ಶರಣ ತತ್ತ್ವ ಚಿಂತನೆ –೦೨ : ಭಕ್ತಿಯಿಂದಲ್ಲದೆ ಶಿವನೊಲುಮೆ ಆಡಂಬರದಿಂದಲ್ಲ : ಮುಕ್ಕಣ್ಣ ಕರಿಗಾರ

ಶಿವನು ಭಕ್ತವತ್ಸಲನು,ಭಕ್ತಿಗೆ ಒಲಿದು ಓಗೊಡುವ ಶಿವನನ್ನು ಭಕ್ತಿಯಿಂದಲೇ ಒಲಿಸಿಕೊಳ್ಳಬೇಕು.ಶಿವನನ್ನು ಮಠ ಪೀಠಗಳ ಆಚಾರ್ಯರುಗಳು ರುದ್ರಾಧ್ಯಾಯವಾದಿ ಮಂತ್ರಪಠಣೆ,ಅಭಿಷೇಕ,ಅರ್ಚನೆಗಳಿಂದ ಒಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ.ಆದರೆ ಭಕ್ತರು ಮುಗ್ಧ ಭಕ್ತಿಯಿಂದ ಶಿವನ ಒಲುಮೆಗೆ ಪಾತ್ರರಾಗುತ್ತಾರೆ.ಆಚಾರ್ಯಮಾರ್ಗವು ಶಿಷ್ಟವರ್ಗದ ಶಿವಪೂಜಾವಿಧಾನವಾದರೆ ಅನುಭಾವ ಮಾರ್ಗವು ಜನಸಾಮಾನ್ಯರ ಶಿವನೊಲುಮೆಯ ಪಥವು.ಆಚಾರ್ಯಮಾರ್ಗಕ್ಕಿಂತ ಅನುಭಾವಮಾರ್ಗವೇ ಶ್ರೇಷ್ಠ ಎನ್ನುತ್ತಾರೆ ನಿಜಶರಣ ಅಂಬಿಗರ ಚೌಡಯ್ಯನವರು ;

ಅಜಾತನನೊಲಿಸದಡೆ ಅದೇತರ ಮಂತ್ರ,ಅದೇತರ ಆಗಮ ಹೇಳಿರೋ,
ಆಚಾರ್ಯ ಕೊಟ್ಟ ಸಲಾಕಿ ಯಾತರಲ್ಲಿ ನಚ್ಚುವಿರಿ?
ಅದಾವ ಮುಖದಲ್ಲಿ,ಲಿಂಗ ಬಂದಿಪ್ಪುದು?
ರೂಪಿಲ್ಲದಾತ ನಿಮ್ಮ ಮಾತಿಂಗೆ ಬಂದರೆ
ಅದೇತರ ಮಾತೆಂದನಂಬಿಗ ಚೌಡಯ್ಯ.

ನಿರಾಕಾರನೂ ನಿರ್ಗುಣನೂ ನಿರಂಜನನೂ ಆಗಿರುವ ಪರಶಿವನ ಒಲುಮೆಯನ್ನುಣ್ಣಲು ಭಕ್ತಿಯೇ ಶ್ರೇಷ್ಠ ಸಾಧನವಲ್ಲದೆ ಯುಕ್ತಿಯುಕ್ತವಾಗಿ ಮಾಡುವ ಬಹಿರಾಡಂಬರದ ಪೂಜೆಗಳಿಂದ ಶಿವನೊಲುಮೆ ಸಾಧ್ಯವಿಲ್ಲ.ಮಂತ್ರಗಳು ಮಹಿಮಾನ್ವತವಾದವುಗಳೆಂದು ರುದ್ರಾದಿ ಮಂತ್ರಗಳನ್ನು ಪಠಿಸಬಹುದು.ಆದರೆ ಆ ಮಂತ್ರಗಳಿಂದ ಹುಟ್ಟು ಸಾವುಗಳಿಲ್ಲದ ಪರಶಿವನನ್ನು ಒಲಿಸಬಹುದೆ? ಅಜಾತನಾದ ಶಿವನನ್ನು ಒಲಿಸಲಾಗದಿದ್ದರೆ ಮಂತ್ರಕ್ರಿಯಾಪೂಜೆಗಳಿಂದ ಫಲವೇನು? ರುದ್ರಮಂತ್ರಗಳಾಗಲಿ,ಪಂಚಬ್ರಹ್ಮ ಮಂತ್ರಗಳಾಗಲಿ ಅಥವಾ ಆಗಮಗಳಾಗಲಿ ಶಿವನನ್ನು ಕರೆತರಲಾರವು ಅವುಗಳು ಕೇವಲ ಶಾಸ್ತ್ರಗಳಾಗಿದ್ದರಿಂದ.ಭಕ್ತಿ ಎನ್ನುವುದು ಶಿವನನ್ನು ಒಲಿಸುವ ಮಹಾಸೂತ್ರವು.ಶಾಸ್ತ್ರಕ್ಕೆ ಒಲಿಯದ ಶಿವನು ಭಕ್ತಿ ಎನ್ನುವ ಸೂತ್ರಕ್ಕೆ ಒಲಿದು ಓಗೊಡುತ್ತಾನೆ.ಮಂತ್ರಗಳಾಗಲಿ ಆಗಮಗಳಾಗಲಿ ಶಿವನೊಲುಮೆಗೆ ಅನಿವಾರ್ಯವಲ್ಲ.

ಆಚಾರ್ಯಕೊಟ್ಟಿಹನೆಂದು ಒಡಲನ್ನು ಬಗೆದು ಕೊಲ್ಲುವ ಕಬ್ಬಿಣದ ಸಲಾಕಿಯನ್ನು ನಂಬಬಹುದೆ? ಆಚಾರ್ಯರು ಕೊಟ್ಟ ಸಲಾಕಿ ಎಂದು ಹೊಟ್ಟೆಗೆ ತಿವಿದುಕೊಂಡರೆ ಸಾಯದೆ ಬದುಕಬಹುದೆ? ವೇದಾಧ್ಯಯನ,ವೈದಿಕ ಶಿವಪೂಜಾ ವಿಧಿ ಮತ್ತು ಆಗಮೋಕ್ತ ಶಿವಪೂಜೆಗಳೆಂಬವು ಆತ್ಮಘಾತುಕ ಸಂಗತಿಗಳು .ಅವುಗಳಿಂದ ಮುಕ್ತಿ ಸಾಧ್ಯವಾಗದು.ಯಾಕೆಂದರೆ ಅಲ್ಲಿ ಕ್ರಿಯೆಗೆ ಮಹತ್ವ ಇರುತ್ತದೆಯಾಗಲಿ ಆಚರಣೆಗೆ,ಭಕ್ತಿಗೆ ಮಹತ್ವ ಇರುವುದಿಲ್ಲ.ರುದ್ರಮಂತ್ರಗಳನ್ನು ಹೇಳುತ್ತ ಶಿವನಲಿಂಗ,ಮೂರ್ತಿಗಳಿಗೆ ಅಭಿಷೇಕ ಮಾಡಬಹುದು.ಅಲ್ಲಿ ಮಂತ್ರಪಠಣೆ ಮತ್ತು ಜಲಾಭಿಷೇಕ ಕ್ರಿಯೆಗೆ ಒತ್ತು ನೀಡಲಾಗುತ್ತದೆ.ಇಪ್ಪತ್ತೆಂಟು ಶಿವಾಗಮಗಳು ಪ್ರಸ್ತಾಪಿಸುವ ಶಿವಪೂಜೆಯ ವಿಧಾನಗಳು ಬಹಿರಾಚರಣೆಯ ವಿಧಾನಗಳೇ ಹೊರತು ಅಂತರಂಗದ ಪರಶಿವನನ್ನು ಜಾಗೃತಗೊಳಿಸಲಾರವು.ಆಚಾರ್ಯರು ಗುರುಗಳು ಎನ್ನುವವರು ಅನುಗ್ರಹಿಸಿ ಕೊಡುವ ಲಿಂಗ,ವಸ್ತುವೈವಿಧ್ಯಗಳಿಂದ ಶಿವನ ಅನುಗ್ರಹ ಸಾಧ್ಯವಿಲ್ಲ.

ನಿರಾಕಾರನಾದ ಶಿವನನ್ನು ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ.ಮಾತು ಮನಗಳಿಗೆ ಎಟುಕದ ಮಹಾಶಿವತತ್ತ್ವವನ್ನು ಅನುಭವಿಸಿ,ಆನಂದಿಸಬೇಕಲ್ಲದೆ ಬಣ್ಣಿಸಲಾಗದು.ಶಬ್ದಸಾಧ್ಯನಲ್ಲದ ಶಿವನು ಅನುಭವವೇದ್ಯನು.ಶಿವದೇವಾಲಯಗಳಲ್ಲಿ ಕೈಗೊಳ್ಳುವ ರುದ್ರಾಭಿಷೇಕಪೂಜೆ,ಆಗಮೋಕ್ತ ಪೂಜೆಗಳೆಂಬುದು ಆಡಂಬರದ ಪೂಜೆಯಲ್ಲದೆ ಅವುಗಳಿಂದ ಶಿವನ ಅನುಗ್ರಹಪಡೆಯಲು ಸಾಧ್ಯವಿಲ್ಲ.ಅಜಾತನಾದ ಶಿವನು ಜ್ಯೋತಿಸ್ವರೂಪರಾದವರಿಗೆ ಮಾತ್ರ ಗೋಚರಿಸುವನು.ನಿರಾಕಾರನಾದ ಶಿವನು ನಿರ್ಭಾವಗೋಚರನು.ಭಾವತುಂಬಿದ ಭಕ್ತಿಯಿಂದ ನಿರ್ಭಾವ ನಿರಂಜನನ ಒಲುಮೆಯನ್ನುಣ್ಣಬಹುದು.ಶಿವದೇವಾಲಯಗಳಲ್ಲಿ ಮಂತ್ರಗಳನ್ನು ಪಠಿಸುವುದು,ಪಂಚೋಪಚಾರ,ಷೋಡಶಪೂಜೆಗಳ ಸೇವೆ ಸಮರ್ಪಿಸುವುದು,ಬಿಲ್ವಾರ್ಚನೆಗಳಾದಿ ಅರ್ಚನೆಗಳನ್ನು ಮಾಡುವುದು ಮಂದಿಯನ್ನು ಮೆಚ್ಚಿಸಲೆಂದೇ ಹೊರತು ಮಹಾದೇವ ಶಿವನನ್ನು ಮೆಚ್ಚಿಸಲು ಅಲ್ಲ! ಶಿವನಿಗೆ ಎದೆಯ ಕಾರುಣ್ಯದಿಂದ ಅಭಿಷೇಕ ಮಾಡಬೇಕು,ಶುದ್ಧಭಕ್ತಿ ಭಾವದಿಂದ ಕರೆಯುವುದೇ ಮಂತ್ರ.ಶುದ್ಧನಲ್ಲದವನು ಸಿದ್ಧನಲ್ಲ; ಸಿದ್ಧನಲ್ಲದವನಿಗೆ ಶಿವಾನುಗ್ರಹವು ಸಾಧ್ಯವಿಲ್ಲ.ಶಿವನಲ್ಲಿ ಭಕ್ತಿಯನ್ನಿಟ್ಟು ನಡೆಯುವುದೇ ಮುಕ್ತಿಮಾರ್ಗವು.ಭಕ್ತರ ಕುಂದು ಕೊರತೆಗಳನ್ನೆಣಿಸದೆ ಉದ್ಧರಿಸುವ ಶಿವನು ಆಚಾರ್ಯಮಾರ್ಗದಲ್ಲಿ ನಡೆಯುವವರನ್ನು ಅಡಿಗಡಿಗೂ ಪರೀಕ್ಷಿಸುತ್ತಾನೆ.

ಆಚಾರ್ಯಮಾರ್ಗದ ಪೂಜೋಪಚಾರಗಳಿಂದ ಶಿವನನ್ನು ಒಲಿಸಲು ಸಾಧ್ಯವಿಲ್ಲವಾದ್ದರಿಂದ ಶ್ರೀಗುರುವು ಉಪದೇಶಿಸಿದ ಶಿವಮಂತ್ರದಲ್ಲಿ ನಿಷ್ಠೆಯನ್ನಿಟ್ಟು ಸದಾಕಾಲವು ಆ ಶಿವಮಂತ್ರವನ್ನು ಜಪಿಸುತ್ತ,ಪಠಿಸುತ್ತ ಶಿವನ ಕೃಪೆಯನ್ನು ಪಡೆಯಬಹುದು,ಮೋಕ್ಷವನ್ನು ಹೊಂದಬಹುದು.

About The Author