ಮೂರನೇ ಕಣ್ಣು : ಕಳಂಕಿತ ಅಧಿಕಾರಿಗಳನ್ನು ಬಳಿ ಇಟ್ಟುಕೊಂಡು ಆಡಳಿತ ನಡೆಸುವುದು ಮುಖ್ಯಮಂತ್ರಿ ಸಿದ್ರಾಮಯ್ಯನವರ ಸಂವಿಧಾನ ಬದ್ಧತೆಯೆ ? : ಮುಕ್ಕಣ್ಣ ಕರಿಗಾರ

ಮುಖ್ಯಮಂತ್ರಿ ಸಿದ್ರಾಮಯ್ಯನವರು ಆಗಾಗ್ಗೆ ಸಂವಿಧಾನ ಬದ್ಧತೆಯ ಮಾತುಗಳನ್ನು ಆಡುತ್ತಿರುತ್ತಾರೆ.ಆದರೆ ಅವರ ಸಂವಿಧಾನದ ಬದ್ಧತೆಯ ಮಾತುಗಳು ಬರಿಯ ಬಾಯುಪಚಾರದ ಮಾತುಗಳೆ ಅಥವಾ ಸಂವಿಧಾನದ ಬಗೆಗಿನ ನಿಜ ನಿಷ್ಠೆಯ ಮಾತುಗಳೆ ಎಂಬುದು ಗೊತ್ತಾಗುತ್ತಿಲ್ಲ.ವರುಣಾ ವಿಧಾನಸಭಾ ಕ್ಷೇತ್ರದ ಆಶ್ರಯಸಮಿತಿಯ ಅಧ್ಯಕ್ಷರನ್ನಾಗಿ ತಮ್ಮ ಮಗ ಡಾ. ಯತೀಂದ್ರ ಅವರನ್ನು ನೇಮಿಸುವ ಮೂಲಕ ಸಂವಿಧಾನದ ಆಶಯಕ್ಕೆ ಧಕ್ಕೆ ತಂದಿದ್ದ ಮುಖ್ಯಮಂತ್ರಿ ಸಿದ್ರಾಮಯ್ಯನವರು ಕಳಂಕಿತ ಅಧಿಕಾರಿ ಒಬ್ಬರನ್ನು ತಮ್ಮ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿರುವ ಪ್ರಕರಣವು ಬೆಳಕಿಗೆ ಬಂದಿರುವ ಹಿನ್ನೆಯಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಸಾಂವಿಧಾನಿಕ ನಿಷ್ಠೆಯ ಬಗ್ಗೆ ಸಂದೇಹ ಉಂಟಾಗಿದೆ.ಪ್ರಸ್ತುತ ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿಯಾಗಿರುವ ಬಿ.ಶಿವಸ್ವಾಮಿಯವರ ವಿರುದ್ಧ ಕರ್ತವ್ಯಲೋಪ ಹಾಗೂ ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಗಂಭೀರ ಆರೋಪಗಳಿವೆ.ಬಿ.ಶಿವಸ್ವಾಮಿಯವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ –1 ಆಗಿದ್ದ ವೇಳೆಯಲ್ಲಿ ಲಿಂಗಧೀರನಹಳ್ಳಿಯ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿರಿಸಿದ್ದ ಸಿ.ಎ.ನಿವೇಶನ‌1/ಎ ಯ ಬಗ್ಗೆ ಮೇಲಾಧಿಕಾರಗಳಿಗೆ ಕಡತದಲ್ಲಿತಪ್ಪು ಮಾಹಿತಿ ನೀಡಿದ್ದಾರೆಂದೂ,ಹಕ್ಕು ಬಾಧ್ಯತಾಸಮಿತಿಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ,ಈ ಪ್ರಕರಣದಲ್ಲಿ ಭಾಗಿಯಾದವರೆಲ್ಲರ ವಿರುದ್ಧ ಪೋಲೀಸರಿಗೆ ದೂರು ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬಿ.ಶಿವಸ್ವಾಮಿ ಸೇರಿದಂತೆ ಇತರರ ವಿರುದ್ಧ ಶೇಷಾದ್ರಿಪುರಂ ಪೋಲೀಸ್ ಠಾಣೆಯಲ್ಲಿ 31.12.2019 ರಂದು ದೂರು ದಾಖಲಿಸಿದ್ದು ಬಿ.ಶಿವಸ್ವಾಮಿಯವರು ಕರ್ತವ್ಯಲೋಪ ಎಸಗಿದ್ದಲ್ಲದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದು ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕೋರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ 01.01.2020ರಂದು ಪತ್ರ ಬರೆದಿದ್ದಾರೆ. ಕರ್ತವ್ಯ ಲೋಪ ಎಸಗಿದ್ದಲ್ಲದೆ ಸಾರ್ವಜನಿಕ ಸಂಪತ್ತಿನ ನಷ್ಟಕ್ಕೆ ಕಾರಣರಾದ ಅಧಿಕಾರಿ ಒಬ್ಬರನ್ನು ಮುಖ್ಯಮಂತ್ರಿ ಸಿದ್ರಾಮಯ್ಯನವರು ತಮ್ಮ ಸಚಿವಾಲಯದ ಜಂಟಿಕಾರ್ಯದರ್ಶಿ ಹುದ್ದೆಗೆ ನೇಮಿಸಿಕೊಂಡರೆ ಅದು ಸಾರ್ವಜನಿಕರಿಗೆ ಯಾವ ಸಂದೇಶ ರವಾನಿಸಬಹುದು? ಮುಖ್ಯಮಂತ್ರಿಯವರ ಈ ಕ್ರಮವು ಪ್ರಾಮಾಣಿಕ,ನಿಷ್ಠಾವಂತಸರಕಾರಿ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿಸುವುದಿಲ್ಲವೆ ? ಪರಿಸ್ಥಿತಿಯು ಎಲ್ಲಿಗೆ ಮುಟ್ಟಿದೆ ಎಂದರೆ ಬಿ.ಶಿವಸ್ವಾಮಿಯವರ ಮೇಲೆ ಶಿಸ್ತುಕ್ರಮ ಜರುಗಿಸುವ ಪತ್ರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸಂಬಂಧಿತ ಶಾಖೆಯಲ್ಲಿ ಸ್ವೀಕೃತವಾಗಿಲ್ಲವೆಂದೂ ಮತ್ತು ಆ ಬಗ್ಗೆ ತಮ್ಮ ಕಛೇರಿಯಲ್ಲಿ ಯಾವುದೇ ಮಾಹಿತಿ ಇಲ್ಲವೆಂದು ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಯ ಸಾರ್ವಜನಿಕಮಾಹಿತಿಹಕ್ಕು ಅಧಿಕಾರಿಯಾದ ಅಧೀನಕಾರ್ಯದರ್ಶಿ ಉಮಾದೇವಿಯವರು ಈ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿದ್ದ ಬೆಂಗಳೂರಿನ,ನಂದಿನಿ ಲೇಔಟ್ ನ ಶಂಕರ ನಗರ ನಿವಾಸಿ ಜಿ.ಮಹಾಂತೇಶ ಅವರಿಗೆ ಲಿಖಿತ ಹಿಂಬರಹ ನೀಡಿದ್ದಾರೆ.ಈ ಪ್ರಕರಣವು ಮುಖ್ಯಮಂತ್ರಿ ಸಿದ್ರಾಮಯ್ಯನವರಿಗೆ ತೀವ್ರ ಮುಜುಗರ ಉಂಟು ಮಾಡುವ ಪ್ರಕರಣ ಮಾತ್ರವಲ್ಲ ಮುಖ್ಯಮಂತ್ರಿಯವರ ಸಾಂವಿಧಾನಿಕ ಬದ್ಧತೆಯನ್ನು ಸಹ ಪ್ರಶ್ನಿಸುವ ಪ್ರಕರಣವಾಗಿದೆ.

‌ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯು ನೇರವಾಗಿ ಮುಖ್ಯಮಂತ್ರಿಯವರ ಆಧೀನದಲ್ಲಿರುವ ಸರಕಾರಿ ಅಧಿಕಾರಿಗಳ ಸೇವಾಸಂಬಂಧಿ ಇಲಾಖೆ .ಐಎಎಸ್ ಮತ್ತು ಕೆ ಎ ಎಸ್ ಅಧಿಕಾರಿಗಳ ಸೇವಾ ವಿಷಯಕ್ಕೆ ಸಂಬಂಧಿಸಿದ ದಾಖಲೆಗಳು ಕೂಡ ಈ ಇಲಾಖೆಯಲ್ಲಿ ನಿರ್ವಹಿಸಲ್ಪಡುತ್ತವೆ.ಇಂತಹ ಇಲಾಖೆಯೆ ಬಿ.ಶಿವಸ್ವಾಮಿಯವರ ವಿರುದ್ಧದ ದೂರಿನ ಮಾಹಿತಿ ಇಲ್ಲವೆಂದು ತಿಳಿಸಿದರೆ ಅದು ಸಾರ್ವಜನಿಕ ಸೇವೆಗೆ ಎಸಗುವ ಅಪಚಾರವಲ್ಲವೆ ? ಮಾಹಿತಿ ಮುಚ್ಚಿಟ್ಟ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಪಾತ್ರ ಇಲ್ಲದೆ ಇರಬಹುದು.ಆದರೆ ಬಿ.ಶಿವಸ್ವಾಮಿಯವರು ಮುಖ್ಯಮಂತ್ರಿ ಸಚಿವಾಲಯದ ಪ್ರಭಾವ ಬಳಸಿಕೊಂಡಿರುವುದಿಲ್ಲವೆ ? ಬಿ.ಶಿವಸ್ವಾಮಿಯವರು ಅಪರಾಧಿ ಹೌದೋ ಅಲ್ಲವೋ ಎನ್ನುವುದನ್ನು ನ್ಯಾಯಾಲಯವು ನಿರ್ಣಯಿಸುತ್ತದೆ ಎಂಬುದು ನಿಜವಾದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರೇ ಬರೆದ ಪತ್ರ ಮತ್ತು ಶೇಷಾದ್ರಿಪುರಂ ಪೋಲೀಸ್ ಠಾಣೆಯಲ್ಲಿ ದೂರುದಾಖಲಾಗಿರುವ ಅಧಿಕಾರಿ ಒಬ್ಬರನ್ನು ಮುಖ್ಯಮಂತ್ರಿಯವರು ತಮ್ಮ ಜಂಟಿ ಕಾರ್ಯದರ್ಶಿಯ ಹುದ್ದೆಗೆ ನೇಮಿಸಿಕೊಳ್ಳುತ್ತಾರೆ ಎಂದರೆ ಏನೆಂದು ಅರ್ಥೈಸುವುದು?

ಭ್ರಷ್ಟಾಚಾರದ ಬಗ್ಗೆ ತಮ್ಮದು ಶೂನ್ಯತಾಳ್ಮೆ( Zero tolerance) ಯ ನಿಲುವು ಎಂದೂ,ಪಾರದರ್ಶಕ ಆಡಳಿತ ನೀಡುತ್ತೇನೆ ಎಂದೂ ಮುಖ್ಯಮಂತ್ರಿಯವರು ಆಗಾಗ್ಗೆ ಹೇಳುತ್ತಿರುವುದುಂಟು.ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದಾದರೆ ಸಾರ್ವಜನಿಕ ಆಸ್ತಿಯ ನಷ್ಟಕ್ಕೆ ಕಾರಣರಾದ ಅಧಿಕಾರಿಯನ್ನು ಮುಖ್ಯಮಂತ್ರಿಯವರು ತಮ್ಮ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದೇಕೆ? ಮುಖ್ಯಮಂತ್ರಿಗಳು ರಾಜ್ಯ ಕಾರ್ಯಾಂಗದ ನಿಜ ಮುಖ್ಯಸ್ಥರು .ಐಎಎಸ್,ಕೆ ಎ ಎಸ್ ಸೇವೆಗೆ ಸೇರಿದಂತೆ ಎಲ್ಲ ಅಧಿಕಾರಿವೃಂದದ ಮೇಲೆ ನಿಯಂತ್ರಣಾಧಿಕಾರ ಹೊಂದಿರುವ ರಾಜ್ಯಾಡಳಿತದ ಮುಖ್ಯಸ್ಥರು.ಎಲ್ಲ ಸರಕಾರಿ ಅಧಿಕಾರಿಗಳು ಮುಖ್ಯಮಂತ್ರಿಯವರ ಬಗ್ಗೆ ಗೌರವ,ನಿಷ್ಠೆಯನ್ನು ಹೊಂದಿರುತ್ತಾರೆ.ರಾಜ್ಯದ ಅಧಿಕಾರಿಗಳಲ್ಲಿ ಕೆಲವರಾದರೂ ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿಗಳಿದ್ದಾರೆ.ಅಂತಹ ಅಧಿಕಾರಿಗಳಲ್ಲಿ ನೈತಿಕಸ್ಥೈರ್ಯ ತುಂಬಬೇಕಿರುವ ಮುಖ್ಯಮಂತ್ರಿಯವರೇ ಕಳಂಕಿತ ಅಧಿಕಾರಿಯನ್ನು ತಮ್ಮ ಬಳಿ ಇಟ್ಟುಕೊಂಡರೆ ಹೇಗೆ? ಇದು ಶಿವಸ್ವಾಮಿ ಒಬ್ಬರಿಗೇ ಸಂಬಂಧಿಸಿದ ಪ್ರಶ್ನೆಯಲ್ಲ.ಮುಖ್ಯಮಂತ್ರಿಯವರಿಗೆ ಹತ್ತಿರ ಇರುವ,ಅವರ ಸಚಿವಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳ ‘ ಜಾತಕ’ ಪರಿಶೀಲಿಸಿದರೆ ಅದೆಷ್ಟು ಕಳಂಕಿತ ಅಧಿಕಾರಿಗಳಿದ್ದಾರೋ?

ಮುಖ್ಯಮಂತ್ರಿ ಸಿದ್ರಾಮಯ್ಯನವರು ಭರ್ಜರಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲರಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಇಡೀ ರಾಜ್ಯವೇ ಟಿ ವಿ ಚಾನೆಲ್ಲುಗಳ ಮೂಲಕ ನೋಡುವಂತೆ ಪ್ರಮಾಣವಚನ ಸ್ವೀಕರಿಸಿದ್ದಾರೆ.ಸಂವಿಧಾನದ ಅನುಚ್ಛೇದಗಳಂತೆ ಸಿದ್ಧಪಡಿಸಲ್ಪಟ್ಟ ಪ್ರಮಾಣವಚನಪತ್ರವು ‘ ಸಂವಿಧಾನಕ್ಕೆ ಬದ್ಧರಿರುವ ಪ್ರತಿಜ್ಞೆ’ ಯನ್ನು ಸ್ವೀಕರಿಸಲು ಒತ್ತಾಯಪಡಿಸುತ್ತದೆ.”———-ಎಂಬ ಹೆಸರಿನವನಾದ ನಾನು,ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದೂ,ನಾನು ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುತ್ತೇನೆಂದೂ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಅಂತಃಕರಣಪೂರಕವಾಗಿ ನಿರ್ವಹಿಸುತ್ತೇನೆಂದೂ ಭಯ ಅಥವಾ ಪಕ್ಷಪಾತವಿಲ್ಲದೆ,ರಾಗ ದ್ವೇಷವಿಲ್ಲದೆ ಎಲ್ಲಾ ಬಗೆಯ ಜನರಿಗೆ,ಸಂವಿಧಾನಕ್ಕೆ ಮತ್ತು ಕಾನೂನಿಗೆ ಅನುಸಾರವಾಗಿ ನ್ಯಾಯವಾದುದನ್ನೇ ಮಾಡುತ್ತೇನೆಂದೂ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ/ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ” ಎಂದು ಮುಖ್ಯಮಂತ್ರಿಯಾಗುವ ಮುಂಚೆ ಸಿದ್ರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ್ದಾರೆ.ಈ ಪ್ರಮಾಣವಚನದಂತೆ ಅವರು ಭಯ ಅಥವಾ ಪಕ್ಷಪಾತವಿಲ್ಲದೆ ಸಂವಿಧಾನಕ್ಕೆ ನಿಜನಿಷ್ಠೆಯುಳ್ಳವರಾಗಿ ನಡೆದುಕೊಳ್ಳಬೇಕು.ಅಲ್ಲದೆ ಭಾರತದ ಸಂವಿಧಾನದ ಅನುಚ್ಛೇದ 188 ರಂತೆ ವಿಧಾನಸಭೆಯ ಸದಸ್ಯರಾಗಿಯೂ ಅವರು ಸ್ವೀಕರಿಸಿದ ಪ್ರಮಾಣವಚನದಲ್ಲಿಯೂ’ ಸಂವಿಧಾನದ ವಿಷಯದಲ್ಲಿ ನಿಜ ನಿಷ್ಠೆಯನ್ನು ಹೊಂದಿರುತ್ತೇನೆಂದೂ…ಶ್ರದ್ಧಾಪೂರ್ವಕವಾಗಿ ಕರ್ತವ್ಯಗಳನ್ನು ನಿರ್ವಹಿಸುತ್ತೇನೆ ಎಂದೂ’ ಪ್ರಮಾಣವಚನ ಸ್ವೀಕರಿಸಿದ್ದಾರೆ.ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನವು ಯಾರ ಬಗ್ಗೆಯೂ ಪಕ್ಷಪಾತ ನಿಲುವು ತಳೆಯಬಾರದೆಂದೂ ನೆಲದಕಾನೂನನ್ನು ಗೌರವಿಸಬೇಕು ಎಂದು ಆಗ್ರಹಪಡಿಸುತ್ತದೆ.ಭಾರತದ ಸಂವಿಧಾನದ ಅನುಚ್ಛೇದಗಳಡಿಯಂತೆಯೇ ಪೋಲೀಸ್ ಠಾಣೆಯಲ್ಲಿ‌ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಮತ್ತು ಸಾರ್ವಜನಿಕ ಆಸ್ತಿಗೆ ನಷ್ಟವನ್ನುಂಟು ಮಾಡಿರುವ ಅಧಿಕಾರಿ ಒಬ್ಬರನ್ನು ತಮ್ಮ ಬಳಿ ಇಟ್ಟುಕೊಳ್ಳುವುದು ಮುಖ್ಯಮಂತ್ರಿ ಸಿದ್ರಾಮಯ್ಯನವರು ಸಂವಿಧಾನಕ್ಕೆ ಎಸಗಿದ ಅಪಚಾರವಲ್ಲವೆ? ಅಥವಾ ಸಂವಿಧಾನದ ಬದ್ಧತೆಯ ಹೆಸರಿನಲ್ಲಿ ಸಂವಿಧಾನದ ಆಶಯವನ್ನು ಮನಸ್ಸಿಗೆ ಬಂದಂತೆ ಅರ್ಥೈಸಬಹುದೆ?

ಮುಖ್ಯಮಂತ್ರಿಯವರು ತಮ್ಮ ಕಛೇರಿಯ ದಕ್ಷಿಣದ ಬಾಗಿಲನ್ನು ತೆರೆದು ವಾಸ್ತುದೋಷ ಎನ್ನುವುದು ಮೌಢ್ಯ ಎಂದು ಸಾರಿದರೆ ಮಾತ್ರ ಸಾಲದು,ತಮ್ಮ ಸಚಿವಾಲಯ ಮತ್ತು ತಮ್ಮ ಸುತ್ತಮುತ್ತ ಇರುವ ಅಧಿಕಾರಿಗಳು ಪರಿಶುದ್ಧರು,ಕಳಂಕರಹಿತರು ಎನ್ನುವ ಪರಿಶುದ್ಧತೆಯ ಗಾಳಿ ಪಸರಿಸುವಂತೆ ಮಾಡಬೇಕು.ಆ ಸಾಂವಿಧಾನಿಕ ಹೊಣೆಗಾರಿಕೆಯೂ ಅವರ ಮೇಲಿದೆ.

About The Author