ಮೂರನೇ ಕಣ್ಣು : ಸರ್ಕಾರವೇ ಗೋಮಾಳಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಹಂಚಿದರೆ ‘ಗೋಪೂಜೆ’ ಮಾಡಿ ಫಲವೇನು ? : ಮುಕ್ಕಣ್ಣ ಕರಿಗಾರ

ಕರ್ನಾಟಕದಲ್ಲಿ ಸಿದ್ರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರವು ಅಸ್ತಿತ್ವಕ್ಕೆ ಬಂದಿರುವುದನ್ನು ಸಹಿಸದ ಕೆಲವು ಜನರು ಆಗಾಗ ಅಸಹನೆಯ ಕ್ಷುಲ್ಲಕ ಮಾತುಗಳನ್ನು ಆಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರುವ ಸಂಗತಿ.ಸಿದ್ರಾಮಯ್ಯನವರು ಮುಖ್ಯಮಂತ್ರಿ ಆಗಿರುವುದನ್ನು ಸಹಿಸದ ‘ದೇಶೋದ್ಧಾರಕರುಗಳು’ ಕೆಟ್ಟಕೆಟ್ಟದಾಗಿ ಮಾತನಾಡುತ್ತಿರುತ್ತಾರೆ.ಆದರೆ ಗೋವು ಪವಿತ್ರಪ್ರಾಣಿ,ಗೋಹತ್ಯೆ ನಿಷೇಧಿಸಬೇಕು ಎಂದು ಗೋಪೂಜೆಗೆ ಪ್ರೋತ್ಸಾಹಿಸುವ ಪಕ್ಷವಾದ ಭಾರತೀಯ ಜನತಾ ಪಕ್ಷದ ಸರಕಾರವೇ 2019-2022 ರ ಅವಧಿಯಲ್ಲಿ 252 ಎಕರೆ 36 ಗುಂಟೆಗಳಷ್ಟು ಗೋಮಾಳ ಭೂಮಿಯನ್ನು ಖಾಸಗಿ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಹಂಚಿದೆ ಎನ್ನುವುದು ಇಂತಹ ದೇಶಭಕ್ತರುಗಳಿಗೆ ದೊಡ್ಡಸಂಗತಿ ಎನ್ನಿಸುವುದಿಲ್ಲ.

ಗೋಹತ್ಯೆ ನಿಷೇಧಿಸಬೇಕು( ಬಿಜೆಪಿ ಸರಕಾರವು ಗೋಹತ್ಯೆ ನಿಷೇಧಿಸಿ ಕಾನೂನು ಜಾರಿ ಮಾಡಿತ್ತು),ಗೋಪೂಜೆ ಮಾಡಬೇಕು ಎನ್ನುವ ಜನರೇ ಗೋವುಗಳಿಗೆ ತಿನ್ನಲು ಮಣ್ಣುಕೊಟ್ಟ ಪ್ರಸಂಗ ದೇಶಭಕ್ತರ ಕಣ್ಣುಗಳನ್ನು ತೆರೆಸಬಾರದೆ? ಸಿದ್ರಾಮಯ್ಯನವರು ಮುಖ್ಯಮಂತ್ರಿ ಆಗಿರುವುದರಿಂದ ದೇಶಭಕ್ತರು ನುಂಗಿದ ನೆಲ ಜಲಗಳ ಬಗ್ಗೆ ಸಾರ್ವಜನಿಕರಿಗೆ ಗೊತ್ತಾಗುತ್ತದೆ ಎನ್ನುವ ಕಾರಣದಿಂದಲೇ ದೇಶಭಕ್ತಿಯನ್ನು ಪೆಟೆಂಡ್ ಪಡೆದ ಮಂದಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ.ಬಹುಶಃ ಸಿದ್ರಾಮಯ್ಯನವರು ಅಲ್ಲದೆ ಬೇರೆ ಯಾರೇ ಮುಖ್ಯಮಂತ್ರಿ ಆಗಿದ್ದರೂ ಆರ್ ಎಸ್ ಎಸ್ ಕೃಪಾಪೋಷಿತ ಸಂಸ್ಥೆಗಳು ಆಪೋಶನಗೈದ ಸರಕಾರಿ ಗೋಮಾಳಗಳನ್ನು ವಶಕ್ಕೆ ಪಡೆಯುವ ಧೈರ್ಯ ಮಾಡುತ್ತಿರಲಿಲ್ಲ.

ಬಿ.ಜೆ.ಪಿ ಸರಕಾರವು ಆರ್ ಎಸ್ ಎಸ್ ಸಂಘಟನೆಗೆ ಸೇರಿದ ಜನಸೇವಾ ಟ್ರಸ್ಟ್ ಗೆ ಬೆಂಗಳೂರು ದಕ್ಷಿಣ ತಾಲೂಕಿನ ಕುರುಬರಹಳ್ಳಿ ಗ್ರಾಮದ ತಾವರಕೆರೆ ಹೋಬಳಿಯಲ್ಲಿ 35 ಎಕರೆ 33 ಗುಂಟೆ ಗೋಮಾಳ ಜಮೀನನ್ನು ನೀಡಿದ್ದನ್ನು ಮುಖ್ಯಮಂತ್ರಿ ಸಿದ್ರಾಮಯ್ಯನವರು ಅಧಿಕಾರಕ್ಕೆ ಬಂದ ಐದೇ ದಿನಗಳಲ್ಲಿ ತಡೆನೀಡಿ,ಗೋಮಾಳಭೂಮಿಯನ್ನು ರಕ್ಷಿಸಿದ್ದಾರೆ.ಸಿದ್ರಾಮಯ್ಯನವರು ಆರ್ ಎಸ್ ಎಸ್ ವಿರೋಧಿಗಳು ಅದಕ್ಕೆ ಆರ್ ಎಸ್ ಎಸ್ ನ ವಿರುದ್ಧ ಹೀಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಅಪಪ್ರಚಾರ ಮಾಡುತ್ತಿರುವವರು ಮುಖ್ಯಮಂತ್ರಿ ಸಿದ್ರಾಮಯ್ಯನವರು ಆರ್ ಎಸ್ ಎಸ್ ನ ಜನಸೇವಾ ಟ್ರಸ್ಟಿಗೆ ನೀಡಿದ್ದ 35 ಎಕರೆ 33 ಗುಂಟೆ ಗೋಮಾಳ ಭೂಮಿಯ ಹಂಚಿಕೆಗೆ ಮಾತ್ರ ತಡೆನೀಡಿಲ್ಲ;ಬಿಜೆಪಿಯ ಅಧಿಕಾರಾವಧಿಯಲ್ಲಿ ಆದ ರಾಜ್ಯದ ಒಂಬತ್ತು ಜಿಲ್ಲೆಗಳ ಒಟ್ಟು 252 ಎಕರೆ 36 ಗುಂಟೆ ಗೋಮಾಳ ಜಮೀನಿನ ಹಂಚಿಕೆಯನ್ನು ರದ್ದುಗೊಳಿಸಿ ಗೋಮಾತೆಗೆ ಗೌರವಸಲ್ಲಿಸಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ಗೋಮಾಳ ಭೂಮಿಯನ್ನು ಕರ್ನಾಟಕದ ಪ್ರಸಿದ್ಧ ಮಠಗಳು,ಧಾರ್ಮಿಕ ಸಂಸ್ಥೆಗಳಿಗೂ ಹಂಚಿಕೆ ಮಾಡಿ ವಿವಾದವಾಗದಂತೆ ಎಚ್ಚರಿಕೆ ವಹಿಸಲಾಗಿತ್ತು ಎನ್ನುವುದು ಗೊತ್ತಾಗಿದೆ.ಆದಿಚುಂಚನಗಿರಿ ಮಠ,ಸಿದ್ಧಗಂಗಾ ಮಠ,ಇಸ್ಕಾನ್ ಗಳಂತಹ ಸಂಸ್ಥೆಗಳಿಗೆ ಗೋಮಾಳ ಭೂಮಿ ಮಂಜೂರಿ ಮಾಡಿದ ಉದ್ದೇಶ ಏನಿರಬಹುದು ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.ರಾಷ್ಟ್ರೋತ್ಥಾನ ಪರಿಷತ್ತು,ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್,ಒಕ್ಕಲಿಗರ ಸಂಘ ಸೇರಿದಂತೆ ಇತರ ಪ್ರಭಾವಿ ಸಂಘ ಸಂಸ್ಥೆಗಳಿಗೂ ಗೋಮಾಳ ಭೂಮಿ ಮಂಜೂರು ಮಾಡಲಾಗಿದೆ.

ಮಹಾಲೇಖಪಾಲರು ( CAG) ಗೋಮಾಳ ಭೂಮಿಯನ್ನು ಹಂಚುವ ಪ್ರಕ್ರಿಯೆಗೆ 2018 ರಲ್ಲೇ ಆಕ್ಷೇಪಿಸಿದ್ದರು ಎನ್ನುವುದು ಗಮನಿಸಬೇಕಾದ ಸಂಗತಿ.ಗೋಮಾಳ ಭೂಮಿಯನ್ನು ಹಂಚಿಕೆ ಮಾಡದಂತೆ ನಿರ್ಬಂಧಿಸಿ ವಿವಿಧ ಹೈಕೋರ್ಟ್ ಗಳು ನೀಡಿರುವ ಸೂಚನೆಗಳನ್ನು ಉಲ್ಲೇಖಿಸಿ ಸಿಎಜಿಯು ಗೋಮಾಳ ಭೂಮಿ ಹಂಚಿಕೆಗೆ ಆಕ್ಷೇಪ ವ್ಯಕ್ತಪಡಿಸಿತ್ತು.ಕರ್ನಾಟಕ ಭೂ ಕಂದಾಯ ನಿಯಮಗಳಂತೆ ಪ್ರತಿ 100 ಜಾನುವಾರುಗಳಿಗೆ 30 ಎಕರೆ ಭೂಮಿಯನ್ನು ಗೋಮಾಳಕ್ಕೆ ಮೀಸಲಿಡಬೇಕು.ಈ ಮೀಸಲಿನ ನಿಗದಿತ ಪ್ರಮಾಣದಲ್ಲಿ ಕಡಿಮೆ ಮಾಡಬೇಕಾದರೆ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು.ಆದರೆ ಹೈಕೋರ್ಟ್ಗಳ ಸೂಚನೆಯನ್ನು ಉಲ್ಲಂಘಿಸಿ,ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯದೆ ಗೋಮಾಳ ಭೂಮಿಯನ್ನು ಖಾಸಗಿ ವ್ಯಕ್ತಿ,ಸಂಘ- ಸಂಸ್ಥೆಗಳಿಗೆ ಹಂಚಿಕೆ ಮಾಡಿದ ಕ್ರಮಕ್ಕೆ ಮಹಾಲೇಖಪಾಲರು ಆಕ್ಷೇಪಿಸಿದ್ದರು.ಮಹಾಲೇಖಪಾಲರ ಆಕ್ಷೇಪಣೆಯನ್ನು ನಿರ್ಲಕ್ಷಿಸಿ 252 ಎಕರೆ 36 ಗುಂಟೆ ಗೋಮಾಳ ಜಮೀನನ್ನು ಹಿಂದಿನ ಬಿಜೆಪಿ ಸರಕಾರವು ಖಾಸಗಿ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಹಂಚಿಕೆ ಮಾಡಿತ್ತು.ಸಾರ್ವಜನಿಕ ಆಸ್ತಿಯಾದ ಗೋಮಾಳ ಭೂಮಿಯನ್ನು ತಮಗೆ ಬೇಕಾದ ವ್ಯಕ್ತಿಗಳು,ಸಂಘ ಸಂಸ್ಥೆಗಳಿಗೆ ನಿಯಮಗಳನ್ನು ಮೀರಿ,ಗೋವುಗಳ ಹಿತಕಡೆಗಣಿಸಿ ಹಂಚಿಕೆ ಮಾಡಿದ ಬಿಜೆಪಿ ಸರ್ಕಾರದ ಕ್ರಮವು ತಪ್ಪು ಮಾತ್ರವಲ್ಲ ಸರಕಾರಿ ಆಸ್ತಿಯ ದುರ್ಬಳಕೆ.ಸರಕಾರವೇ ಗೋಮಾಳಭೂಮಿಯಂತಹ ಕಾಯ್ದಿಡಬೇಕಾದ ಭೂಮಿಯನ್ನು ತನಗೆ ಬೇಕಾದವರಿಗೆ ಹಂಚಿದರೆ ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವವರು ಯಾರು? ಗೋವುಗಳ ಹಿತ ಕಾಪಾಡುವವರು ಯಾರು? ನಗರಗಳಲ್ಲಿ ಕೆರೆಗಳ ಒತ್ತುವರಿ ಮತ್ತು ಗೋಮಾಳ ಭೂಮಿಯ ಒತ್ತುವರಿಯಿಂದ ಜಾನುವಾರುಗಳಿಗೆ ತಿನ್ನಲು ಮೇವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಸರಕಾರವೇ ಗೋಮಾಳ ಭೂಮಿಯನ್ನು‌ ಖಾಸಗಿ ವ್ಯಕ್ತಿಗಳು,ಸಂಘ – ಸಂಸ್ಥೆಗಳಿಗೆ ನೀಡುವುದು ಸರ್ವಥಾ ಸರಿಯಲ್ಲ.ಇಸ್ಕಾನ್ ವರ ಕಥೆ ಏನಾದರಾಗಲಿ ಆದಿಚುಂಚನಗಿರಿ ಮಠ ಮತ್ತು ತುಮಕೂರಿನ ಸಿದ್ದಗಂಗಾಮಠಗಳು ಗೋಮಾಳ ಜಮೀನನ್ನು ಪಡೆದದ್ದು ಸರಿಯಲ್ಲ.ನಾಡಿನ ಹಿತ ಕಾಪಾಡಬೇಕಾದ ಆ ಎರಡು ಮಠಗಳ ಸ್ವಾಮಿಗಳು ಗೋಮಾಳಭೂಮಿಯನ್ನು ಪಡೆದದ್ದು ಆ ಮಠಗಳ ಮೇಲಿನ ಸಾರ್ವಜನಿಕರ ಗೌರವಾದರಗಳು ಕಡಿಮೆಯಾಗಲು ಕಾರಣವಾಗುತ್ತದೆ.ಗೋಮಾಳ ಭೂಮಿಯನ್ನು ಪಡೆಯುವ ಮೂಲಕ ಆದಿಚುಂಚನಗಿರಿ ಮತ್ತು ಸಿದ್ದಗಂಗಾ ಮಠದ ಸ್ವಾಮಿಗಳು ಜನತೆಗೆ ಯಾವ ಸಂದೇಶ ನೀಡುತ್ತಿದ್ದಾರೆ? ಪ್ರತಿಷ್ಠಿತ ಮಠ ಪೀಠಗಳು ‘ ಯಾರದ್ದನ್ನೋ ಯಾರಿಗೋ ದಾನ ಮಾಡಿ’ ಲಾಭ ಪಡೆಯುವ ಸರಕಾರಗಳ ಪ್ರಲೋಭನೆಗೆ ಒಳಗಾಗಬಾರದು.

ಗೋಹತ್ಯೆ ನಿಷೇಧ ಕಾಯ್ದೆ ವಾಪಾಸು ಪಡೆಯುವುದರ ಕುರಿತು ಮುಖ್ಯಮಂತ್ರಿ ಸಿದ್ರಾಮಯ್ಯನವರನ್ನು ಟೀಕಿಸುವ ಜನರು ಗೋರಕ್ಷರ ಸೋಗಿನ ಜನರೇ ಗೋಮಾಳ ಭೂಮಿಯನ್ನು ಕಂಡಕಂಡವರಿಗೆ ದಾನಮಾಡಿ ಗೋವುಗಳ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟುತ್ತಿದ್ದರು ಎನ್ನುವ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು.ಮುಖ್ಯಮಂತ್ರಿ ಸಿದ್ರಾಮಯ್ಯನವರು 252 ಎಕರೆ 36 ಗುಂಟೆ ಗೋಮಾಳ ಭೂಮಿಯನ್ನು ಸಂರಕ್ಷಿಸಿ,ಅಭಿನಂದನಾರ್ಹ ಕಾರ್ಯ ಮಾಡಿದ್ದಾರೆ.ಇನ್ನು ಎಷ್ಟು ನೂರು,ಸಾವಿರ ಎಕರೆಗಳಷ್ಟು ಗೋಮಾಳ ಭೂಮಿ ಬಲಾಢ್ಯಾರ ಪಾಲು ಆಗಿದೆಯೊ? ಸಾರ್ವಜನಿಕ ಆಸ್ತಿಯಲ್ಲಿ ಎಷ್ಟು ಭೂಮಿ ಅಕ್ರಮವಾಗಿ ಹಂಚಲಾಗಿದೆ ಎಂಬುದನ್ನು ತನಿಖೆ ಮಾಡಿಸಿ ಆ ಎಲ್ಲ ‘ಅಪಾತ್ರದಾನಭೂಮಿ’ ಯನ್ನು ಮುಖ್ಯಮಂತ್ರಿಗಳು ವಾಪಾಸು ಪಡೆದರೆ ಸಾರ್ವಜನಿಕ ಆಸ್ತಿಯನ್ನು ಉಳಿಸಿದ ಕೀರ್ತಿ ಮುಖ್ಯಮಂತ್ರಿಗಳವರಿಗೆ ಸಲ್ಲುತ್ತದೆ.ಸಾರ್ವಜನಿಕ ಭೂಮಿಯನ್ನು ಸಚಿವಸಂಪುಟದ ಸಭೆಯಲ್ಲಿ ತೀರ್ಮಾನಿಸಿ ಹಂಚಿದ ಮಾತ್ರಕ್ಕೆ ಅದು ನ್ಯಾಯಸಮ್ಮತವಾಗುವುದಿಲ್ಲ,ಭೂಮಿಯ ಹಂಚಿಕೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇರಬೇಕು.ಖಾಸಗಿ ವ್ಯಕ್ತಿಗಳು,ಸಂಸ್ಥೆಗಳಿಗೆ ಉಡುಗೊರೆಯಾಗಿ ನೀಡುವ ಗೋಮಾಳ ಭೂಮಿಯ ಹಂಚಿಕೆಯಲ್ಲಿ ಯಾವ ಸಾರ್ವಜನಿಕ ಹಿತಾಸಕ್ತಿ ಅಡಗಿರಬಹುದು ?.

About The Author