ಮಹಾಶೈವೋಪದೇಶ –೦೬ : ಜಾತಿ– ಜ್ಯೋತಿ : ಮುಕ್ಕಣ್ಣ ಕರಿಗಾರ

ವಿಶ್ವನಿಯಾಮಕ ವಿಶ್ವೇಶ್ವರನ ನೆಲೆಮನೆಯಾದ ಕೈಲಾಸದಲ್ಲಿ ವಿಶ್ವಲೀಲೆಯಲ್ಲಿ ವಿಶ್ವೇಶ್ವರನ ಶಕ್ತಿಯಾಗಿ ಕಾರ್ಯಗೈಯುತ್ತಿರುವ,ಪರಶಿವನೊಂದಿಗೆ ಕುಳಿತಿರ್ದ ದೇವಿ ಪಾರ್ವತಿಯು ತನ್ನ ಪತಿ ಪರಮೇಶ್ವರನನ್ನು ಪ್ರಶ್ನಿಸುವಳು, ‘ ಭೂತನಾಥನೆ,ಭೂಲೋಕದಲ್ಲಿ ಮನುಷ್ಯರು ಜಾತಿ ಜಾತಿಗಳಲ್ಲಿ ಹಂಚಿಹೋಗಿದ್ದಾರೆ.ನೂರಾರು ಜಾತಿಗಳಾಗಿ ಮನುಷ್ಯರು ನನ್ನ‌ಜಾತಿ ಶ್ರೇಷ್ಠ,ನಿನ್ನ ಜಾತಿ ಕನಿಷ್ಟ ಎಂದು ಕಚ್ಚಾಡುತ್ತಿದ್ದಾರೆ.ಜಾತಿ ಕಾರಣವಾಗಿ ನರರಲ್ಲಿ ಅಗಾಧ ಅಂತರ ಉಂಟಾಗಿದೆ.ಶ್ರೇಷ್ಠರೆಂದು ಭಾವಿಸಿದವರು ಕನಿಷ್ಠರೆಂದು ಭಾವಿಸಿದವರನ್ನು ಅತ್ಯಂತ ಕೀಳಾಗಿ ಕಾಣುತ್ತಾರೆ.ಪ್ರೀತಿ,ವಿಶ್ವಾಸಗಳ ಬದಲು ಮನುಷ್ಯರಲ್ಲಿ ಮೃಗೀಯಭಾವನೆ ಎದ್ದು ಕುಣಿಯುತ್ತಿದೆ.ಮನುಷ್ಯರೆಲ್ಲರಲ್ಲಿ ಪ್ರೀತಿ,ಸಮತೆಗಳನ್ನು ಬಿತ್ತಿಬೆಳೆಯಬೇಕಿದ್ದ ಮಠ ಮಂದಿರ,ಗುರುಪೀಠಗಳಲ್ಲಿಯೂ ಜಾತಿಯೇ ವಿಜೃಂಭಿಸುತ್ತಿದೆ.ಈ ಜಾತಿಗಳು ಹೇಗೆ ಉಂಟಾದವು? ಏಕೆ ಉಂಟಾದವು? ಒಬ್ಬರೇ ವಿಶ್ವನಿಯಾಮಕರಾಗಿರುವ ನಿಮ್ಮ ಸಂಕಲ್ಪವನ್ನನುಸರಿಸಿ ನಡೆಯುತ್ತಿರುವ ಜಗತ್ತಿನಲ್ಲಿ ಜಾತಿಕಲಹಗಳಿಗೆ ಆಸ್ಪದವಾದುದಾದರೂ ಏಕೆ?’ ವಿಶ್ವೇಶ್ವರಿ ದುರ್ಗಾದೇವಿಯ ಪ್ರಶ್ನೆಯನ್ನು ಆಲಿಸಿದ ವಿಶ್ವೇಶ್ವರ ಶಿವನು ಉತ್ತರಿಸುವನು ‘ ದುರಿತ ನಿವಾರಕಿ ಎಂದು ಹೆಸರ್ಗೊಂಡು ಪೂಜಿಸಲ್ಪಡುತ್ತಿರುವ ದೇವಿ ದುರ್ಗೆಯೆ ನಿನ್ನ ಪ್ರಶ್ನೆಯು ಮನುಷ್ಯರ ಅನಾಚಾರದ ಬಗ್ಗೆ ಬೆಳಕು ಚೆಲ್ಲುತ್ತಿದೆ.ವಿವರಿಸಿ ಹೇಳುವೆನು ಕೇಳು.ಶಾಂಭವಿಯೆ,ನನ್ನ ಸಂಕಲ್ಪದಂತೆ ನಡೆಯುತ್ತಿರುವ ಈ ವಿಶ್ವದಲ್ಲಿ ಬ್ರಹ್ಮನು ಸೃಷ್ಟಿಕರ್ತನಾಗಿ,ವಿಷ್ಣುವು ಸ್ಥಿತಿಕರ್ತನಾಗಿ ನನ್ನ ಸ್ವರೂಪನೇ ಆಗಿರುವ ರುದ್ರನು ಲಯಕರ್ತನಾಗಿ ಕಾರ್ಯನಿರ್ವಹಿಸುತ್ತಿರುವರು ಎಂಬುದನ್ನು ಬಲ್ಲೆಯಷ್ಟೆ.ನನ್ನ ವಿಶ್ವಸಂಕಲ್ಪದಲ್ಲಿ ಎಲ್ಲವೂ ಪರಿಪೂರ್ಣವಾಗಿದೆ,ಅಪರಿಪೂರ್ಣತೆಗೆ ವಿಶ್ವನಿಯಮದಲ್ಲಿ ಅವಕಾಶವೇ ಇಲ್ಲ.ಬ್ರಹ್ಮ ವಿಷ್ಣು ಮತ್ತು ರುದ್ರರು ತಮ್ಮ‌ಜಗದುತ್ಪತ್ತಿಸ್ಥಿತಿಲಯಗಳೆಂಬ ಕಾರ್ಯತ್ರಯಗಳಿಗೆ ನೆರವಾಗಲೆಂದು ನಿನ್ನ ಒಂದಂಶವಾದ ಮಾಯೆಯನ್ನು ಆಶ್ರಯಿಸಿರುವರು.ಆ ಮಾಯೆಯು ಜಗತ್ತಿನಲ್ಲಿ ತನ್ನ ಮಹಿಮೆಯನ್ನು ಪ್ರದರ್ಶಿಸುತ್ತ ಮನುಷ್ಯರಾದಿ ಸಕಲ ಜೀವಿಗಳಲ್ಲಿಯೂ ಮೋಹ,ಭ್ರಾಂತಿಯನ್ನುಂಟು ಮಾಡುತ್ತಿರುವಳು.ಮಾಯೆಯ ಪ್ರಭಾವಕ್ಕೆ ಸಿಕ್ಕ ಮನುಷ್ಯರು ತಾವೆಲ್ಲರೂ ಒಂದೇ,ಆತ್ಮಸ್ವರೂಪರು ಎಂದರಿಯದೆ ತಮ್ಮತಮ್ಮಲ್ಲಿಯೇ ಭಿನ್ನತೆ,ವೈರುಧ್ಯಗಳನ್ನು ಕಲ್ಪಿಸಿಕೊಂಡು ನಾನು ಹೆಚ್ಚು,ನೀನು ಕಡಿಮೆ ಎಂದು ಕಚ್ಚಾಡುತ್ತಿರುವರು.ಮನುಷ್ಯರ ಜಾತಿ ಮೋಹವು ವಿಭ್ರಾಂತಿಯಲ್ಲದೆ ಸತ್ಯವಲ್ಲವು.ವಿಶ್ವನಿಯಾಮಕನಾಗಿರುವ ನಾನು ಜಾತಿಗಳನ್ನು ಸಂಕಲ್ಪಿಸಿಲ್ಲ,ಮನುಷ್ಯರು ಕಲ್ಪಿಸಿಕೊಂಡ ಜಾತಿಗಳನ್ನು ನಾನು ಒಪ್ಪುವುದಿಲ್ಲ.ಪ್ರಪಂಚದಲ್ಲಿನ ಎಲ್ಲ ಜೀವರುಗಳನ್ನು ನಾನು ಸಮವೆಂದು ಎಣಿಸುತ್ತೇನೆ,ಎಲ್ಲರಿಗೂ ನನ್ನಲ್ಲಿ ಭಕ್ತಿಯನ್ನಾಚರಿಸುವ ಬುದ್ಧಿಯನ್ನು ಕೊಟ್ಟಿದ್ದೇನೆ,ಎಲ್ಲರಿಗೂ ನನ್ನ ದರ್ಶನ,ಸಾಕ್ಷಾತ್ಕಾರ ಪಡೆಯಲು ಅವಕಾಶ ನೀಡಿದ್ದೇನೆ’.

ಪರಮಪ್ರಭುವಾಗಿರುವ ಪರಮೇಶ್ವರ ಶಿವನ ಈ ಮಾತುಗಳನ್ನು ಮನುಷ್ಯರು ಅರ್ಥೈಸಿಕೊಂಡು ನಡೆಯಬೇಕು.ಮನುಷ್ಯರು ನೂರಾರು ಜಾತಿಗಳನ್ನು ಕಲ್ಪಿಸಿಕೊಂಡು ಬಡಿದಾಡುತ್ತಿದ್ದಾರೆ.ವಿಶ್ವದ ಕಾರಣಕರ್ತನಾದ ಶಿವನು ಜಾತಿಯನ್ನು ಹುಟ್ಟಿಸಲಿಲ್ಲ,ಮನುಷ್ಯರೇ ನೂರೆಂಟು ಜಾತಿಗಳನ್ನು ಹುಟ್ಟಿಸಿಕೊಂಡು ಹೊಡೆದಾಡುತ್ತಿದ್ದಾರೆ.ಜಾತಿಯಿಂದ ಕೆಲವರು ತಾವು ಶ್ರೇಷ್ಠರೆಂದು ಉಬ್ಬಿ ಕೊಬ್ಬಿದರೆ ಜಾತಿಯಿಂದ ಕನಿಷ್ಟರೆನ್ನಿಸಿಕೊಂಡುವರು ತಮ್ಮ ಹಣೆಬರಹವನ್ನು ಹಳಿದುಕೊಳ್ಳುತ್ತಿದ್ದಾರೆ.ಜಾತಿಯ ಮೇಲರಿಮೆ ಕೀಳರಿಮೆಗಳ ಭ್ರಾಂತಿಗೆ ಒಳಗಾಗದೆ ನರರು ತಮ್ಮಲ್ಲಿನ ದಿವ್ಯತ್ವವನ್ನು ಜಾಗೃತಗೊಳಿಸಿಕೊಂಡು ಬಾಳಬೇಕು.ನಮ್ಮದು ಮೇಲುಜಾತಿ ಎಂದು ಕೊಚ್ಚಿಕೊಳ್ಳುವವರು ಸ್ವರ್ಗದಿಂದ ಧುತ್ತೆಂದು ಇಳಿದು ಬಂದಿಲ್ಲ.ಎಲ್ಲರಂತೆಯೇ ಅವರೂ ತಾಯಿಯ ಗರ್ಭದಿಂದಲೇ ಹೊರಬಂದಿದ್ದಾರೆ.ಮೇಲು ಜಾತಿ ಎಂದು ಬೀಗುವವರಿಗೆ ಕೋಡೇನೂ ಮೂಡಿರುವುದಿಲ್ಲ ತಾವು ಇತರರಿಂದ ಪ್ರತ್ಯೇಕರು ಎಂದು ಭ್ರಮಿಸಲು.ಶ್ರೇಷ್ಠಜಾತಿ ಎನ್ನುವವರ ದೇಹದಲ್ಲಿ ಹಾಲು ಅಥವಾ ಅಮೃತವೇನೂ ಹರಿಯುವುದಿಲ್ಲ,ಅವರೂ ಎಲ್ಲರಂತೆ ರಕ್ತ ಮಾಂಸಗಳ ನರಮನುಷ್ಯರೆ,ಅವರ ದೇಹಗಳಲ್ಲಿಯೂ ರಕ್ತವೇ ಹರಿಯುತ್ತದೆ! ಕೆಳಜಾತಿಗಳವರೆನ್ನಿಸಿಕೊಂಡವರು ಮೇಲುಜಾತಿಯವರ ಹುಸಿ ಪೊಗರು,ಪ್ರತಿಷ್ಠೆಗಳನ್ನು ಒಪ್ಪಬಾರದು.ಮೇಲು ಜಾತಿಯವರು ಬರೆದ ಹುಸಿ ಶಾಸ್ತ್ರ,ಸಂಹಿತೆ,ಪುರಾಣಗಳಲ್ಲಿ ವಿಶ್ವಾಸ ಇಡಬಾರದು.ನಾನು ಸಣ್ಣವನು,ಕೀಳು ಕುಲದವನು ಎನ್ನುವ ಕೀಳರಿಮೆಯಿಂದ ಹೊರಬರಬೇಕು.ಪರಮಾತ್ಮನು ಜಾತಿಯನ್ನು ಸೃಷ್ಟಿಸಿಲ್ಲ,ಜಾತಿಮತಭೇದಗಳೆಲ್ಲ ಮನುಷ್ಯರ ಸುಳ್ಳು ಸೃಷ್ಟಿ.ನಾನು ಜಾತಿಯಲ್ಲ,ನಾನೇ ಜ್ಯೋತಿಸ್ವರೂಪನು ಎಂದು ತಿಳಿದುಕೊಳ್ಳಬೇಕು.

ಪರಮಾತ್ಮನು ಎಲ್ಲ ಜೀವರುಗಳಲ್ಲಿ ಆತ್ಮರೂಪದಿಂದ ಸೂಕ್ಷ್ಮವಾಗಿರುವನು.ಜೀವರುಗಳು ತಮ್ಮೊಳಗಿನ ಜ್ಯೋತಿಸ್ವರೂಪನಾಗಿರುವ ಪರಮಾತ್ಮನ ಜ್ಯೋತಿತತ್ತ್ವವನ್ನರಿತು ಅಂತರಂಗದ ಬೆಳಕಿನಲ್ಲಿ ಮುನ್ನಡೆಯಬೇಕು.ಹೊರಗೆ ಕವಿದ ಕತ್ತಲೆಯ ಮಬ್ಬಿಗಂಜದೆ,ಅಳುಕದೆ ಅಂತರಂಗದ ಬೆಳಕಿನಲ್ಲಿ ಧೈರ್ಯದಿಂದ ಮುನ್ನಗ್ಗಬೇಕು.ಅಂತರಂಗದ ಶಿವಬೆಳಕನ್ನು ಜಾಗೃತಗೊಳಿಸಿಕೊಂಡು ನಡೆಯುವ ಶಿವಾತ್ಮರುಗಳು ಲೋಕೋತ್ತರ ಜೀವರುಗಳಾಗುತ್ತಾರೆ,ಲೋಕೋತ್ತಮರಾಗುತ್ತಾರೆ.ನರಪ್ರಪಂಚದ ಕೊಳೆಯನ್ನು ಹರನಾಮಸ್ಮರಣೆಯ ತಿಳಿಗೊಳದಲ್ಲಿ ಸ್ನಾನಮಾಡುವ ಮೂಲಕ ತೊಳೆದುಕೊಂಡು ಪರಿಶುದ್ಧಾತ್ಮರಾಗಿ ಬಾಳಿ ಪಡೆಯಬಹುದು ಪರಶಿವನ ಅನುಗ್ರಹವನ್ನು.

About The Author