋ ಪುಣ್ಯಾತ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣರೆಂದು ‘ ರಾಜಕೀಯ ಚಾಣಕ್ಯ’ ಎಂದು ಬಿಂಬಿಸಿಕೊಂಡು ಮುಖ್ಯಮಂತ್ರಿಯವರ ಸಲಹೆಗಾರನಾಗಿ ಕ್ಯಾಬಿನೆಟ್ ಸೌಲಭ್ಯವನ್ನು ಅನುಭವಿಸುತ್ತಿದ್ದಾನಲ್ಲ,ಆ ಪುಣ್ಯಾತ್ಮ ಏನು ಮಾಡುತ್ತಿದ್ದಾರೆ ಈಗ? ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಅಗತ್ಯ ಮಾಹಿತಿ ನೀಡುವುದು ಆತನ ಕರ್ತವ್ಯವಲ್ಲವೆ? ಪಾಪ,ಆತ ರಾಜಕೀಯಚಾಣಾಕ್ಷ ಎಂದು ಬಿಂಬಿಸಿಕೊಂಡಿದ್ದಾನೆಯೇ ಹೊರತು ಆತನಿಗೆ ಆಡಳಿತದ ಒಳಸೂಕ್ಷ್ಮಗಳ ಅರಿವು ಇಲ್ಲ.ಇಂಥವರನ್ನು ಬಳಿ ಇಟ್ಟುಕೊಂಡು ಸಿದ್ಧರಾಮಯ್ಯ ಎಷ್ಟು ಸರಕ್ಷಿತರಾಗಿರಬಲ್ಲರು? ಇದು ಅವರಿಗೆ ಬಿಟ್ಟ ವಿಷಯ.

ಲಿಂಗಾಯತ ಸಮುದಾಯದ ಅಧಿಕಾರಿಗಳು ಸಿದ್ಧರಾಮಯ್ಯನವರ ಸರಕಾರದಲ್ಲಿ ತಮಗೆ ಆಯಕಟ್ಟಿನ ಸ್ಥಾನಗಳು ಸಿಗುತ್ತಿಲ್ಲ ಎಂದು ಹಳಹಳಿಸುತ್ತಿದ್ದಾರಷ್ಟೆ.ಅವರು ತಾವು ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ ಮೊದಲು ಸಾರ್ವಜನಿಕ ಸೇವಕರು ,ಸಂವಿಧಾನದ ಆಶಯಗಳಂತೆ ನಡೆದುಕೊಳ್ಳಬೇಕಾದವರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.Public Servant ಗಳಾದ ಸರಕಾರಿ ಅಧಿಕಾರಿಗಳಿಗೆ ಜಾತಿಯ ವ್ಯಾಮೋಹ ಇರಬಾರದು,ಜಾತಿಯ ಹಂಗು ಅಭಿಮಾನದಿಂದ ಅವರು ಹೊರಬರಬೇಕು.ಲಿಂಗಾಯತ ಸಮುದಾಯಕ್ಕೆ ಸೇರಿದ ಅಧಿಕಾರಿಗಳು ಕರ್ನಾಟಕದ ಜನರ ತೆರಿಗೆಯ ಹಣದಿಂದ ತಮ್ಮ ಸಂಬಳ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕು.ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ- ಸವಲತ್ತುಗಳನ್ನು ಪಡೆಯುವವರು ಸಾರ್ವಜನಿಕಹಿತದಲ್ಲಿಯೇ ಶ್ರೇಯಸ್ಸನ್ನು ಕಾಣಬೇಕೇ ಹೊರತು ಲಿಂಗಾಯತ ಸಮುದಾಯದ ಏಳ್ಗೆಯೇ ತಮ್ಮ ಸಾರ್ವಜನಿಕ ಜೀವನದ ಸೌಭಾಗ್ಯ ಎಂದು ಭಾವಿಸಬಾರದು.ಅದಕ್ಕೆ ಶಾಮನೂರು ಶಿವಶಂಕ್ರಪ್ಪನಂಥವರು ಇದ್ದಾರೆ,ಲಿಂಗಾಯತರ ಸಂಘಟನೆಗಳಿವೆ.ಲಿಂಗಾಯತ ಅಧಿಕಾರಿಗಳು ತಮ್ಮ ಸಂಬಳ ಸವಲತ್ತುಗಳನ್ನು ವೀರಶೈವ ಮಹಾಸಭಾದಿಂದಾಗಲಿ ಅಥವಾ ಯಾವುದೇ ವೀರಶೈವ ಸಂಘಟನೆಗಳಿಂದ ಪಡೆಯುತ್ತಿಲ್ಲ ತಾವು ಲಿಂಗಾಯತಸಮುದಾಯದ ಅಧಿಕಾರಿಗಳು ಎಂದು ಹೆಮ್ಮೆಪಡಲು.ಬಡರೈತರು,ಕೂಲಿಕಾರರು,ದುಡಿಯುವ ವರ್ಗದ ಜನರ ತೆರಿಗೆಯ ಹಣದಿಂದ ಸುಖವಾಗಿ ಇರುವ ಅಧಿಕಾರಿಗಳು ಜನಸಾಮಾನ್ಯರ ಕಲ್ಯಾಣವೇ ತಮ್ಮ ಗುರಿ ಎಂದು ಭಾವಿಸಬೇಕು.ಇದು ಲಿಂಗಾಯತ ಅಧಿಕಾರಿಗಳಿಗೆ ಮಾತ್ರ ಅನ್ವಯವಾಗುವ ಮಾತಲ್ಲ,’ಸಾರ್ವಜನಿಕರ ಸೇವಕರು’ ಆದ ಎಲ್ಲ ಜಾತಿ,ಜನಾಂಗಗಳ ಅಧಿಕಾರಿಗಳಿಗೆ ಅನ್ವಯಿಸುವ ಮಾತು.ರಾಜಕಾರಣಿಗಳಂತೂ ಸರಿಯೆ ಅವರಿಗೆ ಯಾವ ಬದ್ಧತೆಯೂ ಇರುವುದಿಲ್ಲ,ಯಾವ ನಿರ್ಬಂಧವೂ ಇರುವುದಿಲ್ಲ.ಆದರೆ ಅಧಿಕಾರಿಗಳಾದವರು ಸಂವಿಧಾನ ನಿಷ್ಠರಾಗಿ ನಡೆದುಕೊಳ್ಳಬೇಕಲ್ಲವೆ ? ಸಾಮಾಜಿಕ ನ್ಯಾಯವು ನಮ್ಮ ಸಂವಿಧಾನದ ಹೃದಯವಿದ್ದಂತೆ.ಸಮಾನತೆಯು ಸಂವಿಧಾನದ ಮೂಲಮೌಲ್ಯ.ಸರಕಾರಿ ಅಧಿಕಾರಿಗಳಾದ ಎಲ್ಲ ಜಾತಿಯ ಜನರಿಗೂ ಆಯಕಟ್ಟಿನ ಸ್ಥಾನಗಳು ದೊರಕಬೇಕಲ್ಲವೆ? ಎಲ್ಲ ಜಾತಿ ಜನಾಂಗಗಳಿಗೂ ಉನ್ನತ ಸ್ಥಾನ ಮಾನಗಳು ದೊರಕಬೇಕೆಂಬುದು ಸಂವಿಧಾನವು ಪ್ರಸ್ತಾಪಿಸುತ್ತಿರುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅರ್ಥವಲ್ಲವೆ? ಶಾಮನೂರು ಶಿವಶಂಕ್ರಪ್ಪನಂಥವರಿಗೆ ಸಂವಿಧಾನವಾಗಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಲಿ ಅರ್ಥವಾಗುವುದಿಲ್ಲ.ಆದರೆ ಐಎಎಸ್ ಕೆ ಎ ಎಸ್ ಗಳಿಗೆ ಬಡ್ತಿ ಹೊಂದಿದ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಲ್ಲಾದರೂ ಸಂವಿಧಾನ ಪ್ರಜ್ಞೆ ಇರಬೇಕಲ್ಲ?

ಇದೇ ವಿಷಯವನ್ನು ಸಮರ್ಥಿಸುತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ ನಮ್ಮದು ಜಾತ್ಯಾತೀತ ಸರಕಾರ’ ಎಂದು ಹೇಳಿಕೊಂಡಿದ್ದು ಇಂದಿನ ಪತ್ರಿಕೆಗಳಲ್ಲಿ ವರದಿಯಾಗಿದೆ.ಸಿದ್ಧರಾಮಯ್ಯನವರ ಸರಕಾರ ನಿಜವಾದ ಜಾತ್ಯಾತೀತ ಸರಕಾರವಾಗಿದ್ದರೆ ಯಾವುದೇ ಜಾತಿ ಸಂಘಟನೆಯ ಪ್ರಭಾವಿ ವ್ಯಕ್ತಿಗಳಿಗೆ ಮಣೆ ಹಾಕದೆ ಸಂವಿಧಾನದ ಮೂಲಮೌಲ್ಯವಾದ ಸಮಾನತೆ ಮತ್ತು ಸಂವಿಧಾನದ ದುರ್ಬಲವರ್ಗಗಳನ್ನು ಉದ್ಧರಿಸುವ ಅಸ್ತ್ರವಾದ ಸಾಮಾಜಿಕ ನ್ಯಾಯವನ್ನು ಅವರು ಎತ್ತಿಹಿಡಿಯಬೇಕು.ಇದುವರೆಗೂ ಆಯಕಟ್ಟಿನ ಸ್ಥಾನಗಳಿಗೆ ಬಾರದೆ ಇರುವ ದಲಿತರು,ತಳಸಮುದಾಯಗಳಿಗೆ ಸೇರಿದ ಶೂದ್ರಸಮುದಾಯಗಳ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡುವುದು ತಮ್ಮ ಸಾಂವಿಧಾನಿಕ ಜವಾಬ್ದಾರಿ ಎಂದು ಸಿದ್ಧರಾಮಯ್ಯನವರು ಭಾವಿಸಬೇಕು.ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಎಷ್ಟು ಜನ ಅಧಿಕಾರಿಗಳು ಸರಕಾರದ ಕಾರ್ಯದರ್ಶಿ,ಪ್ರಧಾನ ಕಾರ್ಯದರ್ಶಿ ಮತ್ತು ಅಡಿಶನಲ್ ಚೀಫ್ ಸೆಕ್ರೆಟರಿ ಹುದ್ದೆಗಳಲ್ಲಿದ್ದಾರೆ? ಎಷ್ಟುಜನ ದಲಿತ ಸಮುದಾಯದ ಅಧಿಕಾರಿಗಳು ಜಿಲ್ಲೆಗಳ ಜಿಲ್ಲಾಧಿಕಾರಿ,ಸಿ ಇ ಒ ಮತ್ತು ಎಸ್ ಪಿ ಹುದ್ದೆಗಳಲ್ಲಿದ್ದಾರೆ? ಸರಕಾರದ ಪ್ರಮುಖ ಹುದ್ದೆಗಳಲ್ಲಿ ಎಷ್ಟು ಜನ ದಲಿತ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ? ಸಿದ್ಧರಾಮಯ್ಯನವರು ಮೊದಲು ಈ ವಿವರಗಳನ್ನು ಸಂಗ್ರಹಿಸಿ ಅವಕಾಶವಂಚಿತ ದಲಿತಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡಲಿ.ಸಂವಿಧಾನದ ಬದ್ಧತೆಯು ಬಾಯುಪಚಾರದ ಮಾತು ಆಗದೆ ದಲಿತ ಮತ್ತು ಶೂದ್ರ ಸಮುದಾಯಗಳ ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡುವ ಮೂಲಕ ತಮ್ಮ ಸಂವಿಧಾನ ಬದ್ಧತೆಯನ್ನು ಪ್ರದರ್ಶಿಸಬೇಕಿದೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು.

About The Author