ತಾಲೂಕು ಆಡಳಿತದ ವತಿಯಿಂದ ಗಾಂಧೀಜಿ,ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಶಹಾಪುರ : ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಬದುಕು ನಮಗೆಲ್ಲ ದಾರಿದೀಪವಾಗಿದೆ ಎಂದು ಕಂದಾಯ ಇಲಾಖೆಯ ಶಿರಸ್ತೇದಾರ ಚಂದ್ರಕಾಂತ್ ಮೇತ್ರಿ ಅಭಿಪ್ರಾಯಪಟ್ಟರು.ತಾಲೂಕ ಆಡಳಿತ ವತಿಯಿಂದ ತಹಸೀಲ್ ಕಚೇರಿಯಲ್ಲಿ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ದೇಶದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಈ ಮಹಾನ್ ನಾಯಕರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಜಯಂತಿಯನ್ನು ಆಚರಿಸಲಾಯಿತು.ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲ ಸಮಾಜ ಸುಧಾರಕರಾಗಿದ್ದರು. ಅವರ ಸ್ಮರಣೆ ಕೇವಲ ಜಯಂತಿಗೆ ಸೀಮಿತಗೊಳಿಸದೆ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಉಪ ತಹಶಿಲ್ದಾರ್ ಸಂಗಮೇಶ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದ ಮಹಾತ್ಮ ಗಾಂಧಿಯವರು ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗದಲ್ಲಿಯೇ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಈ ದೇಶಕ್ಕೆ ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯ ನೀಡಿ ದೇಶದ ಪ್ರಗತಿಗೆ ಅತ್ಯಮೂಲ್ಯ ಉಡುಗೊರೆ ನೀಡುವದಲ್ಲದೇ ಅತ್ಯಂತ ಸ್ಪಷ್ಟ ಆಡಳಿತ ಕೊಟ್ಟಿದ್ದರು. ಅವರು ಅಧಿಕಾರದ ಅಹಂಕಾರ ದರ್ಪ ತೋರದೆ, ತಮ್ಮ ಜೀವನ ದುದ್ದಕ್ಕೂ ಸರಳವಾಗಿ ಬದುಕಿ ದೇಶದ ಜನತೆಗೆ ಆದರ್ಶ ಪ್ರಾಯವಾಗಿದ್ದಾರೆ. ದೇಶಕ್ಕೆ ಉತ್ತಮ ಆಡಳಿತ ಕೊಟ್ಟ ಅವರನ್ನು ಸದಾ ಸ್ಮರಿಸಬೇಕು ಎಂದರು. ಕಂದಾಯ ಇಲಾಖೆಯ ಚೆನ್ನಮ್ಮ ನವಾಜ್ ಪಟೇಲ್, ಶರಬಮ್ಮ, ಶಾಂತಮ್ಮ, ಸೇರಿದಂತೆ ಕಂದಾಯ ಇಲಾಖೆ ಭೂಮಾಪನ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

About The Author