ಶಬ್ದಾರ್ಥ ಪ್ರಪಂಚ : ಆತ್ಮಹತ್ಯೆ’ಯಲ್ಲ, ಸ್ವಯಂಜೀವಹತ್ಯೆ ಸರಿಯಾದ ಶಬ್ದ : ಮುಕ್ಕಣ್ಣ ಕರಿಗಾರ

ಜುಲೈ ೩೦ ರ ಆದಿತ್ಯವಾರದಂದು ನಮ್ಮ‌ ಮಹಾಶೈವ ಧರ್ಮಪೀಠದಲ್ಲಿ ೫೫ ನೆಯ ‘ ಶಿವೋಪಶಮನ ಕಾರ್ಯ’ ಮುಗಿಸಿದ ಬಳಿಕ ಸಂಜೆ ಏಳರ ಸುಮಾರು ಮಹಾಕಾಳಿಯ ಸನ್ನಿಧಿಯಲ್ಲಿ ‘ ಆತ್ಮವಿಚಾರ ಗೋಷ್ಠಿ’ ಯಲ್ಲಿದ್ದೆ.ಪ್ರತಿ ರವಿವಾರ ಬೆಳಗಿನ ಹತ್ತು ಘಂಟೆಯಿಂದ ಸಂಜೆಯ ಆರುವರೆಯವರೆಗೆ ನಡೆಯುವ ‘ ಶಿವೋಪಶಮನ ಕಾರ್ಯ’ ದಲ್ಲಿ ವಿಶ್ವೇಶ್ವರ ಶಿವನ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ದಣಿವನ್ನನುಭವಿಸುವುದರಿಂದ ರಾತ್ರಿಯ ಧ್ಯಾನಕ್ಕೆ ಹೊರಡುವ ಮುಂಚೆ ಒಂದು ತಾಸು ಆತ್ಮಜ್ಞಾನಾಸಕ್ತರೊಡನೆ ಚರ್ಚೆ ಮಾಡಿ,ದಣಿವನ್ನು ನಿವಾರಿಸಿಕೊಳ್ಳುವೆ.ನಮ್ಮೂರಲ್ಲಿ ಬಹುಸಂಖ್ಯಾತ ಡಾಂಭಿಕ ಭಕ್ತರುಗಳಿರುವಂತೆ ನಿಜವಾದ ಆಧ್ಯಾತ್ಮಿಕ ಸಾಧನಾಸಕ್ತರಾದ ಕೆಲವರೂ ಇದ್ದಾರೆ.ಅಂಥವರಲ್ಲೊಬ್ಬರು ಬೊಮ್ಮನಹಾಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರೂ ಶಕ್ತ್ಯುಪಾಸಕರೂ ಆಗಿರುವ ಉದಯಕುಮಾರ ಪಂಚಾಳ ಅವರು.’ಗಾಯತ್ರಿಪೀಠ’ ಎನ್ನುವ ಆಶ್ರಮವನ್ನು ಕಟ್ಟಿಕೊಂಡು ಚಿದಾನಂದಾವಧೂತರ ಶ್ರೀದೇವಿಪುರಾಣ,ಶಂಕರಾಚಾರ್ಯರ ‘ ಸೌಂದರ್ಯಲಹರಿ’ ಗಳ ಪಾರಾಯಣ ಮಾಡುತ್ತ ಆಧ್ಯಾತ್ಮಿಕ ಸಾಧನೆ ಕೈಗೊಂಡಿರುವ ಆತ್ಮಾನುಭಾವಿಗಳವರು. ನನಗೆ ಶಕ್ತಿ ಉಪಾಸಕರಲ್ಲಿ ಸ್ವಲ್ಪ ವಿಶೇಷ ಎನ್ನಬಹುದಾದ ಒಲವು ಇರುವುದರಿಂದ ಪ್ರತಿ ರವಿವಾರ ಅಥವಾ ಸರಕಾರಿ ರಜಾದಿನಗಳಂದು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ಆಧ್ಯಾತ್ಮಿಕ ಸಾಧನೆಯ‌ ಪಥದಲ್ಲಿ ತಮಗೆದುರಾಗುವ ಸಮಸ್ಯೆಗಳನ್ನು ತಿಳಿಸಿ,ಪರಿಹಾರ ಪಡೆಯುತ್ತಿರುವುದರ ಜೊತೆಗೆ ಆಧ್ಯಾತ್ಮಿಕ ವಿಷಯಗಳ ಚರ್ಚೆ,ಚಿಂತನೆ ಮಾಡುತ್ತಿರುತ್ತಾರೆ.

ನಿನ್ನೆಯ ‘ ಆತ್ಮವಿಚಾರ ಗೋಷ್ಠಿ’ ಯಲ್ಲಿ ಉದಯಕುಮಾರ ಪಂಚಾಳ ಅವರು ‘ ಆತ್ಮಹತ್ಯೆ ಎನ್ನುವುದು ಸರಿಯೆ?’ ಎನ್ನುವ ಅವರನ್ನು‌ ಕಾಡುತ್ತಿರುವ ಸಂದೇಹ ಒಂದನ್ನು ಮುಂದಿಟ್ಟರು.’ತಪ್ಪು’ ಎಂದು ಉತ್ತರಿಸಿದ ನಾನು ನಾಲ್ಕೈದು ವರ್ಷಗಳ ಹಿಂದೆ ಈ ಕುರಿತು ಒಂದು‌ ಪತ್ರಿಕೆಗೆ ನಾನು ಬರೆದಿದ್ದ ‘ ಆತ್ಮಹತ್ಯೆ ಸರಿಯಾದ ಪದವಲ್ಲ’ ಎನ್ನುವ ಲೇಖನದ ಬಗ್ಗೆ ಅವರ ಗಮನಸೆಳೆದೆ.’ ಆತ್ಮಹತ್ಯೆ’ ಎನ್ನುವುದು ತಪ್ಪುಶಬ್ದವಾಗಿದ್ದು ಅದು ಆಧ್ಯಾತ್ಮತತ್ತ್ವಾರ್ಥಕ್ಕೆ ವಿರುದ್ಧವಾದ ಶಬ್ದ.ಆದರೂ ಪಂಡಿತರು,ವಿದ್ವಾಂಸರುಗಳು ಪರ್ಯಾಯಪದ ಕಂಡು ಹಿಡಿಯದೆ ಇದ್ದುದರಿಂದ ‘ ಆತ್ಮಹತ್ಯೆ’ ಶಬ್ದ ಬಳಕೆಯಲ್ಲಿದೆ.ಜೀವನದಲ್ಲಿ ಬೇಸರಗೊಂಡ ವ್ಯಕ್ತಿಗಳು ತಮ್ಮನ್ನು ತಾವು ಕೊಂದುಕೊಳ್ಳುವ ಕ್ರಿಯೆಯೇ ಆತ್ಮಹತ್ಯೆ ಎಂದು ಕರೆಯಲ್ಪಟ್ಟಿದೆ.ಭಾರತೀಯರಲ್ಲಿ ಮೊದಲು ಆತ್ಮಹತ್ಯೆ ಶಬ್ದದ ಬಳಕೆ ಇರಲಿಲ್ಲ.’ ಅಕಾಲಿಕ ಮರಣ’ ಇಲ್ಲವೆ ‘ ದುರ್ಮರಣ ‘ ಎಂದು ಬಳಸುತ್ತಿದ್ದರು.’ ನೇಣುಹಾಕಿಕೊಂಡನು/ಳು’ ‘ ಬಾವಿ,ಸರೋವರ,ನದಿಯಲ್ಲಿ ಹಾರಿ ಸತ್ತನು/ಳು’ ಎನ್ನುವ ಶಬ್ದಗಳನ್ನು ಬಳಸುತ್ತಿದ್ದರು.ನಿಘಂಟುಶಾಸ್ತ್ರಜ್ಞರು ಇಂಗ್ಲಿಷಿನ Suicide ಶಬ್ದಕ್ಕೆ ‘ ಆತ್ಮಹತ್ಯೆ’ ಯನ್ನು ಸಂವಾದಿಪದವನ್ನಾಗಿ ಕಲ್ಪಿಸಿಕೊಂಡಿದ್ದರಿಂದ ಆತ್ಮಹತ್ಯೆ ಎನ್ನುವ ತಪ್ಪು ಹಾಗೂ ಅನರ್ಥಕಾರಿ ಶಬ್ದ ಒಂದು ಬಳಕೆಯಲ್ಲಿದೆ.

Chambers Concise Dictionary ಯು’ Suicide ‘ ಶಬ್ದವನ್ನು ನಾಮಪದವನ್ನಾಗಿ ‘the act or an instance of killing oneself deliberately ಎಂದು ಅರ್ಥೈಸಿದೆ.The Greenwhich English Dictionary ಯು Suicide ಪದವನ್ನು Self murder ಎಂದು ಅರ್ಥೈಸಿದೆ.ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟು ಆತ್ಮಹತ್ಯೆಯನ್ನು ‘ ತನ್ನನ್ನು ತಾನೇ ಕೊಂದುಕೊಳ್ಳುವುದು’ ಎಂದು ಅರ್ಥೈಸಿದೆ.ಈ ಮೂರು ನಿಘಂಟುಗಳಂತೆ ಒಬ್ಬ ವ್ಯಕ್ತಿ ತನ್ನನ್ನು ತಾನು ಕೊಂದುಕೊಳ್ಳುವ ಕ್ರಿಯೆಯೇ ಆತ್ಮಹತ್ಯೆ.ಆದರೆ ಇದು ಒಬ್ಬ ವ್ಯಕ್ತಿಯು ತನ್ನಿಂದ ತಾನು ಸಾಯುವ ಕ್ರಿಯೆ ಆದ್ದರಿಂದ ಆತ್ಮಹತ್ಯೆ ಆಗುವುದಿಲ್ಲ!

‘ ಜೀವ’ ಮತ್ತು ‘ ಆತ್ಮ’ ಗಳೆರಡರ ನಡುವಿನ ವ್ಯತ್ಯಾಸವನ್ನು ಅರ್ಥೈಸಿಕೊಳ್ಳದ್ದರಿಂದ ಜೀವಿಗಳು ಸ್ವಯಂ ಸಾಯುವ ಕ್ರಿಯೆಯನ್ನು ಆತ್ಮಹತ್ಯೆ ಎಂದು ಭಾವಿಸಿದ್ದಾರೆ.ಭಾರತೀಯ ಆಧ್ಯಾತ್ಮಶಾಸ್ತ್ರದಂತೆ ಸಾಯುವುದು ‘ ಜೀವ’ವೇ ಹೊರತು ‘ ಆತ್ಮ’ ವಲ್ಲ. ‘ ಆತ್ಮ’ ವು ಅವಿನಾಶಿಯಾದದ್ದು,ಹುಟ್ಟು ಸಾವುಗಳಿಲ್ಲದ್ದು.ಆತ್ಮವು ಬೆಂಕಿಯಲ್ಲಿ ಸುಡದು,ಮಳೆಯಲ್ಲಿ ನೆನೆಯದು,ನೀರಿನಲ್ಲಿ ಮುಳುಗುವುದಿಲ್ಲ,ಗಾಳಿಯಲ್ಲಿ ಕೊಚ್ಚಿ ಹೋಗುವುದಿಲ್ಲ.ಇಂತಹ ನಾಶವಿಲ್ಲದ ಆತ್ಮವು ಬರಿಯ ಕಣ್ಣಿಗೆ ಕಾಣಿಸದು ಆದ್ದರಿಂದ ಅದನ್ನು ಕೊಲ್ಲುವ ಪ್ರಸಂಗವೇ ಬರುವುದಿಲ್ಲ.ಶತ್ರುಗಳು ದೇಹವನ್ನು ಕೊಲ್ಲಬಹುದಲ್ಲದೆ ಆತ್ಮವನ್ನು ಕೊಲ್ಲಲಾರರು.ಇಲ್ಲಿ ಸಾಯುವುದು ಜೀವವೇ ಹೊರತು ಆತ್ಮವಲ್ಲ.ಆತ್ಮನು ಸೂರ್ಯನಾದರೆ ಜೀವನು ಚಂದ್ರನು.ಆತ್ಮನ ಅಸ್ತಿತ್ವದ ಆಸರೆಯಲ್ಲಿ ಜೀವನು ಬೆಳೆಯುತ್ತಾನೆ,ಬಾಳುತ್ತಾನೆ.

ಜೀವವು ಗಾಳಿಯಿಂದ ಸತ್ವ,ಪುಷ್ಟಿಗಳನ್ನು ಪಡೆಯುವುದರಿಂದ ಅದನ್ನು ‘ ಪ್ರಾಣ’ ಎನ್ನಲಾಗುತ್ತದೆ.ಶುದ್ಧಗಾಳಿಯನ್ನು ‘ ಪ್ರಾಣವಾಯು’ ಎಂದು ಕರೆಯಲಾಗುತ್ತದೆ.ಈ ಉಸಿರಿನ ಏರಿಳಿತಗಳೆಂಬ ಶ್ವಾಸ ಉಚ್ಛ್ವಾಸ ಕ್ರಿಯೆಗಳಿಂದ ಜೀವರುಗಳು ಉಸಿರಾಡಿ ಬದುಕುತ್ತಾರೆ.ಉಸಿರಿನ ಗತಿಯಲ್ಲಾಗುವ ಏರು ಪೇರುಗಳು ರೋಗ ಮತ್ತು ಮರಣದ ಕಾರಣಗಳು.ಉಸಿರಿನ ಗತಿ ತೀವ್ರವಾದಂತೆ ಭಯ,ಆತಂಕಗಳುಂಟಾಗಿ ರಕ್ತದೊತ್ತಡ ಕಾಣಿಸಿಕೊಂಡರೆ ಉಸಿರಾಟದಲ್ಲಿ ತೊಂದರೆಯಾಗಿ ಸರಾಗವಾಗಿ ಉಸಿರೆಳೆದುಕೊಳ್ಳದ ನಿಧಾನಗತಿಯ ಉಸಿರಾಟವು ಕಡಿಮೆರಕ್ತದೊತ್ತಡ ಎನ್ನಿಸಿಕೊಳ್ಳುತ್ತದೆ.ಉಸಿರಾಟದ ಗತಿಸ್ತಬ್ಧವಾದರೆ ಅಂದರೆ ಉಸಿರುನಿಂತರೆ ವ್ಯಕ್ತಿ ಸತ್ತುಹೋಗುತ್ತಾನೆ.ಉಸಿರಾಟದ ಕ್ರಿಯೆಯು ದೇಹ ಮತ್ತು ಮನಸ್ಸುಗಳಿಗೆ ಸಂಬಂಧಿಸಿದೆಯೇ ಹೊರತು ಅದು ಆತ್ಮನಿಗೆ ಸಂಬಂಧಿಸಿದ್ದಲ್ಲ.ಯಾರಾದರೂ ನಿಧನಹೊಂದಿದಾಗ ‘ ಪ್ರಾಣಹೋಯಿತು’ ಎನ್ನುತ್ತಾರೆಯೇ ಹೊರತು ‘ ಆತ್ಮ ಹೋಯಿತು’ ಎನ್ನುವುದಿಲ್ಲ.ಜೀವ ಇಲ್ಲವೆ ಮನಸ್ಸು ಹೃದಯದಲ್ಲಿರುತ್ತದೆ; ಆತ್ಮವು ಸಹಸ್ರಾರ ಚಕ್ರದಲ್ಲಿರುತ್ತದೆ ಸೂಕ್ಷ್ಮಾತಿಸೂಕ್ಷ್ಮವಾಗಿ.ಹೃದಯವು ರುದ್ರನ ನೆಲೆಯಾಗಿ ಪ್ರಳಯಕ್ಕೆ ಈಡಾಗುತ್ತದೆ.ಆತ್ಮನು ಪರಶಿವನ ನೆಲೆಯಾದ ಸಹಸ್ರಾರದಲ್ಲಿರುತ್ತಾನೆ.ಸಹಸ್ರಾರವು ಮೋಕ್ಷಸ್ಥಳವೇ ಹೊರತು ಮರಣದ ಸ್ಥಳವಲ್ಲ.ಜೀವರುಗಳ ಆತ್ಯಂತಿಕ ಗುರಿ ಪರಶಿವನಲ್ಲಿ ಒಂದಾಗುವುದೇ ಹೊರತು ಪರಶಿವನಿಂದ ಪ್ರತ್ಯೇಕವಾಗುವುದಲ್ಲ.ಜೀವರುಗಳಲ್ಲಿ ಇರುವ ಆತ್ಮನು ವಿರಾಟ್ ಆತ್ಮನಾದ ಪರಶಿವನ ಒಂದಂಶ.ಜೀವರುಗಳಲ್ಲಿರುವ ಆತ್ಮನು ಸಮುದ್ರ ಒಂದು ಹನಿ ಆದರೆ ಪರಮಾತ್ಮನು ಸಮುದ್ರ.ಸಮುದ್ರದ ಒಂದು ಹನಿ ಮತ್ತು ಸಮುದ್ರದ ನಡುವೆ ಯಾವ ವ್ಯತ್ಯಾಸವೂ ಇಲ್ಲ.ಅದರಂತೆ ಜೀವರುಗಳಲ್ಲಿರುವ ಆತ್ಮ ಮತ್ತು ಪರಮಾತ್ಮನ ನಡುವೆ ವ್ಯತ್ಯಾಸವಿಲ್ಲ.ಇದು ಅವಿನಾಶಿಯಾದ ಆತ್ಮತತ್ತ್ವವಿಚಾರ.ಆದ್ದರಿಂದ ಕೊಲ್ಲಲಾಗದ ಆತ್ಮವನ್ನು ಕೊಂದುಕೊಂಡರು ಎನ್ನುವುದು ತಪ್ಪು ಶಬ್ದವಾಗಿದ್ದು ಅದನ್ನು ‘ ಜೀವಹತ್ಯೆ’ ಸ್ವಯಂಹತ್ಯೆ’ ಸ್ವಯಂಸಾವು’ ಎಂದು ಮುಂತಾದ ಪರ್ಯಾಯ ಶಬ್ದಗಳಿಂದ ಕರೆಯಬಹುದು.

About The Author