ಮೂರನೇ ಕಣ್ಣು : ಧರ್ಮ ಮತ್ತು ಆಧ್ಯಾತ್ಮ‌ ಒಂದೇ ಅಲ್ಲ ! : ಮುಕ್ಕಣ್ಣ ಕರಿಗಾರ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಲ್ಲಿ ನಡೆಯಲಿರುವ 23 ನೇ ಘಟಿಕೋತ್ಸವದಲ್ಲಿ ಕೆಲವರಿಗೆ ಕೊಡಮಾಡಲಿರುವ ಗೌರವ ಡಾಕ್ಟರೇಟ್ ಪ್ರಶಸ್ತಿಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡುತ್ತ ಕುಲಪತಿ ಪ್ರೊ.ವಿದ್ಯಾಶಂಕರ ಅವರು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ‘ಆಧ್ಯಾತ್ಮಿಕ ಸಾಧನೆ’ಗಾಗಿ ಡಾಕ್ಟರೇಟ್ ನೀಡುವುದಾಗಿ ತಿಳಿಸಿದ್ದಾರೆ.ನಿರ್ಮಲಾನಂದನಾಥ ಸ್ವಾಮಿಯವರು ಧಾರ್ಮಿಕ ವ್ಯಕ್ತಿಗಳೇ ಹೊರತು ಆಧ್ಯಾತ್ಮ ಸಾಧಕರಲ್ಲ,ಒಕ್ಕಲಿಗರ ಗುರುಪೀಠದ ಪೀಠಾಧಿಪತಿಗಳಾದ ಅವರನ್ನು ಆಧ್ಯಾತ್ಮಿಕ ಸಾಧಕರು ಎನ್ನಲಾಗದು.ವಿಶ್ವವಿದ್ಯಾಲಯದ ಕುಲಪತಿಗಳಾದಂಥವರಿಗೆ ಧರ್ಮ ಮತ್ತು ಆಧ್ಯಾತ್ಮಗಳ ನಡುವಿನ ವ್ಯತ್ಯಾಸ ತಿಳಿದಿಲ್ಲ ಎನ್ನುವುದೇ ಬೇಸರದ ಸಂಗತಿ.ನಮ್ಮಲ್ಲಿ ನಿರ್ಮಲಾನಂದನಾಥಸ್ವಾಮೀಜಿಯವರು ಸೇರಿದಂತೆ ಎಲ್ಲ ಜಾತಿಗಳ ಮಠಾಧೀಶರುಗಳು ಧಾರ್ಮಿಕ ವ್ಯಕ್ತಿಗಳೇ ಹೊರತು ಆಧ್ಯಾತ್ಮಿಕ ಸಾಧಕರುಗಳಲ್ಲ.ಮಠಗಳ ಸ್ವಾಮಿಗಳಾದವರುಗಳನ್ನು ಆಧ್ಯಾತ್ಮಿಕ ಸಾಧಕರು ಎನ್ನುವುದು ಸರಿಯಲ್ಲ.

‘ ಆಧ್ಯಾತ್ಮ’ ಎನ್ನುವುದು ಸರ್ವೋನ್ನತ ಆದರ್ಶವಾಗಿದ್ದು ಅದು ಭಕ್ತಿ ಮತ್ತು ಯೋಗಗಳೊಂದಿಗೆ ಬೆರೆತಿದೆ.ಆತ್ಮಸಾಕ್ಷಾತ್ಕಾರದ ಪಥದಲ್ಲಿ ಇರುವವರೇ ಆಧ್ಯಾತ್ಮಿಗಳು.ಪರಶಿವನ ನಂತರದ ಉನ್ನತ ಸ್ಥಾನ ಮಾನ ಆಧ್ಯಾತ್ಮ ಸಾಧಕರುಗಳಾದ ಯೋಗಿಗಳಿಗೆ‌ ಇರುತ್ತದೆಯೇ ಹೊರತು ಆಧ್ಯಾತ್ಮಿಕ ಪ್ರಪಂಚದಲ್ಲಿ ಮಠ ಪೀಠಗಳ ಸ್ವಾಮಿಗಳು,ಗುರುಗಳು,ಜಗದ್ಗುರುಗಳು ಎನ್ನಿಸಿಕೊಂಡವರಿಗೆ ಯಾವ ಸ್ಥಾನವೂ ಇರುವುದಿಲ್ಲ.ಇವರುಗಳೇನಿದ್ದರೂ ಲೋಕದ ಜನರನ್ನು ಮೆಚ್ಚಿಸಿ ಮೆರೆಯುವ ಜನರೇ ಹೊರತು ಮಹಾದೇವ ಶಿವನನ್ನು ಮೆಚ್ಚಿಸುವ ಸಾಧಕರುಗಳಲ್ಲ.ಆದ್ದರಿಂದ ಯಾವುದೇ ಮಠ ಪೀಠಗಳ ಸ್ವಾಮಿಗಳನ್ನು ಆಧ್ಯಾತ್ಮಿಕ ವ್ಯಕ್ತಿಗಳು ಎನ್ನಬಾರದು.ಅವರನ್ನು ಬೇಕಿದ್ದರೆ ಗುರುಗಳು,ಸ್ವಾಮಿಗಳು,ಮಠ ಪೀಠಾಧಿಪತಿಗಳು ಎನ್ನಬಹುದಷ್ಟೆ.

ಯಾರು ಬೇಕಾದರೂ ಮಠ ಪೀಠಗಳ ಸ್ವಾಮಿಗಳು ಆಗಬಹುದು; ಆದರೆ ಆಧ್ಯಾತ್ಮಿಕ ಸಾಧಕರು ಆಗುವವರಿಗೆ ಪರಮಾತ್ಮನ ಅನುಗ್ರಹ ಇರಲೇಬೇಕು.ಆಧ್ಯಾತ್ಮ ಸಾಧನೆಯ ಆತ್ಯಂತಿಕ ಗುರಿ ಮೋಕ್ಷ ಸಂಪಾದನೆಯೇ ಆದ್ದರಿಂದ ಆಧ್ಯಾತ್ಮಜೀವಿಗಳು ಮಠ ಪೀಠಾಧೀಶರುಗಳಂತೆ ಆಡಂಬರದ ಜೀವನ ನಡೆಸುವುದಿಲ್ಲ,ಎತ್ತರದ ಗದ್ದುಗೆ,ಚಿನ್ನ ಬೆಳ್ಳಿಯ ಸಿಂಹಾಸನಗಳು ಬೇಕು ಎನ್ನುವುದಿಲ್ಲ.ಎ.ಸಿ ಕಾರುಗಳು,ಎ.ಸಿ ರೂಮುಗಳು ಬೇಕು ಎನ್ನುವುದಿಲ್ಲ.ಜನರಿಂದ ಪೂಜೆ,ಒಡ್ಡೋಲಗಸೇವೆಗಳನ್ನು ಬಯಸುವವರು ಆಧ್ಯಾತ್ಮಿಕ ವ್ಯಕ್ತಿಗಳಿಲ್ಲ.ಜನ ಸಾಮಾನ್ಯರಿಂದ ದೂರ ಇದ್ದು ರಾಜಕಾರಣಿಗಳನ್ನು ವಿ ಐ ಪಿಗಳು ಎಂದು ಭಾವಿಸುವವರು ಆಧ್ಯಾತ್ಮಿಕ ವ್ಯಕ್ತಿಗಳಲ್ಲ.ಸರಳವಾಗಿ ತಮ್ಮ ಪಾಡಿಗೆ ತಾವಿದ್ದು ಯೋಗ,ಶಿವಯೋಗಗಳನ್ನು ಸಾಧಿಸುವ ಅಪರೋಕ್ಷಜ್ಞಾನಿಗಳೇ ಆಧ್ಯಾತ್ಮಿಕ ವ್ಯಕ್ತಿಗಳು.

ಆಧ್ಯಾತ್ಮಿಕ ವ್ಯಕ್ತಿಗಳು ಯಾವುದೇ ಪದವಿ ಪ್ರಶಸ್ತಿಗಳನ್ನು ಬಯಸುವುದಿಲ್ಲ.ವಿಶ್ವವಿದ್ಯಾಲಯಗಳು ಕೊಡುವ ಕಿಮ್ಮತ್ತಿಲ್ಲದ ಗೌರವ ಡಾಕ್ಟರೇಟುಗಳಿಗಂತೂ ಆಧ್ಯಾತ್ಮಿಕ ವ್ಯಕ್ತಿಗಳು ಆಸೆ ಪಡುವುದಿಲ್ಲ.ಆಧ್ಯಾತ್ಮಿಕ ವ್ಯಕ್ತಿಗಳನ್ನೇ ಗುರುತಿಸಲು ಆಗದ ವಿಶ್ವವಿದ್ಯಾಲಯಗಳ ವಿದ್ವನ್ಮಣಿಗಳು ಆಧ್ಯಾತ್ಮ ಸಾಧಕರುಗಳಿಗೆ ಗೌರವಡಾಕ್ಟರೇಟ್ ಕೊಡುವುದೆಂತು?ವಿಶ್ವವಿದ್ಯಾಲಯಗಳು ಆಧ್ಯಾತ್ಮಿಕ ಸಾಧಕರುಗಳಿಗೆ ಗೌರವ ಡಾಕ್ಟರೇಟ್ ಕೊಡುತ್ತೇವೆ ಎಂದರೆ ಆ ವಿಶ್ವವಿದ್ಯಾಲಯದ ಕುಲಪತಿಗಳು ಸೇರಿದಂತೆ ಆಯ್ಕೆ ಸಮಿತಿಯ ಅಜ್ಞಾನದ ಮಾತು ಎಂದು ತಳ್ಳಿಹಾಕಬೇಕಷ್ಟೆ. ಸಿದ್ಧಾರೂಢರು,ಗೋವಿಂದ ಭಟ್ಟರು,ಶಿಶುನಾಳ ಶರೀಫರು,ಚೇಳ್ಳಗುರ್ಕಿಯ ಎರ್ರಿತಾತನವರಂತಹ ಯೋಗಿಶ್ರೇಷ್ಠರುಗಳನ್ನು ಆಧ್ಯಾತ್ಮಿಕ ವ್ಯಕ್ತಿಗಳು ಎನ್ನಬಹುದು.ಕರ್ನಾಟಕದಲ್ಲಿ ಧಾರವಾಡದ ತಪೋವನದ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರೊಬ್ಬರೇ ಈ ಶತಮಾನದ ಮಹಾನ್ ಯೋಗಿಗಳು,ಸಂತರು,ದಾರ್ಶನಿಕರು.ಅವರನ್ನು ಬಿಟ್ಟರೆ ಇತ್ತೀಚೆಗೆ ಶಿವೈಕ್ಯರಾದ ವಿಜಯಪುರದ ಜ್ಞಾನಯೋಗಾಶ್ರದ ಸಿದ್ಧೇಶ್ವರ ಸ್ವಾಮಿಗಳವರು ಮಾತ್ರ ಆಧ್ಯಾತ್ಮಿಕ ಮಹೋನ್ನತಿಕೆಯನ್ನುಳ್ಳ ವ್ಯಕ್ತಿಗಳು.ಉಳಿದವರಾರು ಆಧ್ಯಾತ್ಮಿಕ ವ್ಯಕ್ತಿಗಳಲ್ಲ.ಅಂದ ಬಳಿಕ ಜಾತಿಗಳ ಮಠಗಳ ಗುರುಗಳು ಆಧ್ಯಾತ್ಮಿಕ ವ್ಯಕ್ತಿಗಳಾಗುತ್ತಾರೆಯೆ?

ಕೆಲವರು ತಮ್ಮನ್ನು ತಾವು ಯೋಗಿಗಳು,ಯೋಗಗುರುಗಳು ಎಂದು ಘೋಷಿಸಿಕೊಂಡಿದ್ದಾರೆ.ಇನ್ನೂ ಕೆಲವರು ಆ ಯೋಗ ಈ ಯೋಗ ಎಂದು ಏನು ಏನೋ ಬಟ್ಟೆಹಾವು ಬಿಡುತ್ತ ಹೊಟ್ಟೆಹೊರೆಯುತ್ತಿದ್ದಾರೆ.ಯೋಗಾಸನಗಳು ಯೋಗದ ಒಂದು ಭಾಗವಷ್ಟೇ,ಯೋಗಾಸನಗಳೇ ಯೋಗವಲ್ಲ.ಯೋಗದ ಪರಿಚಯವಿಲ್ಲದ ದಡ್ಡಜನರು ಯೋಗಾಸನ ಮಾಡುವವರನ್ನೇ ಯೋಗಗುರುಗಳು ಎಂದು ಭ್ರಮಿಸಿದ್ದಾರೆ.ಇಂಗ್ಲಿಷ್ ನಾಗರಿಕತೆಯ ಜನರಿಗಂತೂ ಆಧ್ಯಾತ್ಮ ಎಂದರೆ ಏನೆಂದೇ ಗೊತ್ತಿಲ್ಲ.ಹಾಗಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಜನರು ಭಾರತದ ಕಾರ್ಪೊರೇಟ್ ಸ್ವಾಮಿಗಳು,ಗುರುಗಳನ್ನು ಯೋಗಿಗಳೆಂದೇ ಭ್ರಮಿಸಿದ್ದಾರೆ! ಯೋಗಿಯಾದವನು ಭವ್ಯ,ವೈಭವೋಪೇತ ಜೀವನ ನಡೆಸುವುದಿಲ್ಲ,ಅತ್ಯಂತ ಸರಳವಾಗಿ ಬದುಕುತ್ತಾನೆ.ಆಧ್ಯಾತ್ಮಿಕ ವ್ಯಕ್ತಿಯು ಮುಖದಲ್ಲಿ ಕಪಟನಗೆ ತೋರ್ಪಡಿಸುವುದಿಲ್ಲ,ಅವನ ಮುಖದಲ್ಲಿ ಯೋಗಕಳೆಯ ದಿವ್ಯಪ್ರಸನ್ನತೆ ಸದಾ ಬೆಳಗುತ್ತಿರುತ್ತದೆ.

ಆಧ್ಯಾತ್ಮಿಕ ವ್ಯಕ್ತಿಗಳು ಯಾವುದೇ ಜಾತಿ,ಮತಗಳ ಹಂಗಿಗೆ‌ ಒಳಗಾಗಿರುವುದಿಲ್ಲ.ವಿಶ್ವಾತ್ಮರಾಗಿರುವ ಆಧ್ಯಾತ್ಮಿಕ ಚೇತನರುಗಳು ವಿಶ್ವವನ್ನು ಪರಶಿವನ ಲೀಲೆ ಎಂದು ಬಗೆಯುತ್ತಾರೆ,ವಿಶ್ವದ ಎಲ್ಲರಲ್ಲಿಯೂ‌ ಪರಶಿವನನ್ನೇ ಕಾಣುತ್ತಾರೆ,ವಿಶ್ವದ ಎಲ್ಲ ಘಟನೆಗಳ ಹಿಂದೆ ಪರಶಿವನ ಸಂಕಲ್ಪವನ್ನು ಗುರುತಿಸುತ್ತಾರೆ.ಇಂತಹ ಮಹೋನ್ನತ ಚೇತನರುಗಳನ್ನು ಧಾರ್ಮಿಕ ವ್ಯಕ್ತಿಗಳೊಂದಿಗೆ ತಳುಕು ಹಾಕಬಾರದು.ಧರ್ಮವು ಕಬ್ಬು ಆದರೆ ಅದರೊಳಗಿನ ರಸವು ಆಧ್ಯಾತ್ಮ.ತೆಂಗಿನ ಕಾಯಿ ಧರ್ಮವಾದರೆ ಅದರೊಳಗಿನ‌ ಕೊಬ್ಬರಿ ಇಲ್ಲವೆ ಎಳೆನೀರು ಆಧ್ಯಾತ್ಮ.ಜೇನುಗೂಡು ಧರ್ಮವಾದರೆ ಅದರೊಳಗಿರುವ ಮಧು ಆಧ್ಯಾತ್ಮ.ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳದವರು ಧರ್ಮ ಮತ್ತು ಆಧ್ಯಾತ್ಮ ಒಂದೇ ಎಂದು ಭ್ರಮಿಸುತ್ತಾರೆ.ಭ್ರಮಿತಚಿತ್ತರ ಭಾವನೆಗಳನ್ನು ಪೂರ್ಣಪ್ರಜ್ಞರುಗಳು ಒಪ್ಪುವುದಿಲ್ಲ.

About The Author