ಮೂರನೇ ಕಣ್ಣು : ಸನಾತನಧರ್ಮದ ನಿರ್ಮೂಲನೆಯ ಉದಯನಿಧಿ ಸ್ಟಾಲಿನ್ ಮಾತು ಪುರಸ್ಕಾರಯೋಗ್ಯವಲ್ಲ : ಮುಕ್ಕಣ್ಣ ಕರಿಗಾರ

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿದ ‘ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು’ ಎನ್ನುವ ಮಾತು ಸರಿಯಾದುದಲ್ಲ ಮತ್ತು ಯಾವುದೇ ಪಕ್ವ ರಾಜಕಾರಣಿ ಅದನ್ನು ಸಮರ್ಥಿಸಲಾಗದು.ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಕೊರೊನಾ,ಡೆಂಗಿ,ಮಲೇರಿಯಾಗಳಂತಹ ರೋಗಗಳಿಗೆ ಹೋಲಿಸಿ ಅದರ ನಿರ್ಮೂಲನೆಗೆ ಕರೆಕೊಟ್ಟಿದ್ದು ಅವರು ಅಸ್ವಸ್ಥಚಿತ್ತ ರಾಜಕಾರಣಿ ಎನ್ನುವುದನ್ನು ಸಂಕೇತಿಸುತ್ತದೆ.ಉದಯನಿಧಿ ಸ್ಟಾಲಿನ್ ಅವರಂತೆಯೇ ತಮಿಳುನಾಡಿನ ಕೆಲವು ರಾಜಕಾರಣಿಗಳು ಸನಾತನ ಧರ್ಮದ ಬಗೆಗೆ ಹೊಂದಿರುವ ಪೂರ್ವಗ್ರಹಪೀಡಿತ ಭಾವನೆಗಳೇ ಇಂತಹ ಹೇಳಿಕೆಗಳ ಕಾರಣ.

ಉದಯನಿಧಿ ಸ್ಟಾಲಿನ್ ಮಾತ್ರವಲ್ಲ ಸೆಕ್ಯೂಲರ್ ಸೋಗಿನ ಕೆಲವು ರಾಜಕಾರಣಿಗಳು ಸಹ ಸನಾತನ ಧರ್ಮವನ್ನು ವಿರೋಧಿಸಲು ಅವರ ತಪ್ಪು ತಿಳಿವಳಿಕೆಯೇ ಕಾರಣ.ಸನಾತನ ಧರ್ಮ ಎಂದರೆ ಅದು ಬ್ರಾಹ್ಮಣರಧರ್ಮ ಎನ್ನುವ ತಪ್ಪು ತಿಳಿವಳಿಕೆಯೇ ಇಂತಹ ಅಪಕ್ವ ಹೇಳಿಕೆಗಳ ಕಾರಣ.ಶೂದ್ರರು ಭಾರತದ ಮೂಲ ನಿವಾಸಿಗಳು.ಅಂತಹ ಶೂದ್ರರ ಸಂಸ್ಕೃತಿಯೇ ಸನಾತನ ಸಂಸ್ಕೃತಿ,ಶೂದ್ರರ ಧರ್ಮವೇ ಸನಾತನ ಧರ್ಮ.ಶೈವಸಂಸ್ಕೃತಿಯು ಭಾರತದ ಮೂಲ ಸಂಸ್ಕೃತಿ,ಶೈವ ಧರ್ಮವು ಭಾರತದ ಮೂಲ ಧರ್ಮ. ಶೈವ ಧರ್ಮ ಮತ್ರು ಸಂಸ್ಕೃತಿಗಳನ್ನು ಹುಟ್ಟಿಸಿ,ಪೊರೆದು,ಸಂರಕ್ಷಿಸಿದವರು ಆದಿಮ ಬುಡಕಟ್ಟು ಜನಾಂಗಗಳು.ನಂತರ ದಸ್ಯುಗಳು,ಶೂದ್ರರು,ದ್ರಾವಿಡರು ಎಂದು ಕರೆಯಲ್ಪಟ್ಟವರು ಶೈವ ಸಂಸ್ಕೃತಿ,ಶೈವ ಧರ್ಮವನ್ನು ಎತ್ತಿಹಿಡಿಯುತ್ತ ಬಂದಿದ್ದಾರೆ.ಹೀಗಿರುವಾಗ ವಿರೋಧಿಸುವುದು ಯಾರನ್ನು?

ಶೂದ್ರರು ಭಾರತದ ಮೂಲನಿವಾಸಿಗಳು,ಆರ್ಯರು ಭಾರತಕ್ಕೆ ಹೊರಗಿನಿಂದ ಬಂದ ವಲಸಿಗರು ಎನ್ನುವುದನ್ನು ಬಹಳಷ್ಟು ಜನ ಇತಿಹಾಸಕಾರರು ಸಂಶೋಧನೆ,ಉತ್ಖನನಗಳ ಆಧಾರದ ಮೇಲೆ ನಿರೂಪಿಸಿದ್ದಾರೆ.ಸಿಂಧೂ ನದಿಯ ನಾಗರಿಕತೆಯು ಶೈವಸಂಸ್ಕೃತಿಯಾಗಿತ್ತು,ಶೈವ ಧರ್ಮವು ಸಿಂಧೂಜನರ ಧರ್ಮವಾಗಿತ್ತು.ಹರಪ್ಪ ಮತ್ತು ಮೊಹಂಜೊದಾರೋ ಉತ್ಖನನಗಳಲ್ಲಿ ಸಿಕ್ಕ ಪಶುಪತಿ ಶಿವನ ಮೂರ್ತಿ,ಲಿಂಗಗಳು ಮತ್ತು ಮಾತೃದೇವತೆಯ ವಿಗ್ರಹಗಳು ಶೈವ ಧರ್ಮವು ಭಾರತದ ಮೂಲ ಧರ್ಮ ,ಶೈವ ಸಂಸ್ಕೃತಿಯು ಭಾರತದ ಮೂಲ ಸಂಸ್ಕೃತಿ ಎನ್ನುವುದನ್ನು ದೃಢಪಡಿಸುತ್ತವೆ.ವೇದದ ‘ರುದ್ರಾಧ್ಯಾಯ’ ವು ಕೂಡ ಶೈವ ಸಂಸ್ಕೃತಿ ವೇದಪೂರ್ವ ಸಂಸ್ಕೃತಿ ಎನ್ನುವುದನ್ನು ಒತ್ತಿ ಹೇಳುತ್ತಿದೆ.ರುದ್ರಾಧ್ಯಾಯವು ಆರ್ಯಸಂಸ್ಕೃತಿಗೆ ಸೇರಿದ ಋಷಿಗಳು ಶೂದ್ರರ ಆರಾಧ್ಯದೈವವಾಗಿದ್ದ ರುದ್ರನನ್ನು ಪ್ರಸನ್ನಗೊಳಿಸಲು ಗೈದ ಸ್ತುತಿ ಮಾಲಿಕೆ.ವೇದದ ಋಷಿಗಳು ರುದ್ರನಷ್ಟು ಬೇರಾವ ದೇವತೆಗೂ ಹೆದರಿಲ್ಲ.ರುದ್ರನನ್ನು ಕುರಿತು ‘ ನಿನಗೆ ನಮಸ್ಕಾರ,ನಿನ್ನ ಬಿಲ್ಲಿಗೆ ನಮಸ್ಕಾರ,ನಿನ್ನ ಬಾಣಕ್ಕೆ ನಮಸ್ಕಾರ.ನಮ್ಮಲ್ಲಿ ಕೋಪಗೊಳ್ಳಬೇಡ.ತಂದೆಯು ಮಕ್ಕಳನ್ನು ರಕ್ಷಿಸುವಂತೆ ನಮ್ಮನ್ನು ಕಾಪಾಡು’ ಎಂದು ಮೊರೆಯುತ್ತಾರೆ,ಪರಿಪರಿಯಾಗಿ ಪ್ರಾರ್ಥಿಸುತ್ತಾರೆ.ರುದ್ರಾಧ್ಯಾಯದಲ್ಲಿಯೇ ಭಾರತದ ಮೂಲನಿವಾಸಿಗಳಾದ ,ವಿವಿಧ ಕಸುಬುಗಳನ್ನು ನಿರ್ವಹಿಸುತ್ತಿದ್ದ ಶೂದ್ರ ಜನಾಂಗಗಳ ಪ್ರಸ್ತಾಪ ಬರುತ್ತದೆ.ಬಡಗಿಗಳು,ಕಮ್ಮಾರರು,ರಥಕಾರರು ಮೊದಲಾದ ಹತ್ತೆಂಟು ಕಸುಬುಗಳ ಉಲ್ಲೇಖವೂ ರುದ್ರಾಧ್ಯಾಯದಲ್ಲಿಯೇ ಇದೆ.ವೇದಗಳು ಆರ್ಯಪೂರ್ವರ ರಚನೆ ಎಂದಾದರೆ ಆರ್ಯರ ಆಗಮನಕ್ಕಿಂತಲೂ ಮೊದಲು ಶೂದ್ರರು ಭಾರತದಲ್ಲಿದ್ದರು,ಅವರು ಶಿವನನ್ನು ಪೂಜಿಸುತ್ತಿದ್ದರು ಎನ್ನುವುದು ಸ್ಷಷ್ಟ.ಋಗ್ವೇದದ ಕಾಲದಲ್ಲಿ ವರ್ಣ ಪದ್ಧತಿಯಾಗಲಿ,ಜಾತಿ ಪದ್ಧತಿಯಾಗಲಿ ಇರಲಿಲ್ಲ.’ಶಿವನೇ ಪರಮೇಶ್ವರ,ಜೀವಿಗಳೆಲ್ಲರೂ ಶಿವನ ಮಕ್ಕಳು’ ಎನ್ನುವ ಶಿವಸರ್ವೋದಯ ಸಮಾಜವು ಅಸ್ತಿತ್ವದಲ್ಲಿತ್ತು.ಇಂದಿನ ಶೂದ್ರರಾದ ನಾವೆಲ್ಲರೂ ಅಂದಿನ ಸರ್ವೋದಯ ಶಿವಸಮಾಜ ನಿರ್ಮಾಣದ ಕನಸುಣಿಗಳಾಗಿದ್ದ ನಮ್ಮ ಪೂರ್ವಿಕರ ವಂಶಜರು.

ಋಗ್ವೇದಕಾಲದಲ್ಲಿ ಇಲ್ಲದ ವರ್ಣಾಶ್ರಮ ಮತ್ತು ಜಾತಿ ಪದ್ಧತಿಯು ಉಗಮವಾಗಿದ್ದು ಅಥರ್ವಣ ವೇದ ಕಾಲದಲ್ಲಿ ಮತ್ತು ಉಚ್ಛ್ರಾಯಕ್ಕೇರಿದ್ದು ಗುಪ್ತರ ಕಾಲದಲ್ಲಿ.ಋಗ್ವೇದದ ಖಿಲಭಾಗ ಎನ್ನುವ ಪುರುಷಸೂಕ್ತವು ಋಗ್ವೇದದ ಮೂಲಭಾಗವಲ್ಲ,ಅಥರ್ವಣ ವೇದ ಕಾಲದಲ್ಲಿ ಬರೆದು ಋಗ್ವೇದಕ್ಕೆ ಸೇರಿಸಿದ ಪ್ರಕ್ಷಿಪ್ತಭಾಗವದು.ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎನ್ನುವ ನಾಲ್ಕು ವರ್ಣಗಳ ಪ್ರಸ್ತಾಪ ಮೊದಲು ಕಾಣಿಸಿಕೊಳ್ಳುವುದೇ ಪುರುಷಸೂಕ್ತದಲ್ಲಿ.ಋಗ್ವೇದದಲ್ಲಿ ಅನಾರ್ಯರಾದ,ವೇದ ವಿರೋಧಿಗಳಾದ ದಸ್ಯುಗಳು ಇದ್ದಾರೆ,ದಾಸರು ಇದ್ದಾರೆ,ಅಷ್ಟು ಪ್ರಮುಖವಲ್ಲದ ಬುಡಕಟ್ಟು ಜನಾಂಗಗಳು ಇವೆ.ಅನಾರ್ಯರಾದ ದಸ್ಯುಗಳನ್ನು ‘ಪುರಂದರ’ ಅಂದರೆ ಪುರಗಳನ್ನು ನಾಶಪಡಿಸುವ ಇಂದ್ರನು ಆರ್ಯವಂದಿತ,ಆರ್ಯರ ಹಿತರಕ್ಷಕ.ಸಿಂಧೂ ಸಂಸ್ಕೃತಿಯ ವಿನಾಶದ ಹಿಂದೆ ಪುರಗಳಧ್ವಂಸಕನಾದ ಈ ಇಂದ್ರನ ಕೈವಾಡ ಇರಲೂಸಾಕು.

ಸನಾತನ ಧರ್ಮ ಎಂದರೆ ದೇಶದ ಅತ್ಯಂತ ಪುರಾತನ ಶೈವ ಧರ್ಮ.ಅದಕ್ಕೆ ಸಂವಾದಿಯಾಗಿ ಬಳಸಲ್ಪಡುತ್ತಿರುವ ‘ ವೈದಿಕ ಧರ್ಮ’ ಮತ್ತು ವೈದಿಕ ಸಂಸ್ಕೃತಿ’ ಗಳು ಶೈವಾರಾಧನೆಯ ಸಮಾಜದ ಪ್ರತೀಕಗಳು.ವೇದಕಾಲದಲ್ಲಿ ಇದ್ದದ್ದು ಸರ್ವರನ್ನೂ ಪ್ರೀತಿಸುವ ‘ ವಸುದೈವ ಕುಟುಂಬಕಂ’ ವಿಶ್ವಮಾನವತತ್ತ್ವ.ಭೇದ ಸಂಸ್ಕೃತಿಯು ವೇದಕಾಲದಲ್ಲಿರಲಿಲ್ಲ.ಸನಾತನ ಧರ್ಮ ಎಂದರೆ ಹಿಂದೂಧರ್ಮ ಎಂದು ತಪ್ಪಾಗಿ ಅರ್ಥೈಸಲಾಗಿದೆ.ಹಿಂದೂ ಧರ್ಮ,ಹಿಂದೂ ಸಂಸ್ಕೃತಿ ಎನ್ನುವ ಪದಗಳು ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಕಾಣಿಸಿಕೊಂಡ ಪದಗಳು.ಅದಕ್ಕೂ‌ಪೂರ್ವದಲ್ಲಿದ್ದುದು ಇಂದುಧರನಾದ ಶಿವನ ಮತ,ಸಂಸ್ಕೃತಿ.ತಮಿಳುನಾಡು ಮತ್ತು ಕೇರಳಗಳಲ್ಲಿ ವ್ಯಾಪಕವಾಗಿ ಪೂಜೆಗೊಳ್ಳುತ್ತಿರುವ ಮುರುಗನ್,ವೇಲಾಯುಧನ್ ಮತ್ತು ಸ್ವಾಮಿ ಅಯ್ಯಪ್ಪ ಎನ್ನುವ ದೇವತೆಗಳು ಶಿವಪುತ್ರರೆಂಬುದನ್ನು ಗಮನಿಸಬೇಕು.ಶಿವಪುತ್ರ ಸ್ಕಂದ ಇಲ್ಲವೆ ಷಣ್ಮುಖನನ್ನು ತಮಿಳರು ತಮ್ಮ ಸಂಸ್ಕೃತಿಯ ಮೂಲ ಪುರುಷ,ಆರಾಧ್ಯದೈವ ಎನ್ನುತ್ತಾರೆ.ಅಯ್ಯಪ್ಪನು ಶಿವಪುತ್ರರಾದ ವೀರಭದ್ರ,ಭೈರವ, ಗಣಪತಿ ಮತ್ತು ಷಣ್ಮುಖರ ನಂತರ ಕಾಣಿಸಿಕೊಳ್ಳುವ ಶೂದ್ರ ಆರ್ಯರ ಇಲ್ಲವೆ ಶೈವ ವೈಷ್ಣವ ಸಂಸ್ಕೃತಿಗಳ ಸಮನ್ವಯದ ದೇವತೆ.ಅಯ್ಯಪ್ಪನು ಶಿವ ಮತ್ತು ಮೋಹಿನಿ ರೂಪದ ವಿಷ್ಣು ಪುತ್ರನೆಂಬುದು ಆತ ಶೈವ ವೈಷ್ಣವ ಸಂಸ್ಕೃತಿಗಳ ಸಮನ್ವಯತತ್ತ್ವ ಪ್ರತೀಕ ದೇವತೆ ಎನ್ನುವುದನ್ನು ಸೂಚಿಸುತ್ತದೆ.

ಹೊರಗಿನಿಂದ ಬಂದ ಆರ್ಯರು ದೇಶದ ಮೂಲನಿವಾಸಿಗಳಾದ ಶೂದ್ರರನ್ನು ಯುದ್ಧದಲ್ಲಿ ಸೋಲಿಸಿ ತಮ್ಮ ಅಧಿಪತ್ಯ ಸ್ಥಾಪಿಸುತ್ತಾರೆ.ಶೂದ್ರ ಸಂಸ್ಕೃತಿಯ ದೇವ ದೇವಿಯರನ್ನು ಆರ್ಯೀಕರಣ ಮಾಡುತ್ತಾರೆ.ರುದ್ರ ಮತ್ತು ಶಿವನ ಸಮೀಕರಣ ಆರ್ಯರ ಇಂತಹ ಪ್ರಯತ್ನವೆ.ವೇದದ ರುದ್ರಾಧ್ಯಾಯದಲ್ಲಿಯೇ ‘ ನಮಃ ಶಿವಾಯ’ ಎನ್ನುವ ಶಿವಪಂಚಾಕ್ಷರಿ ಮಂತ್ರವು ಇದೆ.ವೇದದ ಋಷಿಗಳು ಕಲ್ಯಾಣಕಾರ ಪರಮೇಶ್ವರನನ್ನು ಶಿವನೆಂದು ದುಷ್ಟನಿಗ್ರಹಕಾರಕನಾದ ಶಿವನನ್ನು ರುದ್ರನೆಂದು ಪರಿಭಾವಿಸಿದ್ದರು.ಶೂದ್ರ ಸಂಸ್ಕೃತಿ,ಶೈವ ಧರ್ಮಗಳು ಆರ್ಯೀಕರಣಗೊಂಡಷ್ಟೂ ಅವುಗಳ ಮೂಲಸ್ವರೂಪಕ್ಕೆ ಧಕ್ಕೆಯಾಗಿ,ಆರ್ಯರ ಸಂಸ್ಕೃತಿಯು ಮೇಲುಗೈ ಪಡೆಯಿತು.ಆರ್ಯರ ವಿಷ್ಣು,ಇಂದ್ರ ಮೊದಲಾದ ದೇವತೆಗಳು ಪ್ರಧಾನದೇವತೆಗಳೆಂಬಂತೆ ವಿಜೃಂಭಿಸತೊಡಗಿದರು.ವೇದಪೂರ್ವದಲ್ಲಿ ಶಿವ ಮತ್ತು ಶಕ್ತಿ ಉಪಾಸನೆಗಳು ಮಾತ್ರ ಉಪಾಸನಾ ಪದ್ಧತಿಗಳಾಗಿದ್ದವು.ಆರ್ಯರು ಮತ್ತು ಅವರ ವಂಶಜರ ಕುಲಶ್ರೇಷ್ಠತೆಯ ವ್ಯಸನಪೀಡಿತ ಮನಸ್ಸುಗಳಿಂದ ದೇಶದ ಧಾರ್ಮಿಕ ವಾತಾವರಣವು ವಿಷಮಯವಾಗಿ,ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಕಾಣಿಸಿಕೊಂಡ ಮೊದಲ ಧರ್ಮಪುರುಷನೇ ವೀರಭದ್ರನು.ಭೈರವ ಮತ್ತು ಶರಭೇಶ್ವರರು ಸಹ ದೇಶದ ಮೂಲ ಸಂಸ್ಕೃತಿಯಾದ ಶೈವ ಸಂಸ್ಕೃತಿಯನ್ನು ಎತ್ತಿ ಹಿಡಿದವರು.ಐತಿಹಾಸಿಕವಾಗಿ ಮಹಾವೀರ ಮತ್ತು ಬುದ್ಧರು ಆ ಕೆಲಸ ಮಾಡುತ್ತಾರೆ.ಮೂಲತಃ ಶಿವಭಕ್ತರಾಗಿದ್ದ ಮಹಾವೀರ ಮತ್ತು ಬುದ್ಧ ಇಬ್ಬರೂ ಬ್ರಾಹ್ಮಣರ ಕೈಯ್ಗಳಲ್ಲಿ ಸಿಕ್ಕು ನಲುಗುತ್ತಿದ್ದ ಶೈವ ಧರ್ಮದ ಪುನರುದ್ಧಾರಕ್ಕೆ ಪ್ರಯತ್ನಿಸಿ,ಅಂದಿನ ಸಮಾಜವು ಅವರ ಉದಾತ್ತ ವಿಚಾರಗಳಿಗೆ ಮಹತ್ವನೀಡಲಿಲ್ಲವಾಗಿ ತಮ್ಮದೇ ಆದ ಹೊಸ ಧರ್ಮಗಳನ್ನು ಸ್ಥಾಪಿಸಿದರು.ಮಹಾವೀರ,ಬುದ್ಧ,ಶಂಕರಾಚಾರ್ಯರು ಮತ್ತು ಬಸವಣ್ಣನವರು ಸನಾತನ ಧರ್ಮದ ಕೊಳೆ ಕಸವನ್ನು ತೊಳೆದು ಪರಿಶುಭ್ರಗೊಳಿಸಿದ ಪುರುಷೋತ್ತಮರುಗಳು,ಪುರುಷಸಿಂಹರುಗಳು.ಅವರುಗಳ ಕಾಲಾನಂತರದಲ್ಲಿ ಅವರು ಅನುಯಾಯಿಗಳು ಅವರ ಹೆಸರಿನಲ್ಲಿ ಪ್ರತ್ಯೇಕ ಮತಧರ್ಮಗಳನ್ನು ಸ್ಥಾಪಿಸಿದರು.

ಸನಾತನ ಸಂಸ್ಕೃತಿಯು ಅಪವ್ಯಾಖ್ಯಾನಕ್ಕೆ ಈಡಾಗಿದ್ದಾಗ ಮಹಾವೀರ,ಬುದ್ಧ,ಶಂಕರಾಚಾರ್ಯ ಮತ್ತು ಬಸವಣ್ಣನವರಂತಹ ವಿಭೂತಿ ಪುರುಷಗಳು ಉದಯಿಸಿ ಧರ್ಮಕ್ಕಂಟಿದ್ದ ಕೊಳೆ,ಕಶ್ಮಲವನ್ನೆಲ್ಲ ತೊಳೆದು ಪರಿಶುಭ್ರಗೊಳಿಸಿದರು.ಇದನ್ನು ಅರ್ಥಮಾಡಿಕೊಳ್ಳದೆ ಬ್ರಾಹ್ಮಣರ ಮತವನ್ನೇ ಸನಾತನ ಧರ್ಮವೆಂದು ಬಗೆದು ಅದರಲ್ಲಿ ಕಂದು- ಕುಂದುಗಳನ್ನರಸುವುದು ವಿವೇಕಿಗಳ ಲಕ್ಷಣವಲ್ಲ.

 

About The Author