ಶ್ರೀದೇವಿ ಪುರಾಣ’ ದ ಪ್ರವೇಶದ್ವಾರ ಪೀಠಿಕಾ ಅಧ್ಯಯ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ನಿಷ್ಠಾವಂತ ಅನುಯಾಯಿಗಳೂ,ದಾಸೋಹ ಸಮಿತಿಯ ಅಧ್ಯಕ್ಷರೂ ಆಗಿರುವ ಗುರುಬಸವ ಹುರಕಡ್ಲಿಯವರು ‘ ಗುರುಗಳೆ,ಶ್ರೀದೇವಿ ಪುರಾಣದ ಪೀಠಿಕಾ ಅಧ್ಯಾಯದ ಅರ್ಥ- ಮಹತ್ವವನ್ನು ವಿವರಿಸಿ’ ಎಂದು ಕೋರಿದ್ದಾರೆ.ಗುರುಬಸವ ಅವರು ಗಬ್ಬೂರಿನಲ್ಲಿ ಶ್ರೀದೇವಿ ಪುರಾಣವನ್ನು ಭಕ್ತಿ,ನಿಷ್ಠೆಯಿಂದ ಓದುತ್ತಿರುವವರಲ್ಲಿ ಒಬ್ಬರಾಗಿದ್ದು ಬರುವ ನವರಾತ್ರಿಯಲ್ಲಿ ಮತ್ತೆ ದೇವಿಪುರಾಣ ಓದುವ ಕಾರಣದಿಂದ ದೇವಿಪುರಾಣದ ಪೀಠಿಕಾ ಅಧ್ಯಾಯದ ಅರ್ಥ ಮತ್ತುಮಹತ್ವ ವಿವರಿಸುವಂತೆ ಕೇಳಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಗಬ್ಬೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಶ್ರೀದೇವಿ ಪುರಾಣವನ್ನು ಓದುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುರುಬಸವ ಅವರನ್ನು ಕಾರಣವಾಗಿಟ್ಟುಕೊಂಡು ಶ್ರೀದೇವಿ ಉಪಾಸಕರುಗಳಿಗೆಲ್ಲ ನೆರವಾಗಲಿ ಎನ್ನುವ ಉದ್ದೇಶದಿಂದ ಇಲ್ಲಿ ಶ್ರೀದೇವಿ ಪುರಾಣದ ಪೀಠಿಕಾ ಅರ್ಥವನ್ನು ವಿವರಿಸುತ್ತಿದ್ದೇವೆ.

ಶ್ರೀದೇವಿ ಪುರಾಣದ ಕರ್ತೃಗಳಾದ ಚಿದಾನಂದಾವಧೂತರು ಸಂಸ್ಕೃತ ಮತ್ತು ಕನ್ನಡ ಭಾಷೆಗಳೆರಡರಲ್ಲಿಯೂ ಅದ್ವಿತೀಯ ಪಾಂಡಿತ್ಯ ಪಡೆದಿದ್ದ ಯೋಗಿಗಳು,ಜೀವನ್ಮುಕ್ತರು ಅವಧೂತರು.ಚಿದಾನಂದಾವಧೂತರು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿ ತಾಲೂಕಿನ ಪೆದ್ದಹರಿವಾಣ ಎನ್ನುವ ಗ್ರಾಮದಲ್ಲಿ ಲಕ್ಷ್ಮೀಪತಿ ಮತ್ತು ಅಣ್ಣಮ್ಮ ಎನ್ನುವ ಬ್ರಾಹ್ಮಣ ದಂಪತಿಗಳ ಮಗನಾಗಿ ಹುಟ್ಟಿ ಝಂಕಣ್ಣ ಎನ್ನುವ ಹೆಸರನ್ನು ಪಡೆದಿದ್ದ ಚಿದಾನಂದರು ಹುಟ್ಟಿನಿಂದಲೇ ದೈವಾಂಶ ಸಂಭೂತರಾಗಿ ಲೀಲೆಗಳನ್ನು ತೋರಿದವರು.ಝಂಕಣ್ಣನವರು ತಮ್ಮ ಆಧ್ಯಾತ್ಮಿಕ ಸಾಧನೆಯನ್ನು ಮುಂದುವರೆಸಲು ಕರ್ನಾಟಕದ ಹಂಪಿಯ ಹತ್ತಿರ ತುಂಗಭದ್ರಾ ನದಿಯ ದಡದ ಮೇಲಿರುವ ಅಯೋಧ್ಯಪುರವೆಂಬ ಗ್ರಾಮಕ್ಕೆ ಬಂದು ಅಲ್ಲಿದ್ದ ಶ್ರೀ ಕೊಂಡಪ್ಪ ಎನ್ನುವ ಯೋಗಿಯನ್ನು ಗುರುಗಳಾಗಿ ಪಡೆದು ಅವರ ಸನ್ನಿಧಿಯಲ್ಲಿ ಯೋಗಸಾಧನೆ ಮಾಡಿ ಪೂರ್ಣಯೋಗಿಯಾಗುತ್ತಾರೆ,ಅವಧೂತ ಸಿದ್ಧಿಯನ್ನು ಸಂಪಾದಿಸುತ್ತಾರೆ.ಕರ್ನಾಟಕದಾದ್ಯಂತ ಸಂಚರಿಸಿ ತಮ್ಮ ಆಧ್ಯಾತ್ಮಿಕ ಸಿದ್ಧಿಸಂಪನ್ನ ವ್ಯಕ್ತಿತ್ವದ ಅನುಭೂತಿಯನ್ನು ನಾಡಜನತೆಗೆ ಪರಿಚಯಿಸುತ್ತಾರೆ.ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಇಂದು ಅಂಬಾಮಠವೆಂದು ಪ್ರಸಿದ್ಧವಾಗಿರುವ ಸ್ಥಳವಾದ ಸಿದ್ಧಪರ್ವತದಲ್ಲಿ ಉಗ್ರತಪೋನುಷ್ಠಾನ ಕೈಗೊಂಡು ಜಗನ್ಮಾತೆಯನ್ನು ಬಗಳಾಂಬೆಯ ರೂಪದಲ್ಲಿ ಸಾಕ್ಷಾತ್ಕರಿಸಿಕೊಳ್ಳುತ್ತಾರೆ.ತಾಯಿ ಬಗಳಾಮುಖಿಯ ಆಜ್ಞಾನುಸಾರ ಲೋಕದ ಜನರ ಉದ್ಧಾರಕ್ಕಾಗಿ ಭಾಮಿನಿ ಷಟ್ಪದಿಯಲ್ಲಿ ಶ್ರೀದೇವಿ ಪುರಾಣವನ್ನು ರಚಿಸಿರುವ ಚಿದಾನಂದಾವಧೂತರು ಇಂದಿನ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಐಕ್ಯರಾಗುತ್ತಾರೆ.ಅವರ ಜೀವನದ ಕೆಲವಿವರಗಳು ಸಹ ಪೀಠಿಕಾ ಅಧ್ಯಾಯದಲ್ಲಿವೆ.

ಸಂಸ್ಕೃತದಲ್ಲಿ ಮಾರ್ಕಂಡೇಯ ಋಷಿಗಳಿಂದ ರಚಿತವಾದ ‘ ದುರ್ಗಾಸಪ್ತಸತಿ’ ಯು ಶಾಕ್ತರ ಪ್ರಮಾಣ ಗ್ರಂಥವಾಗಿದೆ.ವೇದಗಳು ವೈದಿಕರಿಗೆ ಪ್ರಮಾಣವಾಗಿರುವಂತೆ ಶಾಕ್ತರಿಗೆ ದುರ್ಗಾಸಪ್ತಶತಿಯು ಪ್ರಮಾಣಗ್ರಂಥ.ಅದನ್ನು ಸಂಕ್ಷಪ್ತವಾಗಿ “ಸಪ್ತಶತಿ” ಎಂದೂ ” ಚಂಡೀಸಪ್ತಶತಿ” ಎನ್ನುವ ಪರ್ಯಾಯ ನಾಮದಿಂದಲೂ ಕರೆಯಲಾಗುತ್ತಿದೆ.ಋಷಿ ಮಾರ್ಕಂಡೇಯರು ಪರಾಶಕ್ತಿ ದುರ್ಗಾದೇವಿಯನ್ನು ” ಮಹಾಕಾಲೀ ಮಹಾಲಕ್ಷ್ಮೀ ಮತ್ತು ಮಹಾ ಸರಸ್ವತಿಯರೆಂಬ ‘ ತ್ರಿಗುಣಾತ್ಮಿಕೆ’ ಯನ್ನಾಗಿ ಕಂಡಿದ್ದಾರೆ ದುರ್ಗಾಸಪ್ತಶತಿಯಲ್ಲಿ.ಸಂಸ್ಕೃತದಲ್ಲಿ ದೇವಿ ಮಹಾತ್ಮೆಯನ್ನು ಸಾರುವ ‘ ಶ್ರೀದೇವಿ ಭಾಗವತ’ ವೂ ಇದೆ.ಹಾಗೆಯೇ ‘ ಕಾಳಿಕಾ ಪುರಾಣ’ ವೆಂಬ ಪುರಾಣವೂ ಇದೆ.’ ಕಾಳಿಕಾ ಪುರಾಣ’ ವು ಫಲಶೃತಿಯ ನೂರು ಶ್ಲೋಕಗಳು ಮತ್ತು ಕೆಲವು ಮಂತ್ರಗಳಿಂದ ೮೦೦ ಶ್ಲೋಕಗಳನ್ನು ಒಳಗೊಂಡಿದ್ದು ಫಲಶೃತಿಯ ಭಾಗವನ್ನು ಬಿಟ್ಟರೆ ಅದುಕೂಡ ಸಪ್ತಶತಿಯಾಗುತ್ತದೆ.ಚಿದಾನಂದಾವಧೂತರು ‘ದುರ್ಗಾಸಪ್ತಶತಿ’ ,ದೇವಿಭಾಗವತ ಮತ್ತು ಕಾಳಿಕಾ ಪುರಾಣಗಳನ್ನು ಓದಿ ರಚಿಸಿರುವ ‘ ಶ್ರೀ ಪಾರ್ವತಿ ದೇವಿ ಮಹಾತ್ಮೆ’ ಎನ್ನುವ ಶ್ರೀದೇವಿ ಪುರಾಣವು ಕಾಳಿಕಾಪುರಾಣವನ್ನು ಅನುಸರಿಸಿಯೇ ಬರೆದ ಕೃತಿ.ಚಿದಾನಂದಾವಧೂತರ ಶ್ರೀದೇವಿ ಮಹಾತ್ಮೆಯ‌ ಪೀಠಿಕಾಭಾಗ ಮತ್ತು ಅಲ್ಲಲ್ಲಿ ಬರುವ ಕೆಲವು ಷಟ್ಪದಿಗಳನ್ನು ತೆಗೆದುಹಾಕಿದರೆ ಇದು ಕೂಡ ಸಪ್ತಶತಿ ಆಗುತ್ತದೆ.ಶ್ರೀದೇವಿ ಮಹಾತ್ಮೆಯಲ್ಲಿ ಪೀಠಿಕಾ ಅಧ್ಯಾಯದ ೧೯ ಪದಗಳು ಸೇರಿ ಹದಿನೆಂಟು ಅಧ್ಯಾಯಗಳ ಗ್ರಂಥದಲ್ಲಿ ಒಟ್ಟು ೭೯೬ ಷಟ್ಪದಿಗಳಿವೆ.ದೇಶದಲ್ಲಿರುವ ಅಷ್ಟಾದಶ ಶಕ್ತಿಪೀಠಗಳನ್ನು ಸಂಕೇತಿಸಲು ಚಿದಾನಂದಾವಧೂತರು ಪುರಾಣವನ್ನು ಹದಿನೆಂಟು ಅಧ್ಯಾಯಗಳಾಗಿ ಸಂಯೋಜಿಸಿದ್ದಾರೆ.

ಪೀಠಿಕಾ ಅಧ್ಯಾಯದ ಅರ್ಥವಿವರಣೆ

ಪರಮ ಪರತರ ಪರಮ ಮಂಗಳ
ಪರಮಪೂರ್ಣಜ್ಯೋತಿ ಪರಮಾ
ಪರಮಚೈತನ್ಯಾತ್ಮ ಪರಮಾಕಾಶ ಪರಮೇಶಾ
ಶರಣರಕ್ಷಕ ಸಕಲಭೀಷ್ಟವ
ನಿರುತವೀವಾಯೋಧ್ಯಪುರವನು
ಪೊರೆವ ವರಚಿದಾನಂದ ಗುರುಮಾಳ್ಕೆಮಗೆ ಮಂಗಳವ// ೧//

ಶ್ರೀ ಚಿದಾನಂದಾವಧೂತರು ಪರಬ್ರಹ್ಮಸ್ವರೂಪಿಯಾದ ತಮ್ಮ ಗುರುವಿನ ಸ್ಮರಣೆಯಿಂದ ಗ್ರಂಥಾರಂಭ ಮಾಡುತ್ತಾರೆ.ಅವರ ಗುರು ಕೊಂಡಪ್ಪನವರಿಗೆ ಚಿದಾನಂದ ಎನ್ನುವ ಬಿರುದು ಇದ್ದಿರಬಹುದು ಅಥವಾ ಚಿದಾನಂದಾವಧೂತರು ಪರಮಹಂಸ ಸ್ವರೂಪರಾದ ತಮ್ಮ ಗುರು ಕೊಂಡಪ್ಪನವರನ್ನು ಸತ್ತು ಚಿತ್ತು ಆನಂದಗಳ ಅಧಿಪತಿ ಎಂದು ಚಿದಾನಂದ ಎಂದೂ ಕರೆದಿರಬಹುದು.ಇಲ್ಲವೆ ಝಂಕಣ್ಣನವರನ್ನು ಕೊಂಡಪ್ಪನವರು ಚಿದಾನಂದ ಎನ್ನುವ ಯೋಗಾಭಿದಾನದಿಂದ ಗುರುತಿಸಿದಂತೆ ಚಿದಾನಂದರು ತಮ್ಮ ಗುರುವಿನ ಹೆಸರನ್ನು ಚಿದಾನಂದ ಎಂದು ಕರೆದು,ಗೌರವಿಸಿರಬಹುದು.ಹಿಂದೆ ಅನುಭಾವ ಕವಿಗಳು ತಮ್ಮ ಗುರುಗಳ ಗ್ರಾಮಭಾಷೆಯ ಹೆಸರನ್ನು ತಾತ್ವಿಕಾರ್ಥಕ್ಕೇರಿಸಿ ಆ ಮುದ್ರಿಕೆಯೊಂದಿಗೆ ಅನುಭಾವ ಪದಗಳನ್ನು ರಚಿಸುತ್ತಿದ್ದರು.ಗಬ್ಬೂರಿನ ಹಂಪಣಪ್ಪನವರ ಅನುಭಾವ ಪದಗಳ ಮುದ್ರಿಕೆಯನ್ನು ಇಲ್ಲಿ ಗಮನಿಸಬಹುದು.ಹಂಪಣ್ಣಪ್ಪನವರ ಅನುಭಾವಪದಗಳ ಮುದ್ರಿಕೆ ‘ ಘನವೃಷಭ’ ಎನ್ನುವುದಾಗಿದ್ದು ಅದು ಅವರ ಗುರು ‘ ದೊಡ್ಡಬಸಪ್ಪನವರ ಸಂಸ್ಕೃತೀಕರಣಮಾಡಿದ ಹೆಸರು! ಹೀಗೆಯೇ ಚಿದಾನಂದಾವಧೂತರು ಶಿವಯೋಗಾನುಭವವನ್ನು ಉಂಡು ಕೊಂಡ ( ಬೆಟ್ಟ) ವೇ ಆದ ಶಿವಾನುಭವಕೊಂಡರನ್ನು ಚಿದಾನಂದರು ಎಂದು ಕರೆದಿರಬಹುದು.ಮೊದಲ ಪದ್ಯದಲ್ಲಿ ಪರಮಾತ್ಮನು ನಿರಾಕಾರ ಪರಬ್ರಹ್ಮನಾಗಿದ್ದು ಅವನು ಎಲ್ಲದಕ್ಕೂ ಅತೀತನಾಗಿದ್ದು ಪರಿಪೂರ್ಣ ಜ್ಯೋತಿಯಾದ ಚಿಜ್ಜ್ಯೋತಿಯಾಗಿರುತ್ತಾನೆ.ಮತ್ತು ಆತ್ಮರುಗಳಿಗೆಲ್ಲ ವಿಶಿಷ್ಟಾತ್ಮನಾಗಿ ಪರಮಚೈತನ್ಯಾತ್ಮನೆಂದು ಕರೆಯಿಸಿಕೊಂಡು ಕಣ್ಣಿಗೆ ಕಾಣಿಸುವ ಆಕಾಶವಲ್ಲದ ಪರಮಾಕಾಶದಲ್ಲಿ ತನ್ನ ಪರಮಪ್ರಭೆಯಿಂದಲೇ ಬೆಳಗುತ್ತಿದ್ದಾನೆ.ಆ ಪರಶಿವನ ವಿಭೂತಿಯಾಗಿ ಅಯೋಧ್ಯಪುರದಲ್ಲಿ ಬೇಡಿದವರ ಇಷ್ಟಾರ್ಥಗಳನ್ನಿತ್ತು ಪೊರೆಯುತ್ತಿರುವ ವರಯೋಗಿ ಚಿದಾನಂದರು ಶರಣರ ಸಕಲಾಭಿಷ್ಟಗಳನ್ನು ಪೂರೈಸುತ್ತಿರುವ ಪರಮಯೋಗಿಗಳಾಗಿದ್ದು ಆ ವರಗುರು ನನ್ನ ಈ ಕೃತಿರಚನೆಗೆ ಮಂಗಳವನ್ನು ಹಾರೈಸಲಿ ಎಂದು ಪ್ರಾರ್ಥಿಸಿದ್ದಾರೆ.ಶ್ರೀದೇವಿಯು ಪರಶಿವನ ಶಕ್ತಿಯಾದುದರಿಂದ ಚಿದಾನಂದಾವಧೂತರು ಪರಶಿವನ ವಿಶಿಷ್ಟ ನಾಮ ವಾಚಕಗಳಿಂದಲೇ ತಮ್ಮ ಪುರಾಣವನ್ನು‌ಪ್ರಾರಂಭಿಸಿದ್ದಾರೆ.ಪರಮಶಿವ ಮತ್ತು ಗುರು ಇಬ್ಬರೂ ಬೇರೆಯಲ್ಲ.ಒಂದು ತತ್ತ್ವವಾದರೆ ಮತ್ತೊಂದು ತತ್ತ್ವಾರ್ಥ ಎಂದು ಪರಿಭಾವಿಸಿ ತಮ್ಮಗುರುವನ್ನು‌ಪರಶಿವನೊಂದಿಗೆ ತಾದ್ಯಾತ್ಮೀಕರಿಸಿ ಸ್ತುತಿಸಿದ್ದಾರೆ ಪ್ರಾರಂಭದ ಪದ್ಯದಲ್ಲಿ.ಹಂಪೆಯ ಬಳಿ ತುಂಗಭದ್ರಾ ನದಿಯ ತೀರದಲ್ಲಿ ಅಯೋಧ್ಯಪುರವೆಂಬ ಪುಟ್ಟಗ್ರಾಮವಿದೆ.ಅದು ಕೊಂಡಪ್ಪನವರ ಜನ್ಮಸ್ಥಳ,ಸಿದ್ಧಿಸ್ಥಳ.

ಯೋಗಿಯೊಳು ಶಿವನಂದ ರಾಜಾ
ಯೋಗಿಯಾಜ್ಞೆಗೆ ಪಾತ್ರನಾಗಿಹ
ಯೋಗಿಯಾರೆನೆ ತುಂಗಭದ್ರಾ ತೀರದಲಿ ಮೆರೆವಾ/
ಯೋಗಿವರನಿಹ ನಿರುತಯೋಧ್ಯದಿ
ಯೋಗಿಗಳ ದಾತಾರ ರಾಜಾ
ಯೋಗಕೊಡೆಯನು ವರಚಿದಾನಂದಾಖ್ಯ ಗುರುವರನೂ //(೨)//

ಈ ಪದ್ಯದಲ್ಲಿ ತಮ್ಮ ಗುರುಪರಂಪರೆಯನ್ನು ಕೊಂಡಾಡಿದ್ದಾರೆ ಚಿದಾನಂದಾವಧೂತರು.ಕೊಂಡಪ್ಪನವರ ಗುರುಗಳು ಶಿವಾನಂದ ರಾಜಯೋಗಿಗಳು.ಅವರು ಶಿವನಂತೆಯೇ ಆನಂದ ಸ್ವರೂಪಿಗಳಾದ ಪರಮಯೋಗಿಗಳು.ಅವರ ಶಿಷ್ಯ‌ಕೊಂಡಪ್ಪ ನಾಮಕ ಚಿದಾನಂದರು.ಚಿದಾನಂದರು ತುಂಗಾಭದ್ರಾ ನದಿಯ ತೀರದ ಚಿಕ್ಕ ಗ್ರಾಮ ಅಯೋಧ್ಯದಲ್ಲಿ ಸದಾ ವಾಸಿಸುತ್ತಿದ್ದರು.ಆ ಚಿದಾನಂದರು ಮುಮುಕ್ಷುಗಳಿಗೆ ಭೋಗ ಮೋಕ್ಷಗಳೆರಡನ್ನು ಅನುಗ್ರಹಿಸಬಲ್ಲ ಸರ್ವಸಮರ್ಥರಾಗಿದ್ದ ಯೋಗಿಪುಂಗವರು.

ಆತನಾ ನಿಜಶಿಷ್ಯನಾರೆನೆ
ಪಾತಂಕಗಳು ಪರಿದು ಸರ್ವವ
ಧೂತ ಶ್ರೀಗುರು ಚಿದಾನಂದರು ಗುರುವಿನಾಜ್ಞೆಯಲಿ
ಓತು ಹೇಳಿದ ದೇವಿ ಚರಿತವ
ಮಾತು ತಿಳಿ ಧರ್ಮಾರ್ಥ ಕಾಮ್ಯವು
ಖ್ಯಾತಮೋಕ್ಷವು ಸಿದ್ಧಿಯಾಗಲು ಜಗಕೆ ತಾನಿದನೂ //೩//

ಚಿದಾನಂದ ಯೋಗಿಯ ನಿಜಶಿಷ್ಯನಾದ ಚಿದಾನಂದಾವಧೂತರೆಂಬ ಹೆಸರಿನ ತಾವು ಜಗತ್ತಿನ ಜನರ ಕಲ್ಯಾಣಕ್ಕಾಗಿ,ಜನರಿಗೆ ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧ ಫಲಪ್ರಾಪ್ತಿಗೋಸುಗ ಗುರುವಿನಾಜ್ಞೆಯಂತೆ ಶ್ರೀದೇವಿ ಪುರಾಣ ಎನ್ನುವ ಈ ಕೃತಿಯನ್ನು ರಚಿಸಿದ್ದಾಗಿ ಹೇಳಿಕೊಂಡಿದ್ದಾರೆ ಚಿದಾನಂದಾವಧೂತರು ಈ ಪದ್ಯದಲ್ಲಿ.ಈ ಪದ್ಯದಲ್ಲಿ ಅವಧೂತರು ‘ ನಿಜಶಿಷ್ಯ’ ಎನ್ನುವ ಪದ ಬಳಸಿದ್ದು ವಿಶೇಷವಾಗಿದೆ.ಚಿದಾನಂದಯೋಗಿಯ ನಿಜಶಿಷ್ಯ ತಾನು ಎನ್ನುವುದು ತಮ್ಮ ಹೆಗ್ಗಳಿಕೆ ಎನ್ನುವ ಅಭಿಮತವನ್ನು ಅವಧೂತರು ಇಲ್ಲಿ ವ್ಯಕ್ತಪಡಿಸಿದ್ದಾರೆ.ಒಬ್ಬ ಗುರುವಿಗೆ ಎಷ್ಟುಜನರು ಬೇಕಾದರೂ ಶಿಷ್ಯರು ಇರಬಹುದು,ಆದರೆ ಆ ಗುರುವಿಗೆ ‘ ನಿಜಶಿಷ್ಯ’ ನಾಗುವವನು ಒಬ್ಬನೇ.ಗುರುವಿನ ಅತ್ಯಂತ ಪ್ರೀತಿಪಾತ್ರ ಶಿಷ್ಯನೇ ಆ ಗುರುವಿನ ನಿಜಶಿಷ್ಯನಾಗಿದ್ದು ಗುರುವಿನ ಸಮಸ್ತಯೋಗ ಶಕ್ತಿಯು ಆ ಶಿಷ್ಯನಲ್ಲಿಯೇ ಪ್ರಕಟಗೊಳ್ಳುವುದರಿಂದ ಆತನು ಆ ಗುರುವಿನ ಯೋಗಶಕ್ತಿಯ ಅಧಿಕಾರಿ ಎನ್ನಿಸಿಕೊಳ್ಳುವುದರಿಂದ ಆತನೇ ನಿಜಶಿಷ್ಯನೆನ್ನಿಸಿಕೊಳ್ಳುವನು.ಇದಕ್ಕೆ ನಮ್ಮ ದೃಷ್ಟಾಂತವನ್ನು ಪರಾಂಬರಿಸಬಹುದು.ಯುಗಯೋಗಿಗಳೆಂದು ಖ್ಯಾತರಾದ ನಮ್ಮ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರಿಗೆ ಹಲವಾರು ಜನ ಶಿಷ್ಯರಿದ್ದರೂ ನಾವು ಅವರಿಗೆ ಅತರಂಗದ ಶಿಷ್ಯರಾದುದರಿಂದಲೇ ಅವರ ಸಮಸ್ತಯೋಗಶಕ್ತಿಯು ನಮ್ಮಲ್ಲಿ ಆವಿರ್ಭವಿಸಿ ‘ ಮಹಾಶೈವ ಧರ್ಮ’ ಎನ್ನುವ ಹೊಸ ಧರ್ಮದ ಉದಯಕ್ಕೆ ಮತ್ತು ಲೋಕಕಲ್ಯಾಣಕರವಾದ ‘ ಮಹಾಶೈವ ಧರ್ಮಪೀಠ’ ಎನ್ನುವ ಧರೆಯ ಮೇಲಣ ಕೈಲಾಸದ ಅವತರಣಕ್ಕೆ ಕಾರಣವಾಗಿದೆ.ಹೀಗೆ ಒಬ್ಬ ಮಹಾಗುರುವಿಗೆ ಹಲವಾರು ಜನ ಶಿಷ್ಯರು ಇದ್ದರೂ ಆ ಮಹಾಗುರುವಿಗೆ ಅತ್ಯಂತಪ್ರೀತಿಪಾತ್ರನಾದ ಒಬ್ಬ ಶಿಷ್ಯನಿದ್ದು ಆ ಶಿಷ್ಯನ ಮೂಲಕ ಮಹಾಗುರುವಿನ ಮಹಾಯೋಗಶಕ್ತಿಯು ಪ್ರವಹಿಸಿ ಲೋಕೋದ್ಧಾರ್ಯ ಕಾರ್ಯ ಮಾಡುತ್ತದೆ.ಚಿದಾನಂದಾವಧೂತರು ಸರ್ವಪಾತಕ ಮುಕ್ತರಾಗಿದ್ದ ನಿರ್ಮಲಾತ್ಮರಾಗಿದ್ದರು,ನಿಷ್ಕಳಂಕವ್ಯಕ್ತಿತ್ವದ ಯೋಗಿಗಳಾಗಿದ್ದರು ಎನ್ನುವುದನ್ನು ‘ ಪಾತಕಗಳು ಪರಿದು ಸರ್ವವಧೂತ’ ಎನ್ನುವ ಸಾಲಿನಲ್ಲಿ ಹೇಳಿದ್ದಾರೆ.ಪಂಚಮಹಾಪಾತಕಗಳೆಂಬ ಮಹಾಪಾಪಗಳಿದ್ದು ಪಂಚಮಹಾಪಾತಗಳು ಸೇರಿದಂತೆ ಸರ್ವಪಾಪಗಳ ಆಗರವಾದ ಮನಸ್ಸಿನ ಮಲಿನತೆಯನ್ನು ಪರಿಹರಿಸಿಕೊಂಡು ಅವರು ನಿರ್ಮಲಾತ್ಮರಾಗಿದ್ದರು,ನಿರಂಜನರಾಗಿದ್ದರು ಎಂದು ಅರ್ಥೈಸಿಕೊಳ್ಳಬೇಕು.ಚಿದಾನಂದಾವಧೂತರು ತಮ್ಮ ಗುರುವಿನ ಅಪ್ಪಣೆಯಂತೆ ಶ್ರೀದೇವಿ ಮಹಾತ್ಮೆ ಎನ್ನುವ ಈ ದೇವಿ ಚರಿತ್ರೆಯನ್ನು ರಚಿಸಿದ್ದಾರೆ.ಈ ದೇವಿ ಚರಿತ್ರೆಯನ್ನು ಓದುವುದರಿಂದ ಜನರಿಗೆ ಧರ್ಮ,ಅರ್ಥ,ಕಾಮ ಮತ್ತು ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಗಳು ಸಿದ್ಧಿಸುತ್ತವೆ.ಚತುರ್ವಿಧ ಸಾರಾಯ ಸಂಪತ್ತನ್ನು ಒದಗಿಸಿಕೊಡುವ ಶ್ರೀದೇವಿ ಚರಿತ್ರೆಯ ಮಹಿಮೆಯು ವರ್ಣಿಸಲಸದಳ ಎನ್ನುವುದು ಈ ಪದ್ಯದ ತಾತ್ಪರ್ಯ.

ಶುದ್ಧ ಬುದ್ಧಾ ವಸ್ತುವೆನಿಸುವ
ಸಿದ್ಧಪರ್ವತದಲ್ಲಿ ನಿಂತಿರು
ತಿದ್ದ ಬಗಳಾಮುಖಿಯು ಸಾಕ್ಷಾತ್ಕಾರ ತಾನಾಗೇ //
ಬುದ್ಧಿವಂತರು ಓದಿ ಮನಭೀ
ಷ್ಟಿದ್ದುದನು ಪಡೆಯಲ್ಕೆ ಪೇಳಿದ
ಬುದ್ಧಿವಾದದ ದೇವಿ ಚರಿತವನರಿಯೆ ಜಗವೆಲ್ಲಾ //೪//

ಚಿದಾನಂದಾವಧೂತರು ಈ ಪದ್ಯದಲ್ಲಿ ಸಿದ್ಧಪರ್ವತದಲ್ಲಿ ನೆಲೆನಿಂತು ಲೋಕವನ್ನನುಗ್ರಹಿಸುತ್ತಿರುವ ಲೋಕಮಾತೆಯಾದ ಪಾರ್ವತಿದೇವಿಯನ್ನು ಬಗಳಾಮುಖಿದೇವಿಯ ರೂಪದಲ್ಲಿ ಕಂಡು ಲೋಕಮಾತೆಯ ಕಾರುಣ್ಯವು ಸಮಸ್ತಜೀವರಿಗಳಿಗೊದಗಿ ಬರಲಿ ಎನ್ನುವ ಮಹದುದ್ದೇಶದಿಂದ ಈ ಚರಿತೆಯನ್ನು ರಚಿಸಿರುವುದಾಗಿ ಈ ಪದ್ಯದಲ್ಲಿ ಹೇಳಿದ್ದಾರೆ.

ದೇವಿಯು “ಶುದ್ಧ ಬುದ್ಧ” ಸ್ವರೂಪಳು ಎನ್ನುವುದನ್ನು ಇಲ್ಲಿ ಅರ್ಥೈಸಿಕೊಳ್ಳಬೇಕು. ದೇವಿಯು ದೋಷಮುಕ್ತಳೂ ತನ್ನನ್ನು ನಂಬಿದವರ ದೋಷರಾಶಿಯನ್ನು ಕಳೆಯಬಲ್ಲವಳೂ ಆದ್ದರಿಂದ ಅವಳು ಶುದ್ಧಳು.ಗಂಗಾನದಿಯು ತನ್ನಲ್ಲಿ ಮೀಯುವವರ ಪಾಪಗಳನ್ನು ಕಳೆಯುವಂತೆ ಶ್ರೀದೇವಿ ದುರ್ಗೆಯು ತನ್ನಲ್ಲಿ ಶರಣುಬಂದವರ,ತನ್ನನ್ನು ಸ್ಮರಿಸುವವರ ಸರ್ವಪಾಪಗಳನ್ನು ಕಳೆಯುತ್ತಾಳೆ.ಪಾಪಗಳನ್ನು ಕಳೆಯುವುದರಿಂದ ದೇವಿಯು ‘ ಅಘಹರೆ’ ಎನ್ನಿಸಿಕೊಂಡಿದ್ದಾಳೆ. ‘ ಅಘ’ ಎಂದರೆ ಪಾಪ,’ ಹರೆ’ ಎಂದರೆ ಕಳೆಯುವವಳು.ಪಾಪವನ್ನು ಕಳೆಯುವ ದೇವಿಯು ‘ಅಘಹರೆಯು’. ಶಿವನು ಪಾಪಗಳನ್ನು ಕಳೆಯುವ ‘ ಅಘಹರ’ ನಾದುದರಿಂದ ಆತನ ಶಕ್ತಿಯಾದ ಪಾರ್ವತಿಯೂ ‘ ಅಘಹರೆ’ ಯಾಗಿದ್ದಾಳೆ.’ ಬುದ್ಧ’ ಎಂದರೆ ಅಜ್ಞಾನಾತೀತ ಸುಜ್ಞಾನವೆಂದರ್ಥ.ಪ್ರಪಂಚಕ್ಕೆ ಅಂಟಿಕೊಳ್ಳುವುದರಿಂದ ಅಜ್ಞಾನಪ್ರಾಪ್ತಿಯು.ಜೀವಿಯು ತಾನು ದೇಹಿ ಎಂದು ಭಾವಿಸುವುದೇ ಅಜ್ಞಾನವು.ಜೀವಿಯು ತಾನು ದೇಹಿಯಲ್ಲ,ನಿರ್ಮಲಾತ್ಮನು,ಪರಮ ಚೇತನನು ಎಂದು ತಿಳಿದುಕೊಳ್ಳುವುದೇ ಸುಜ್ಞಾನವು.ದೇವಿ ದುರ್ಗೆಯು ವಿಶ್ವನಿಯಾಮಕಿಯಾಗಿಯೂ ವಿಶ್ವದ ಆಗು ಚೇಗುಗಳಿಗೆ ಅಂಟಿಕೊಳ್ಳುವುದಿಲ್ಲವಾದ್ದರಿಂದ ನಾಮ,ರೂಪ,ಕ್ರಿಯೆ ಮತ್ತು ಕಳಾಪಗಳೆಂಬ ಉಪಾಧಿಗಳಿಗೆ ಒಳಗಾಗುವುದಿಲ್ಲವಾದ್ದರಿಂದ ಆಕೆಯು ಸದಾ ಚಿದಾತ್ಮಳಾಗಿ,ಚಿಜ್ಜ್ಯೋತಿಯಾಗಿ ತನ್ನ ಪರಮಪ್ರಭೆಯಿಂದ ಬೆಳಗುತ್ತಿದ್ದಾಳೆ.
‘ಸಿದ್ಧಪರ್ವತ’ ಎನ್ನುವುದು ವಾಚಾರ್ಥಲ್ಲಿ ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮ ಪಂಚಾಯತಿಯ ಒಂದು ಬೆಟ್ಟವಾದರೆ ಯೋಗಾರ್ಥದಲ್ಲಿ ಅದು ಏಳನೆಯ ಮತ್ತು ಮಹಾಚಕ್ರವಾದ ಸಹಸ್ರಾರಚಕ್ರವಾಗಿದೆ.ಶಿವನು ಪರಶಿವನಾಗಿ ಸಹಸ್ರಾರ ಚಕ್ರದ ಸಹಸ್ರದಳ ಕಮಲದ ಮಧ್ಯೆ ಪವಡಿಸಿರ್ಪನು.ಸಹಸ್ರಾರಚಕ್ರಭೇದನ ಕ್ರಮವನ್ನರಿತ ಮಹಾಯೋಗಸಿದ್ಧರಿಗೆ ಮಾತ್ರ ಅನುಭವವೇದ್ಯನು ಅಲ್ಲಿರ್ಪ ಸದಾಶಿವನು. ಆ ಸದಾಶಿವನ ಶಕ್ತಿಯಾಗಿ ದೇವಿ ಪಾರ್ವತಿಯು ಅನವರತವೂ ಸಹಸ್ರಾರ ಚಕ್ರವೆಂಬ ಸಿದ್ಧಪರ್ವತವಾಸಿನಿಯಾಗಿರುವಳು.ನಿತ್ಯಳೂ ಶುದ್ಧಳೂ ಬುದ್ಧಳೂ ಆಗಿರುವ ಶಿವಶಕ್ತಿಯು ಸಹಸ್ರಾರದಲ್ಲಿ ನಾಮ,ರೂಪ,ಕ್ರಿಯೆ,ಕಳೆಗಳಿಗೆ ಅತೀತಳಾಗಿ ಪರಾಶಕ್ತಿ ಎನ್ನಿಸಿಕೊಂಡಿದ್ದಾಳೆ.ಸಹಸ್ರಾರದ ಸಿದ್ಧಪರ್ವತದಲ್ಲಿರ್ಪ ಆ ಯೋಗಶಕ್ತಿಯನ್ನು ಭಕ್ತರುಗಳು ತಮ್ಮ ಅಭೀಷ್ಟಪೂರ್ತಿಗಾಗಿ ಪ್ರಾರ್ಥಿಸೆ ಭಕ್ತರಮನೋಭೂಮಿಕೆಗೆ ಅನುಗುಣವಾದ ನಾಮ- ರೂಪಗಳನ್ನು ಹೊತ್ತು ಆಕೆಯು ಅವತರಿಸುತ್ತಾಳೆ.ಸಿದ್ಧಪರ್ವತದಲ್ಲಿ ಪಾರ್ವತಿ ದೇವಿಯು ಚಿದಾನಂದಾವಧೂತರಿಗೆ ಬಗಳಾಮುಖಿ ದೇವಿಯ ರೂಪದಲ್ಲಿ ದರ್ಶನ ನೀಡಿದ್ದಾಳೆ.ಬಗಳಾಮುಖಿಯು ದುರ್ಗಾದೇವಿಯಂತೆಯೇ ಉಗ್ರಳಾದ ನಿಗ್ರಹಕಾರಕ ದೇವಿಯು.ಬಹುಶಃ ಚಿದಾನಂದಾವಧೂತರಿಗೆ ದುಷ್ಟಜನರು ಕಾಟ ಕೊಟ್ಟಿರಬೇಕು.ಎಲ್ಲ ಕಾಲದಲ್ಲಿಯೂ ಹೀಗೆಯೇ.ಯೋಗಿಗಳು,ಸಿದ್ಧರು,ತಪಸ್ವಿಗಳು ಆದವರನ್ನು ಲೋಕದ ಮರುಳ ಜನರು ನಿಂದಿಸುವುದುಂಟು,ತೊಂದರೆ ಕೊಡುವುದುಂಟು.ಹಂದಿಯಂತಹ ನಿಂದಕರುಗಳಿಂದಲೇ ಸಾಧು ಸತ್ಪುರುಷರು ಬೆಳಕಿಗೆ ಬರುತ್ತಾರೆ.ಪರಮಾತ್ಮನು ತನ್ನ ವಿಭೂತಿ ಪುರುಷರ ಮೂಲಕ ದುಷ್ಟಜನರನ್ನು ನಿಗ್ರಹಿಸುತ್ತಾನೆ.ಚಿದಾನಂದಾವಧೂತರಿಗಾಗಿ ದೇವಿಯು ಬಗಳಾಮುಖಿಯ ರೂಪದಲ್ಲಿ ಪ್ರಕಟಗೊಂಡು ದುಷ್ಟರನ್ನು ನಿಗ್ರಹಿಸಿದ್ದಾಳೆ ಎಂದು ಭಾವಿಸಬಹುದು.

ದೇವಿಯು ಪ್ರಪಂಚದಲ್ಲಿ ‘ದಶಮಹಾವಿದ್ಯೆ’ ಅಂದರೆ ಹತ್ತು ಮಹಾಶಕ್ತಿಯರ ರೂಪದಲ್ಲಿ ಪ್ರಕಟಗೊಂಡಿದ್ದಾಳೆ.ಆ ದಶಮಹಾವಿದ್ಯಾದೇವಿಯರಲ್ಲಿ ಬಗಳಾಮುಖಿಯೂ ಒಬ್ಬಳು.ಬಗಳಾಮುಖಿಯು ಶತ್ರುಸ್ತಂಭನ ಮಾಡುವ ದೇವಿಯು.ಬಗಳಾ ಎಂದರೆ ‘ಹಗ್ಗ’ ಎಂದು ಅರ್ಥವಾಗುತ್ತಿದ್ದು ಅವಳು ತನ್ನ ಭಕ್ತರ ಪೀಡಕಶತ್ರುಗಳ ಬುದ್ಧಿ ಬಾಹುಗಳನ್ನು ಸ್ತಂಭಿಸುವ ದೇವಿಯಾದ್ದರಿಂದ ಹಗ್ಗದಿಂದ ಪಶುಗಳನ್ನು ಕಟ್ಟಿದಂತೆ ತನ್ನ ಭಕ್ತರ ಪೀಡಕ ಜನರ ಬುದ್ಧಿ ಭಾವನೆಗಳನ್ನು ಸ್ತಂಭಿಸಿ,ಭಕ್ತರುಗಳನ್ನು ರಕ್ಷಿಸುವುದರಿಂದ ಬಗಳಾಮುಖಿಯಾಗಿದ್ದಾಳೆ.ರಾಜ ಮಹಾರಾಜರುಗಳು ಹಿಂದೆ ದೇವಿ ದುರ್ಗೆಯನ್ನು ಬಗಳಾಮುಖಿಯ ರೂಪದಲ್ಲಿ ಆರಾಧಿಸುತ್ತಿದ್ದರು.ಯೋಗಿಗಳು ಕೂಡ ನಿಗ್ರಹಾನುಗ್ರಹಶಕ್ತಿ ಸಂಪಾದನೆಗಾಗಿ ಬಗಳಾಮುಖಿ ದೇವಿಯ ಉಪಾಸನೆ ಮಾಡುತ್ತಾರೆ.

‌( ಮುಂದುವರೆಯುತ್ತದೆ)

About The Author