ಸರ್ಕಾರ ದುಡಿಯುವ ವರ್ಗವನ್ನು ದಮನ ಮಾಡುವ ಸಂಚು ನಡೆಸಿದೆ:ನೀಲಾ ಕೆ

ಶಹಾಪುರ:ದೇಶದೊಳಗೆ ಅತ್ಯಂತ ಕಡು ಕಷ್ಟದಲ್ಲಿರುವ ಕೃಷಿ ಕೂಲಿಕಾರ ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುವ  ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಒಂಟಿ ಮಹಿಳೆಯರಾಗಿದ್ದಾರೆ. ಇವರಿಗೆ ರಕ್ಷಣೆ ನೀಡುವ ಬದಲು ಸರ್ಕಾರ ದುಡಿಯುವ ಈ ವರ್ಗವನ್ನು ದಮನ ಮಾಡುವ ಸಂಚು ರೂಪಿಸಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ನೀಲಾ ಕೆ  ಸರ್ಕಾರದ ವಿರುದ್ಧ ಕಿಡಿಕಾರಿದರು.ಮೇ 22, 23 ರಂದು ಶಹಾಪುರ ನಗರದಲ್ಲಿ ನಡೆಯುವ ರಾಜ್ಯಮಟ್ಟದ ಕೃಷಿ ಕೂಲಿಕಾರ ಮಹಿಳಾ ಸಮಾವೇಶದ ಅಂಗವಾಗಿ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ರವಿವಾರ ನಡೆದ  ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುವ ಕಾರ್ಮಿಕರಿಗೆ ಉತ್ತೇಜನ ನೀಡುವ ಬದಲು ಕಡ್ಡಾಯ 2ಸಲ ಹಾಜರಿ ಜಾರಿ, ಮೊಬೈಲ್ನಲ್ಲಿ ಹೊಸ ಯಾಪ್ ಮೂಲಕ ಅಪ್ಲೋಡ್ ಮಾಡುವ ನಿಯಮ ಜಾರಿಗೆ ತಂದಿದೆ. ಆದರೆ ಎಷ್ಟು ಜನ ಕೂಲಿಕಾರ್ಮಿಕರಲ್ಲಿ ಸ್ಮಾರ್ಟ್ಫೋನ್ ಗಳಿವೆ ?  ಅದಕ್ಕೆ ಬೇಕಾಗುವ ನೆಟ್ ಹಾಗೂ ಕರೆನ್ಸಿ ಬಗ್ಗೆ ಸರ್ಕಾರ ಯೋಚನೆ ಮಾಡಿದೆ ಇಲ್ಲವೋ ಗೊತ್ತಾಗುತ್ತಿಲ್ಲ.
ಒಟ್ಟಾರೆಯಾಗಿ ದುಡಿಯುವ ವರ್ಗದ ಜನರನ್ನು ಯಾವರೀತಿಯಿಂದಾದರು ಕೆಲಸ ಮಾಡಲು  ನಿರಾಸಕ್ತಿ ಬರುವಂತೆ ಮಾಡುವ ಹುನ್ನಾರ ನಡೆಸಿದೆ. ಕೃಷಿ ಕೂಲಿಕಾರ ಹಾಗೂ ಅಸಂಘಟಿತ ವಲಯಗಳಲ್ಲಿ ದುಡಿಯುವ ಮಹಿಳೆಯರು ಕಡಿಮೆ ಸಂಬಳ, ಹೆಚ್ಚು ದುಡಿಮೆ, ದೌರ್ಜನ್ಯ, ಕಿರುಕುಳ, ಚುಡಾಯಿಸುವಿಕೆ, ಅನಾರೋಗ್ಯಕರ ಪರಿಸರದಲ್ಲಿ ದುಡಿತ, ಬಹುಪಾಲು ದಬ್ಬಾಳಿಕೆ, ಲೈಂಗಿಕ ಕಿರುಕುಳಗಳಂತಹ ಸಮಸ್ಯೆಗಳ ಬಲಿಪಶುಗಳು ಆಗಿದ್ದಾರೆ. ಮಹಿಳಾ ಕಾರ್ಮಿಕರ ಸಂಕಷ್ಟಗಳ ಅಂತೂ ಪದಗಳೇ ಸಿಗಲಾರದಂತವು ಗಳಾಗಿವೆ. ಮೊದಲೇ ಕಷ್ಟದ ಬದುಕು ಸಾಗಿಸುತ್ತಿರುವ ದುಡಿಯುವ ವರ್ಗದ ಮಹಿಳೆಯರಿಗೆ ಗಾಯದ ಮೇಲೆ ಬರೆ ಎಂಬಂತೆ ಕೋರೊನಾದಂತಹ ವ್ಯಾಪಕ ಸೋಂಕು ಮತ್ತು ಅದರ ನಿಯಂತ್ರಣಕ್ಕಾಗಿ ಹೇರಲ್ಪಟ್ಟ ಇದರಿಂದಾಗಿ ಹೆಣ್ಣು ಮಕ್ಕಳ ಬದುಕು ಇನ್ನಷ್ಟು ಸೂಚನೆಯಾಗಿ ಹೋಯಿತು.
ಕೋವಿಡ್ ಸಂದರ್ಭದಲ್ಲಿ ಈ ಮಹಿಳೆಯರು ಗಂಡ, ಮಕ್ಕಳನ್ನು ಕಟ್ಟಿಕೊಂಡು ಬಸ್ ರೈಲುಗಳ ಸೌಲಭ್ಯ ಕೂಡ ಇಲ್ಲದೆ ಕಾಲ್ನಡಿಗೆಯಲ್ಲಿ ನೂರಾರು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಯಿತು. ಇದರಲ್ಲಿ  ಗರ್ಭಿಣಿಯರು, ಎಳೆ ಬಾಣಂತಿಯರು, ಮಕ್ಕಳು ಹಾಗೂ ರೋಗಪೀಡಿತರು ತುತ್ತು ಅನ್ನ ನೀರಿಗಾಗಿ ಪರದಾಡುತ್ತಾ ತಮ್ಮ ಊರಿಗೆ ಮುಟ್ಟಿದರೆ ಸಾಕು ಎನ್ನುವ ಭಯದಲ್ಲಿ ಸಾಗುವ ದೃಶ್ಯಗಳು ನಮ್ಮ ಕಣ್ಣ ಮುಂದೆ ಇವೆ.ಕೂಲಿಕಾರ ಮಹಿಳೆಯರು ಮತ್ತು ಅಸಂಘಟಿತ ವಲಯದ ಮಹಿಳಾ ದುಡಿಮೆಗಾರರು ತಮ್ಮ ದುಡಿಮೆಯನ್ನು ಯಾವಾಗಲೂ ಕುಟುಂಬಕ್ಕೆ ಹೆಚ್ಚಿನಂಶ ಮೀಸಲಿರಿಸಿ ಆರೋಗ್ಯವನ್ನು ನಿರ್ವಹಿಸುವುದರಿಂದ ರಕ್ತಹೀನತೆ, ಅಸ್ತಮಾ, ಟಿಬಿ, ಸೊಂಟನೋವು, ಬಿಪಿ ಸೇರಿದಂತೆ ಹತ್ತಾರು ಕಾಯಿಲೆಯನ್ನು ಇವರನ್ನು ಬಾದಿಸುವುದರ ಜೊತೆಗೆ ಆರ್ಥಿಕ ಕೊರತೆ ಇವರನ್ನು ಬೆಂಬಿಡದೆ ಕಾಡುತ್ತಿದೆ. ಇವುಗಳ ಪರಿಹಾರಕ್ಕೆ ಒಂದೇ ಔಷಧಿ ಅದು ಮಹಿಳೆಯರು ಸಂಘಟನಾತ್ಮಕವಾಗಿ ಒಂದಾಗುವ ಮೂಲಕ  ಲಜ್ಜೆಗೆಟ್ಟ ಸರಕಾರಕ್ಕೆ ತಕ್ಕ ಉತ್ತರ ನೀಡಲು ಮುಂದಾಗಬೇಕಿದೆ. ಮಹಿಳೆಯರ ಸಮಾನತೆ, ಸಬಲೀಕರಣ, ಹಾಗೂ ಅವರ ಹಕ್ಕಿಗಾಗಿ ಹೋರಾಡಲು ಅವರಿಗೆ ಶಕ್ತಿ ತುಂಬಾ ಬೇಕಾಗಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ಸಂಘಟನೆಗಳು ಚಿಂತಕರು ಸದಾ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಹೇಳಿದರು.
ಶ್ರೀಲಂಕಾ ಅತೀ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಆಹಾರ ವಸ್ತುಗಳ ಕೊರತೆ, ನಿರುದ್ಯೋಗ, ಇಂಧನ ಅಭಾವ, ವಿದೇಶಿ ಕರೆನ್ಸಿಯ ಕೊರತೆಯಿಂದ ಇಡೀ ದೇಶವೇ ದಿವಾಳಿಯಂಚಿಗೆ ತಲುಪಿದೆ. ಮೂರು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಜನ ವಲಸೆ ಹೋಗುವ ಸ್ಥಿತಿ ಬಂದಿದೆ. ಲಂಕೆಯ ಈ ಸ್ಥಿತಿಗೆ ಕಾರಣಗಳೇನು? ಎಂದು ನೋಡಿದಾಗ ಅಲ್ಲಿನ ಸರಕಾರ ದೊಡ್ಡ ದೊಡ್ಡ ಶ್ರೀಮಂತ ಹಾಗೂ ಬಂಡವಾಳಶಾಹಿಗಳಿಗೆ ನೀಡಿದ ಅವಕಾಶ. ಜನರ ಹಿತ ಕಾಪಾಡುವ ಬದಲು ಇದ್ದವರ ಹಿತ ಕಾಪಾಡುವ ಕಡೆ ಹೆಚ್ಚು ಗಮನ ಕೊಟ್ಟಿರುವುದು. ದೇಶದ ಆರ್ಥಿಕತೆ ಪತನಗೊಳ್ಳಲು  ಆಮದಿನ ಮೇಲೆಯೇ ಅವಲಂಬಿಸಿದೆ. ಅದು ಪೆಟ್ರೋಲಿಯಂ, ಆಹಾರ ವಸ್ತು, ಪೇಪರ್‌, ಸಕ್ಕರೆ, ಕಾಳುಗಳು, ಔಷಧ, ಸಾರಿಗೆ ಸಲಕರಣೆ ಮತ್ತಿತರ ಅಗತ್ಯ ವಸ್ತುಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ವಿದೇಶಿ ಕರೆನ್ಸಿಯ ಕೊರತೆ ಎಂದರೆ ಈ ಅಗತ್ಯ ವಸ್ತುಗಳನ್ನು ಖರೀದಿಸಲು ಹಣದ ಕೊರತೆ ಎದುರಾಗಲು ಅಲ್ಲಿನ ಬಂಡವಾಳಶಾಹಿ ಮತ್ತು ಶ್ರೀಮಂತರೇ ಕಾರಣರಾಗಿದ್ದಾರೆ ಎಂದು ಅವರು ಆರೋಪಿಸಿದರು.
 ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಚನ್ನಪ್ಪ ಆನೆಗುಂದಿ, ಕೃಷಿಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಮಲ್ಲಮ್ಮ ಕೋಡ್ಲಿ,  ಕೃಷಿ ಕೂಲಿಕಾರ ಸಂಘದ ಜಿಲ್ಲಾಧ್ಯಕ್ಷ ದಾವಲ್ ಸಾಬ್ ನದಾಫ್, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್,ಎಂ, ಸಾಗರ, ಸಿಐಟಿಯು ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಅಕ್ಷರ ದಾಸೋಹ ನೌಕರ ಸಂಘದ ತಾಲೂಕು ಕಾರ್ಯದರ್ಶಿ ಈರಮ್ಮ ಹಯ್ಯಾಳಕರ್, ಖಜಾಂಚಿ ಮಂಜುಳಾ ಹೊಸಮನಿ, ಎಸ್ಎಫ್ಐ ಸಂಘಟನೆ ತಾಲೂಕ ಅಧ್ಯಕ್ಷ ವಿಜಯ ರಾಥೋಡ್ ಸೇರಿದಂತೆ ಸಾಮೂಹಿಕ ಸಂಘಟನೆ ಮುಖಂಡರು ಭಾಗವಹಿಸಿದ್ದರು.

About The Author