ಚಿಂತನೆ : ಸುದ್ದಿಗಾಗಿ ಬದುಕಬಾರದು; ಸುದ್ದಿಯಾಗುವಂತೆ ಬದುಕಬೇಕು ! : ಮುಕ್ಕಣ್ಣ ಕರಿಗಾರ

       ಪ್ರತಿನಿತ್ಯ ತಾವು ಮಾಧ್ಯಮಗಳಲ್ಲಿ ಮಿಂಚಬೇಕು ಎನ್ನುವ ಹುಚ್ಚು ಇರುತ್ತದೆ ಕೆಲವರಿಗೆ.ದಿನ ಬೆಳಗಾದರೆ ಪತ್ರಿಕೆಗಳನ್ನು ನೋಡುವುದು,ಪತ್ರಿಕೆಗಳಲ್ಲಿ ತಮ್ಮ ಹೆಸರಿನ ಮಹಾನ್ ಸಾಧನೆ ಇದ್ದರೆ ಮುಖ ಅರಳಿಸುವುದು,ಪತ್ರಿಕೆಗಳಲ್ಲಿ ತಮ್ಮ ಹೆಸರು ಇರದಿದ್ದರೆ ಮುಖ ಸಿಂಡರಿಸುವುದು ಇಂಥವರ ಸ್ವಭಾವವೇ ಆಗಿರುತ್ತದೆ.ರಾಜಕಾರಣಿಗಳು,ಅಧಿಕಾರಿಗಳು,ಕೆಲವು ಜನ ಮಠ ಪೀಠಾಧೀಶರುಗಳಿಗೆ‌ ಇಂತಹ ‘ ಸುದ್ದಿಯಾಗುವ’ ತೆವಲು ಅಂಟಿರುತ್ತದೆ.ತಮ್ಮ ಹೆಸರು ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳದಿದ್ದರೆ ಇಂಥವರಿಗೆ ಸಮಾಧಾನವೇ ಇರುವುದಿಲ್ಲ.ಸುದ್ದಿಯಾಗುವುದಕ್ಕಾಗಿ ಏನೆಲ್ಲ ಮಾಡುತ್ತಿರುತ್ತಾರೆ.ಕೊನೆಗೆ ಪತ್ರಿಕೆಗಳ ಸ್ಥಳೀಯ ವರದಿಗಾರರನ್ನು ಕರೆದು ‘ ಏನಪ್ಪಾ,ನಾನು ಇಷ್ಟೆಲ್ಲ ಘನಕಾರ್ಯಗಳನ್ನು ಮಾಡುತ್ತಿದ್ದರೂ ನಿಮಗೆ ಕಾಣಿಸುತ್ತಿಲ್ಲವೆ ?’ ಎಂದು ಮೆಲುದನಿಯಲ್ಲಿ ರೇಗುವುದೂ ಉಂಟು.ಇನ್ನೂ ಕೆಲವು ಜನರಿಗೆ ಸುದ್ದಿಯಾಗುವ ಚಾಣಾಕ್ಷತನ ಕರಗತವಾಗಿರುತ್ತದೆ,ಆ ಚಾಣಾಕ್ಷ ಮಾರ್ಗದ ಮೂಲಕ ಸುದ್ದಿಯಾಗುತ್ತಾರೆ ಸುದ್ದಿಚಪಲಚಾಣಾಕ್ಷರು.
        ಸುದ್ದಿಯಾಗುವುದು ದೊಡ್ಡ ಸಂಗತಿಯಲ್ಲ.’ ಇಂದಿನ ಸುದ್ದಿ ನಾಳಿನ ರದ್ದಿ’ ಎನ್ನುವ ಮಾತೇ ಹುಟ್ಟಿಕೊಂಡಿದೆ.ಬೆಳಗಾದೊಡನೆ ಪತ್ರಿಕೆಗಾಗಿ ತಡಬಡಿಸಿ,ಓದಿದರೂ  ನಾಳೆ ಆ ಪತ್ರಿಕೆ ರದ್ದಿ ಪೇಪರ್ ಆಗುತ್ತದೆ; ಸುದ್ದಿ ಓದಿದ ಜನರು ಮರೆತುಬಿಡುತ್ತಾರೆ.ಅದಕ್ಕಾಗಿ ಸುದ್ದಿಯ ಚಪಲ ಮೈಗಂಟಿಸಿಕೊಳ್ಳಬಾರದು.ನಮ್ಮಷ್ಟಕ್ಕೆ ನಾವೇ ನಮಗಿಷ್ಟವಾದ ಕ್ಷೇತ್ರದಲ್ಲಿ  ತೊಡಗಿಸಿಕೊಂಡು ನಿರಂತರವಾಗಿ ದುಡಿಯುತ್ತಿರಬೇಕು.ಪ್ರಚಾರಪ್ರಿಯತೆಗಾಗಿ ಆಶಿಸದೆ ನಿತ್ಯವೂ ಉತ್ಸಾಹದಿಂದ ಕಾರ್ಯ ಸಾಧಿಸುತ್ತಿದ್ದರೆ ಮಹಾನ್ ಸಾಧನೆ ಮಾಡುತ್ತೇವೆ.ನಾವು ಮಹಾನ್ ಸಾಧನೆ ಮಾಡಿದರೆ ಜಗತ್ತೇ ನಮ್ಮತ್ತ ತಿರುಗಿ ನೋಡುತ್ತದೆ.ಆಗ ಸುದ್ದಿಮಾಧ್ಯಮಗಳೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ.ನಮ್ಮ ಸಿದ್ಧವ್ಯಕ್ತಿತ್ವವು ಸಾವಿರಾರು ಜನರಿಗೆ ಸ್ಫೂರ್ತಿಯಾಗುತ್ತದೆ.ಸುದ್ದಿಯಾಗುವಂತಹ ವ್ಯಕ್ತಿತ್ವ ನಮ್ಮದಾಗಬೇಕಿದ್ದರೆ ನಮ್ಮಲ್ಲಿ ತಾಳ್ಮೆ ಇರಬೇಕು,ಹೊಗಳಿಕೆ ತೆಗಳಿಕೆಗಳಿಗೆ ತಲೆಕೆಡಿಸಿಕೊಳ್ಳದ ನಿರ್ಲಿಪ್ತ ಮನೋಭಾವ ಇರಬೇಕು,ಏನೇ ಬರಲಿ ಎದುರಿಸಿಗೆಲ್ಲುವೆ ಎನ್ನುವ ಮನೋಧಾರ್ಡ್ಯವೂ ಇರಬೇಕು.
      ಪತ್ರಿಕೆಗಳಲ್ಲಿ ಹೆಸರು ಬಂದಾಕ್ಷಣ ನಾವು ದೊಡ್ಡವರಾಗುವುದಿಲ್ಲ,ಪತ್ರಿಕೆಗಳವರು ನಮ್ಮನ್ನು ಕಡೆಗಣಿಸಿದರೆ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ.ಪತ್ರಿಕೆಗಳಿಗೆ ಅವುಗಳದ್ದೇ ಆದ ಧೋರಣೆ ಇರುತ್ತದೆ,ಆ ಪತ್ರಿಕೆಗಳ ವರದಿಗಾರರುಗಳಿಗೆ ಇನ್ನೂ ವಿಚಿತ್ರ ಧೋರಣೆಗಳಿರುತ್ತವೆ ! ಹೊರಗೆ ಜಾತ್ಯಾತೀತತೆಯ ಸೋಗು ನಟಿಸುವ ಪತ್ರಿಕಾ ವರದಿಗಾರರುಗಳು ತಮ್ಮ ಜಾತಿ ಜನಾಂಗದ ವ್ಯಕ್ತಿ,ಸಂಗತಿಗಳ ಬಗ್ಗೆ ರೋಚಕವಾದ ಸುದ್ದಿಗಳನ್ನು ಬರೆಯುತ್ತಿರುತ್ತಾರೆ.ತಮಗೆ ಹಿಡಿಸದ ವ್ಯಕ್ತಿ ಎಷ್ಟೇದೊಡ್ಡವನಿದ್ದರೂ ಈ ವರದಿಗಾರ ಮಹಾನುಭಾವರ ಮೊದ್ದುಕಿವಿಗಳಿಗೆ ಆ ವಿಷಯ ತಲುಪುವುದೇ ಇಲ್ಲ ! ಪತ್ರಿಕೆಗಳು ತತ್ತ್ವನಿಷ್ಠವಾಗಿರಬೇಕು,ವರದಿಗಾರರು ಸತ್ಯ ನಿಷ್ಠರಾಗಿರಬೇಕು,ವ್ಯಕ್ತಿನಿಷ್ಠರಾಗಿರಬಾರದು ಎನ್ನುವ ಮಾತು ಹಳೆಯ ಕಾಲದ ತತ್ತ್ವ ಎನ್ನುವ ಪತ್ರಕರ್ತರುಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ದಿನಮಾನಗಳಲ್ಲಿ ಸತ್ತ್ವಯುತ ವ್ಯಕ್ತಿತ್ವಗಳಿಗೆ ಮನ್ನಣೆ ದೊರೆಯದು.ಹಾಗಾಗಿ ಮಹಾತ್ವಾಕಾಂಕ್ಷಿಗಳು,ಮಹಾನ್ ಸಾಧನೆ ಮಾಡಬಯಸುವವರು ತಮ್ಮ ಪಾಡಿಗೆ ತಾವು ಸಾಧನೆ ಮಾಡುತ್ತಿರಬೇಕು.ಇಂದು ಸುದ್ದಿಯಾಗಿ ಮಿಂಚುತ್ತಿರುವವರು‌ ಕಾಲನ  ಪರೀಕ್ಷೆಯಲ್ಲಿ ಸೋತು ಕಾಲುಕಸವಾಗಿ ಹೋಗುತ್ತಾರೆ.ಸಿದ್ಧರೇ ಎದ್ದು ಬರುತ್ತಾರೆ,ಲೋಕಕ್ಕೆ ಆದರ್ಶರಾಗುತ್ತಾರೆ.