ಫಲಿಸುವುದೆ ಮೂವರು ಉಪಮುಖ್ಯಮಂತ್ರಿಗಳ ಪ್ರಸ್ತಾವನೆಯ ರಾಜಕೀಯ ಲೆಕ್ಕಾಚಾರ? : ಮುಕ್ಕಣ್ಣ ಕರಿಗಾರ

ಮೂರನೇ ಕಣ್ಣು 

ಕರ್ನಾಟಕದಲ್ಲೀಗ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.ಅದಕ್ಕೆಂದೇ ಈಗ ಇರುವ ಒಬ್ಬ ಉಪಮುಖ್ಯಮಂತ್ರಿಯ ಜೊತೆಗೆ ಇನ್ನೂ ಮೂವರು ಉಪಮುಖ್ಯಮಂತ್ರಿಗಳು ಬೇಕು ಎನ್ನುವ ವಾದವನ್ನು ಮುಂದಿಡಲಾಗಿದೆ.ಲೋಕಸಭಾ ಚುನಾವಣೆಯ ಕಾರಣವೊಡ್ಡಿ ಜಾತಿವಾರು ಮೂರು ಉಪಮುಖ್ಯಮಂತ್ರಿಹುದ್ದೆಗಳನ್ನು ಸೃಷ್ಟಿಸುವ ಚಿಂತನೆ ನಡೆದಿದೆ.ಹೆಚ್ಚುವರಿ ಮೂವರು ಉಪಮುಖ್ಯಮಂತ್ರಿಗಳು ಬೇಕು ಎನ್ನುವ ವಾದದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಕಟ್ಟಿಹಾಕುವ ರಾಜಕೀಯ ತಂತ್ರಗಾರಿಕೆ ಇದೆಯೇ ಹೊರತು ಇದರ ಹಿಂದೆ ನಾಡಿನ ಹಿತದ ಚಿಂತನೆಯೇನೂ ಇಲ್ಲ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಡಿತಕ್ಕೆ ಸಿಕ್ಕದಷ್ಟು ವೇಗವಾಗಿ ಓಡುತ್ತಿರುವುದರಿಂದ ಅವರನ್ನು ಹಣಿಯಲು ಮೂವರು ಉಪಮುಖ್ಯಮಂತ್ರಿಗಳ ಪ್ರಸ್ತಾವನೆ ಹರಿಯಬಿಡಲಾಗಿದೆ.ಆದರೆ ಉಪಮುಖ್ಯಮಂತ್ರಿಗಳ ಸಂಖ್ಯೆ ಹೆಚ್ಚಾದರೆ ಆಡಳಿತಯಂತ್ರ ಚುರುಕಾಗುವುದೆ? ಜನಹಿತದ ಕೆಲಸ ಕಾರ್ಯಗಳು ತ್ವರಿತವಾಗಿ ನಡೆಯುತ್ತವೆ? ಇಂತಹ ಯಾವ ‘ ಗ್ಯಾರಂಟಿ’ ಯೂ ಇಲ್ಲ.

ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿಯೇ ನಾನು ಬರೆದಿದ್ದ ‘ ಸಿದ್ದರಾಮಯ್ಯನವರ ಮುಂದಿರುವ ಸವಾಲುಗಳು’ ಎನ್ನುವ ಲೇಖನದಲ್ಲಿ ಈ ಬಗ್ಗೆ ಸುಳಿವು ನೀಡಿದ್ದೆ. ( ‘ಸಿದ್ರಾಮಯ್ಯನವರ ಸಮರ್ಥನೆ’ ಎನ್ನುವ ನನ್ನ ಪುಸ್ತಕದಲ್ಲಿ ಆ ಲೇಖನ ಪ್ರಕಟಗೊಂಡಿದೆ) ಆ ಲೇಖನದ ಒಂದು ಪರಿಚ್ಛೇದ ” ಸಿದ್ರಾಮಯ್ಯನವರ ಮುಂದಿರುವ ಸವಾಲುಗಳಲ್ಲಿ ಮೊದಲನೆಯದೇ ಡಿ.ಕೆ.ಶಿವಕುಮಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದು.ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರೂ ಡಿ.ಕೆ.ಶಿವಕುಮಾರ ಅವರು ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷಸ್ಥಾನವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.ಸಮಯ – ಸಂದರ್ಭಗಳು ಬಂದಾಗ ಆ ಹುದ್ದೆಯ ಬಲದಿಂದ ಸಿದ್ರಾಮಯ್ಯನವರನ್ನು ಮಣಿಸುವುದು ಮತ್ತು ಕಾಂಗ್ರೆಸ್ ಪಕ್ಷದ ಶಾಸಕರುಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ಡಿ.ಕೆ.ಶಿವಕುಮಾರ ಅವರ ಲೆಕ್ಕಾಚಾರ.ವಿಧಾನಸೌಧದಲ್ಲಿ ಎರಡು ‘ ಶಕ್ತಿಕೇಂದ್ರ’ ಗಳು ಉಂಟಾಗದಂತೆ ಎಚ್ಚರಿಕೆಯಿಂದ ಇದ್ದು ತಮ್ಮ ಸಾಮರ್ಥ್ಯವನ್ನು ನಿರೂಪಿಸಬೇಕಿದೆ ಸಿದ್ರಾಮಯ್ಯನವರು”.ನಾನು 20.05.2023 ರಂದು ಬರೆದಿದ್ದ ಈ ಲೇಖನದಲ್ಲಿ ಹೇಳಿದ್ದೇ ಇಂದು ನಡೆಯುತ್ತಿದೆ.ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಎರಡು ಶಕ್ತಿಕೇಂದ್ರಗಳಿರಬಾರದು ,ತಾವೇ ಪ್ರಶ್ನಾತೀತ ನಾಯಕರು ಎನ್ನುವುದನ್ನು ಸಾಧಿಸಿ,ತೋರಿಸಲು ಈಗ ಮತ್ತೆ ಇತರ ಮೂವರು ಉಪಮುಖ್ಯಮಂತ್ರಿಗಳ ಪ್ರಸ್ತಾಪವನ್ನು ಹರಿಯಬಿಟ್ಟಿದ್ದಾರೆ.ಆದರೆ ಇದು ಅವರು ಅಂದುಕೊಂಡಷ್ಟು ಸುಲಭದ ಮಾತಲ್ಲ.ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರಿಗಿಂತ ಡಿ.ಕೆ.ಶಿವಕುಮಾರ ಅವರತ್ತ ಹೆಚ್ಚಿನ ಒಲವು ಹೊಂದಿದೆ.ಕಾಂಗ್ರೆಸ್ ಹೈಕಮಾಂಡಿನಲ್ಲಿ ರಾಹುಲ್ ಗಾಂಧಿಯವರನ್ನು ಬಿಟ್ಟರೆ ಸಿದ್ದರಾಮಯ್ಯನವರ ಪರವಾಗಿ ಯಾರೂ ಇಲ್ಲ.ಸಿದ್ದರಾಮಯ್ಯನವರ ಪ್ರಸ್ತಾವನೆಗಳಿಗೆಲ್ಲ ಹೈಕಮಾಂಡ್ ಕೊಕ್ಕೆ ಹಾಕುತ್ತಿದೆ.ಸಾಧ್ಯವಾದಷ್ಟೂ ಸಿದ್ದರಾಮಯ್ಯನವರನ್ನು ‘ ಹಣಿದು ಮಣಿಸಿ ಹಣ್ಣುಗಾಯಿ ನೀರುಗಾಯಿ’ ಮಾಡಬೇಕೆಂಬುದೇ ಹೈಕಮಾಂಡಿನ‌ ಲೆಕ್ಕಾಚಾರ.ಹಾಗಾಗಿ ಸಿದ್ದರಾಮಯ್ಯನವರು ಯಾವ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳದಂತೆ ಕಣ್ಣಿಟ್ಟು ಕಾಯುತ್ತಿದೆ ಕಾಂಗ್ರೆಸ್ ಹೈಕಮಾಂಡ್.ಹೈಕಮಾಂಡಿನ ಕೃಪಾಕಟಾಕ್ಷ ಇದ್ದುದರಿಂದಲೇ ಡಿ.ಕೆ.ಶಿವಕುಮಾರ ಲಂಗುಲಗಾಮು ಇಲ್ಲದಂತೆ ಹಾರಾಡುತ್ತಿದ್ದಾರೆ.ಬಿ.ಕೆ.ಹರಿಪ್ರಸಾದ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಎನ್ನುವುದನ್ನು ಲೆಕ್ಕಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು ಸಿದ್ದರಾಮಯ್ಯನವರನ್ನು ಅಂಕಿತದಲ್ಲಿಟ್ಟುಕೊಳ್ಳಬೇಕು ಎನ್ನುವ ಹೈಕಮಾಂಡಿನ ಲೆಕ್ಕಾಚಾರದ ಫಲಶೃತಿ.ಬಿ.ಕೆ.ಹರಿಪ್ರಸಾದ ಅವರನ್ನು ಟೀಕಿಸಲಾಗದಷ್ಟು ದುರ್ಬಲರಾಗಿದ್ದಾರೆ ಸಿದ್ದರಾಮಯ್ಯ ಎನ್ನುವುದು ಅವರ ಇಂದಿನ ವಾಸ್ತವ.ಅವರ ಸಂಪುಟದ ಸಹೋದ್ಯೋಗಿಗಳಲ್ಲಿಯೇ ಕೆಲವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಬೆಂಬಲಕ್ಕೆ ಇದ್ದಾರೆ.ಎಂ ಬಿ ಪಾಟೀಲ್,ಸತೀಶ ಜಾರಕಿಹೊಳಿ,ಕೆ.ಎನ್ ರಾಜಣ್ಣ,ಡಾ. ಎಚ್ ಸಿ ಮಹಾದೇವಪ್ಪ ಅವರುಗಳಂತಹ ಕೆಲವೇ ಜನ ಸಚಿವರುಗಳು ಸಿದ್ದರಾಮಯ್ಯನವರಲ್ಲಿ ‘ ಪ್ರಶ್ನಾತೀತ ನಿಷ್ಠೆ’ ಯನ್ನು ಹೊಂದಿದ್ದಾರೆ.ಸಚಿವರಲ್ಲಿ ಕೆಲವರು ಬಹಿರಂಗವಾಗಿ ಡಿ.ಕೆ.ಶಿವಕುಮಾರ ಅವರ ಜೊತೆ ಗುರುತಿಸಿಕೊಂಡಿದ್ದರೆ ಇನ್ನೂ ಕೆಲವರು ರಹಸ್ಯವಾಗಿ ಅವರನ್ನು ಬೆಂಬಲಿಸುತ್ತಿದ್ದಾರೆ.ಎಚ್ .ಕೆ ಪಾಟೀಲ್ ಅವರಂಥ ಕೆಲವರು ಯಾವ ಬಣದೊಂದಿಗೂ ಗುರುತಿಸಿಕೊಳ್ಳದೆ ಹೈಕಮಾಂಡ್ ನಿಷ್ಠೆಯ ತಾಟಸ್ಥ್ಯನಿಲುವು ಹೊಂದಿದ್ದಾರೆ.ಇತರ ಪಕ್ಷದವರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವುದರಲ್ಲಿ ಬ್ಯುಸಿಯಾಗಿರುವ ಡಿ.ಕೆ.ಶಿವಕುಮಾರ ತಮ್ಮ ಪಕ್ಷದ ಆಂತರಿಕ ವಿದ್ಯಮಾನಗಳನ್ನು ಸರಿಯಾಗಿ ಗಮನಿಸುತ್ತಿಲ್ಲ.ಸಿದ್ದರಾಮಯ್ಯನವರ ಬಣ ಸಮಯ ಸಂದರ್ಭ ಸಿಕ್ಕಾಗಲೆಲ್ಲ ತಮ್ಮ ರಾಜಕೀಯ ಜಾಣ್ಮೆ ಪ್ರದರ್ಶಿಸುತ್ತಿದೆ.

ಮೂವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಲಾಗದು. ಇದು ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಗೃಹಸಚಿವ ಡಾ.ಜಿ.ಪರಮೇಶ್ವರ ಅವರಂಥವರು ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆಗೆ ನೀಡುತ್ತಿರುವ ಸಮರ್ಥನೆಯೇ ಹೊರತು,ಉಪಮುಖ್ಯಮಂತ್ರಿಗಳ ಸಂಖ್ಯೆ ಹೆಚ್ಚಾದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನೇ ಕಸರತ್ತು ಮಾಡಿದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎಂಟು ಸ್ಥಾನಗಳನ್ನು ಗೆಲ್ಲುವುದು ಕಷ್ಟ.ಲೋಕಸಭಾ ಚುನಾವಣೆಯ ಹೊತ್ತಿಗಾಗಲೇ ಸಿದ್ದರಾಮಯ್ಯನವರ ಸಮರ್ಥನಾಯಕತ್ವದ ವ್ಯಕ್ತಿತ್ವವು ತುಕ್ಕುಹಿಡಿದಿರುತ್ತದೆ.ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಅವರ ಪ್ರಭಾವವು ಲೋಕಸಭಾ ಚುನಾವಣೆಯ ಹೊತ್ತಿಗೆ ಕಂದಿರುತ್ತದೆ.ಲೋಕಸಭಾ ಚುನಾವಣೆಯ ಪೂರ್ವದಲ್ಲಿಯೇ ಅಧಿಕಾರ ತ್ಯಾಗ ಮಾಡುವ ಪರಿಸ್ಥಿತಿಯು ಸಿದ್ದರಾಮಯ್ಯನವರಿಗೆ ಬಂದೊದಗಬಹುದು; ಅದಾಗದಿದ್ದರೆ ಲೋಕಸಭಾ ಚುನಾವಣೆಯ ನಂತರ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಸಾಧ್ಯವೇ ಇಲ್ಲ.ಸಿದ್ದರಾಮಯ್ಯನವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎನ್ನುವ ಅವರ ಅಭಿಮಾನಿಗಳ ಮಾತು ಹಗಲುಕನಸೇ ಹೊರತು ವಾಸ್ತವವಲ್ಲ.ಪಕ್ಷದ ಹೈಕಮಾಂಡ್ ಮಾತ್ರವಲ್ಲ ದೈವ ಮತ್ತು ಪ್ರಕೃತಿಯೂ ಸಿದ್ದರಾಮಯ್ಯನವರಿಗೆ ಪ್ರತಿಕೂಲವಾಗಿ ಪರಿಣಮಿಸಿ ‘ ಯಾವಾಗ ಅಧಿಕಾರ ಬಿಟ್ಟೇನಪ್ಪಾ’ ಎನ್ನುವ ಅಸಹಾಯತೆಯ ಸ್ಥಿತಿಗೆ ತಲುಪಲಿದ್ದಾರೆ.

ಇದರ ಜೊತೆಗೆ ಹಲವು ಗಂಭೀರ ಪ್ರಕರಣಗಳು ಸಿದ್ದರಾಮಯ್ಯನವರ ಕೊರಳಿಗೆ ಸುತ್ತಿಕೊಳ್ಳಲಿವೆ.ಸಿದ್ದರಾಮಯ್ಯನವರ ಕನಸಿನ ಯೋಜನೆಗಳೇ ಅವರಿಗೆ ಮುಳುವಾಗುತ್ತವೆ. ರಾಜ್ಯದ ಆರ್ಥಿಕಸ್ಥಿತಿ ಬಿಗಡಾಯಿಸಲಿದೆ.ನೆರೆ ರಾಜ್ಯಗಳಿಂದ ಇನ್ನೂ ದೊಡ್ಡಮಟ್ಟದ ತಂಟೆ ತಕರಾರೂಗಳು ಉಂಟಾಗಲಿವೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಬ್ಬರು ಸಿದ್ದರಾಮಯ್ಯನವರನ್ನು ಸಂಕಷ್ಟಕ್ಕೆ ಸಿಲುಕಿಸಲಿದ್ದಾರೆ.ರಾಜಕೀಯ ನೇಪಥ್ಯಕ್ಕೆ ಸರಿಯುವ ಅನಿವಾರ್ಯತೆಯು ಬಂದೊದಗಲಿದೆ ಸಿದ್ದರಾಮಯ್ಯನವರಿಗೆ.ತಮ್ಮ ಮಗ ಡಾ.ಯತೀಂದ್ರನಿಗಾದರೂ ಒಂದಿಷ್ಟು ಅವಕಾಶ ಸಿಕ್ಕರೆ ಸಾಕು ಅದೇ ಧನ್ಯತೆ,ಸಂತೃಪ್ತಿ ಎನ್ನುವ ಅಸಹಾಯತೆಗೆ ಸಿಲುಕಲಿದ್ದಾರೆ ಸಿದ್ದರಾಮಯ್ಯನವರು.ಇದೆಲ್ಲವೂ ಯಾವುದೋ ಪುರಾಣದ ಕಥೆಯಲ್ಲ,ಹೊಟ್ಟೆಪಾಡಿಗಾಗಿ ಘಂಟೆಗೊಂದು ಘಳಿಗೆಗೊಂದು ಗಳಹುವ ಸ್ವಾಮೀಜಿಯೊಬ್ಬರ ಅವಾಸ್ತವಿಕ ಭವಿಷ್ಯವಾಣಿಯೂ ಅಲ್ಲ; ಸ್ವಂತ ಸಿದ್ದರಾಮಯ್ಯನವರ ನಡೆ ನುಡಿಗಳಿಂದಲೇ ಸಿದ್ಧವಾಗುತ್ತಿರುವ ಅವರ ಅಸಹಾಯಕ ವ್ಯಕ್ತಿತ್ವದ ಭವಿಷ್ಯದ ಸ್ಷಷ್ಟ ಚಿತ್ರಣ.

About The Author