ಶ್ರೀಕೃಷ್ಣ ಜನ್ಮಾಷ್ಟಮಿ : ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ : ಉಮಾಕಾಂತ್ ಹಳ್ಳೆ

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣನ ಭಾವಚಿತ್ರದ ಅದ್ದೂರಿಯಾಗಿ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು.

 ಶಹಾಪುರ ನಗರ ಸಭೆಯ ಆಭರಣದಲ್ಲಿ ತಾಲೂಕ ಆಡಳಿತ ಹಾಗೂ ನಗರಸಭೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ತಹಸಿಲ್ದಾರ್ ಉಮಾಕಾಂತ ಹಳ್ಳೆ ಉದ್ಘಾಟಿಸಿದರು.

ಶಹಾಪುರ : ಶ್ರೀ ಕೃಷ್ಣ ಪರಮಾತ್ಮ ಪ್ರೇಮ, ಸ್ನೇಹ, ತ್ಯಾಗ, ಕರುಣೆ, ವಿಶ್ವಾಸ, ಸತ್ಯ, ಧರ್ಮದ ಸ್ವರೂಪವಾಗಿದ್ದಾನೆ. ನಿತ್ಯ ನಮ್ಮ ಜಂಜಾಟದ ಬದುಕಿನಲ್ಲಿ ಶ್ರೀಕೃಷ್ಣನ ಸ್ಮರಣೆ ಮಾಡಿದರೆ ಕಷ್ಟವೂ ಬರುವುದೇ ಇಲ್ಲ ಎಂದು ತಹಸೀಲ್ದಾರ್ ಉಮಾಕಾಂತ್ ಹಳ್ಳೆ ಹೇಳಿದರು.ನಗರದ ಸಿಬಿ ಕಮಾನದಿಂದ ಶ್ರೀ ಕೃಷ್ಣನ ಭಾವಚಿತ್ರದ ಭವ್ಯ ಮೆರವಣಿಗೆ ಹಳೆ ಬಸ್ ನಿಲ್ದಾಣ ಬಸವೇಶ್ವರ ವೃತ್ತದ ಮಾರ್ಗವಾಗಿ ನಗರಸಭೆಗೆ ಬಂದು ಸೇರಿತು. ಮೆರವಣಿಗೆ ವುದ್ಧಕ್ಕೂ ವಿವಿಧ ಕಲಾ ತಂಡಗಳ ಪ್ರದರ್ಶನ ಕೃಷ್ಣನ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಮಿರಗು ತಂದವು. ನಂತರ ನಡೆದ ತಾಲೂಕ ಆಡಳಿತ ಹಾಗೂ ನಗರಸಭೆ ವತಿಯಿಂದ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 

ಶ್ರೀಕೃಷ್ಣ ಜನ್ಮಾಷ್ಟಮಿ. ಶ್ರೀಕೃಷ್ಣನ ವೇಷದಲ್ಲಿ ಹೃತಿಕ್ ಶೇಖರ್  

ಈ ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಸಂಶೋಧಕ ಹಾಗೂ ಸಹಾಯಕ ಖಜಾನೆ ಅಧಿಕಾರಿ ಡಾ. ಎಂ ಎಸ್ ಶಿರವಾಳ ಅವರು, ಭಗವಾನ್‌ ವಿಷ್ಣುವಿನ ಎಂಟನೆಯ ಅವತಾರವಾಗಿರುವ ಶ್ರೀಕೃಷ್ಣನು, ದುಷ್ಟರನ್ನು ಶಿಕ್ಷಿಸುವುದಕ್ಕೆ ಮತ್ತು ಧರ್ಮದಸ್ಥಾಪನೆಗಾಗಿ ಅವತಾರವೆತ್ತಿದ್ದಾನೆ. ತನ್ನ ಅವತಾರದ ಮಹತ್ವ ಮತ್ತು ಧರ್ಮ ಸಂಸ್ಥಾಪನೆಯ ಉದ್ದೇಶವನ್ನು ಕೃಷ್ಣನು ಅರ್ಜುನನಿಗೆ ಮಹಾಭಾರತ ಯುದ್ಧ ಸಮಯದಲ್ಲಿ ಬೋಧಿಸಿದ್ದಾರೆ.

ಜೀವನದ ಪ್ರತಿ ಹಂತದಲ್ಲೂ ಕೃಷ್ಣ ನಮಗೆ ಆದರ್ಶ ಪುರುಷನಾಗಿ ಕಾಣುತ್ತಾನೆ. ಕೃಷ್ಣನ ಆದರ್ಶ ಗುಣಗಳನ್ನು ಪಾಲಿಸಿದರೆ ಪ್ರತಿ ಮನೆಯೂ ನಂದಗೋಕುಲವಾಗಲಿದೆ. ಶ್ರೀಕೃಷ್ಣ ಸರ್ವಶಕ್ತ. ಭೂತ, ವರ್ತಮಾನ, ಭವಿಷ್ಯದ ಬಗ್ಗೆ ತಿಳಿದಿರುವ ಜ್ಞಾನಿ. ಶ್ರೀಕೃಷ್ಣನಿಗೆ ಎಲ್ಲ ಗೊತ್ತಿದ್ದರೂ ಅವನು ಜೀವನವನ್ನು ಬಂದ ರೀತಿಯಲ್ಲಿಯೇ ಸ್ವೀಕರಿಸಿದ್ದನು. ಅದರಂತೆ ಬದುಕಿಯು ತೋರಿಸಿದ್ದಾನೆ. ಶ್ರೀಕೃಷ್ಣ ಎಲ್ಲರನ್ನೂ ಪ್ರೀತಿಸುತ್ತಿದ್ದ. ಭಕ್ತರು, ಸ್ನೇಹಿತರು, ಕುಟುಂಬಸ್ಥರಿಗೆ ಎಲ್ಲರಿಗೂ ಕೃಷ್ಣ ನಿರ್ಮಲ ಪ್ರೀತಿಯನ್ನು ಧಾರೆ ಎರೆಯುತ್ತಿದ್ದ. ಶತ್ರುಗಳ ಬಗೆಗೂ ಕೃಷ್ಣನಿಗೆ ಪ್ರೀತಿ, ವಾತ್ಸಲ್ಯವಿತ್ತು. ಶುದ್ಧ ಪ್ರೀತಿಯಿಂದ ಹೃದಯವನ್ನೇ ಗೆಲ್ಲಬಹುದು ಎಂಬುದಕ್ಕೆ ಕೃಷ್ಣ ಸಾಕ್ಷಿ.

ಕೃಷ್ಣನ ಜೀವನ ಎಲ್ಲರ ಬದುಕಿಗೂ ಪಾಠ. ಶ್ರೀಕೃಷ್ಣನ ಬದುಕಿನಿಂದ ಕಲಿಯುವಂತಹ ಸಾಕಷ್ಟು ಸಂಗತಿಗಳು ಇವೆ ಎಂಬುದನ್ನು ಪ್ರತಿಯೊಬ್ಬರು ನೆನಪಿಟ್ಟುಕೊಳ್ಳುವ ಮೂಲಕ ಶ್ರೀ ಕೃಷ್ಣ ಪರಮಾತ್ಮ ತೋರಿಸಿದ ದಾರಿಯಲ್ಲಿ ನಡೆದರೆ ಸುಂದರ ಬದುಕು ಸಾಗಿಸಬಹುದಾಗಿದೆ ಎಂದರು.ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾದ ಯಾದವ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದುಕೊಟ್ಟ ಡೊಳ್ಳು ಕುಣಿತ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರೆದಾರ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಷಣ್ಮುಖಪ್ಪ, ನಗರ ಸಭೆಯ ಎಇಇ ನಾನಾಸಾಬ ಮಡಿವಾಳ, ಯಾದವ ಸಮಾಜದ ತಾಲೂಕ ಅಧ್ಯಕ್ಷ ಲಕ್ಷ್ಮಣ ಯಾದವ್, ಸುದೀಪ್ ಶಿಕ್ಷಣ ಸಂಸ್ಥೆಯ ಸಾಯಿಬಣ್ಣ ಪುರ್ಲೆ, ಪುರ್ಲೆ ಶಿಕ್ಷಣ ಸಂಸ್ಥೆಯ ಪ್ರದೀಪ್, ಭೀಮಣ್ಣ ಗೌಡ ಮುಡುಬೂಳ, ಅಮರೇಶ್ ಯಾದವ್, ರಸ್ತಪುರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭೀಮಣ್ಣ ಗೋಲಗೇರಿ ಸೇರಿದಂತೆ ಯಾದವ ಸಮುದಾಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.