ರಾಹುಲ್ ಕಾಂಬಳೆ ಮತ್ತು ಶಿವಪುತ್ರಪ್ಪರವರ ವರ್ಗಾವಣೆ ಬೇಡ, ಅಮಾನತು ಮಾಡಿ ಸಿದ್ದು ಪಟ್ಟೆದಾರ ಆಗ್ರಹ

ಶಹಾಪೂರ : ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಜೆಜೆಎಮ್ ಕಾಮಗಾರಿಗಳಲ್ಲಿ ಗುತ್ತೇದಾರರ ಜೊತೆ ಶಾಮೀಲಾಗಿ ಕೋಟಿಗಟ್ಟಲೆ ಭ್ರಷ್ಟಾಚಾರದಲ್ಲಿ ತೊಡಗಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಾದ ರಾಹುಲ್ ಕಾಂಬಳೆ ಮತ್ತು ಕಿರಿಯ ಅಭಿಯಂತರರಾದ ಶಿವಪುತ್ರ ರವರನ್ನು ಸರ್ಕಾರ ಬೇರೆ ಕಡೆ ವರ್ಗಾವಣೆ ಮಾಡಿರುವುದು ಖಂಡನೀಯ. ಅವರಿಬ್ಬರನ್ನು ಇಲಾಖೆ ವತಿಯಿಂದ ವಿಚಾರಿಸಿ ಅಮಾನತು ಮಾಡಬೇಕೆಂದು ಶಹಾಪುರ ತಾಲೂಕು ನಮ್ಮ ಕರ್ನಾಟಕ ಸೇನೆಯ ಅಧ್ಯಕ್ಷರಾದ ಸಿದ್ದು ಪಟ್ಟೆದಾರ ಆಗ್ರಹಿಸಿದ್ದಾರೆ.
     ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳ ಮೂಲಕ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಕಾಮಗಾರಿಗಳ ಪೈಪ್ ಲೈನ್,ಇತರ ಸಾಮಗ್ರಿಗಳನ್ನು ಸರಿಯಾಗಿ ಬಳಸದೆ ಅರೆಬರೆ ಕಾಮಗಾರಿ ಮಾಡಿಸಿ ಸರಕಾರದ ಹಣ ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು. ಇವರನ್ನು ವರ್ಗಾಯಿಸಿದರೆ ಹೇಗೆ. ಅವರಿಗೆ ಶಿಕ್ಷೆ ಆಗಬೇಕು. ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.