ಮೂರನೇ ಕಣ್ಣು : ಡಾ. ಯತೀಂದ್ರ ಅವರನ್ನು ಆಶ್ರಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದು ಸರಿಯಲ್ಲ ! : ಮುಕ್ಕಣ್ಣ ಕರಿಗಾರ

 

ಡಾ.ಯಂತಿಂದ್ರ ಸಿದ್ದರಾಮಯ್ಯ.

ಮುಖ್ಯಮಂತ್ರಿ ಸಿದ್ರಾಮಯ್ಯನವರ ಪುತ್ರ,ಕಾಂಗ್ರೆಸ್ ಮುಖಂಡ ಡಾ.ಯತೀಂದ್ರ ಅವರನ್ನು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಜಿಲ್ಲಾ ಸಮಿತಿ ಸದಸ್ಯ ಹಾಗೂ ವರುಣಾ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಡಾ.ಯತೀಂದ್ರ ಅವರೇ ಹೇಳಿಕೊಂಡ ಸುದ್ದಿ ವರದಿಯಾಗಿದೆ.( ಪ್ರಜಾವಾಣಿ,ಅಗಸ್ಟ್ 28,ಪುಟ 5) ಡಾ.ಯತೀಂದ್ರ ಅವರನ್ನು ಜಿಲ್ಲಾ ಕೆಡಿಪಿ ಸಭೆಯ ಸದಸ್ಯರನ್ನಾಗಿ ನೇಮಿಸಿದ್ದರಲ್ಲಿ ತಪ್ಪಿಲ್ಲ; ನಿಯಮಗಳಲ್ಲಿ ಅದಕ್ಕೆ ಅವಕಾಶ ಇದೆಯಾದ್ದರಿಂದ ಅದು ಸರಿ.

ಆದರೆ ಡಾ.ಯತೀಂದ್ರ ಅವರನ್ನು ವರುಣಾ ವಿಧಾನ ಸಭಾ ಕ್ಷೇತ್ರದ ಆಶ್ರಯಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ ಸರಕಾರದ ಕ್ರಮವು ಸರಿಯಲ್ಲ ಮತ್ತು ಅದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ಕ್ರಮ.ರಾಜ್ಯದ ಇತರ ಸಚಿವರು,ಶಾಸಕರುಗಳಿಗೆ ಆದರ್ಶರಾಗಿರಬೇಕಾಗಿದ್ದ ಮುಖ್ಯಮಂತ್ರಿ ಸಿದ್ರಾಮಯ್ಯನವರೇ ಇಂತಹ ನಿಯಮೋಲ್ಲಂಘನೆ ಮಾಡಿದರೆ ಹೇಗೆ?

‌ ಆಶ್ರಯ ವಸತಿ ಯೋಜನೆಯು 2002 ರಲ್ಲಿ ಜಾರಿಗೆ ಬಂದಿದ್ದು ಬಸವ ವಸತಿಯೋಜನೆಯೊಂದಿಗೆ ಅದನ್ನು ಸಮ್ಮಿಳಿತಗೊಳಿಸಿದ ಯೋಜನೆಯು ನಂತರದ ವರ್ಷಗಳಲ್ಲಿ ಜಾರಿಗೆ ಬಂದಿದೆ.ವಸತಿ ಯೋಜನೆಯಡಿ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸುವ,ಆಶ್ರಯ ಯೋಜನೆಯಡಿ ನಿರ್ಮಿಸಲಾಗುವ ಮನೆಗಳಿಗೆ ಭೂಮಿಯನ್ನು ಒದಗಿಸುವ,ಖರೀದಿ ಪ್ರಸ್ತಾವನೆಗಳನ್ನು ಅನುಮೋದಿಸುವ ತಾಲೂಕಾ ಮಟ್ಟದ ಆಶ್ರಯ ಸಮಿತಿಗೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಿರುತ್ತಾರೆ.ತಾಲೂಕಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ತಾಲೂಕಾ ಮಟ್ಟದ ಆಶ್ರಯ ಸಮಿತಿಗೆ ಅದರದ್ದೇ ಆದ ಮಾನ್ಯತೆ ಇದೆ.

ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರು ಅದರ ಅಧ್ಯಕ್ಷರು ಆಗಿರುತ್ತಾರೆ ಎನ್ನುವ ಕಾರಣದಿಂದ.ಶಾಸಕರು ಆದವರಿಗೆ ತಾಲೂಕಾ ಮಟ್ಟದ ತಹಶೀಲ್ದಾರ ಸೇರಿದಂತೆ ಇತರ ಅಧಿಕಾರಿಗಳ ಮೇಲೆ ನಿಯಂತ್ರಣ ಇರಲಿ,ಅಧಿಕಾರಿಗಳು ಶಾಸಕರೊಂದಿಗೆ ಸಮನ್ವಯದಿಂದ ಕೆಲಸ ಮಾಡಲಿ ಎನ್ನುವ ಕಾರಣದಿಂದ ಆಶ್ರಯಸಮಿತಿಗೆ ಶಾಸಕರುಗಳನ್ನು ಅಧ್ಯಕ್ಷರುಗಳನ್ನಾಗಿ ನೇಮಿಸಲಾಗಿದೆ.ಅಂದರೆ ಶಾಸಕಸ್ಥಾನದೊಂದಿಗೆ ನೀಡಲಾದ ಹೆಚ್ಚುವರಿ ಹೊಣೆಗಾರಿಕೆ ತಾಲೂಕಾ ಆಶ್ರಯ ಸಮಿತಿಯ ಅಧ್ಯಕ್ಷಸ್ಥಾನ ಎನ್ನುವುದು ಸ್ಪಷ್ಟ.ಶಾಸಕರಲ್ಲದವರನ್ನು ತಾಲೂಕಾ ಆಶ್ರಯ ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವಂತಿಲ್ಲ.

ಒಂದು ವೇಳೆ ಆ ತಾಲೂಕಿನಲ್ಲಿ ಒಬ್ಬರಿಗಿಂತ ಹೆಚ್ಚುಜನ ಶಾಸಕರುಗಳಿದ್ದರೆ ತಾಲೂಕಿನ ಹೆಚ್ಚು ಪ್ರದೇಶವನ್ನು ಪ್ರತಿನಿಧಿಸುವ ಶಾಸಕರನ್ನು ಅಧ್ಯಕ್ಷರನ್ನಾಗಿ ಇತರ ಶಾಸಕರುಗಳನ್ನು ಸಹ ಅಧ್ಯಕ್ಷರುಗಳನ್ನಾಗಿ ನೇಮಿಸಲು ಅವಕಾಶ ಉಂಟು.ವಿಧಾನ ಪರಿಷತ್ ಸದಸ್ಯರುಗಳಿದ್ದರೆ ಅವರು ಕೂಡ ಸಹ ಅಧ್ಯಕ್ಷರು ಇಲ್ಲವೆ ಸದಸ್ಯರು ಆಗಬಹುದು.ಆದರೆ ಶಾಸಕನಲ್ಲದ ವ್ಯಕ್ತಿ ತಾಲೂಕಾ ಮಟ್ಟದ ಆಶ್ರಯ ಸಮಿತಿಗೆ ಅಧ್ಯಕ್ಷರಾಗಲು ಅವಕಾಶವಿಲ್ಲ.ಈ ಬಗ್ಗೆ ಸರಕಾರಿ ನಿಯಮಗಳಿಗೆ ತಿದ್ದುಪಡಿಯೂ ಆಗಿಲ್ಲ.ಒಂದು ವೇಳೆ ತಿದ್ದುಪಡಿ ಆಗುವಂತಿದ್ದರೆ ಅದನ್ನು ಸರಕಾರದ ಸಾಮಾನ್ಯ ಆದೇಶದಂತೆ ಮಾಡಲು ಅವಕಾಶವಿಲ್ಲ.ಅದಕ್ಕೆ ವಿಧೇಯಕವನ್ನು ಮಂಡಿಸಿ,ಸದನದ ಅನುಮೋದನೆ ಪಡೆದು ಶಾಸನವನ್ನಾಗಿ ರೂಪಿಸಬೇಕು.ಹೀಗಿರುವಾಗ ಮುಖ್ಯಮಂತ್ರಿ ಸಿದ್ರಾಮಯ್ಯನವರು ಈ ಯಾವುದನ್ನು ಗಮನಿಸದೆ ತಮ್ಮ ಪುತ್ರ ಡಾ. ಯತೀಂದ್ರ ಅವರನ್ನು ವರುಣಾ ವಿಧಾನಸಭಾ ಕ್ಷೇತ್ರದ ತಾಲೂಕಾ ಆಶ್ರಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದರೆ?

ಸಿದ್ರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳು,ಕೆಲಸದ ಒತ್ತಡ ಬಹಳ ಇರುತ್ತದೆ ಎನ್ನುವುದು ಒಪ್ಪೋಣ.ಆದರೆ ಅವರು ಮೊದಲು ವರುಣಾಕ್ಷೇತ್ರದ ಶಾಸಕರು.ಶಾಸಕರಾಗಿ ವರುಣಾ ಕ್ಷೇತ್ರದ ಹೊಣೆಗಾರಿಕೆಯನ್ನು ನಿಭಾಯಿಸಬೇಕಾದವರು.ವರುಣಾ ಕ್ಷೇತ್ರದ ಶಾಸಕರಾಗಿದ್ದ ಕಾರಣದಿಂದಲೇ ದೊರೆತ ವರುಣಾ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷಸ್ಥಾನವನ್ನು ಅವರ‌ಪುತ್ರ ಡಾ.ಯತೀಂದ್ರ ಅವರಿಗೆ ವಹಿಸಿಕೊಟ್ಟಿದ್ದು ಸರಿಯಾದ ಕ್ರಮವಲ್ಲ.ತಾಲೂಕಾ ಆಶ್ರಯ ಸಮಿತಿಯ ಸಭೆಗಳೇನು ಹದಿನೈದು ದಿನಗಳಿಗೊಮ್ಮೆ ಇಲ್ಲವೆ ತಿಂಗಳಿಗೊಮ್ಮೆ ನಡೆಯುವುದಿಲ್ಲ,ವರ್ಷಕ್ಕೆ ಒಂದೆರಡು ಬಾರಿ ನಡೆದರೆ ಅದೇ ಸಾಧನೆ.ಹೀಗಿರುವಾಗ ಡಾ. ಯತೀಂದ್ರ ಅವರನ್ನು ವರುಣಾ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದ ಔಚಿತ್ಯವೇನು? ತಾಲೂಕಾ ಮಟ್ಟದ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನವು ಶಾಸಕಸ್ಥಾನದ ಬಲದಿಂದಲೇ ಪ್ರಾಪ್ತವಾಗುವ ಅಧಿಕಾರವೇ ಹೊರತು ಅದನ್ನು ಸರಕಾರಿ ಅಧಿಕಾರಿಗಳಿಗೆ ನೀಡುವಂತಹ ‘ ಪ್ರತ್ಯಾಯೋಜನೆಯ( delegation) ಇಲ್ಲವೆ ಹೆಚ್ಚುವರಿ ಪ್ರಭಾರದಲ್ಲಿ‌ (additional charge) ಇರಿಸುವ ಅಧಿಕಾರವಲ್ಲ.ಮುಖ್ಯಮಂತ್ರಿ ಸಿದ್ರಾಮಯ್ಯನವರು ವರುಣಾ ಕ್ಷೇತ್ರದ ಶಾಸಕರು ಆಗಿರುವುದರಿಂದ ಅವರೇ ಆ ತಾಲೂಕಿನ ಆಶ್ರಯ ಸಮಿತಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಬೇಕು.

ಮುಖ್ಯಮಂತ್ರಿಯವರ ಮಾರ್ಗವನ್ನೇ ಇತರ ಶಾಸಕರು ಅನುಸರಿಸಿ ತಮ್ಮ ಮಕ್ಕಳುಗಳನ್ನು ತಾಲೂಕಾ ಮಟ್ಟದ ಆಶ್ರಯ ಸಮಿತಿಗಳ ಅಧ್ಯಕ್ಷರುಗಳನ್ನಾಗಿ ನೇಮಿಸಿದರೆ ಪರಿಸ್ಥಿತಿ ಹೇಗಾಗಲಿಕ್ಕಿಲ್ಲ?ಬಹಳಷ್ಟು ಜನ ಶಾಸಕರ ಪರವಾಗಿ ಅವರ ಪುತ್ರಂದಿರೋ ಅಳಿಯಂದಿರುಗಳೋ ಅನಧಿಕೃತ ಅಧಿಕಾರ ಚಲಾಯಿಸುತ್ತಿದ್ದಾರೆ.ಈಗ ಶಾಸಕರುಗಳ ಮಕ್ಕಳೇ ತಾಲೂಕಾ ಆಶ್ರಯ ಸಮಿತಿಯ ಅಧ್ಯಕ್ಷರಾದರೆ ತಹಶೀಲ್ದಾರ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳ ಪಾಡೇನಾಗಬೇಕು? ಅಧಿಕಾರಿಗಳ ಸ್ಥೈರ್ಯ ಕುಗ್ಗಿಸುವಂತಹ ಇಂತಹ ಕ್ರಮಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆಗಳು.ಸಂವಿಧಾನಾತ್ಮಕ ರಕ್ಷಣೆ ಇರುವ ಸರಕಾರಿ ಅಧಿಕಾರಿಗಳು ರಾಜಕೀಯ ಪುಢಾರಿಗಳ ಮುಂದೆ ಕೈಕಟ್ಟಿಕೊಂಡು ನಿಲ್ಲಬೇಕೆ? ರಾಜ್ಯದ ಕಾರ್ಯಾಂಗದ ನಿಜಮುಖ್ಯಸ್ಥರಾಗಿ ಸರಕಾರಿ ಅಧಿಕಾರಿ ವರ್ಗಕ್ಕೆ ಬಲ,ಬೆಂಬಲ ನೀಡಬೇಕಿರುವ ಮುಖ್ಯಮಂತ್ರಿಯವರೇ ಇಂತಹ ತಪ್ಪುಕ್ರಮಕ್ಕೆ ಮುಂದಾದರೆ ಹೇಗೆ? ಅಲ್ಲದೆ ಮುಖ್ಯಮಂತ್ರಿ ಸಿದ್ರಾಮಯ್ಯನವರು ಸಂವಿಧಾನವನ್ನು ರಕ್ಷಿಸುವುದಾಗಿ,ಸಂವಿಧಾನದ ಆಶಯಕ್ಕೆ ಬದ್ಧರಿರುವುದಾಗಿಯೂ ಹೇಳಿಕೊಂಡು ಬಂದಿದ್ದಾರೆ.ಸಂವಿಧಾನದ ಆಶಯದಂತೆ ಶಾಸಕರಾಗಿ ತಾವು ನಿಭಾಯಿಸಬೇಕಿರುವ ವರುಣಾ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಅವರ ಪುತ್ರನಿಗೆ ‌ನೀಡಿದ್ದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆಯಲ್ಲವೆ?

About The Author