ಚಿಂತನೆ : ಭಗವಂತ ಬೆನ್ನ ಹಿಂದೆ ಇರುತ್ತಾನೆ ! : ಮುಕ್ಕಣ್ಣ ಕರಿಗಾರ

   ದೇವರು ಇದ್ದಾನೆ ಎಂದು ನಂಬಿರುವವರು ತಮ್ಮ ನಂಬಿಕೆಯ ದೇವರನ್ನು ಪೂಜಿಸುತ್ತಿರುತ್ತಾರೆ.ದೇವರಿಲ್ಲ ಎನ್ನುವ ನಾಸ್ತಿಕರು ಮತ್ತು ದೇವರು ಇದ್ದಾನೋ ಇಲ್ಲವೋ ಎನ್ನುವ ಗೊಂದಲದ ಅತ್ತ ಆಸ್ತಿಕರೂ ಇಲ್ಲದ ಇತ್ತ ನಾಸ್ತಿಕರೂ ಆಗದ ಜನರು ದೇವರ ಬಗ್ಗೆ ,ದೇವರ ಅಸ್ತಿತ್ವದ ಬಗ್ಗೆ ಸಂದೇಹವ್ಯಕ್ತಪಡಿಸುತ್ತಾರೆ,ಪ್ರಶ್ನೆಗಳ ಸುರಿಮಳೆ ಕರೆಯುತ್ತಾರೆ.’ ‘ದೇವರಿದ್ದಾನೆಯೆ?’ ‘ಎಲ್ಲಿದ್ದಾನೆ?’ ‘ಹೇಗಿದ್ದಾನೆ? ‘ದೇವರು ಇದ್ದರೆ ಈ ಜಗತ್ತಿನಲ್ಲಿ ಇಷ್ಟೇಕೆ ಕಷ್ಟ ಕಾರ್ಪಣ್ಯಗಳಿವೆ? ‘ದೇವರನ್ನು ಕಾಣಬಹುದೆ?’ ಇವೇ ಮೊದಲಾದ ಪ್ರಶ್ನೆಗಳ ಬಾಣಗಳನ್ನೆಸೆಯುತ್ತಾರೆ.

ದೇವರನ್ನು ನಂಬುವುದು ಬಿಡುವುದು ಅವರವರ ಭಾವ ಬದುಕಿಗೆ ಸಂಬಂಧಿಸಿದ ವಿಚಾರವಾದರೂ ವಿಶ್ವನಿಯಾಮಕನಾಗಿ ಪರಮಾತ್ಮನು ಇದ್ದಾನೆ ಎಂಬುದಂತೂ ಸತಸ್ಯಸತ್ಯ.ಹಾಗೆಯೇ ದೇವರನ್ನು ಕಾಣಬಹುದು ಎಂಬುದೂ ಅಷ್ಟೇ ಸತ್ಯ.ದೇವರನ್ನು ಕಾಣಲು ಪರಿಶ್ರಮಿಸಿದರೆ ಖಂಡಿತವಾಗಿಯೂ ಪರಮಾತ್ಮನನ್ನು ಕಾಣಬಹುದು,ಅವನೊಂದಿಗೆ ಮಾತನಾಡಬಹುದು.ಇದೇನು ಕನಸಲ್ಲ,ಕಲ್ಪನೆಯಲ್ಲ,ಪರಮಾತ್ಮನ ಪಥದಿ ನಡೆಹಿಡಿದ ಕೆಚ್ಚೆದೆಯ ಯೋಗಿಯ ಸ್ವಾನುಭಾವದ ನುಡಿ.

ದೇವರನ್ನು ನಂಬದ ಜನರಿಗೆ ದೇವರನ್ನು ತೋರಿಸುವ ಗುರು- ಮಹಾಂತರುಗಳು,ಸಂತರುಗಳು ಬೇಕು.ಅಂಥವರು ಬಹಳಷ್ಟು ಜನರು ಇಲ್ಲ,ಇದ್ದರೂ ಅವರು ಪ್ರಚಾರವನ್ನು ಬಯಸದೆ ಏಕಾಂತವಾಸಿಗಳಾಗಿಯೇ ಇರುತ್ತಾರೆ ಎನ್ನುವ ಕಾರಣದಿಂದ ನಾಸ್ತಿಕವಾದವು ಮೇಲುಗೈ ಪಡೆಯುತ್ತಿದೆ.ಗುರುಗಳು,ಜಗದ್ಗುರುಗಳು ಎಂದು ವೈಭವೋಪೇತಜೀವನ ನಡೆಸುವ ಆಧ್ಯಾತ್ಮಿಕಪಥ ವಿಮುಖವ್ಯಕ್ತಿಗಳಾಗಲಿ,ಜನರನ್ನು ವಂಚಿಸಿ ಬದುಕುವ ಸ್ವಯಂಘೋಷಿತ ದೇವಮಾನವರುಗಳಾಗಲಿ,ಢೋಂಗಿ ಬಾಬಾಗಳಾಗಲಿ,ಎಡಬಿಡಂಗಿ ಪ್ರವಚನಕಾರರುಗಳಾಗಲಿ ದೇವರನ್ನು ಕಂಡಿಲ್ಲವಾದ್ದರಿಂದ ಅಂಥವರನ್ನು ಕಂಡು ಜನರು ದೇವರ ಬಗ್ಗೆ ಸಂದೇಹ ತಳೆಯುತ್ತಾರೆ.ಆದರೆ ದೇವರನ್ನು ಕಂಡವರು,ದೇವರೊಂದಿಗೆ ಮಾತನಾಡುತ್ತಿರುವವರು ಈಗಲೂ ಅಲ್ಲಲ್ಲಿ ಇದ್ದಾರೆ ಎನ್ನುವುದಂತೂ ದಿಟ.ಅವರನ್ನು ಹುಡುಕಿ ಹೋಗಬೇಕಷ್ಟೆ.ನರೇಂದ್ರನೆನ್ನುವ ಇಂಗ್ಲಿಷ್ ಶಿಕ್ಷಣ ಮತ್ತು ನಾಗರಿಕತೆಯ ಪ್ರಭಾವಕ್ಕೊಳಗಾದ ತರುಣನನ್ನು ‘ ವಿವೇಕಾನಂದ’ ರನ್ನಾಗಿಸಿದ ಶ್ರೇಯಸ್ಸು ಹೊಂದಿರುವ ರಾಮಕೃಷ್ಣ ಪರಮಹಂಸರಂತಹ ಮಹಾನ್ ಚೇತನರುಗಳು ದೇವರನ್ನು ತೋರಿಸಬಲ್ಲರು.’ ನೀವು ದೇವರನ್ನು ಕಂಡಿದ್ದೀರಾ?’ ಎನ್ನುವ ನರೇಂದ್ರನ ಪ್ರಶ್ನೆಗೆ ‘ ದೇವರನ್ನು ಕಂಡಿದ್ದು ಮಾತ್ರವಲ್ಲ,ನಿನಗೂ ದೇವರನ್ನು ತೋರಿಸಬಲ್ಲೆ’ ಎಂದು ಉತ್ತರಿಸಿದರು ರಾಮಕೃಷ್ಣ ಪರಮಹಂಸರು.ಅದು ಧೈರ್ಯ! ಅದು ಮಹಾಯೋಗಿಯ ಮಹಾನ್ ಸಾಧನೆಯ ಫಲವಾಗಿ ಹೊರಹೊಮ್ಮಿದ ದೃಢ ನಿಶ್ಚಯದ ನುಡಿ.ರಾಮಕೃಷ್ಣ ಪರಮಹಂಸರು ಒಮ್ಮೆಲೆ ನರೇಂದ್ರನಿಗೆ ತಾಯಿ ಮಹಾಕಾಳಿಯ ದರ್ಶನ ಮಾಡಿಸಲಿಲ್ಲ.ಹಾಗೆ ಮಾಡುವುದು ಅವರಿಗೆ ಅಸಾಧ್ಯವಾದುದೇನಾಗಿರಲಿಲ್ಲ.ನಿತ್ಯವೂ ಪರಾಶಕ್ತಿ ಮಹಾಕಾಳಿಯೊಂದಿಗೆ ಮಾತನಾಡುತ್ತಿದ್ದ ರಾಮಕೃಷ್ಣ ಪರಮಹಂಸರು ‘ ಅಮ್ಮಾ ತಾಯಿ,ಈ ನಿನ್ನ ಮಗ ನರೇಂದ್ರನಿಗೆ ನಿನ್ನ ದಿವ್ಯರೂಪ ತೋರಿಸು,ದರ್ಶನ ಕೊಡು’ ಎಂದು ಪ್ರಾರ್ಥಿಸಿದ್ದರೆ ಸಾಕು ತಾಯಿ ಮಹಾಕಾಳಿಯು ನರೇಂದ್ರನೆದುರು ಅವನ ಗುಣದೋಷಗಳನ್ನು ಲೆಕ್ಕಿಸದೆ ಪ್ರತ್ಯಕ್ಷಳಾಗುತ್ತಿದ್ದಳು.ರಾಮಕೃಷ್ಣ ಪರಮಹಂಸರು ಹಾಗೆ ಮಾಡಲಿಲ್ಲ.ನರೇಂದ್ರನನ್ನು ಆಧ್ಯಾತ್ಮಿಕ ಪಥದತ್ತ ಕರೆದೊಯ್ದು,ಶಕ್ತಿಪಾತ ಕ್ರಿಯೆಯಿಂದ ಅವನ ಸ್ವಭಾವವನ್ನು ಮಾರ್ಪಡಿಸಿ ಯೋಗಪಥದಿ ಮುನ್ನಡೆಸಿ ‘ ಕಾಣು ನೀ ತಾಯಿ ಮಹಾಕಾಳಿಯನ್ನು’ ಅಂದರು.ಇದು ಭಾರತದ ಆಧ್ಯಾತ್ಮಪಥ.ಗುರುವು ದೇವರನ್ನು ,ಪರಮಾತ್ಮನನ್ನು ಕಂಡಿರುತ್ತಾನಾದರೂ ಶಿಷ್ಯನಿಗೆ ಗುರುವು ದೇವರನ್ನು ತೋರಿಸುವುದಿಲ್ಲ,ದೇವರ ಮಾರ್ಗವನ್ನು ಮಾತ್ರ ತೋರಿಸುತ್ತಾನೆ! ಶಿಷ್ಯನು ಗುರುವು ತೋರಿದ ಪರಮಾತ್ಮನ ಮಾರ್ಗದಲ್ಲಿ ಕಾಣಬೇಕು ಪರಮಾತ್ಮನನ್ನು.ಪರಮಾತ್ಮನ ದರ್ಶನ,ಸಾಕ್ಷಾತ್ಕಾರಗಳು ಶಿಷ್ಯನ ಪರಿಶ್ರಮದ ಫಲಗಳೆ! ಶ್ರೀಗುರುವಾನುಗ್ರಹವು ಪರಮಾತ್ಮನ ಪಥದಿ ನಡೆಯುತ್ತಿರುವ ಶಿಷ್ಯನ ಅಡ್ಡಿ ಆತಂಕಗಳನ್ನು ಕಳೆಯುತ್ತ,ಎಡರು ತೊಡರುಗಳನ್ನು ನಿವಾರಿಸುತ್ತ ದೈವಾನುಗ್ರಹದತ್ತ ಶಿಷ್ಯನನ್ನು ಕರೆದೊಯ್ಯುತ್ತದೆ.ಶಿಷ್ಯನು ಪ್ರಯತ್ನಿಸದೆ ಇದ್ದರೆ ಗುರುವಾನುಗ್ರಹವು ಫಲಕಾರಿ ಆಗುವುದಿಲ್ಲ.

ಇದು ಗುರು ಶಿಷ್ಯ ಪರಂಪರೆಯ ‘ ಬೋಧಪರಂಪರೆ’ ಯಾದರೂ ದೇವರನ್ನು ಕಾಣುವ ಎಲ್ಲ ಪಥ- ಪಂಥಗಳಿಗೂ ಇದೇ ಮಾತು ಅನ್ವಯಿಸುತ್ತದೆ.ರಾಮಕೃಷ್ಣ ಪರಮಹಂಸರು,ವಿವೇಕಾನಂದರು,ಅರವಿಂದರು,ರಮಣಮಹರ್ಷಿಗಳು ಮತ್ತು ಮಹಾತಪಸ್ವಿ ಕುಮಾರಸ್ವಾಮಿಗಳವರು ದೇವರನ್ನು ತಾವು ಕಂಡರು ಮಾತ್ರವಲ್ಲ ತಮ್ಮ ಶಿಷ್ಯರಿಗೆ ದೇವರನ್ನು ತೋರಿಸಿದರು ಕೂಡ.ದೇವರನ್ನು ಕಾಣುವುದು ಎಲ್ಲರ ಜನ್ಮಸಿದ್ಧ ಹಕ್ಕು! ಆದರೆ ನಮ್ಮ ಚಿತ್ತ ಅತ್ತ ಹೋಗುತ್ತಿಲ್ಲವಷ್ಟೆ.ಕಲಿಯುಗದಲ್ಲಿ ದೇವರು ಕಾಣುವುದಿಲ್ಲ ಎಂದು ಅಸಮರ್ಥಗುರುಗಳು ಬೊಗಳುತ್ತಾರೆ ಆದರೆ ಸಮರ್ಥ ಗುರುಗಳು ಕಲಿಯುಗದಲ್ಲಿಯೂ ಶಿಷ್ಯರಿಗೆ ದೇವರನ್ನು ತೋರಿಸುತ್ತಾರೆ.ಯುಗ ಯಾವುದಾದರೇನು ದೇವರನ್ನು ಕಾಣುವ ತೀವ್ರ ಹಂಬಲ,ಎದೆಗುಂದದ ಪ್ರಯತ್ನ,ಸತ್ತರೂ ಚಿಂತೆಯಿಲ್ಲ ನಿನ್ನನ್ನು ಕಂಡೇಕಾಣುವೆ ಎನ್ನುವ ಸಾಹಸಮನೋಭಾವ ಇದ್ದುದಾದರೆ ಖಂಡಿತವಾಗಿಯೂ ಈ ಕಲಿಯುಗದಲ್ಲಿಯೂ ಕಾಣಬಹುದು ದೇವರನ್ನು,ಪರಮಾತ್ಮನನ್ನು ! ಯುಗದಿಂದ ಯುಗಕ್ಕೆ ಪರಮಾತ್ಮನ ಸಾಕ್ಷಾತ್ಕಾರದ ಪ್ರಮಾಣ ಕಡಿಮೆಯಾಗಿರಲು ಯುಗಧರ್ಮ ಮತ್ತು ಮನುಷ್ಯರ ಸ್ವಭಾವದಲ್ಲಾದ ಬದಲಾವಣೆಯೇ ಕಾರಣವಲ್ಲದೆ ಮತ್ತಾವ ಕಾರಣವೂ ಇಲ್ಲ.ಕೃತಯುಗದಲ್ಲಿ ಪರಮಾತ್ಮನು ಜನರೊಂದಿಗೆ ನೇರವಾಗಿ ಮಾತನಾಡುತ್ತಿದ್ದ,ತ್ರೇತಾಯುಗದಲ್ಲಿ ಸಾತ್ವಿಕ ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದ,ದ್ವಾಪರಯುಗದಲ್ಲಿ ಧರ್ಮಾತ್ಮರಾದ ಕೆಲವೇ ಜನರೊಂದಿಗೆ ಮಾತನಾಡುತ್ತಿದ್ದ ಎನ್ನುವ ಜನರು ಕಲಿಯುಗದಲ್ಲಿ ದೇವರು ಮಾತನಾಡಲಾರ ಎನ್ನುವ ಅವಿವೇಕದ ಮಾತುಗಳನ್ನಾಡುತ್ತಾರೆ.ಯಾವ ಯುಗವೇ ಆಗಿರಲಿ ಪರಮಾತ್ಮನನ್ನು ಕಾಣಬಹುದು ಮನುಷ್ಯರು ಪ್ರಯತ್ನಪಟ್ಟರೆ.ಸತ್ತ್ವಶೀಲ ಸ್ವಭಾವವೇ ಪರಮಾತ್ಮ ಸಾಕ್ಷಾತ್ಕಾರದ ರಹಸ್ಯವಾಗಿರುವುದರಿಂದ ಸತ್ತ್ವಶೀಲಗುಣ,ಸನ್ನಡತೆಗಳುಳ್ಳ ಧೀರಾತ್ಮರು ಕಲಿಯುಗದಲ್ಲಿಯೂ ಕಾಣಬಲ್ಲರು ಪರಮಾತ್ಮನನ್ನು.

ಪರಮಾತ್ಮನನ್ನು ಕಾಣಲು ಎರಡು ಮುಖ್ಯ ಮಾರ್ಗಗಳಿವೆ; ಒಂದು ಯೋಗಮಾರ್ಗ ಮತ್ತೊಂದು ಭಕ್ತಿಮಾರ್ಗ.ಯೋಗಿಗಳು ಯೋಗಬಲದಿಂದ ಪರಮಾತ್ಮನ ಅನುಸಂಧಾನ ಮಾಡಿದರೆ ಭಕ್ತರು ಭಕ್ತ್ಯೋನ್ಮಾದಪರವಶರಾಗಿ ಪರಮಾತ್ಮನನ್ನು ಕಾಣಬಹುದು.ಮನುಷ್ಯರಾದ ಎಲ್ಲರ ಶಾರೀರಕ ರಚನೆಯು ಒಂದೇ ತೆರನಾಗಿದೆ,ಹೆಣ್ಣು ಗಂಡು,ಬ್ರಾಹ್ಮಣ- ಶೂದ್ರ ಎನ್ನುವ ಯಾವ ಭೇದಭಾವ ಇಲ್ಲದೆ ಜೀವಸಮಸ್ತರ ದೇಹರಚನೆಯು ಒಂದೇತೆರನಾಗಿದೆ.ಹೆಚ್ಚೆಂದರೆ ದೇಹದ ಬಣ್ಣ,ಗಾತ್ರದಲ್ಲಿ ವ್ಯತ್ಯಾಸವಿರಬಹುದಷ್ಟೆ.ಎಲ್ಲರಲ್ಲಿಯೂ ದೇವರಿದ್ದಾನೆ,ಎಲ್ಲರಿಗೂ ದೇವರನ್ನು ಕಾಣುವ ಹಕ್ಕಿದೆ.ಪ್ರಯತ್ನಿಸಿದವರೆಲ್ಲರಿಗೂ ದೇವರು ಸಿಕ್ಕುತ್ತಾನೆ,ದಕ್ಕುತ್ತಾನೆ.ಕುಂಡಲಿನೀಶಕ್ತಿಯನ್ನು ಜಾಗೃತಗೊಳಿಸಿಕೊಂಡು ಯೋಗಿಗಳು ಪರಮಾತ್ಮನನ್ನು ಕಾಣುತ್ತಾರೆ,ಪರಮಾತ್ಮನೊಳು ಒಂದು ಆಗುತ್ತಾರೆ.ಕುಂಡಲಿನಿ ಶಕ್ತಿಯು ನಮ್ಮ ಹಿಂದೆ ಬೆನ್ನಿನಲ್ಲಿದೆ,ಬೆನ್ನಹುರಿಯು ಕುಂಡಲಿನೀಶಕ್ತಿಯ ಸ್ಥಾನ.ಮೂಲಾಧಾರ,ಸ್ವಾದಿಷ್ಟ,ಮಣಿಪುರ,ಅನಾಹತ,ವಿಶುದ್ಧಿ,ಆಜ್ಞಾ ಎನ್ನುವ ಆರು ಚಕ್ರಗಳಿವೆ ನಮ್ಮ ಶರೀರದ ಬೆನ್ನಹುರಿಯಲ್ಲಿ. ಶಿರೋಭಾಗದಲ್ಲಿದೆ ಏಳನೆಯದಾದ ಮಹಾಚಕ್ರ ಸಹಸ್ರಾರವು. ಬರಿಯ ಕಣ್ಣಿಗೆ ಕಾಣಿಸದ ಈ ಚಕ್ರಗಳನ್ನು ಯೌಗಿಕವಾದ ಸೂಕ್ಷ್ಮದೃಷ್ಟಿಯಿಂದ ಮಾತ್ರ ಗುರುತಿಸಬಹುದು.ಷಟ್ಚಕ್ರಗಳು ಯೋಗಸಾಧನೆಯ ಚಕ್ರಗಳಾದರೆ ಸಹಸ್ರಾರ ಚಕ್ರವು ಯೋಗಸಿದ್ಧಿಯ ಚಕ್ರ.ಗುದದ್ವಾರದ ಮೇಲ್ಭಾಗದಲ್ಲಿರುವ ಮೂಲಾಧಾರ ಶಕ್ತಿಯನ್ನು ಜಾಗೃತಗೊಳಿಸಿ ಕ್ರಮಕ್ರಮವಾಗಿ ಆ ಶಕ್ತಿಯನ್ನು ಒಂದೊಂದು ಚಕ್ರದ ಮೂಲಕ ದಾಟುತ್ತ ಯೋಗಿಯು ಸಹಸ್ರಾರದ ಸಹಸ್ರದಳ ಕಮಲದಲ್ಲಿ ಪವಡಿಸಿರ್ಪ ಪರಶಿವನೊಂದಿಗೆ ಒಂದಾಗುತ್ತಾನೆ.ಕುಂಡಲಿನಿಯು ಶಕ್ತಿಯಾಗಿದ್ದು ಊರ್ಧ್ವಮುಖವಾಗಿ ಮಲಗಿರುವ ಆ ಸರ್ಪಶಕ್ತಿಯನ್ನು ಎಚ್ಚರಿಸಿಕೊಂಡು ಆರು ಚಕ್ರಗಳ ಮೂಲಕ ಹಾಯ್ದು ಏಳನೆಯ ಮಹಾಚಕ್ರವಾದ ಪರಶಿವ ಇಲ್ಲವೆ ಸದಾಶಿವನ ನೆಲೆಗೆ ಶಕ್ತಿಯನ್ನು ಕೊಂಡೊಯ್ಯುವುದೇ ಯೋಗದ ಆತ್ಯಂತಿಕ ಸಿದ್ಧಿ,ಪರಮಾತ್ಮನ ಸಾಕ್ಷಾತ್ಕಾರ.

ಕುಂಡಲಿನಿ ಯೋಗವನ್ನು ಯೋಗಬಲ್ಲಿದರು ಮಾತ್ರ ಸಾಧಿಸಬಹುದೆಂಬುದು ನಿಜವಾದರೂ ಮನುಷ್ಯರಾದ ಎಲ್ಲರಿಗೂ ಬೆನ್ನುಹುರಿ ಇದೆ,ಆ ಬೆನ್ನುಹುರಿಯಲ್ಲಿ ಎಲ್ಲರ ಶರೀರದಲ್ಲಿಯೂ ಷಟ್ಚಕ್ರಗಳಿವೆ.ಎಲ್ಲರೂ ದೇವರನ್ನು ಕಾಣಲು ಅರ್ಹರು ಎಂದು ಇದರರ್ಥ.ನಮ್ಮಲ್ಲಿಯೇ ದೇವರಿದ್ದಾನೆ ಎನ್ನುವುದನ್ನು ತಿಳಿಯದೆ,ತಿಳಿದವರ ಮಾತನ್ನೂ ಕೇಳದೆ ಬರಿ ಹಳಿದಾಡಿದರೆ ಫಲವೇನು? ದೇವರು ನಮ್ಮ ಮುಂದೆ ಇಲ್ಲ,ಬೆನ್ನ ಹಿಂದೆ‌ ಇದ್ದಾನೆ.ಕರೆದರೆ ಬರುತ್ತಾನೆ.ನಂಬಿ ಕರೆದರೆ ಓ ಎನ್ನನೆ ಶಂಭು? ನಂಬಿ ಕರೆಯುವ ಕ್ರಿಯೆಯೇ ಯೋಗ ಮತ್ತು ಭಕ್ತಿ ಮಾರ್ಗಗಳು.ನಂಬಿದವರು ಯೋಗ ಇಲ್ಲವೆ ಭಕ್ತಿ ಮಾರ್ಗದ ಮೂಲಕ ಶಿವನನ್ನು ಕರೆದು,ಕಾಣಬಹುದು.

ಮಹಾಶೈವ ಧರ್ಮವು ‘ ಶಿವ ಸಾಕ್ಷಾತ್ಕಾರವು ಜೀವಸಮಸ್ತರ ಆಜನ್ಮಸಿದ್ಧಹಕ್ಕು’ ಎಂದು ಪ್ರತಿಪಾದಿಸುತ್ತಿದೆ ಎನ್ನುವುದು ಮಹಾಶೈವ ಧರ್ಮದ ವಿಶೇಷವು.ಕಲಿಯುಗದಲ್ಲಿಯೂ ಪರಶಿವನನ್ನು ಕಾಣಬಹುದು ಎಂದು ಘಂಟಾಘೋಷವಾಗಿ ಸಾರುತ್ತಿದೆ‌ ಮಹಾಶೈವ ಧರ್ಮ.ಮಹಾದೇವ ಶಿವನನ್ನು ಕಾಣುವ ಅಪೇಕ್ಷೆಯುಳ್ಳವರು ಮಹಾಶೈವ ಧರ್ಮಪಥದಿ ನಡೆದು ವಿಶ್ವೇಶ್ವರ ಶಿವನನ್ನು ಕಾಣಬಹುದು.

ದೇವರನ್ನು ನಂಬಿದವರು ಆಪತ್ತಿನ ಕಾಲದಲ್ಲಿ ದೇವರನ್ನು ನೆನೆದು ಸಂಕಟಮುಕ್ತರಾಗುವುದು ಬಹುಜನರ ಅನುಭವದ ಸಂಗತಿ.ಅದು ಹೇಗೆ ಸಾಧ್ಯ? ನಮ್ಮ ಬೆನ್ನ ಹಿಂದೆ ಇರುವ ದೇವರು ನಮ್ಮೆಲ್ಲ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾನೆ.ನಾವು ಸಂತೋಷದಿಂದ ಇರುವಾಗ ನಿರ್ಲಿಪ್ತನಾಗಿರುವ ದೇವರು ನಾವು ಸಂಕಷ್ಟದಲ್ಲಿದ್ದಾಗ ಜಾಗೃತನಾಗಿ ನಮ್ಮ ಸಂಕಷ್ಟಪರಿಹಾರಕ್ಕೆ ಸಿದ್ಧನಾಗುವನು.ದೇವರನ್ನು ಪ್ರಾರ್ಥಿಸುವ,ಪೂಜಿಸುವ,ಮೊರೆಯುವ ಮೂಲಕ ನಾವು ದೇವರನ್ನು ಜಾಗೃತಗೊಳಿಸಬೇಕು ಮತ್ತು ದೇವರಿಂದ ಪರಿಹಾರವನ್ನು ಕಂಡುಕೊಳ್ಳಬೇಕು.ಬೆನ್ನ ಹಿಂದಿರುವ ದೇವರು ಬಂದಿರುವ ಸಂಕಷ್ಟಪರಿಹರಿಸಿ ಮುಂದುವರೆಯುವ ಮಾರ್ಗ ತೋರಿಸುತ್ತಾನೆ.ಭಕ್ತಿಪೂರ್ವಕವಾಗಿ ನಿರಂತರವಾಗಿ ಪೂಜಿಸುವವರಿಗೆ ಮುಂದೆ ಬಂದು ಕಾಣುತ್ತಾನೆ ಬೆನ್ನಹಿಂದಿರುವ ದೇವರು,ಪರಮಾತ್ಮ.ಇದೇ ಭಕ್ತಿಯೋಗದ ವಿಶೇಷವು.ಯೋಗಿಗಳು ಸಹಸ್ರಾರದಲ್ಲಿ ಪರಶಿವ ಇಲ್ಲವೆ ಸದಾಶಿವನನ್ನು ಕಂಡು ಆನಂದಿಸಿದರೆ ಭಕ್ತರು ಭಕ್ತಿಬಲದಿಂದ ತಮ್ಮೆದುರು ಸಾಕ್ಷಾತ್ಕರಿಸಿಕೊಳ್ಳುತ್ತಾರೆ ವಿಶ್ವನಿಯಾಮಕನಾಗಿರುವ ವಿಶ್ವೇಶ್ವರ ಶಿವನನ್ನು.

About The Author