ಮೂರನೇ ಕಣ್ಣು : ವೀರಶೈವ ಮತೋದ್ಧಾರಕರಾದ ಬಸವಣ್ಣನವರ ಹೆಸರಿನಲ್ಲಿ ‘ ಬಸವಧರ್ಮ ‘ಸ್ಥಾಪಿಸುವುದು ಕಾಲಮಾನದ ಅವಶ್ಯಕತೆ : ಮುಕ್ಕಣ್ಣ ಕರಿಗಾರ

ವಿಶ್ವನಿಯಾಮಕನಾಗಿರುವ ಪರಶಿವನು ಹುಟ್ಟು- ಸಾವುಗಳಿಲ್ಲದ ನಿತ್ಯಸತ್ಯನೂ ಅನಾದಿಶಾಶ್ವತನೂ ಆಗಿರುವುದರಿಂದ ಮರ್ತ್ಯದಲ್ಲಿ ಮಾನವದೇಹ ಧರಿಸಿ ಅವತರಿಸುವುದಿಲ್ಲ.ಲೋಕೋದ್ಧಾರಕ್ಕಾಗಿ ಪರಶಿವನು ಆಗಾಗ ಶಿವಗಣರುಗಳನ್ನು ಭೂಲೋಕಕ್ಕೆ ಕಳುಹಿಸುತ್ತಿರುವನು.ಶಿವನ ಲೋಕೋದ್ಧಾರದ ಸಂಕಲ್ಪವನ್ನು ಹೊತ್ತು ಧರೆಯಲ್ಲಿ ಅವತರಿಸುವ ಶಿವಗಣರುಗಳು ಲೋಕದಲ್ಲಿ ತಾಂಡವವಾಡುತ್ತಿರುವ ಅಸತ್ಯ,ಅನ್ಯಾಯ,ದುರಾಚಾರ,ದೌರ್ಜ್ಯಗಳನ್ನು ತಮ್ಮ ತಪೋಬಲದಿಂದ ನಿಗ್ರಹಿಸಿ ಜನರನ್ನು ಸತ್ಪಥದಿ ಕೊಂಡೊಯ್ಯುವರು,ಜನಸಾಮಾನ್ಯರನ್ನು ಉದ್ಧರಿಸುವರು.ಶಿವಶರಣರು,ಶಿವಯೋಗಿಗಳು,ಶಿವಸಂತರುಗಳು ಎಂದು ಕರೆಯಿಸಿಕೊಳ್ಳುವ ಈ ಶಿವವಿಭೂತಿಗಳು ಧರೆಯಲ್ಲಿ ಶಿವಧರ್ಮವನ್ನು ಎತ್ತಿಹಿಡಿಯುವ ಕಾರ್ಯವನ್ನು ಮಾಡುತ್ತಾರೆ.ತನ್ನ ವಿಭೂತಿಗಳನ್ನು ಮರ್ತ್ಯಕ್ಕೆ ಕಳುಹಿದ ಮಹಾದೇವ ಶಿವನು ಮರ್ತ್ಯದಲ್ಲಿ ತನ್ನ ಲಿಂಗ ಇಲ್ಲವೆ ಮೂರ್ತಿಯ ಮೂಲಕ ಪ್ರಕಟಗೊಂಡು ಶಿವಕಾರಣಸಂಭವರಾದ ಶಿವ ವಿಭೂತಿಗಳಿಗೆ ಕಾಲಕಾಲಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡುತ್ತಿರುತ್ತಾನೆ.

ಋಷಿಗಳ ಪ್ರಾತಿಭ ಚಕ್ಷುವಿಗೆ ಗೋಚರಿಸಿದ ಶಿವನು ಋಷಿಗಳ ಮೂಲಕ ‘ ಆಗಮಗಳು’ ಎನ್ನುವ ಶಿವತತ್ತ್ವನಿರೂಪಣೆಯ ಗ್ರಂಥಸಮೂಹವನ್ನು ಪ್ರಕಟಿಸಿರುವನು.ಇಪ್ಪತ್ತೆಂಟು ಶಿವಾಗಮಗಳಿದ್ದು ಅವು ಶಿವತತ್ತ್ವ,ಶಿವಧರ್ಮದ ಮೂಲ ಆಕರಗಳಾಗಿವೆ.ಆಗಮಗಳ ಸೂತ್ರಗಳನ್ನನುಸರಿಸಿ ದೇಶದಲ್ಲಿ ನೂರಾರು ಶೈವ ಮತ,ಪಂಗಡಗಳುದಿಸಿವೆ.ಸಪ್ತವಿಧಶೈವ ಎನ್ನುವ ಏಳು ವಿಧದ ಶೈವಮತಗಳು ಪ್ರಖ್ಯಾತವಾಗಿವೆ.ಕರ್ನಾಟಕದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ವೀರಶೈವ ಮತ್ತು ಮಹಾಶೈವ ಧರ್ಮಗಳು ಆಗಮೋಕ್ತ ಧರ್ಮಗಳು.

ವೀರಶೈವವು ಆಗಮೋಕ್ತವಾಗಿದ್ದರೂ ಅದನ್ನು ಪುನರುಜ್ಜೀವನಗೊಳಿಸಿ ಅದಕ್ಕೆ ಶಕ್ತಿ,ತೇಜಸ್ಸುಗಳನ್ನು ನೀಡಿ ಅದನ್ನೊಂದು ಸ್ವತಂತ್ರ ಮತ,ಧರ್ಮದ ಮಟ್ಟಕ್ಕೆ ಬೆಳೆಯಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.ಇಂದಿನ ಕೆಲವು ವೀರಶೈವರು ಬಸವಣ್ಣನವರು ಒಪ್ಪದೆ ಇರಬಹುದು ಆದರೆ ಬಸವಣ್ಣನವರು ಅವತರಿಸದೆ ಇದ್ದರೆ ಕರ್ನಾಟಕದಲ್ಲಿ ಮಾತ್ರವಲ್ಲ,ದೇಶದಲ್ಲಿಯೇ ವೀರಶೈವ ಮತವು ಅಸ್ತಿತ್ವದಲ್ಲಿ‌ ಇರುತ್ತಿರಲಿಲ್ಲ ಎನ್ನುವ ಸತ್ಯವನ್ನು ಮನಗಾಣಬೇಕು.ಬಸವಣ್ಣನವರು ವೀರಶೈವ ಮತಸ್ಥಾಪಕರು ಅಲ್ಲದೆ ಇರಬಹುದು ಆದರೆ ಬಸವಣ್ಣನವರೇ ವೀರಶೈವ ಮತೋದ್ಧಾರಕರು ಎನ್ನುವ ಮಾತು ಸೂರ್ಯನಷ್ಟೇ ಸತ್ಯವಾದುದು.ಬಸವಣ್ಣನವರ ಅನುಯಾಯಿಗಳು ಇತ್ತೀಚಿನ ದಿನಗಳಲ್ಲಿ ‘ ಲಿಂಗಾಯತ ಧರ್ಮ’ ಎನ್ನುವ ಸ್ವತಂತ್ರ ಧರ್ಮ ಒಂದನ್ನು ಕಟ್ಟಲು ಪ್ರಯತ್ನಿಸುತ್ತಿದ್ದಾರೆ ವೀರಶೈವ ಮಠ ಪೀಠಾಧೀಶರುಗಳ ಅರ್ಥಹೀನ ವೈದಿಕ ಆಚರಣೆಗಳಿಂದ ಬೇಸತ್ತು.ಅದೇನೇ ಇರಲಿ,ಬಸವಣ್ಣನವರು ಲಿಂಗಾಯತರಿಗಷ್ಟೇ ಅಲ್ಲ,ವೀರಶೈವರಿಗೂ ಪೂಜ್ಯರು.ಬಸವಣ್ಣ ಭಕ್ತ,ನಾವು ಜಂಗಮರು ,ಬಸವಣ್ಣನವರಿಗಿಂತ ಶ್ರೇಷ್ಠರು ಎಂದು ಒಣಪ್ರತಿಷ್ಠೆ ಕೊಚ್ಚಿಕೊಳ್ಳುವ ವೀರಶೈವ ಮಠ ಪೀಠಾಧೀಶರುಗಳು ಒಂದು ನಿಷ್ಠುರ,ಐತಿಹಾಸಿಕ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು ಬಸವಣ್ಣನವರು ಬಾರದೆ ಇದ್ದರೆ ಇಂದು ವೀರಶೈವರೂ ಇರುತ್ತಿರಲಿಲ್ಲ,ಲಿಂಗಾಯತರೂ ಇರುತ್ತಿರಲಿಲ್ಲ; ಎಲ್ಲರೂ ತಲೆಬೋಳಿಸಿಕೊಂಡು ಸವಣರು ಆಗಿರಬೇಕಾಗಿತ್ತು.ಜೈನಧರ್ಮವು ಅಹಿಂಸೆಯ ಪ್ರತಿಪಾದನೆಯ ಧರ್ಮ ಎಂದು ಇಂದಿನ ಜೈನರು ಹೇಳಿಕೊಳ್ಳುತ್ತಿದ್ದರೂ ಕರ್ನಾಟಕದಲ್ಲಿ ಜೈನಮತ ಪ್ರಾಬಲ್ಯವಿದ್ದ ಕಾಲದಲ್ಲಿ,ಜೈನಧರ್ಮವು ರಾಜಧರ್ಮವಾಗಿದ್ದ ದಿನಗಳಲ್ಲಿ ಜೈನರೇನು ನಿರುಪದ್ರವಜೀವಿಗಳಾಗಿರಲಿಲ್ಲ.ಜೈನದೊರೆಗಳು ಕೂಡ ಮತಾಂತರಕ್ಕೆ ಪ್ರೋತ್ಸಾಹಿಸಿದವರೆ! ಜೈನರು ಕೂಡ ಶಿವಾಲಯಗಳನ್ನು ಬಸದಿಗಳನ್ನಾಗಿ ಮಾರ್ಪಡಿಸಿದ ಪರಿವರ್ತನಾಶೂರರೆ! ಆದ್ಯವಚನಕಾರ ಜೇಡರ ದಾಸಿಮಯ್ಯ ಸೇರಿದಂತೆ ಕೆಲವು ಜನ ವಚನಕಾರರು ಜೈನಮತೀಯರ ವಿರುದ್ಧ ಸೆಣಸಿ,ಜೈನಯತಿಗಳನ್ನು ತಮ್ಮ ಶಿವಯೋಗಬಲದಿಂದ ಮಣಿಸಿ,ಜೈನಮತಕ್ಕೆ ಮತಾಂತರ ಹೊಂದಿದ ಶಿವಭಕ್ತರುಗಳನ್ನು ಮರಳಿ ಶೈವ ಧರ್ಮಕ್ಕೆ ತಂದು ಅವರಿಗೆ ಇಷ್ಟಲಿಂಗಧಾರಣೆ ಮಾಡಿದ ಪ್ರಸಂಗಗಳು ಸಾಕಷ್ಟಿವೆ ಕನ್ನಡದ ವಚನಸಾಹಿತ್ಯ ಯುಗದಲ್ಲಿ. ಇದು ಜೈನರಿಗಷ್ಟೇ ಅನ್ವಯವಾಗುವ ಮಾತಲ್ಲ,ಯಾವುದೇ ಧರ್ಮಕ್ಕೆ ರಾಜಾಶ್ರಯ ಸಿಕ್ಕರೆ ಇಲ್ಲವೆ ಆಳುವ ಪ್ರಭುಗಳು ಯಾವುದೇ ಧರ್ಮವನ್ನು ಪ್ರಭುಧರ್ಮವೆಂದು ಒಪ್ಪಿಕೊಂಡರೆ ಪ್ರಭುಸಮ್ಮಿತ ಧರ್ಮದ ಮೇಲುಗೈ ಆಗಿ ಉಳಿದ ಮತ ಪಂಥಗಳು ಕ್ಷೀಣಿಸುತ್ತವೆ ಇಲ್ಲವೆ ಅವನತಿಯನ್ನು ಹೊಂದುತ್ತವೆ.ಚಾಲುಕ್ಯರು ಜೈನಮತವನ್ನು ಪ್ರೋತ್ಸಾಹಿಸಿದರೆ ಕಲಚೂರಿಗಳು ಜೈನಮತವನ್ನು ರಾಜಧರ್ಮವನ್ನಾಗಿ ಮಾರ್ಪಡಿಸಿದ ದೊರೆಗಳು.ಬಿಜ್ಜಳನ ಪೂರ್ವದಿಂದಲೂ ಜೈನರು ಮತಾಂತರ ಚಟುವಟಿಕೆಗಳಲ್ಲಿ ತೊಡಗಿದ್ದರು,ಶಿವಾಲಯಗಳನ್ನು ಬಸದಿಗಳನ್ನಾಗಿ ಪರಿವರ್ತಿಸುತ್ತಿದ್ದರು.ಬಿಜ್ಜಳನ ಕಾಲದಲ್ಲಿ ಶೈವಮತಾವಲಂಬಿಗಳನ್ನು ಜೈನರನ್ನಾಗಿಸುವ,ಶಿವಾಲಯಗಳನ್ನು ಜಿನ ಬಸದಿಗಳನ್ನಾಗಿಸುವ ಕಾರ್ಯಕ್ಕೆ ವಿಶೇಷ ಪ್ರೋತ್ಸಾಹ,ರಾಜಮನ್ನಣೆ ದೊರೆತಿತ್ತು ಎನ್ನುವುದು ನಿರ್ವಿವಾದದ ಸಂಗತಿ.ಈ ಕಾರಣದಿಂದಲೇ ಬಸವಣ್ಣನವರು ಬಿಜ್ಜಳನ ಪ್ರಧಾನಮಂತ್ರಿಯ ಪಟ್ಟವನ್ನು ತ್ಯಜಿಸಿ ಕಲ್ಯಾಣದಲ್ಲಿ ಅನುಭವಮಂಟಪವನ್ನು ಸ್ಥಾಪಿಸಿದರು.ಯೋಗೀಶ್ವರ ಅಲ್ಲಮಪ್ರಭುದೇವರನ್ನು ಶೂನ್ಯಸಿಂಹಾಸನದ ಅಧ್ಯಕ್ಷರನ್ನಾಗಿಸಿ 770 ಶರಣಗಣವನ್ನು ಅನುಭವ ಮಂಟಪದ ಸದಸ್ಯರನ್ನಾಗಿಸಿದರು.ಅನುಭವ ಮಂಟಪದ ದಣ್ಣಾಯಕ ಇಲ್ಲವೆ ದಂಡನಾಯಕರಾಗಿದ್ದವರು ಚೆನ್ನಬಸವಣ್ಣನವರು.ಬಿಜ್ಜಳನ ಆಸ್ಥಾನವು ಸೇರಿದಂತೆ ಇತರ ಅರಸರುಗಳ ಆಸ್ಥಾನ ಪದ್ಧತಿಯೇ ಅನುಭವ ಮಂಟಪದಲ್ಲಿ ಮುಂದುವರೆದಿತ್ತು ಶಿವತತ್ತ್ವ,ಶಿವಧರ್ಮದ ಹಿನ್ನೆಲೆಯ ಹೆಸರು,ಪದವಿಗಳೊಂದಿಗೆ.ಬಿಜ್ಜಳನನ್ನು ಪರಿತ್ಯಜಿಸಿ ಬಂದ ಬಸವಣ್ಣನವರು ಅನುಭವ ಮಂಟಪದಲ್ಲಿಯೂ ಪ್ರಧಾನಿಗಳಾಗಿಯೇ ಇದ್ದರು ಆದರೆ ಭಕ್ತಿಭಂಡಾರಿಯಾಗಿ.ಅವರ ಅರಮನೆಯು ಮಹಾಮನೆಯಾಗಿ ಪರಿವರ್ತನೆಯಾಯಿತು.ಮಹಾಮನೆಯು ಶಿವಧರ್ಮವನ್ನು ಪೊರೆಯುವ ನೆಲೆಯಾಯಿತು.ಕೂಡಲಸಂಗಮದೇವನ ರೂಪದಲ್ಲಿ ಶಿವನು ಬಸವಣ್ಣನವರಿಗೆ ಮಾರ್ಗದರ್ಶನ ಮಾಡುತ್ತಿದ್ದ,ಮುಂಬರಿವ ಬೆಳಕಿನ ಹೊಳಹನ್ನು ಅನುಗ್ರಹಿಸುತ್ತಿದ್ದ.

ಬಿಜ್ಜಳನನ್ನು ಮೂಲೋತ್ಪಾಟನೆ ಮಾಡಿ ಸ್ವತಂತ್ರಪ್ರಭುವಾಗುವ ಆಲೋಚನೆ ಬಸವಣ್ಣನವರಿಗೆ ಇರಲಿಲ್ಲವಾದರೂ ಜೈನಧರ್ಮೀಯರ ಉಪದ್ರವ- ಉಪಟಳಗಳನ್ನು ನಿಗ್ರಹಿಸಿ ಶೈವಧರ್ಮವನ್ನು ಎತ್ತಿಹಿಡಿಯುವ ಮಹದಾಸೆಯಂತೂ ಅವರಿಗೆ ಇತ್ತು.ಹಾಗಾಗಿಯೇ ಬಸವಣ್ಣನವರು ಶಿವಾಗಮಗಳಲ್ಲಿ ಪ್ರತಿಪಾದಿಸಲ್ಪಟ್ಟ ಶೈವ ಮತಗಳಲ್ಲಿ ಒಂದಾದ ವೀರಶೈವಮತವನ್ನು ಆಯ್ದುಕೊಂಡು ಅದನ್ನು ತಮ್ಮ ಇಷ್ಟದ ಮತವನ್ನಾಗಿ ಸ್ವೀಕರಿಸಿ,ಅದನ್ನು ಪ್ರಚಾರಕ್ಕೆ ತಂದರು.ತ್ರಿಪುಂಡ್ರ,ರುದ್ರಾಕ್ಷಿ ಮತ್ತು ಲಿಂಗಧಾರಣೆಗಳು ವೀರಶೈವರ ಲಕ್ಷಣಗಳು ಎಂದು ಸಾರಿಹೇಳಿದರು; ತಮ್ಮ ಅನುಯಾಯಿಗಳೆಲ್ಲರೂ ವೀರಶೈವದ ಈ ಲಾಂಛನಗಳನ್ನು ಸ್ವೀಕರಿಸುವಂತೆ ಸ್ಫೂರ್ತಿ ತುಂಬಿದರು.ಶಿವತತ್ತ್ವಬಾಹಿರರಾಗಿ ವೈದಿಕಧರ್ಮದ ಅಂಧಾನುಕರಣೆ ಮಾಡುತ್ತಿದ್ದ ಶೈವಯತಿಗಳು,ವಿಪರೀತವೂ ಉಗ್ರವೂ ಆಗಿರುವ ಆಚರಣೆಗಳಿಂದ ಭೀಬತ್ಸರಾಗಿ ತೋರುತ್ತಿದ್ದ ಕಾಪಾಲಿಕ- ಕಾಳಾಮುಖ ಸಾಧುಗಳ ಅರ್ಥಹೀನ ಆಚರಣೆಗಳ ದಾಸರಾಗದಂತೆ ಜನರ ಕೈಯ್ಗಳಿಗೆ ಇಷ್ಟಲಿಂಗವನ್ನು ಇತ್ತರು.ಇಷ್ಟಲಿಂಗದಲ್ಲಿ ನಿಜನಿಷ್ಠೆಯನ್ನು ಇಟ್ಟವನೇ ವೀರಶೈವನು ಎಂದು ಸಾರಿದರು.ಇಷ್ಟಲಿಂಗಪೂಜೆ,ಉಪಾಸನೆಗಳಿಗೆ ವಿಶೇಷ ಮನ್ನಣೆ ಪ್ರಾಪ್ತವಾಯಿತು ಬಸವಣ್ಣನವರಿಂದ.

ನಡೆನುಡಿಗಳು ಒಂದಾಗಿರುವ,ಶುದ್ಧವ್ಯಕ್ತಿತ್ವದ ಕಾಯಕ ನಿಷ್ಠರುಗಳೆಲ್ಲರೂ ಶಿವಭಕ್ತರೇ ಎಂದು ಘೋಷಿಸಿ ಸಮಾಜದ ದಲಿತ- ಪದದುಳಿತ,ಶೂದ್ರಸಮುದಾಯಗಳ ಜನರೆಲ್ಲರ ಕೈಯ್ಗಳಿಗೆ ಇಷ್ಟಲಿಂಗವನ್ನಿತ್ತು ಅವರೆಲ್ಲರನ್ನೂ ಶಿವಭಕ್ತರನ್ನಾಗಿಸಿದರು,ಲಿಂಗಾಯತರನ್ನಾಗಿಸಿದರು.ಬಸವಣ್ಣನವರ ಪರಿಕಲ್ಪನೆಯಂತೆ ಲಿಂಗಾಯತವು ಒಂದು ಜಾತಿಯಲ್ಲ, ಒಂದು ತತ್ತ್ವ,ಲಿಂಗವನ್ನು ಆಯತಮಾಡಿಕೊಳ್ಳುವ ಒಂದು ವಿಶೇಷ,ವಿಶಿಷ್ಟ ಶಿವತತ್ವ,ಶಿವದರ್ಶನ.ಮಠ ಮಂದಿರಗಳಲ್ಲಿ ದಲಿತರು,ಪದದುಳಿತರು,ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯ,ದೇವರು- ಧರ್ಮದ ಹೆಸರಿನಲ್ಲಿ ಅಮಾಯಕಜನಸ್ತೋಮದ ಮೇಲಾಗುತ್ತಿರುವ ಶೋಷಣೆ,ದೌರ್ಜನ್ಯಗಳನ್ನು ಕಂಡು,ಕನಲಿ,ಕರುಣಾರ್ದ್ರರಾಗಿ ಅವರು ಇಷ್ಟಲಿಂಗ ಕಲ್ಪನೆಯನ್ನು‌ ಪ್ರಚುರಗೊಳಿಸಿದರು,ಅವರು ಇವರು ಎನ್ನದೆ ಕುಲಹದಿನೆಂಟು ಜಾತಿಗಳ ಜನರ ಕೈಯ್ಗಳಿಗೆ ಇಷ್ಟಲಿಂಗವೆಂಬ ಶಿವಬೆಳಕನ್ನು ಅನುಗ್ರಹಿಸಿದರು,ಎಲ್ಲರ ಕೊರಳುಗಳಲ್ಲಿ ಇಷ್ಟಲಿಂಗವು ಮೆರೆಯುವಂತೆ ಮಾಡಿ ಮನೆಮನೆಗಳನ್ನು ಕೈಲಾಸವನ್ನಾಗಿಸಿದರು,ಮನುಷ್ಯರೆಲ್ಲರೂ ಮಹಾದೇವ ಶಿವನ ಮಕ್ಕಳು ಎಂದು ಸಾರಿ ,ಬೋಧಿಸಿದರು.

ಭಾರತೀಯ ಆಧ್ಯಾತ್ಮ,ಯೋಗಪದ್ಧತಿಗಳ ಪೂರ್ಣ ಪರಿಚಯಹೊಂದಿದ್ದ ಬಸವಣ್ಣನವರು ಇತರ ಯೋಗಪದ್ಧತಿಗಳ ಉತ್ಕೃಷ್ಟ ಅಂಶಗಳನ್ನು ವೀರಶೈವ ಮತದಲ್ಲಿ ಅಳವಡಿಸಿ ಅದಕ್ಕೆ ತೇಜಸ್ಸು ಓಜಸ್ಸುಗಳನ್ನು ನೀಡಿದರು.ಅಷ್ಟಾಂಗ ಯೋಗಪದ್ಧತಿಯನ್ನು ‘ ಅಷ್ಟಾವರಣಗಳ’ ನ್ನಾಗಿಸಿದರು.ಕುಂಡಲಿನೀ ಯೋಗಪದ್ಧತಿಯ ಷಟ್ಚಕ್ರಗಳನ್ನು ಷಟ್ ಸ್ಥಲಗಳನ್ನಾಗಿಸಿದರು.ಸಮಾಜದಲ್ಲಿ ರೂಢಿಯಲ್ಲಿದ್ದ ಮನೆದೇವರು ಇಲ್ಲವೆ ಕುಲದೇವರ ಪೂಜಾಪದ್ಧತಿಯನ್ನು ‘ ಮನದದೇವರ ಪೂಜೆಯನ್ನಾಗಿಸಿ ಇಷ್ಟಲಿಂಗಪೂಜೆಯನ್ನಾಗಿ ಪರಿವರ್ತಿಸಿದರು.ವೀರಶೈವ ಧರ್ಮದ ರೂಪುರೇಷೆಗಳನ್ನು ಸಿದ್ಧಪಡಿಸುವ ಹೊಣೆಯನ್ನು ಚೆನ್ನಬಸವಣ್ಣನವರಿಗೆ ನೀಡಲಾಗಿತ್ತಾದರೂ ಬಸವಣ್ಣನವರು ಅದುವರೆಗೆ ತಾವು ಸಾಧಿಸಿದ ಭಾರತದ ಆಧ್ಯಾತ್ಮ,ಯೋಗಪರಂಪರೆಯ ಒಳ್ಳೆಯ ಅಂಶಗಳನ್ನೆಲ್ಲ ವಿವಿಧ ತತ್ತ್ವ- ಸಾಧನಾಕ್ರಮಗಳನ್ನಾಗಿ ವೀರಶೈವ ಮತದಲ್ಲಿ ಅಡಕಗೊಳಿಸಿದರು.ಆಗಮಗಳಲ್ಲಿ ವೀರಶೈವವು ಪ್ರಸ್ತಾಪಿಸಲ್ಪಟ್ಟಿದೆಯಾದರೂ ಅದಕ್ಕೊಂದು ಸ್ವತಂತ್ರ ಮತದ ಮನ್ನಣೆ ತಂದುಕೊಟ್ಟವರು ಬಸವಣ್ಣನವರೆ.

ಜೈನಮತೀಯರ ಉಪದ್ರವ ಉಪಟಳಗಳಿಂದ ಸನಾತನ ಶೈವಧರ್ಮ ಶೈವ ಸಂಸ್ಕೃತಿಗಳನ್ನು ರಕ್ಷಿಸಿ,ವೀರಶೈವ ಎನ್ನುವ ಹೊಸಮತವನ್ನು ಸ್ಥಾಪಿಸಿ,ಶಿವಚೈತನ್ಯವನ್ನು ಎಲ್ಲರಲ್ಲಿಯೂ ಬೆಳಗುವಂತೆ ಮಾಡಿದ ಮಹಾಬೆಳಗು ಬಸವಣ್ಣನವರು.ಅವರನ್ನು ವಿರೋಧಿಸುವ ವೀರಶೈವರ ನಡೆಯು ಅರ್ಥಹೀನ; ಬಸವಣ್ಣನವರ ಹೆಸರಿನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಸ್ಥಾಪಿಸುವ ವಿಚಾರವೂ ಬಸವಸಮ್ಮತವಲ್ಲ! ಬಸವಣ್ಣನವರು ಶಿವಧರ್ಮವನ್ನು ಎತ್ತಿಹಿಡಿಯಲೆಂದು ಅವತರಿಸಿದ ಶಿವಕಾರಣಪುರುಷರೇ ಹೊರತು ಅವರು ಲಿಂಗಾಯತಧರ್ಮದ ಸ್ಥಾಪಕರಲ್ಲ; ‘ಲಿಂಗಾಯತ ‘ಎನ್ನುವ ಪ್ರತ್ಯೇಕ ಧರ್ಮವನ್ನು ಸ್ಥಾಪಿಸುವ ಬಗ್ಗೆ ಬಸವಣ್ಣನವರು ಕನಸು ಮನಸಿನಲ್ಲಿಯೂ ಯೋಚಿಸಿರಲಿಲ್ಲ.ತಮ್ಮ ವಚನಗಳಲ್ಲಿ ಶಿವಭಕ್ತನಾಗಿ,ಶಿವಧರ್ಮದ ಪ್ರತಿಷ್ಠಾಪನೆಗಾಗಿಯೇ ಅವತರಿಸುತ್ತಿರುವುದಾಗಿ ಬಸವಣ್ಣನವರೇ ಸ್ಪಷ್ಟಪಡಿಸಿದ್ದಾರೆ.ಹಾಗಾಗಿ ಬಸವಾನುಯಾಯಿಗಳು ಲಿಂಗಾಯತಧರ್ಮ ಎನ್ನುವ ಹೆಸರಿನಲ್ಲಿ ಧರ್ಮವನ್ನು ಸ್ಥಾಪಿಸದೆ ‘ಬಸವಧರ್ಮ’ ಎನ್ನುವ ಹೆಸರಿನಲ್ಲಿ ಧರ್ಮಸ್ಥಾಪಿಸಿ,ಬಸವಣ್ಣನವರನ್ನು ಆ ಧರ್ಮದ ಸ್ಥಾಪಕರು,ಸ್ಥಾಪನಾಚಾರ್ಯರು ಎಂದು ಸ್ವೀಕರಿಸಿ ಪರಶಿವನನ್ನು ಇಲ್ಲವೆ ಪರಶಿವಸ್ವರೂಪಿ ಇಷ್ಟಲಿಂಗವನ್ನು ಬಸವಧರ್ಮದ ದೇವರು ಎಂದು ಒಪ್ಪಿ,ಬಸವಣ್ಣನವರ ವಚನಗಳನ್ನು ಬಸವಧರ್ಮದ ಧರ್ಮಗ್ರಂಥ ಎಂದು ಸ್ವೀಕರಿಸಿದರೆ ಹೊಸದೊಂದು ಸ್ವತಂತ್ರ ಧರ್ಮವು ಅಸ್ತಿತ್ವಕ್ಕೆ ಬಂದು ಜಾಗತಿಕ ಮನ್ನಣೆ ಪಡೆಯಬಹುದು.ಶಿವನಿಲ್ಲದೆ ಬಸವನಿಲ್ಲ,ಬಸವನಿಲ್ಲದೆ ಶಿವನಿಲ್ಲ; ಶಿವಬಸವರೊಂದೇ ಎಂಬುದನ್ನರಿತು ಶಿವನನ್ನು ದೇವರನ್ನಾಗಿ,ಶಿವಸಾಕ್ಷಾತ್ಕಾರವು ಜೀವರುಗಳ ಜೀವನದ ಗುರಿಯಾಗಿ,ಇಷ್ಟಲಿಂಗವು ಶಿವಸಾಕ್ಷಾತ್ಕಾರದ ಸಾಧನೆಯಾಗಿ,ಬಸವವಚನಸುಧೆಯು ಶಿವಧರ್ಮಸೂತ್ರಗಳಾಗಿ ಹೊರಹೊಮ್ಮಿದರೆ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಬಸವಧರ್ಮ.ಸ್ವತಂತ್ರಲಿಂಗಾಯತ ಧರ್ಮಹೋರಾಟಗಾರರು ಈ ನಿಟ್ಟಿನಲ್ಲಿ ಆಲೋಚಿಸಿದರೆ ಒಳಿತು ಎನ್ನುವುದು ನನ್ನ ಅಭಿಮತ.

About The Author