ಸಿಡಿಪಿಓ ಕಾರ್ಯಕ್ಷಮತೆಗೆ ಕಾರ್ಮಿಕರ ಸಂಘ ಮೆಚ್ಚುಗೆ ದಕ್ಷ ಅಧಿಕಾರಿಗಳ ರಕ್ಷಣೆಗಾಗಿ ಹೋರಾಟಕ್ಕೂ ಸಿದ್ಧ – ಪ್ರದೀಪ ಅಣಬಿ

ಶಹಾಪುರ : ಇಲ್ಲಿನ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದು, ಹಲವರು ಇಲ್ಲ ಸಲ್ಲದ ಆರೋಪ ಮಾಡುವ ಮೂಲಕ ಅವರ ಕರ್ತವ್ಯಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ಸಂಬಂಧಿಸಿದ ಮೇಲಧಿಕಾರಿಗಳು ಶಹಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರದೀಪ ಅಣಬಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಶಹಾಪುರ ಸಿಡಿಪಿಓ ಮೀನಾಕ್ಷಿ ಪಾಟೀಲ್ ಅವರು ತಮ್ಮ ವ್ಯಾಪ್ತಿಯ ಕ್ಷೇತ್ರದಲ್ಲಿ ಕಾಳಜಿಪೂರ್ವಕವಾಗಿ ಸಮರ್ಪಕ ಕರ್ತವ್ಯ ನಿರ್ವಹಿಸುತ್ತಿದ್ದು, ಹಲವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದು, ಉಪನಿರ್ದೇಶಕರಾದ ತಾವುಗಳು ಯಾವುದೇ ಹುರುಳಿಲ್ಲದ ಆರೋಪಗಳಿಗೆ ಕಿವಿಗೊಡದೆ ನಿಮ್ಮ ಇಲಾಖೆಯ ದಕ್ಷತೆಯ ಅಧಿಕಾರಿಗಳಿಗೆ ಬೆನ್ನೆಲೆಬಾಗಿ ನಿಲ್ಲಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸಿಡಿಪಿಓ ಮೀನಾಕ್ಷಿ ಪಾಟೀಲ್ ಅವರು, ಸರ್ಕಾರದ ಮಹತ್ವಪೂರ್ಣ ಯೋಜನೆಗಳಾದ, ಮಾತೃ ವಂದನಾ, ಮಾತೃಪೂರ್ಣ, ಭಾಗ್ಯಲಕ್ಷ್ಮಿ ಈ ಸಮೀಕ್ಷೆ, ಬಿಎಲ್‌ಓ, ಅಪೌಷ್ಠಿಕ ಮಕ್ಕಳ ಹಾಗೂ ಗರ್ಭಿಣಿ ಮಹಿಳೆಯರ ಮತ್ತು ಬಾಣಂತಿಯರ ಆರೈಕೆ ಸೇರಿದಂತೆ ಚುಚ್ಚುಮದ್ದು ಹಾಕಿಸುವ ವಿವಿಧ ಯೋಜನೆಗಳನ್ನು ಚಾಚು ತಪ್ಪದೆ ಅಚ್ಚುಕಟ್ಟಾಗಿ ಮಾಡುತ್ತಾ ಬಂದಿದ್ದಾರೆ. ಯಾವುದೇ ಅಂಗನವಾಡಿ ಶಾಲೆಗಳ ಅಭಿವೃದ್ಧಿಯತ್ತ
ಗಮನ ಹರಿಸಿದ್ದು, ಸಮರ್ಪಕ ನ್ಯಾಯ ಒದಗಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇವರಿಂದ ತಾಲೂಕಿನಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದ್ದು, ಮೇಲಧಿಕಾರಿಗಳಾದ ತಾವುಗಳು ಇಂತಹ ಅಧಿಕಾರಿಗಳಿಗೆ ಬೆಂಬಲ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ. ಹುರುಳಿಲ್ಲದ ಆರೋಪಕ್ಕೆ ದಕ್ಷ ಅಧಿಕಾರಿಗಳನ್ನು ಬಲಿ ಕೊಡಲು ಹೊರಟರೆ ನಮ್ಮ ಸಂಘಟನೆ ಅದನ್ನು ವಿರೋಧಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
 
ತಾಲೂಕಿನಲ್ಲಿ ಹಲವು ಜನ ದಕ್ಷ ಕಾಳಜಿಪೂರ್ವಕ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ವಿವಿಧ ಇಲಾಖೆಯಲ್ಲಿದ್ದಾರೆ. ಅದರಲ್ಲಿ ಸಿಡಿಪಿಓ ಒಬ್ಬರು. ಇಂತಹ ಅಧಿಕಾರಿಗಳ ವಿರುದ್ಧ ಹಲವರು ಇಲ್ಲದ ಆರೋಪ ಮಾಡುವ ಮೂಲಕ ಅವರನ್ನು ಎತ್ತಂಗಡಿ ಮಾಡಿಸಲು ಹುನ್ನಾರ ನಡೆಸಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳ ಎತ್ತಂಗಡಿಗೆ ಮೇಲಧಿಕಾರಿಗಳು ಮುಂದಾದಲ್ಲಿ ಕಾರ್ಮಿಕ ಸಂಘಟನೆಯಿಂದ ಪ್ರಬಲ ಹೋರಾಟ ಅನಿವಾರ್ಯ
-ಪ್ರದೀಪ ಅಣಬಿ. ಕಾರ್ಮಿಕ ಸಂಘಟನೆಯ ಅಧ್ಯಕ್ಷ.