ಮೂರನೇ ಕಣ್ಣು : ಅಮಾನವೀಯ ಮೌಢ್ಯದ ಮುಂದುವರಿಕೆ ಬೇಡ : ಮುಕ್ಕಣ್ಣ ಕರಿಗಾರ

ತುಮಕೂರು ತಾಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮೌಢ್ಯದ ಹೆಸರಿನಲ್ಲಿ ನಡೆದ ಹಸುಗೂಸಿನ ಸಾವು ಬೆಚ್ಚಿಬೀಳಿಸುವ, ಹೃದಯವಿದ್ರಾವಕ ಘಟನೆಯಾಗಿದ್ದು ಇಂತಹ ಮೌಢ್ಯಗಳ ಆಚರಣೆಯನ್ನು ನಿಲ್ಲಿಸಲು ಸರಕಾರವು ಕ್ರಮಕೈಗೊಳ್ಳಬೇಕಿದೆ.ಮೈಲಿಗೆಯ ನೆಪದಲ್ಲಿ ಬಾಣಂತಿ ಹಾಗೂ ಮಗುವನ್ನು ಮನೆಯಿಂದ ಹೊರಗೆ ನಾಯಿಗೂಡಿನಂತಹ ಗುಡಿಸಲಲ್ಲಿ ಕೂಡಿಟ್ಟ ಪರಿಣಾಮ ಮಳೆಯಶೀತವಾತಾವರಣಕ್ಕೆ ಮಗು ಸತ್ತಿದೆ.ಗೊಲ್ಲರ ಹಟ್ಟಿಗಳಲ್ಲಿ ಇಂದಿಗೂ ಮೂಢನಂಬಿಕೆಯೊಂದು ಜೀವಂತವಾಗಿರುವ ಕಾರಣದಿಂದ ಹೆರಿಗೆಯಾದರೆ ಮನೆ ಮೈಲಿಗೆಯಾಗುತ್ತದೆ ಎನ್ನುವ ಅರ್ಥಹೀನ ನಂಬಿಕೆಯಿಂದ ತುಂಬುಗರ್ಭಿಣಿಯರನ್ನು ಊರಹೊರಗೆ ಗುಡಿಸಲುಗಳನ್ನು ಹಾಕಿ ಅಲ್ಲಿ ಬಿಡಲಾಗುತ್ತಿದೆ.ಇದು ನಾಗರಿಕ ಸಮಾಜವು ತಲೆತಗ್ಗಿಸುವ ವಿಚಾರವಾಗಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ತುರ್ತು ಅಗತ್ಯವಾಗಿದೆ.

ಗೊಲ್ಲರ ಹಟ್ಟಿಗಳಲ್ಲಿ ಇಂದಿಗೂ ಈ ಅನಾಗರಿಕ ಮೌಢ್ಯವನ್ನು ಆಚರಿಸಲಾಗುತ್ತಿದೆ.ಈ ಹಿಂದೆ ಕೆಲವು ಜನ ಮಠಾಧೀಶರುಗಳು ಗೊಲ್ಲರಸಮುದಾಯದ ಜನರಿಗೆ ತಿಳಿವಳಿಕೆ ನೀಡಿದರೂ ಈ ಅನಿಷ್ಟ,ಅನಾಗರಿಕ ಆಚರಣೆಯು ನಿಂತಿಲ್ಲ.ಪ್ರಗತಿಪರವಿಚಾರವಂತರ ಹಿತೋಪದೇಶವು ಫಲಿಸಿಲ್ಲವಾದ್ದರಿಂದ ಈಗ ಸರ್ಕಾರವೇ ಈ ಅನಿಷ್ಟಪದ್ಧತಿಯ ನಿರ್ಬಂಧಕ್ಕೆ ಕ್ರಮಕೈಗೊಳ್ಳಬೇಕಿದೆ.ಸರಕಾರವು ಕೈಗೊಳ್ಳಬಹುದಾದ ಕ್ರಮಗಳು;

೧. ಗೊಲ್ಲರ ಹಟ್ಟಿಗಳಲ್ಲಿ ನಡೆಯುತ್ತಿರುವ ಇಂತಹ ಅಮಾನವೀಯ ಕೃತ್ಯಗಳ ಬಗ್ಗೆ ಹಿಂದುಳಿದ ವರ್ಗಗಳು,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಆರೋಗ್ಯ ಇಲಾಖೆ,ಶಿಕ್ಷಣ ಇಲಾಖೆ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಹಾಗೂ ಬುಡಕಟ್ಟು ಜನಾಂಗ,ಹಿಂದುಳಿದ ವರ್ಗಗಳ ಕಲ್ಯಾಣದ ವಿಷಯಗಳಲ್ಲಿ ತೊಡಗಿಸಿಕೊಂಡಿರುವ ಸೇವಾನಿಷ್ಠ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

೨. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಗೊಲ್ಲರ ಹಟ್ಟಿಗಳಲ್ಲಿ ಗರ್ಭಿಣಿಯರಿರುವ ಮಹಿಳೆಯರ ಸಮೀಕ್ಷೆ ಮಾಡಿಸಿ,ಹೆರಿಗೆಪೂರ್ವದಲ್ಲಿಯೇ ಅವರುಗಳನ್ನು ಸರಕಾರಿ ಆಸ್ಪತ್ರೆಗಳಿಗೆ,ಹೆರಿಗೆ ಆಸ್ಪತ್ರೆಗಳಿಗೆ ದಾಖಲು ಮಾಡಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವಂತೆ ಕ್ರಮವಹಿಸಬೇಕು.

೩. ಸ್ಥಳೀಯ ಸರ್ಕಾರಗಳಾಗಿರುವ ಗ್ರಾಮ ಪಂಚಾಯತಿಗಳು ಅವುಗಳ ವ್ಯಾಪ್ತಿಯ ಗೊಲ್ಲರಹಟ್ಟಿಗಳ ಬಗ್ಗೆ ಕಾಳಜಿವಹಿಸಿ ಸ್ಥಳೀಯ ಮುಖಂಡರುಗಳು,ಧಾರ್ಮಿಕ ವ್ಯಕ್ತಿಗಳ ಮೂಲಕ ಈ ಅನಿಷ್ಟಪದ್ಧತಿಯ ಬಗ್ಗೆ ಜಾಗೃತಿ ಮೂಡಿಸಬೇಕು.ಗ್ರಾಮ ಪಂಚಾಯತಿಗಳು ಗೊಲ್ಲರ ಹಟ್ಟಿಗಳಲ್ಲಿ ಇರುವ ಗರ್ಭಿಣಿ ಮಹಿಳೆಯರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.

೪. ಪೋಲೀಸ್ ಇಲಾಖೆಯು ಕೂಡ ಈ ಅನಿಷ್ಟ ಪದ್ಧತಿಯ ನಿವಾರಣೆಯಲ್ಲಿ ತೊಡಗಿಕೊಳ್ಳಬಹುದು.ಗೊಲ್ಲರ ಹಟ್ಟಿಗಳಲ್ಲಿ ಗರ್ಭಿಣಿಯರಿರುವ ಪಾಲಕರ ಮನೆಗಳಿಗೆ ಪೋಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ,ಗರ್ಭಿಣಿ ಸ್ತ್ರೀಯರನ್ನು ಹಟ್ಟಿಯ ಹೊರಗಿನ ಗುಡಿಸಲುಗಳಿಗೆ ಕಳಿಸದೆ ಮನೆಯಲ್ಲಿಯೇ ಹೆರಿಗೆ ಮಾಡಿಸುವಂತೆ ಇಲ್ಲವೆ ಆಸ್ಪತ್ರೆಗೆ ಕಳಿಸುವಂತೆ ತಿಳಿಹೇಳಬೇಕು.ಇದನ್ನು ಉಲ್ಲಂಘಿಸಿ ಹಟ್ಟಿಗಳ ಹೊರಗಿನ ಗುಡಿಸಲುಗಳಿಗೆ ಗರ್ಭಿಣಿ ಸ್ತ್ರೀಯರನ್ನು ಕಳಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಬೇಕು.ಇದರಿಂದ ಹಟ್ಟಿಗಳ ಜನರು ಎಚ್ಚೆತ್ತುಕೊಳ್ಳುತ್ತಾರೆ.

೫. ಸರಕಾರವು ಗೊಲ್ಲರಹಟ್ಟಿಗಳಲ್ಲಿ ಗರ್ಭಿಣಿ ಸ್ತ್ರೀಯರನ್ನು,ಹೆರಿಗೆಯಾದ ಮಹಿಳೆಯರನ್ನು ಸೂತಕದ ಹೆಸರಿನಲ್ಲಿ ಊರಹೊರಗಿನ ಗುಡಿಸಲುಗಳಿಗೆ ಅವರನ್ನು ಕಳಿಸುವ ಈ ಅನಾಗರಿಕ ಕೃತ್ಯವು ಶಿಕ್ಷಾರ್ಹ ಅಪರಾಧವೆಂದು ಘೋಷಿಸಿ ಒಂದು ಕಾನೂನನ್ನು ರೂಪಿಸಬಹುದು.

ನಾಗರಿಕ ಸಮಾಜವು ನಾಚಿಕೆಯಿಂದ ತಲೆತಗ್ಗಿಸುವ ಇಂಥಹ ಅಮಾನವೀಯ ನಂಬಿಕೆಗಳ ನಿಷೇಧದಲ್ಲಿ ನಾಗರಿಕರು,ಪ್ರಜ್ಞಾವಂತರು,ಸರಕಾರಿ ಅಧಿಕಾರಿಗಳು ಮತ್ತು ಸರಕಾರವು ಒಟ್ಟಾಗಿ ಶ್ರಮಿಸಿ ಇಂತಹ ಅನಿಷ್ಟ ಪದ್ಧತಿ ಒಂದನ್ನು ತಡೆಯಬೇಕಿದೆ.

About The Author