ಡಾ.ಹೊಸಮನಿಯವರ ಸಂವಿಧಾನ ಪ್ರೀತಿ, ‘ಸಂವಿಧಾನದ ಪೀಠಿಕೆ’ ಯ ಪ್ರತಿಗಳ ಖರೀದಿ

ಡಾ.ಹೊಸಮನಿಯವರ ಸಂವಿಧಾನ ಪ್ರೀತಿ, ‘ಸಂವಿಧಾನದ ಪೀಠಿಕೆ’ ಯ ಪ್ರತಿಗಳ ಖರೀದಿ

ಮುಕ್ಕಣ್ಣ ಕರಿಗಾರ

ಇಂದು ಸಂಜೆ 4.30 ರ ಸುಮಾರು. ಮನೆಯಲ್ಲಿ ಓದುತ್ತ ಕುಳಿತಿದ್ದೆ.ಬೆಂಗಳೂರಿನಿಂದ ‌‌‌ ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಹೊಸಮನಿಯವರ ಅನಿರೀಕ್ಷಿತ ಫೋನ್ ಕರೆ ಬಂದಿತು. ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಹೊಸಮನಿಯವರು ನನ್ನ ಆತ್ಮೀಯ ಅಧಿಕಾರಿ ಮಿತ್ರರಲ್ಲೊಬ್ಬರು. ಆಗಾಗ ಫೋನ್ ಮಾಡುತ್ತಿರುತ್ತಾರಾದರೂ ಇಂದು ಏಕೆ ಫೋನ್ ಮಾಡಿರಬಹುದು ಎನ್ನುವ ಕುತೂಹಲವಿತ್ತು. ನನ್ನ ಹೊಸ ಪುಸ್ತಕಗಳ ಬಗ್ಗೆ ಆಗಾಗ್ಗೆ ವಿಚಾರಿಸುತ್ತಿರುತ್ತಾರೆ ,’ ಸರ್ ಇಂತಹ ಪುಸ್ತಕ ಬರೆದರೆ ಚೆನ್ನಾಗಿ ಇರುತ್ತದೆ’ ಎಂದು ಸಲಹೆಯನ್ನು ನೀಡುತ್ತಿರುತ್ತಾರೆ.ನನ್ನ ಪುಸ್ತಕವನ್ನು ಓದಿ,ಖುಷಿಪಡುವುದಲ್ಲದೆ ಇತರರೆದುರು ನನ್ನ ಪುಸ್ತಕಗಳ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿ ನನ್ನ ಸಾಹಿತ್ಯದ ಓದಿಗೆ ಓದುಗ ಮಿತ್ರರನ್ನು ಒದಗಿಸಿ ಕೊಡುತ್ತಾರೆ.ನಾನು ಪುಸ್ತಕವನ್ನು ಮುದ್ರಿಸುತ್ತಿದ್ದೇನೆ ಎನ್ನುವ ಸಂಗತಿ ಗೊತ್ತಾದೊಡನೆ ಅವರ ಆಧೀನದ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಆ ಪುಸ್ತಕದ ನೊಂದಣಿ ಮಾಡಿಸುವುದರಿಂದ ಹಿಡಿದು ಗ್ರಂಥಾಲಯ ಇಲಾಖೆಯಿಂದ ಅವುಗಳ ಖರೀದಿಯವರೆಗೆ ಆಸಕ್ತಿವಹಿಸುವ ಅಪರೂಪದ ಅಧಿಕಾರಿ ಮಿತ್ರರು,ಹೃದಯ ಸಂಪನ್ನರು.ಈ ಹಿಂದೆ ನಾನು ಬಳ್ಳಾರಿ ಜಿಲ್ಲೆಯಲ್ಲಿದ್ದಾಗ ಬರೆದು ಪ್ರಕಟಿಸಿದ್ದ ” ಆನೆಗುಂದಿಯೇ ಆಂಜನೇಯನ ಜನ್ಮಸ್ಥಳ” ಎನ್ನುವ ಪುಸ್ತಕವು ವ್ಯಾಪಕ ಪ್ರಚಾರಗೊಳ್ಳಲು ಕಾರಣೀಭೂತರಾಗಿದ್ದರು ಡಾ.ಹೊಸಮನಿಯವರು.ನನ್ನ ಸಾಹಿತ್ಯವನ್ನು ತುಂಬ ಮೆಚ್ಚಿ ಪ್ರೋತ್ಸಾಹಿಸುವ ಅವರ ಬಗ್ಗೆ ನನ್ನಲ್ಲಿ ಆದರಾಭಿಮಾನಗಳುಂಟು.ಉಭಯಕುಶಲೋಪರಿಯಾದ ಬಳಿಕ ನನ್ನ ‘ ಸಂವಿಧಾನದ ಪೀಠಿಕೆ’ ಪುಸ್ತಕವು ಗಾತ್ರದಲ್ಲಿ ಕಿರಿದಾದರೂ ಸಂವಿಧಾನದ ಪೀಠಿಕೆಯ ಮಹತ್ವವನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಪುಸ್ತಕ ಎಂದು ಪ್ರಶಂಸಿಸಿ,ಅಭಿನಂದಿಸಿದ ಡಾ.ಹೊಸಮನಿಯವರು ತಾವು ಬರುವ ರವಿವಾರ ನಡೆಯಲಿರುವ ಒಂದು ಸಮಾರಂಭದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಆ ಪುಸ್ತಕದ ಪ್ರತಿಗಳನ್ನು ಕೊಡಲಿಚ್ಛಿಸಿರುವುದಾಗಿ ಪುಸ್ತಕದ ನಾಲ್ಕುನೂರು ಪ್ರತಿಗಳು ಸಿಕ್ಕಬಹುದೆ ಎಂದು ವಿಚಾರಿಸಿದರಲ್ಲದೆ ಸ್ವತಃ ತಾವೇ ಆ ಪುಸ್ತಕವನ್ನು ಖರೀದಿಸಿ ಗಣ್ಯರಿಗೆ ಉಡುಗೊರೆಯಾಗಿ ಕೊಡುತ್ತಿರುವುದಾಗಿ ತಿಳಿಸಿದರು.

ನಾನು ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕನಾಗಿರುವ ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆಯು ಪ್ರಕಟಿಸಿರುವ ‘ ಸಂವಿಧಾನದ ಪೀಠಿಕೆ’ ಪುಸ್ತಕಕ್ಕೆ ಈಗ ಬಹಳ ಬೇಡಿಕೆ ಬರುತ್ತಿದೆ.ಮೊನ್ನೆಯಷ್ಟೇ ಬೆಂಗಳೂರಿನ ಸಮಾಜಕಲ್ಯಾಣ ಮತ್ತು ಶಿಕ್ಷಣ ಇಲಾಖೆಗಳಿಂದ ಆ ಪುಸ್ತಕಗಳ ಸಹಸ್ರ ಸಹಸ್ರ ಪುಸ್ತಕಗಳನ್ನು ಪೂರೈಸುವಂತೆ ಕರೆ ಬಂದಿತ್ತು.ಇಂದು ಸ್ನೇಹಿತ ಡಾ.ಹೊಸಮನಿಯವರಿಂದ ಪುಸ್ತಕಗಳಿಗೆ ಬೇಡಿಕೆ.ಆ ಪುಸ್ತಕವನ್ನು ಬಹಳಷ್ಟು ಜನ ಮೆಚ್ಚಿಕೊಂಡಿದ್ದಾರೆ.ರಾಜ್ಯ ಸರಕಾರವು ಸೆಪ್ಟೆಂಬರ್ ಹದಿನೈದರಿಂದ ಶಾಲೆಗಳಲ್ಲಿ ಸಂವಿಧಾನದ ಓದುವಿಕೆಯನ್ನು ಕಡ್ಡಾಯಗೊಳಿಸಿದ್ದರಿಂದ ‘ ಸಂವಿಧಾನದ ಪೀಠಿಕೆ’ ಪುಸ್ತಕಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ.’ಸಂವಿಧಾನದ ಪೀಠಿಕೆಯು ಎಲ್ಲರ ಕೈಯಲ್ಲಿರುವಂತಾಗಲಿ ಎನ್ನುವ ಸದಾಶಯದಿಂದ ನಾನು ಕೂಡ ಲಾಭವನ್ನು ನಿರೀಕ್ಷಿಸದೆ ₹35 ರೂಪಾಯಿಗಳ ಕೈಗೆಟುಕುವ ದರದಲ್ಲಿ ಪುಸ್ತಕವನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಿದ್ದೇನೆ.ಕಳೆದ ಮೂರು ವರ್ಷಗಳಿಂದ ನನ್ನ ಪುಸ್ತಕಗಳನ್ನು ಆಕರ್ಷಕವಾಗಿ ಮುದ್ರಿಸುತ್ತಿರುವ ಬೆಂಗಳೂರಿನ ಯಂತ್ರೋದ್ಧಾರಕ ಪ್ರಿಂಟಿಂಗ್ ಪ್ರೆಸ್ ನ ಮಾಲೀಕರಾದ ಅನಿಲಕುಮಾರ ಅವರು ಈ ಪುಸ್ತಕವನ್ನು ಅತ್ಯಾಕರ್ಷಕವಾಗಿ ಮುದ್ರಿಸಿದ್ದಾರೆ.ಡಾ.ಹೊಸಮನಿಯವರ ಪುಸ್ತಕಬೇಡಿಕೆಯ ಕುರಿತು ಅನಿಲಕುಮಾರ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದೆ,ಅವರು ಪುಸ್ತಕಗಳನ್ನು ಪೂರೈಸಲು ಒಪ್ಪಿದರು.ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ‘ ಮಹಾಶೈವ ಪ್ರಕಾಶನ’ ದ ಮಂಜುನಾಥ ಮತ್ತು ವೆಂಕಟೇಶ ಇಬ್ಬರೂ ಪುಸ್ತಕದ ನಾಲ್ಕು ನೂರು ಪ್ರತಿಗಳನ್ನು ವಿಶ್ವೇಶ್ವರಗೋಪುರದ ಐದನೇ ಮಹಡಿಯಲ್ಲಿರುವ ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಹೊಸಮನಿಯವರ ಕಛೇರಿಗೆ ಪುಸ್ತಕಗಳನ್ನು ತಲುಪಿಸಿದ್ದೂ ಆಯಿತು.

ಬಾಬಾ ಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಪಾರಗೌರವವನ್ನು ಹೊಂದಿರುವ ಡಾ.ಹೊಸಮನಿಯವರು ಗ್ರಂಥಾಲಯ ಇಲಾಖೆಯ ನಿರ್ದೇಶಕರು ಆದ ದಿನದಿಂದಲೂ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಬರಹಗಳನ್ನು ಕುರಿತಾದ ಪುಸ್ತಕಗಳನ್ನು ಹೆಚ್ಚು ಹೆಚ್ಚು ಖರೀದಿಸಿ ಗ್ರಂಥಾಲಯಗಳಿಗೆ ಪೂರೈಸಿ ಅಂಬೇಡ್ಕರ್ ಅವರ ಚಿಂತನೆಯನ್ನು ಹಳ್ಳಿಹಳ್ಳಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.ಸಂವಿಧಾನದ ಕುರಿತು ಯಾವುದೇ ಪುಸ್ತಕ ಪ್ರಕಟವಾದರೆ ಅದನ್ನು ತರಿಸಿ ಓದುತ್ತಾರೆ ಮತ್ತು ಇತರರು ಓದುವಂತೆ ಮಾಡುತ್ತಾರೆ.ಡಾ.ಹೊಸಮನಿಯವರ ಸಂವಿಧಾನದ ಬಗೆಗಿನ ಗೌರವ,ಬದ್ಧತೆಗಳು ಉಲ್ಲೇಖನಾರ್ಹ.ಇಂದು ಅವರು ತಮ್ಮ ಸ್ವಂತ ಹಣದಿಂದ ಸಂವಿಧಾನಪೀಠಿಕೆಯ ನಾಲ್ಕುನೂರು ಪ್ರತಿಗಳನ್ನು ಖರೀದಿಸಿ ಗಣ್ಯರಿಗೆ ಪುಸ್ತಕ ಉಡುಗೊರೆ ನೀಡಲು ನಿರ್ಧರಿಸಿದ್ದು ಡಾ.ಹೊಸಮನಿಯವರ ಸಂವಿಧಾನ ಪ್ರೀತಿಯ ಒಂದು ನಿದರ್ಶನವಷ್ಟೆ.

About The Author