ಶಿಷ್ಯ ಡಾ.ಶರಣಪ್ಪ ಗಬ್ಬೂರ  ಅವರ ಅನನ್ಯ ಗುರುನಿಷ್ಠೆ ಯು ಕವನವಾಗಿ ಅರಳಿದ ಬೆಡಗು ‘ ಎನ್ನ ಗುರು’ ಕವನ.

 ಶಿಷ್ಯ ಡಾ.ಶರಣಪ್ಪ ಗಬ್ಬೂರ  ಅವರ ಅನನ್ಯ ಗುರುನಿಷ್ಠೆ ಯು ಕವನವಾಗಿ ಅರಳಿದ ಬೆಡಗು ‘ ಎನ್ನ ಗುರು’ ಕವನ
  ಮುಕ್ಕಣ್ಣ ಕರಿಗಾರ
        ಈ ಸಂಜೆ 7.30 ರ ಸುಮಾರು ಸ್ವಿಚ್ ಆಫ್ ಮಾಡಿದ್ದ ಮೊಬೈಲ್ ಅನ್ನು ಆನ್ ಮಾಡಿದಾಗ ಕೋಲಾರದಿಂದ ಶಿಷ್ಯ ಡಾ.ಶರಣಪ್ಪ ಗಬ್ಬೂರು  ಒಂದು ಕವನ ಕಳಿಸಿದ್ದು ಕಣ್ಣಿಗೆ ಬಿತ್ತು.”2003-04 ರಲ್ಲಿ ಬರೆದದ್ದು ಸರ್,ತಮ್ಮ ಬಗ್ಗೆ ನೆನಪಾಯಿತು…ಕಳಿಸಿದೆ” ಎನ್ನುವ ಅಡಿಟಿಪ್ಪಣಿಯನ್ನು ನೋಡಿದ ಬಳಿಕ ಕವನದ ಮೇಲೆ ಕಣ್ಣಾಡಿಸಿದೆ.” ಎನ್ನ ಗುರು” ಎನ್ನುವ ನನ್ನ ಕುರಿತ ಕವನವದು,ಇಪ್ಪತ್ತುವರ್ಷಗಳ ಹಿಂದಿನ ಕವನವಾದರೂ ಈಗ ಬರೆದಷ್ಟೇ ಭಾವನವನವೀನ.ಶರಣಪ್ಪನವರ ಗುರುನಿಷ್ಠೆ ಅಕ್ಷರರೂಪದಲ್ಲಿ ಮೈತಳೆದ ಅಪರೂಪದ ನನ್ನ ವ್ಯಕ್ತಿಚಿತ್ರಣ.ಡಾ.ಶರಣಪ್ಪನವರು ನನ್ನ ಬಗ್ಗೆ ಸಾಕಷ್ಟು ಕವನಗಳನ್ನು ಬರೆದಿದ್ದಾರೆ.ಇಂದು ದಕ್ಷಿಣ ಕರ್ನಾಟಕದ ಹೆಸರಾಂತ ಕವಿ,ಸಾಹಿತಿ ಎಂದು ಹೆಸರು ಮಾಡಿರುವ ಡಾ.ಶರಣಪ್ಪ ಗಬ್ಬೂರು ಕೋಲಾರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
         ಮುವ್ವತ್ತು ವರ್ಷಗಳಿಗೂ ಹಿಂದಿನ ಅವಧಿ.ನಾನು ನಮ್ಮೂರು ಗಬ್ಬೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗೌರವ ಶಿಕ್ಷಕನಾಗಿ ಹೈಸ್ಕೂಲು ವಿದ್ಯಾರ್ಥಿಗಳಿಗೆ ಇಂಗ್ಲಿಷನ್ನು,ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡವನ್ನು ಬೋಧಿಸುತ್ತಿದ್ದೆ.ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ನಾನು ಸಾವಿರಾರು ಜನ ಶಿಷ್ಯರ ಪಡೆಯನ್ನು ಸಂಪಾದಿಸಿದ್ದೆ.ಇಂದಿಗೂ ನನ್ನ ಹಳೆಯ ಶಿಷ್ಯಂದಿರುಗಳೆಲ್ಲ ನನ್ನನ್ನು ‘ ನಮ್ಮ ಸರ್’ ಎಂದೇ ಸ್ಮರಿಸುತ್ತಾರೆ,ನನ್ನ ಬಳಿ ಬಂದಾಗ ಅದೇ ಗುರುಭಾವದಿಂದ ಕಂಡು,ಸಂಭ್ರಮಿಸುತ್ತಾರೆ.ಹಳೆಯ ಶಿಷ್ಯರನ್ನು ಕಂಡಾಗ  ನನ್ನ ಸ್ಮೃತಿಪಟಲದಿಂದ ಪುಟಿದೇಳುತ್ತವೆ ಶಿಕ್ಷಕವೃತ್ತಿಯ ಚೈತನ್ಯದಾಯಕ ಮಧುರನೆನಪುಗಳು.ಇಪ್ಪತ್ತೈದು ವರ್ಷಗಳ ಸರಕಾರಿ ಅಧಿಕಾರಿ ಜೀವನದಲ್ಲಿ ಸಂಪಾದಿಸದೆ ಇರುವ ಮುಗ್ದ ಹೃದಯಗಳ ಸೊಗದ ಸುಧೆಯರಸಾನುಭವವನ್ನು ನಾನು ಶಿಕ್ಷಕನಾಗಿದ್ದ ದಿನಗಳಲ್ಲಿ ಅನುಭವಿಸಿದ್ದೆ.ಮುಗ್ಧ ಮಕ್ಕಳುಗಳಿಗೆ ಒಬ್ಬ ಒಳ್ಳೆಯ ಶಿಕ್ಷಕ ಸರ್ವಸ್ವವೂ ಆಗುತ್ತಾನೆ.ತಮ್ಮ ಮೆಚ್ಚಿನ ಮೇಷ್ಟ್ರಿಗಾಗಿ ಮಕ್ಕಳು ಏನೆಲ್ಲವನ್ನು ಮಾಡಲು ಸಿದ್ಧರಾಗಿರುತ್ತಾರೆ.ನಿಷ್ಕಪಟ ಹೃದಯದ ಮಕ್ಕಳುಗಳ ಪ್ರೀತಿ,ಅಭಿಮಾನ,ಗೌರವಗಳ ಮುಂದೆ ಜಗತ್ತಿನ ಯಾವ ಪ್ರಶಸ್ತಿಯೂ ದೊಡ್ಡದಲ್ಲ.ಆದರೆ ಸರಕಾರಿ ಸಂಬಂಧ ಹಾಗಲ್ಲ,ಸರಕಾರಿ ಸಂಬಂಧಗಳು ವ್ಯಾವಹಾರಿಕ ಸಂಬಂಧಗಳು.ಸರಕಾರಿ ಅಧಿಕಾರಿಯಾಗಿ ಒಂದು ಸ್ಥಳದಲ್ಲಿ ಇರುವಷ್ಟು ದಿನವೇ ಅವರ ನಮ್ಮ ಸಂಬಂಧ.ಸರಕಾರಿ ಅಧಿಕಾರಿಗಳಿಂದ ಸ್ವಂತ ಕೆಲಸ ಕಾರ್ಯಗಳಿಗಾಗಿ ‘ ನಮ್ಮ ದೇವರು’ ಹಾಗೆ ಹೀಗೆ ಕೊಂಡಾಡುವ ಜನರು ಆ ಅಧಿಕಾರಿಯು ಬೇರೆ ಊರಿಗೆ ವರ್ಗವಾಗಿ ಹೋದೊಡನೆ ಮರೆತು ಬಿಡುತ್ತಾರೆ ಇಲ್ಲವೆ ತಮಗೆ ಪರಿಚಯವೇ ಇಲ್ಲದವರಂತೆ ವರ್ತಿಸುತ್ತಾರೆ.ಆಧೀನ ನೌಕರರುಗಳಾಗಿದ್ದರೆ ಮೇಲಾಧಿಕಾರಿಗಳಾಗಿದ್ದವರಿಂದ ರಹಸ್ಯಕಾರ್ಯವರದಿಗಳಿಗೆ ಸಹಿ ಮಾಡಿಸಿಕೊಳ್ಳಲು ಅವರು ಇದ್ದಲ್ಲಿಗೆ,ಅವರ ಮನೆಬಾಗಿಲಿಗೆ ಬರುವ ನೌಕರರುಗಳು ಆ ಮೇಲೆ ಆ ಮೇಲಾಧಿಕಾರಿಯನ್ನು ಸ್ಮರಿಸುವುದೇ ಇಲ್ಲ.ಇಪ್ಪತ್ತೈದು ವರ್ಷಗಳ ಅಧಿಕಾರಿ ಜೀವನದಲ್ಲಿ ನಾನು ಬಹಳಷ್ಟು ಜನ ಉಪಕಾರಸ್ಮರಣೆ ಇಲ್ಲದ ಸರಕಾರಿ ನೌಕರರುಗಳನ್ನು,ಅಧಿಕಾರಿಗಳನ್ನು ಕಂಡಿದ್ದೇನೆ.ನನ್ನಿಂದ ಎಲ್ಲ ರೀತಿಯ ನೆರವು,ಸುರಕ್ಷತೆಯನ್ನು ಅನುಭವಿಸಿ ನನ್ನಿಂದಲೇ ‘ ಉನ್ನತಿಯ ಭಾಗ್ಯ’ವನ್ನು ಪಡೆದವರು ನನ್ನನ್ನು ಸ್ಮರಿಸದಷ್ಟು ದೊಡ್ಡವರಾಗಿದ್ದಾರೆ ! ಇಂಥವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.ಸರಕಾರಿ ನೌಕರರು,ಅಧಿಕಾರಿಗಳಾದವರೆಲ್ಲರೂ ಮಾಡಿದ ಉಪಕಾರವನ್ನು ಮರೆಯುವಷ್ಟು ‘ ದೊಡ್ಡವರು’ ಆಗಿರುವುದಿಲ್ಲ.ನಾನು ಕರ್ತವ್ಯ ನಿರ್ವಹಿಸಿದ ಕೊಪ್ಪಳ,ಕಾರವಾರ,ಬಳ್ಳಾರಿ,ಯಾದಗಿರಿ ಜಿಲ್ಲೆಗಳಿಂದ ಈಗಲೂ ಕೆಲವರು ನನ್ನ ಸಂಪರ್ಕದಲ್ಲಿದ್ದಾರೆ,ಅದೇ ಆತ್ಮೀಯ,ಗೌರವಭಾವನೆಯನ್ನು ಹೊಂದಿದ್ದಾರೆ.ಹೃದಯವಂತ ಸರಕಾರಿ ನೌಕರರುಗಳು,ಅಧಿಕಾರಿಗಳನೇಕರು‌ಇದ್ದಾರೆ ಎನ್ನುವುದೇ ಸಮಾಧಾನದ ಸಂಗತಿ.ಶಿಷ್ಯ ಡಾ.ಶರಣಪ್ಪನವರ ಕವನ ಓದಿದಾಗ ನನ್ನ ಹಳೆಯ ವಿದ್ಯಾರ್ಥಿಗಳ ಆರಾಧನಾ ಭಾವದ ಮುಗ್ಧಗುರುಭಕ್ತಿ ಮತ್ತು ಸರಕಾರಿ ನೌಕರರ ವ್ಯಾವಹಾರಿಕ ಪ್ರೀತಿಗಳೆರಡು ನೆನಪಿಗೆ ಬಂದವು.
       ನಮ್ಮೂರ ಕಾಲೇಜಿನಲ್ಲಿ ಪಾಠ ಮಾಡುತ್ತಿರುವ ಅವಧಿಯಲ್ಲಿ ನಾನು ವಿದ್ಯಾರ್ಥಿಗಳ ಬಹುಪ್ರೀತಿಯ ಶಿಕ್ಷಕನಾಗಿದ್ದುದರಿಂದ ನಮ್ಮ ಮನೆಯು ಶಾಲೆಯೇ ಎಂಬಂತೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು.ಬೆಳಿಗ್ಗೆ ಶಾಲೆಗೆ ಹೋಗುವ ಪೂರ್ವದಲ್ಲಿ ಮತ್ತು ಸಂಜೆ ಶಾಲೆ ಬಿಟ್ಟೊಡನೆ ಬಹಳಷ್ಟು ವಿದ್ಯಾರ್ಥಿಗಳು ನಮ್ಮ ಮನೆಗೆ ಬರುತ್ತಿದ್ದರು.ಸುಮಾರು ಜನ ವಿದ್ಯಾರ್ಥಿಗಳು ನಮ್ಮ ಮನೆಯಲ್ಲಿಯೇ ಮಲಗುತ್ತಿದ್ದರು.ನಮ್ಮ ಮನೆಯು ವಿದ್ಯಾರ್ಥಿಗಳಿಗೆ ಅವರದೇ ಮನೆ ಆಗಿತ್ತು.ಸದಾ ನಮ್ಮ ಮನೆಯಲ್ಲಿ ನಮ್ಮೊಂದಿಗೆ ಇರುತ್ತಿದ್ದ ಶಿಷ್ಯರುಗಳಲ್ಲಿ ಶರಣಪ್ಪನವರೂ ಒಬ್ಬರು.ನನ್ನ ತಮ್ಮ ಪ್ರಭು ಕರಿಗಾರ ಮತ್ತು ನನ್ನ ಪ್ರೀತಿಯ ಶಿಷ್ಯರುಗಳಾಗಿದ್ದ ವರದರಾಜ,ಗಂಗಣ್ಣ,ಮಲ್ಲಿಕಾರ್ಜುನ ಮೊದಲಾದವರೊಡನೆ ಶರಣಪ್ಪ ಆತ್ಮೀಯನಾಗಿದ್ದುದರಿಂದ ನನ್ನನ್ನು ಸಮೀಪದಿಂದ ಕಾಣುವ ಅವಕಾಶ ಆತನಿಗೆ ಲಭಿಸಿತ್ತು.ನಾನು ಆ ವೇಳೆಗಾಗಲೇ ಆಧ್ಯಾತ್ಮಿಕ ಸಾಧನೆಯಲ್ಲಿ ಹಲವು ಸಿದ್ಧಿಗಳನ್ನು ಪಡೆದಿದ್ದೆ.ದುರ್ಗಾದೇವಿಯ ಆವೇಶವು ಘಂಟೆಗಟ್ಟಲೆ ಮೈಯಲ್ಲಿರುತ್ತಿತ್ತು.ಆ ಅವಧಿಯಲ್ಲಿಯೇ ನಾನು ಘಂಟೆಗಟ್ಟಲೆ ಪದ್ಮಾಸನದಲ್ಲಿ ಧ್ಯಾನಾಸಕ್ತನಾಗಿರುತ್ತಿದೆ,ಹಲವು ಯೋಗಸಿದ್ಧಿಗಳನ್ನು ಪಡೆದಿದ್ದೆ.ಸದಾ ನಮ್ಮ ಮನೆಯಲ್ಲಿರುತ್ತಿದ್ದ ಶರಣಪ್ಪನವರಿಗೆ ಆಗ ನಾನು ಒಂದು ಒಗಟು.ಶರಣಪ್ಪನವರಿಗೆ ಮಾತ್ರವಲ್ಲ ನನ್ನ ಬಹುತೇಕ ಶಿಷ್ಯರುಗಳಿಗೆ ಮತ್ತು ನೆರೆಹೊರೆಯವರಿಗೆ ನನ್ನ ಯೋಗಸಾಧನೆಯ ಜೀವನ ಒಗಟಾಗಿಯೇ ಇತ್ತು.ಮೈತುಂಬ ವಿಭೂತಿ ಬಳೆದುಕೊಂಡು ಪ್ರದರ್ಶನಕ್ಕಾಗಿ ಪೂಜೆ ಮಾಡುವವರೇ ಭಕ್ತರು ಎಂದು ಭ್ರಮಿಸಿದ್ದ ಜನರಿಗೆ ದುರ್ಗಾದೇವಿಯ ಭಾವಾವೇಶವನ್ನು ಘಂಟೆಗಟ್ಟಲೆ ಮೈಯಲ್ಲಿಟ್ಟುಕೊಂಡು ಲೋಕ ಪರಲೋಕಗಳ ವಿದ್ಯಮಾನಗಳ ಬಗ್ಗೆ ಮಾತನಾಡುತ್ತಿದ್ದ,ಕಾಲಾತೀತ ಅನುಭವಗಳನ್ನು ವರ್ಣಿಸುತ್ತಿದ್ದ ಅಪರೋಕ್ಷಾನುಭೂತಿಯ ಪ್ರಸಂಗಗಳು  ಒಗಟಾಗಿದ್ದರೆ ಅದು ಸಹಜ.ನನ್ನನ್ನು ಅರ್ಥವಾಗದಂತಹ ಒಗಟು ಎನ್ನುವ ಬೆರಗುಗಣ್ಣಿನಿಂದ ನೋಡುತ್ತಿದ್ದ ಶರಣಪ್ಪ ವಿದ್ಯಾರ್ಥಿ ದೆಸೆಯಲ್ಲೇ ನನ್ನ ಯೋಗಜೀವನದ ಕುರಿತು ಹಲವು ಕವನಗಳನ್ನು ಬರೆದಿದ್ದರು.ಅವರು ಕನ್ನಡ ಎಂ ಎ ಪದವಿಧರರಾದ ಬಳಿಕ,ಡಾಕ್ಟರೇಟ್ ಪಡೆದ ಬಳಿಕ ನನ್ನ ಬಗ್ಗೆ ಹಲವು ಕವನಗಳನ್ನು ಬರೆದಿದ್ದಾರೆ.ಆ ಎಲ್ಲ ಕವನಗಳಲ್ಲಿ ಅದೇ ಬೆರಗಿನ ಭಾವ ಅಭಿವ್ಯಕ್ತಗೊಂಡಿದೆ.’ ಎನ್ನ ಗುರು’ ಕವನಕ್ಕಿಂತ ಹಲವು ಉತ್ಕೃಷ್ಟ ಕವನಗಳನ್ನು ನನ್ನ ಬಗ್ಗೆ ಬರೆದಿರುವ ಡಾ. ಶರಣಪ್ಪನವರಿಗೆ ನನ್ನ ಕೃತಿಗಳ ಬಗ್ಗೆ ಪುಸ್ತಕ ಒಂದನ್ನು ಬರೆಯುವ ಹಂಬಲ ಬಹುದಿನಗಳಿಂದಲೂ ಇದೆ.ಇಂದು ಡಾ. ಶರಣಪ್ಪನವರು ಕಳಿಸಿದ ಕವನದಲ್ಲಿ ಅದೇ ಮುಗ್ಧಗುರುಭಕ್ತಿಯು ಪರಿಸ್ಫುಟಗೊಂಡು ಪ್ರಕಟವಾಗಿದ್ದರಿಂದ ಅದನ್ನು ನನ್ನ ವಾಟ್ಸಾಪ್ ಓದುಗ ಮಿತ್ರರುಗಳೊಂದಿಗೆ ಹಂಚಿಕೊಂಡಿದ್ದೇನೆ.

About The Author