ಕೆ ಎಸ್ ಈಶ್ವರಪ್ಪನವರ ಬಗೆಗಿನ ಭೀಮರೆಡ್ಡಿ ಪಾಟೀಲರ ನಿಷ್ಠೆ:ಮುಕ್ಕಣ್ಣ ಕರಿಗಾರ

   ಇಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ .ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪನವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಮಾಜಿ ಸಚಿವರಾಗಿ ಈಗ ಶಿವಮೊಗ್ಗದ ಶಾಸಕರು ಮಾತ್ರ.ಈಶ್ವರಪ್ಪನವರಿಂದ ಸಹಾಯಪಡೆದವರು,ಅವರಿಂದ ಉದ್ಧಾರವಾದವರಲ್ಲಿ ಈಗ ಎಷ್ಟುಜನ ಅವರ ಜೊತೆ ಇದ್ದಾರೋ,ಎಷ್ಟು ಜನ ಅವರನ್ನು ಸ್ಮರಿಸುತ್ತಾರೋ.ಮನುಷ್ಯ ಪ್ರಪಂಚವೇ ಹೀಗೆ.ಅಧಿಕಾರ ಇದ್ದಾಗ ಎಲ್ಲರೂ ಬಂಧು- ಮಿತ್ರರೆ.ಎಲ್ಲರೂ ಬಳಿ ಬರುವವರೆ.ಒಬ್ಬ ವ್ಯಕ್ತಿ ಅಧಿಕಾರ ಕಳೆದುಕೊಂಡಾಗ ಮಾತ್ರ ಅವರ ನಿಷ್ಠಾವಂತರು,ನಿಜವಾದ ಅನುಯಾಯಿಗಳು ಯಾರು ಎಂದು ಗೊತ್ತಾಗುತ್ತದೆ‌.ಅವಕಾಶವಾದಿಗಳ ಪ್ರಪಂಚದಲ್ಲಿ ಖುರ್ಚಿಯ ಸುತ್ತ ಪ್ರದಕ್ಷಿಣೆ ಹಾಕುವ ಜನ ಅಧಿಕಾರ ಇಲ್ಲದಾಗ ಹತ್ತಿರ ಸುಳಿಯುವುದಿಲ್ಲ.
      ಪ್ರಪಂಚ ಅಷ್ಟು ಕೆಟ್ಟದೂ ಆಗಿಲ್ಲ ಎನ್ನುವುದಕ್ಕೆ ಅಲ್ಲಲ್ಲಿ ಉದಾಹರಣೆಗಳು ಸಿಗುತ್ತವೆ.ಅಂತಹ ಒಂದು ನಿದರ್ಶನ ಇಂದು ನನ್ನ ಅನುಭವಕ್ಕೆ ಬಂದಿತು.ಗ್ರಾಮ ಪಂಚಾಯತಿಗಳ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾಗಿರುವ ಭೀಮರೆಡ್ಡಿ ಪಾಟೀಲ್ ಅವರು ಕೆ ಎಸ್ ಈಶ್ವರಪ್ಪನವರ ಅತ್ಯಂತ ನಿಷ್ಠಾವಂತ ಅನುಯಾಯಿಗಳಾಗಿದ್ದು ಈಶ್ವರಪ್ಪನವರ ಒಳಿತನ್ನು ಪ್ರಾರ್ಥಿಸಿ ದೇವರನ್ನು ಬೇಡಲೆಂದು ಈದಿನ ನಮ್ಮ ಮಹಾಶೈವ ಧರ್ಮ ಪೀಠಕ್ಕೆ ಬಂದಿದ್ದರು.ರಾಯಚೂರು ಜಿಲ್ಲೆಯ ಒಂದು ಗ್ರಾಮ ಪಂಚಾಯತಿಯ ಡಾಟಾ ಎಂಟ್ರಿ ಆಪರೇಟರ್ ದೂರದ ಶಿವಮೊಗ್ಗ ಜಿಲ್ಲೆಯ ಕೆ ಎಸ್ ಈಶ್ವರಪ್ಪನವರ ಒಳಿತನ್ನು ಬಯಸುತ್ತಾರೆ ಎಂದರೆ! ಮನುಷ್ಯತ್ವಕ್ಕೆ,ಮಾನವೀಯ ಸಂಬಂಧಗಳಿಗೆ ಕುಲ ಗೋತ್ರ,ಜಿಲ್ಲೆಗಳ ಸೀಮೆ ಇಲ್ಲ.
      ಕೆ ಎಸ್ ಈಶ್ವರಪ್ಪನವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾಗ ಗ್ರಾಮ ಪಂಚಾಯತಿಗಳ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳ ಸಂಘದ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದ ಭೀಮರೆಡ್ಡಿ ಪಾಟೀಲ್ ರಾಜ್ಯದಾದ್ಯಂತ ಸಂಚರಿಸಿ ಅವರ ಸಂಘಟನೆಯನ್ನು ಬಲಪಡಿಸಿದ್ದಲ್ಲದೆ ಈಶ್ವರಪ್ಪನವರಿಂದ ನೌಕರರ ಅನುಮೋದನೆ,ಪದೋನ್ನತಿಯಲ್ಲಿ ಪರಿಗಣಿಸುವುದು ಸೇರಿದಂತೆ ಹಲವು ಮಹತ್ವದ ಆದೇಶಗಳನ್ನು ಮಾಡಿಸಿ ಡಿಇಒ ಕಂ ಕ್ಲರ್ಕ್ ಗಳ ಬದುಕಿಗೆ ಭರವಸೆ ತುಂಬಿದ್ದರು.ಈಶ್ವರಪ್ಪನವರು ಮಾಡಿದ ಉಪಕಾರವನ್ನು ಮರೆಯದೆ ಅದನ್ನು ಸ್ಮರಿಸುತ್ತ ಅವರ ಕೆಟ್ಟ ಕಾಲದಲ್ಲಿ ಅವರಿಗೆ ಏನೂ ತೊಂದರೆ ಆಗದಿರಲಿ ಎಂದು ಪ್ರಾರ್ಥಿಸಲು ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ ವಿಶ್ವೇಶ್ವರಿ ದುರ್ಗಾದೇವಿಯರ ಸನ್ನಿಧಿಗೆ ಬಂದಿದ್ದು ಕಂಡು ನನ್ನಲ್ಲಿ ಆಶ್ಚರ್ಯ ಹಾಗೂ ಭೀಮರೆಡ್ಡಿ ಅವರ ಕುರಿತ ಅಭಿಮಾನವೂ ಉಂಟಾಯಿತು.
      ಕೆ ಎಸ್ ಈಶ್ವರಪ್ಪನವರಿಂದ ದೊಡ್ಡ ದೊಡ್ಡ ಸಹಾಯಪಡೆದವರು,ದೊಡ್ಡದೊಡ್ಡ ಹುದ್ದೆಗಳನ್ನು ಗಿಟ್ಟಿಸಿಕೊಂಡವರು ಈಗ ಈಶ್ವರಪ್ಪನವರನ್ನು ಮರೆತಿದ್ದಾರೆ.ಆದರೆ ಭೀಮರೆಡ್ಡಿ ಪಾಟೀಲ್ ಅವರಂತಹ ಗ್ರಾಮ ಪಂಚಾಯತಿಯ ಸಣ್ಣ ಹುದ್ದೆಯಲ್ಲಿರುವ ವ್ಯಕ್ತಿಗಳು ಈಶ್ವರಪ್ಪನವರ ಹಿತೈಷಿಗಳಾಗಿದ್ದಾರೆ,ಅವರ ಒಳಿತನ್ನು ಬಯಸುತ್ತಾರೆ.ಕಳೆದ ನಾಲ್ಕೈದು ದಿನಗಳಿಂದಲೂ ಭೀಮರೆಡ್ಡಿಯವರು ನನ್ನನ್ನು ನಿರಂತರವಾಗಿ ಸಂಪರ್ಕಿಸುತ್ತ ‘ ಸರ್ ಮಠದಲ್ಲಿ ಯಾವಾಗ ಸಿಗುತ್ತೀರಿ,ದರ್ಶನಕ್ಕೆ ಬರಬೇಕು’ ಎಂದು ಫೋನ್ ಮಾಡುತ್ತಿದ್ದರು.ಸಾಮಾನ್ಯವಾಗಿ ರವಿವಾರದಂದು ನಾನು ನಮ್ಮ ಮಠದಲ್ಲಿದ್ದು ಮಹಾಶೈವ ಧರ್ಮಪೀಠವನ್ನು ನಂಬಿ ಬರುವವರ ಸಮಸ್ಯೆಗಳನ್ನು ಪರಿಹರಿಸುತ್ತೇನೆ.ಹಾಗಾಗಿ ‘ ರವಿವಾರ ಬನ್ನಿ’ ಎಂದು ಹೇಳಿದ್ದೆ.ಬಹುಶಃ ಯಾವುದೋ  ವೈಯಕ್ತಿಕ ಸಮಸ್ಯೆಗಾಗಿ ಬರಬಹುದು ಎಂದುಕೊಂಡಿದ್ದೆ.ಆದರೆ ಇಂದು ಭೀಮರೆಡ್ಡಿಯವರು ‘ ಸರ್,ಕೆ ಎಸ್ ಈಶ್ವರಪ್ಪ ಸಾಹೇಬರಿಗೆ ಏನೂ ತೊಂದರೆ ಆಗದಂತೆ ಆಶೀರ್ವದಿಸಿ’ ಎಂದಾಗ ಒಂದು ಕ್ಷಣ ಆಶ್ಚರ್ಯಚಕಿತನಾದೆ! ಅರ್ಧಘಂಟೆ ಈಶ್ವರಪ್ಪನವರ ಬಗ್ಗೆಯೇ ಮಾತನಾಡಿದ ಭೀಮರೆಡ್ಡಿ ‘ ಸರ್ ಅವರು ನಮ್ಮ ದೇವರು ಸರ್.ದಯವಿಟ್ಟು ಅವರಿಗೆ ಏನೂ ಆಗಬಾರದು ಸರ್’ ಎಂದು ಮೊರೆಯುತ್ತಲೇ ಇದ್ದರು.ಸಂಭವನೀಯ ಅಪಾಯಗಳ ಬಗ್ಗೆ  ತಿಳಿಸಿದ ನಾನು ಮಾಡಬಹುದಾದ ಪರಿಹಾರಗಳನ್ನು ಅರುಹಿ ಈಶ್ವರಪ್ಪನವರ ಪರವಾಗಿ ಶ್ರೀಕ್ಷೇತ್ರ ಕೈಲಾಸದ ಅಧಿದೈವರುಗಳಾದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರಲ್ಲಿ ಪ್ರಾರ್ಥಿಸಿದೆ.
      ಕೆ ಎಸ್ ಈಶ್ವರಪ್ಪನವರು ಅಧಿಕಾರ ಕಳೆದುಕೊಳ್ಳಲಿರುವ ಬಗ್ಗೆ ನಾನು ನವೆಂಬರ್ ೨೦೨೧ ರಲ್ಲೇ  ಅವರ ಬಂಟರುಗಳಿಗೆ ತಿಳಿಸಿದ್ದೆ.ನಾನೊಬ್ಬ ಸರಕಾರಿ ಅಧಿಕಾರಿ ಆಗಿರುವಕಾರಣದಿಂದ ಸೂಕ್ಷ್ಮವಾಗಿ ಮುನ್ಸೂಚನೆ ನೀಡುತ್ತೇನೆ.ಈಶ್ವರಪ್ಪನವರ ಅತ್ಯಾಪ್ತರಿಬ್ಬರಿಗೆ ನಾನು ನವೆಂಬರ್ ನಲ್ಲಿಯೇ ಹೇಳಿದ್ದರೂ ಅವರು ಗಂಭೀರವಾಗಿ ಪರಿಗಣಿಸಲಿಲ್ಲ.ಅವರಿಗೆ ಅಷ್ಟೇ ಅಲ್ಲ, ಹಿಂದೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್ ಶಂಕರ ಅವರಿಗೆ ನೇರವಾಗಿ ಮೆಸೇಜ್ ಮಾಡಿ ಅಧಿಕಾರ ಕಳೆದುಕೊಳ್ಳಲಿರುವ ಮುನ್ಸೂಚನೆ ನೀಡಿದ್ದೆ! ಅವರು ಕಡೆಗಣಿಸಿದರು.ಕೊನೆಗೆ ನಾನು ಹೇಳಿದ್ದೇ ಆಯಿತು.
       ಕಂಡಕಂಡಲ್ಲಿ ಸುತ್ತಿ ಬಳಲುವ ರಾಜಕಾರಣಿಗಳಿಗೆ ಸತ್ಯಶರಣರು,ಪ್ರತ್ಯಕ್ಷ ದೈವಗಳ ಬಗ್ಗೆ ಗೊತ್ತಿರುವುದಿಲ್ಲವೇನೋ.ಅಥವಾ ಅವರ ಸುತ್ತಮುತ್ತಲಿನ ಹೊಗಳು ಭಟ್ಟರು ದಾರಿ ತಪ್ಪಿಸುತ್ತಾರೋ ಗೊತ್ತಿಲ್ಲ.ನಾನಂತೂ ಹತ್ತು ಹನ್ನೆರಡು ವರ್ಷಗಳಿಂದ ನೇರವಾಗಿ ಹೇಳುತ್ತಲೇಬಂದಿದ್ದೇನೆ.ನಾನು ಸರಕಾರಿ ಅಧಿಕಾರಿ ಆಗಿರಬಹುದು,ಅವರಿವರಿಗೆ ಆಧೀನದ ಅಧಿಕಾರಿ ಆಗಿರಬಹುದು.ಆದರೆ ನನ್ನ ಬೆನ್ನ ಹಿಂದೆ ಇದ್ದು ಲೋಕೋದ್ಧಾರದ ಲೀಲೆ ನಟಿಸುತ್ತಿರುವವರು ಜಗನ್ಮಿಯಾಮಕರಾದ ಶಿವ ಪಾರ್ವತಿಯರು ಎನ್ನುವ ಸತ್ಯ ಹೇಗೆ ಅರ್ಥವಾಗಬೇಕು ?
ಭೀಮರೆಡ್ಡಿ ಪಾಟೀಲ್ ಅವರಿಗೋಸ್ಕರ ಜಗನ್ಮಾತಾಪಿತರುಗಳಾದ ಶಿವ ದುರ್ಗಾದೇವಿಯರಲ್ಲಿ ಪ್ರಾರ್ಥಿಸಿ ಕೆ ಎಸ್ ಈಶ್ವರಪ್ಪನವರ ಬಗೆಗಿನ ಅವರ ನಿಷ್ಠೆಯನ್ನು ಮೆಚ್ಚಿ ಕೆಲವು ಸಲಹೆಗಳನ್ನು ನೀಡಿ ಅವರ ದೊಡ್ಡಗುಣವನ್ನು ಕಂಡು ಸಂತೃಪ್ತನಾಗಿ ಶಿವ ದುರ್ಗಾದೇವಿಯರ ಸನ್ನಿಧಿಯಲ್ಲಿ ಸನ್ಮಾನಿಸಿ,ಆಶೀರ್ವದಿಸಿ ಬೀಳ್ಕೊಟ್ಟೆ.

About The Author