ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು : ಪಿಐ ಎಸ್ಎಂ ಪಾಟೀಲ್

ಶಹಾಪುರ : ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸುವುದರ ಜೊತೆಗೆ ತಾಳ್ಮೆಯಿಂದ ವಾಹನ ಚಾಲನೆ ಮಾಡುವುದರಿಂದ ನಮ್ಮ ಅಮೂಲ್ಯ ಜೀವವನ್ನು ಉಳಿಸಬೇಕು.ಯುವಕರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುವುದರೊಂದಿಗೆ ರಸ್ತೆ ಸಂಚಾರಿ ಕಾನೂನುಗಳನ್ನು ತಿಳಿದುಕೊಂಡು ವಾಹನ ಚಾಲನೆ ಮಾಡುವುದು ಸೂಕ್ತ ಎಂದು ಪಿಐ ಎಸ್ಎಂ ಪಾಟೀಲ್ ಹೇಳಿದರು. ನಗರದ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಸಂಚಾರಿ ನಿಯಮ, ಸೈಬರ್ ಪ್ರಕರಣ ತುರ್ತು 112 ಕ್ಕೆ ಕರೆ ಕುರಿತು  ಮಾತನಾಡಿದ ಅವರು,

ವಾಹನ ಚಾಲನೆ ಮಾಡುವಾಗ ಪ್ರತಿಯೊಬ್ಬರು ಸಂಚಾರಿ ನಿಯಮ ಪಾಲಿಸಬೇಕು. ಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದರುಪೋಷಕರು ಕೂಡ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು. ಅಪ್ರಾಪ್ತರು ವಾಹನ ಚಾಲನೆ ಮಾಡುವಂತಿಲ್ಲ. ವಾಹನ ಚಾಲನೆಗೂ ಮೊದಲು ಕಾನೂನುಗಳನ್ನು ತಿಳಿದುಕೊಳ್ಳುವುದು ಸೂಕ್ತ. ಯಾವುದೇ ಕಾರಣಕ್ಕೂ ವಾಹನದ ದಾಖಲೆ ಮತ್ತು ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಹಾಕದೇ ವಾಹನ ಚಾಲನೆ ಮಾಡಬಾರದು. ಬೀದಿಬದಿ ವ್ಯಾಪಾರಿಗಳು ಸಹ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ವ್ಯಾಪಾರ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಮೊಬೈಲ್ಗಳಲ್ಲಿ ಓಟಿಪಿ ಕೇಳುವುದು ಮತ್ತು ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಬರುವಾಗ ಲಪಟಾಯಿಸುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿ ಆಗುತ್ತಿವೆ. ಅದರ ಬಗ್ಗೆ ಜನರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು.

ಅಪರಿಚಿತರು ಕೊಡುವ ಯಾವುದೇ ತಿಂಡಿ ತಿನಿಸುಗಳು ತಿನ್ನಬಾರದು. ಅಪರಿಚಿತರೊಡನೆ ಸಲಿಗೆ ಬಳಸಬಾರದು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆದರೆ ತಕ್ಷಣಕ್ಕೆ 112ಕ್ಕೆ ಕರೆ ಮಾಡಬೇಕು. ಪೊಲೀಸರು ಸದಾ ನಿಮ್ಮ ರಕ್ಷಣೆಗೆ ಇರುತ್ತಾರೆ. ಕಾನೂನು ಮತ್ತು ಪೊಲೀಸರೊಡನೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಪಿಎಸ್ಐ ಸೋಮಲಿಂಗಪ್ಪ, ಹೆಡ್ ಕಾನಿಸ್ಟೇಬಲ್ ಲಕ್ಕಪ್ಪ, ಹನುಮಂತ ಸೇರಿದಂತೆ ಟ್ಯಾಕ್ಸಿ ಮತ್ತು ಆಟೋ ಚಾಲಕರು ಬೀದಿಬದಿ ವ್ಯಾಪಾರಿಗಳು ಭಾಗವಹಿಸಿದ್ದರು.

About The Author