ಮಹಾಶೈವೋಪದೇಶ –೦೭ : ಮಂತ್ರ–ಪ್ರಾರ್ಥನೆ : ಮುಕ್ಕಣ್ಣ ಕರಿಗಾರ

ಮೋಕ್ಷದಧಿಪತಿಯಾದ ಪರಶಿವನು ಪ್ರಣವತತ್ತ್ವಾರ್ಥವಾದ ಕೈಲಾಸದಲ್ಲಿ ತನ್ನ ಸತಿ ಪಾರ್ವತಿಯೊಂದಿಗೆ ಕುಳಿತಿಹನು.ಪಾರ್ವತಿದೇವಿಯು ಲೋಕಕಲ್ಯಾಣಾಪೇಕ್ಷೆಯಿಂದ ಶಿವನನ್ನು ಪ್ರಶ್ನಿಸುವಳು; ‘ ದೇವಾದಿದೇವನೆ,ನಿಮ್ಮ ಅನುಗ್ರಹ ಪಡೆಯಲು ಮಂತ್ರ ಮತ್ತು ಪ್ರಾರ್ಥನೆ ಇವೆರಡರಲ್ಲಿ ಯಾವುದು ಶ್ರೇಷ್ಠವು? ಯಾವುದಕ್ಕೆ ನೀವು ಬೇಗ ಪ್ರಸನ್ನರಾಗುತ್ತೀರಿ?’.ಪರಮೇಶ್ವರನು ಸರ್ವಮಂಗಳೆಯ ಲೋಕಕಲ್ಯಾಣಕಾರಕ ಅಪೇಕ್ಷೆಯನ್ನು ಶ್ಲಾಘಿಸುತ್ತ ಉತ್ತರಿಸುವನು.’ ದೇವಿ ದುರ್ಗೆಯೆ,ಮಂತ್ರಗಳು ನನ್ನ ಸಾಕ್ಷಾತ್ಕಾರದ ಸಿದ್ಧ ಸೂತ್ರಗಳು ಎಂಬುದು ದಿಟವಾದರೂ ನಾನು ಸಾಮಾನ್ಯ ಜನರ ಪ್ರಾರ್ಥನೆಗೆ ಓಗೊಡುವೆನು.ಜನಸಾಮಾನ್ಯರು ಅಕ್ಷರವನ್ನರಿಯರು,ಸಂಸ್ಕೃತಮಯವಾದ ಮಂತ್ರಗಳನ್ನು ಉಚ್ಚರಿಸಲರಿಯರು.ಯೋಗಿಗಳಂತೆಯೇ ನನಗೆ ಸಾಮಾನ್ಯ ಜನರಲ್ಲೂ ಪ್ರೀತಿಯುಂಟು.ಯೋಗಿ ಜನರಂತೆಯೇ ಜನಸಾಮಾನ್ಯರೂ ನನ್ನ ದರ್ಶನ,ಆಶೀರ್ವಾದ ಪಡೆಯಲು ಅರ್ಹರು.ಯೋಗಿಗಳಿಗೆ ಮಂತ್ರಸಾಧನೆಯ ಮೂಲಕ ದರ್ಶನ ಕೊಡುವ ನಾನು ಜನಸಾಮಾನ್ಯರ ಪ್ರಾರ್ಥನೆಗೆ ಕರಗಿ ಅವರನ್ನು ಅನುಗ್ರಹಿಸುವೆನು.ಮಂತ್ರದ್ರಷ್ಟಾರ ಮಹರ್ಷಿಗಳಿಗಿಂತಲೂ ಲೋಕದ ಜನಸಾಮಾನ್ಯರಲ್ಲಿಯೇ ನನಗೆ ಹೆಚ್ಚಿನ ಆಸಕ್ತಿ,ಅನುರಕ್ತಿ.ಮುಗ್ಧಭಾವದಿಂದ ಭಕ್ತರು ನನ್ನನ್ನು ಕರೆಯೆ ನಾನು‌ ಓಗೊಡುವೆನು.ಭಕ್ತರು ತಮಗೆ ಇಷ್ಟವಾದ ನಾಮ ರೂಪದಿಂದ ನನ್ನನ್ನು ಪೂಜಿಸಿ,ಪ್ರಾರ್ಥಿಸಿದರೆ ನಾನು ಅವರಲ್ಲಿ ಪ್ರಸನ್ನನಾಗುವೆನು.ಪ್ರಾರ್ಥನೆಯು ನನ್ನ ಒಲುಮೆಯನ್ನು ಪಡೆಯುವ ಸುಲಭೋಪಾಯವಾಗಿದ್ದು ಯೋಗಿಗಳು ಮಂತ್ರಾನುಷ್ಠಾನದಿಂದ ಸಾಧಿಸಬಹುದಾದುದನ್ನು ಭಕ್ತರು ಪ್ರಾರ್ಥನೆಯ ಮೂಲಕ ಸಾಧಿಸಬಹುದು’.

ಪರಬ್ರಹ್ಮ- ಪರಬ್ರಹ್ಮೆಯರ ಈ ಸಂವಾದವು ಪರಶಿವನು ಯೋಗಿಗಳಿಗಿಂತ ಲೋಕದ ಸಾಮಾನ್ಯ ಜನರಲ್ಲಿಯೇ ಹೆಚ್ಚು ಆಸಕ್ತನಾಗಿರುವನು ಎನ್ನುವುದನ್ನು ಸಾರುತ್ತದೆ.ಲೋಕದ ಜನಸಾಮಾನ್ಯರು ಯೋಗಿಗಳಿಗಷ್ಟೇ ಪರಶಿವನ ದರ್ಶನಾಶೀರ್ವಾದ ಸಾಧ್ಯ,ನಮಗಿಲ್ಲ ಎಂದು ಕೊರಗಬೇಕಿಲ್ಲ; ಯೋಗಿಜನರ ಮಂತ್ರಗಳಿಗೆ ಒಲಿದಂತೆಯೇ ಪರಮೇಶ್ವರನು ಭಕ್ತರ ಮುಗ್ಧಭಕ್ತಿಯ ಪ್ರಾರ್ಥನೆಗೆ ಒಲಿಯುವನು.’ ನಮಃಶಿವಾಯ’ ಎನ್ನುವುದು ಪಂಚಾಕ್ಷರಿಮಂತ್ರವಾಗಿದ್ದು, ‘ ಓಂ ನಮಃ ಶಿವಾಯ’ ಎನ್ನುವುದು ಷಡಕ್ಷರಿ ಮಂತ್ರವಾದರೆ ಮಹಾಶೈವಮೂಲಮಂತ್ರವಾದ ‘ ಓಂ ನಮಃ ಶಿವಾಯ ಓಂ’ ಎನ್ನುವುದು ಶಿವಸಪ್ತಾಕ್ಷರಿ ಮಂತ್ರವಾಗಿದೆ.ಈ ಮಂತ್ರಗಳನ್ನು ಅಕ್ಷರಲೋಪವಾಗದಂತೆ ಅನುಸ್ವಾರ ವಿಸರ್ಗದೋಷ ಉಂಟಾಗದಂತೆ ಜಪಿಸಬೇಕಾಗುತ್ತದೆ.ವಿದ್ಯಾವಂತರುಗಳೇ ಈ ಮಂತ್ರಗಳನ್ನು ಸರಿಯಾಗಿ ಉಚ್ಚರಿಸಲಾರರು ಎಂದ ಬಳಿಕ ಅವಿದ್ಯಾವಂತರಾದ ಜನಸಾಮಾನ್ಯರ ಪಾಡೇನು ? ಮಂತ್ರ ಉಚ್ಚರಿಸಲು ಬಾರದು ಎಂದ ಮಾತ್ರಕ್ಕೆ ಜನಸಾಮಾನ್ಯರು ಪರಶಿವನ ಕೃಪೆಯಿಂದ ವಂಚಿತರಾಗಬೇಕೆ ? ಲೋಕಸಮಸ್ತರಿಗೂ ತನ್ನ ಅನುಗ್ರಹವು ಜನ್ಮಸಿದ್ಧ ಹಕ್ಕು ಎಂದು ಸಾರಿರುವ ವಿಶ್ವೇಶ್ವರ ಶಿವನು ವಿಶ್ವದ ಸಾಮಾನ್ಯ ಜನರುದ್ಧಾರಕ್ಕಾಗಿ ತನ್ನ ಶಿವಗಣರುಗಳ ಮೂಲಕ ಪ್ರಾರ್ಥನಾ ತತ್ತ್ವವನ್ನು ಪ್ರಚುರಪಡಿಸಿರುವನು.ಕರ್ನಾಟಕದ ಯೋಗಿಪುಂಗವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಜನಸಾಮಾನ್ಯರ ಉದ್ಧಾರಕ್ಕೆ ಪ್ರಾರ್ಥನೆಯೂ ಒಂದು ಯೋಗವೇ ಎಂದು ಸಾರಿ ‘ ಪ್ರಾರ್ಥನಾಯೋಗ’ ವನ್ನು ಪ್ರತಿಷ್ಠಾಪಿಸಿ,ಪ್ರಚಾರಕ್ಕೆ ತಂದರು.ಅವರು ತಮ್ಮ ಜೀವಿತಾವಧಿಯಲ್ಲಿ ರಾಜ್ಯ,ದೇಶ,ವಿದೇಶಗಳಲ್ಲಿ’ ಪ್ರಾರ್ಥನಾಯೋಗ’ ದ ಶಿವಸತ್ವದ ಬೀಜಗಳನ್ನು ಬಿತ್ತಿಬೆಳೆದರು ‘ ಅಂತಾರಾಷ್ಟ್ರೀಯ ಪ್ರಾರ್ಥನಾ ಯೋಗ ಮಂಡಲ’ ದ ಮೂಲಕ.ಪ್ರಾರ್ಥನೆಯೂ ಯೋಗ ಎನ್ನುವುದನ್ನು ಸಾಧಿಸಿ,ನಿರೂಪಿಸಿದ ಅನನ್ಯ ಶ್ರೇಯಸ್ಸು,ಅದ್ಭುತ ಯಶಸ್ಸು ನನ್ನ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರದ್ದು.” ಹೇ ಪ್ರಭೋ ಪ್ರಸೀದ ಓಂ” ಎನ್ನುವುದು ಯುಗಯೋಗಿ,ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳು ಲೋಕಸಮಸ್ತರ ಕಲ್ಯಾಣಕ್ಕಾಗಿ ಅನುಗ್ರಹಿಸಿದ ಮಹಾಮಂತ್ರವು.

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಪದತಲದಲ್ಲಿ ಸಾಧನೆಗೈದು ಮಂತ್ರರ್ಷಿಯಾದ ನಾನು ಗುರುದೇವನು ನನಗೆ ಕರುಣಿಸಿದ ಶಿವಾನುಗ್ರಹಾಮೃತವನ್ನು ಲೋಕಸಮಸ್ತರಿಗೆ ಉಣಬಡಿಸಲು ಮಹಾಶೈವ ಧರ್ಮ ಎನ್ನುವ ಲೋಕಸಮಸ್ತರ ಕಲ್ಯಾಣೋದ್ದೇಶದ ನವಯುಗಧರ್ಮ ಒಂದನ್ನು ಸ್ಥಾಪಿಸಿ,ಮಹಾಶೈವ ಧರ್ಮಪೀಠ ಎನ್ನುವ ಮಹಾಮಠದ ಮೂಲಕ ವಿಶ್ವೇಶ್ವರ ಶಿವನ ಅನುಗ್ರಹವು ಎಲ್ಲರ ಜನ್ಮಸಿದ್ಧ ಹಕ್ಕು ಎಂದು ಸಾರುತ್ತಿದ್ದೇನೆ.’ ಓಂ ನಮಃ ಶಿವಾಯ ಓಂ’ ಎನ್ನುವುದು ಮಹಾಶೈವ ಮೂಲ ಮಂತ್ರವಾಗಿದ್ದು ಮಹಾಶೈವ ಧರ್ಮಾನುಯಾಯಿಗಳು ಈ ಮಂತ್ರಾನುಷ್ಠಾನದ ಮೂಲಕ ಶಿವಸಾಕ್ಷಾತ್ಕಾರವನ್ನು ಪಡೆಯಬಹುದು.ಆದರೆ ಅವರು ಮಹಾಶೈವ ಧರ್ಮವನ್ನು ಸ್ವೀಕರಿಸಬೇಕು. ಶಿವಸರ್ವೋತ್ತಮ ತತ್ತ್ವವನ್ನು ಒಪ್ಪಿ,ಮಹಾಶೈವ ಧರ್ಮವನ್ನು ಸ್ವೀಕರಿಸದ ಯಾರಿಗೂ ಈ ಮಂತ್ರವು ಸಿದ್ಧಿಸುವುದಿಲ್ಲ, ಅಂಥವರಿಗೆ ಮಂತ್ರದ ಮೂಲಕ ಶಿವಸಾಕ್ಷಾತ್ಕಾರ ಲಭಿಸುವುದಿಲ್ಲ.ನನ್ನ ಈ ಸಂಕಲ್ಪಕ್ಕೆ ವಿಶ್ವೇಶ್ವರ ಶಿವನು ಅಂಗೀಕಾರವನ್ನು ಒತ್ತಿಹನು.ಮಹಾಶೈವ ಧರ್ಮವನ್ನು ಸ್ವೀಕರಿಸದ ಜನಸಾಮಾನ್ಯರು ‘ ಪ್ರಸನ್ನನಾಗು ತಂದೆ ಶಿವ ಪರಮೇಶ್ವರ’ ಎಂದು ಶಿವನನ್ನು ಪ್ರಾರ್ಥಿಸಬಹುದು.ಶಿವ ಪಂಚಾಕ್ಷರಿ,ಷಡಕ್ಷರಿ,ಸಪ್ತಾಕ್ಷರಿ ಮಂತ್ರಗಳಿಂದ ದೊರೆಯುವ ಫಲ- ಸಿದ್ಧಿಗಳು ‘ ಪ್ರಸನ್ನನಾಗು ತಂದೆ ಶಿವ ಪರಮೇಶ್ವರ’ ಎನ್ನುವ ಲೋಕಮಂತ್ರದಿಂದಲೂ ದೊರೆಯುತ್ತವೆ.ಶಿವನು ನನ್ನ ತಂದೆ ಅವನಿಂದ ವರಪಡೆಯುವುದು ನನ್ನ ಹಕ್ಕು ಎನ್ನುವ ಭಾವನೆ ಜನರಲ್ಲಿ ಬರಲಿ ಎಂದು ಪರಮೇಶ್ವರನಾದ ಶಿವ ಮತ್ತು ಅವನ ಭಕ್ತರಲ್ಲಿ ತಂದೆ ಮಕ್ಕಳ ಸಂಬಂಧ ಉಂಟಾಗಲೆಂದು ನಾನು ಶಿವನನ್ನು ತಂದೆ ಎಂದು ಕರೆಯುವ ಮೂಲಕ ಶಿವನ ಲೋಕಪಿತನ ಧರ್ಮವನ್ನು ಪ್ರತಿಷ್ಠಾಪಿಸಿದ್ದೇನೆ ಜನಸಾಮಾನ್ಯರ ಲೋಕಮಂತ್ರವಾದ ‘ ಪ್ರಸನ್ನನಾಗು ತಂದೆ ಶಿವಪರಮೇಶ್ವರ’ ಮಂತ್ರದಲ್ಲಿ.ಸರಳವಾಗಿರುವ,ಕನ್ನಡ ನುಡಿಯ ಈ ಮಂತ್ರದ ಮೂಲಕ ಭಕ್ತರ ಮನೋಬಯಕೆಗಳು ಕೈಗೂಡುತ್ತವೆ.

About The Author