ಸಂವಿಧಾನದ ಪೀಠಿಕೆ’ ಕೃತಿ ಲೋಕಾರ್ಪಣೆ.

ಗಬ್ಬೂರು ಜುಲೈ 09 : ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ರಚಿಸಿರುವ ” ಸಂವಿಧಾನದ ಪೀಠಿಕೆ” ಕೃತಿಯನ್ನು ಶ್ರೀಕ್ಷೇತ್ರ ಕೈಲಾಸದ ವಿಶ್ವೇಶ್ವರನ ಸನ್ನಿಧಿಯಲ್ಲಿ ಜುಲೈ 09ನೇ ತಾರೀಖಿನ ಆದಿತ್ಯವಾರದಂದು ಸರಳವಾಗಿ ಲೋಕಾರ್ಪಣೆಗೊಳಿಸಲಾಯಿತು.ರಾಯಚೂರಿನ ಜನಪ್ರಿಯ ಪತ್ರಿಕೆಯಾಗಿರುವ ‘ ಪ್ರಜಾಪ್ರಸಿದ್ಧ’ ದಿನಪತ್ರಿಕೆಯ ಉಪಸಂಪಾದಕರು,ಸಾಹಿತಿಗಳೂ ಹಾಗೂ ಆಧುನಿಕ ವಚನಕಾರರಾಗಿರುವ ರಘುನಾಥರೆಡ್ಡಿ ಮನ್ಸಲಾಪುರ ಅವರು ‘ ಸಂವಿಧಾನದ ಪರಿಚಯ’ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡುತ್ತ ಶಿಕ್ಷಕ ಷಣ್ಮುಖ ಹೂಗಾರ ‘ ನಮ್ಮ ಗುರುಗಳಾಗಿದ ಶ್ರೀ ಮುಕ್ಕಣ್ಣ ಕರಿಗಾರ ಅವರು ಕಳೆದ ತಿಂಗಳು ವಿಶ್ವೇಶ್ವರನ ಸನ್ನಿಧಿಯಲ್ಲಿ ಜನಪ್ರತಿನಿಧಿಗಳಿಗೆ ಸಂವಿಧಾನ ಮತ್ತು ಸರಕಾರಿ ಆಡಳಿತ ಪದ್ಧತಿಯ ಬಗ್ಗೆ ಮಾರ್ಗದರ್ಶನ ಮಾಡುವ ಉದ್ದೇಶದಿಂದ ‘ ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ’ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದರು.ಈ ಸಂಸ್ಥೆಯ ಧ್ಯೇಯೋದ್ದೇಶಗಳ ಸ್ಫೂರ್ತಿಯಲ್ಲಿ ಯುವಜನತೆಗೆ ರಾಜಕೀಯ ತರಬೇತಿ ಸಂಸ್ಥೆ ಒಂದನ್ನು ಸ್ಥಾಪಿಸಲು ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಆಸಕ್ತಿವಹಿಸಿರುವುದು ಗಮನಾರ್ಹವಾದುದು.ಸಶಕ್ತ ಆಲೋಚನೆಗಳು ಜನತೆ ಮತ್ತು ಕಾಲವನ್ನು ಪ್ರಭಾವಿಸುತ್ತವೆ ಎನ್ನುವುದಕ್ಕೆ ಈ ಪ್ರಸಂಗವು ಸಾಕ್ಷಿ. ಸರಕಾರವು ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯ ಓದನ್ನು ಕಡ್ಡಾಯಗೊಳಿಸಿದ ಆದೇಶಿಸಿದ ಕೆಲವೇ ದಿನಗಳಲ್ಲಿ ನಮ್ಮ ಗುರುಗಳಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಜನಪ್ರತಿನಿಧಿಗಳು ಸೇರಿದಂತೆ ವಿದ್ಯಾರ್ಥಿಗಳು,ಜನಸಾಮಾನ್ಯರಿಗೆ ಸಂವಿಧಾನ ಪೀಠಿಕೆಯ ಅರ್ಥ ಮತ್ತು ಮಹತ್ವ ತಿಳಿಯುವಂತೆ ಪುಸ್ತಕವನ್ನು ರಚಿಸಿ,ಸಂವಿಧಾನ ಪ್ರಜ್ಞೆಯನ್ನು ಬಿತ್ತರಿಸುವ ಕೆಲಸ ಮಾಡಿದ್ದಾರೆ’ ಎಂದರು.

ನಂತರ ಮಹಾಕಾಳಿಯ ಸನ್ನಿಧಿಯಲ್ಲಿ ನಡೆದ ಕೃತಿ ಸಂವಾದದಲ್ಲಿ ಕೃತಿಯ ಲೇಖಕ ಮುಕ್ಕಣ್ಣ ಕರಿಗಾರ ಅವರ ಜೊತೆ ಸಾಹಿತಿಗಳಾದ ರಘುನಾಥರೆಡ್ಡಿ ಮನ್ಸಲಾಪುರ,ಸಿದ್ಧನಗೌಡ ಮಾಲೀಪಾಟೀಲ್ ಮನ್ಸಲಾಪುರ,ಬಸವರಾಜ ಸಿನ್ನೂರ,ಬಸವರಾಜ ಭೋಗಾವತಿ ,ವೀರೇಂದ್ರ ಪಾಟೀಲ್ ಮೊದಲಾದವರು ಪಾಲ್ಗೊಂಡು ಕೃತಿಯ ವಿಶ್ಲೇಷಣೆ ಮಾಡಿದರು. ಪ್ರಜಾಪ್ರಸಿದ್ಧ ದಿನಪತ್ರಿಕೆಯ ಉಪಸಂಪಾದಕ ರಘುನಾಥರೆಡ್ಡಿಯವರು ” ಸಂವಿಧಾನದ ಪ್ರಜ್ಞೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ‘ ಸಂವಿಧಾನದ ಪೀಠಿಕೆ’ಯು ಮಹತ್ವದ ಕೃತಿಯಾಗಿದ್ದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲದೆ ಎಲ್ಲರ ಕೈಯ್ಗಳಲ್ಲಿ ಇರಬೇಕಾದ ಕೃತಿಯಾಗಿದೆ” ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಿದ್ಧನಗೌಡ ಮಾಲೀಪಾಟೀಲ್ ಅವರು ” ಸಂವಿಧಾನದ ತಿಳಿವಳಿಕೆಯು ಇಂದಿನ ಕಾಲದ ಅಗತ್ಯವಾಗಿದ್ದು ಮುಕ್ಕಣ್ಣ ಕರಿಗಾರ ಅವರ ‘ ಸಂವಿಧಾನ ಪೀಠಿಕೆ’ಯು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಂವಿಧಾನದ ಓದಿಗೆ ಸ್ಫೂರ್ತಿ ನೀಡುವ ಮಹತ್ ಕೃತಿಯಾಗಿದೆ’ ಎಂದು ಅಭಿಪ್ರಾಯಿಸಿದರು.ಕವಿ,ಸಾಹಿತ್ಯ ಸಂಘಟಕ ಬಸವರಾಜ ಸಿನ್ನೂರು ಅವರು ಮಾತನಾಡಿ’ ಸಂವಿಧಾನಪೀಠಿಕೆಯ ಕೃತಿಯಲ್ಲಿ ಸಂವಿಧಾನದ ಪೀಠಿಕೆಯನ್ನು ವಿಸ್ತರಿಸಿ ಬರೆಯುವುದರ ಜೊತೆಗೆ ಸಂವಿಧಾನ ಪೀಠಿಕೆಯನ್ನು ಅರ್ಥೈಸಿಕೊಳ್ಳಲು ಉಪಯುಕ್ತವಾಗುವ ಲೇಖನಗಳನ್ನು ಬರೆದಿದ್ದಾರೆ.’

ಭಾರತದ ಪ್ರಜೆಗಳಾದ ನಾವು…’ ಎನ್ನುವ ಲೇಖನವು ಕೃತಿಯಲ್ಲಿನ ಮಹತ್ವದ ಲೇಖನವಾಗಿದ್ದು ಇತರ ದೇಶಗಳ ಸಂವಿಧಾನದ ಪೀಠಿಕೆಯ ಪ್ರಾರಂಭದ ವಾಕ್ಯಗಳಿಗೂ ಭಾರತದ ಸಂವಿಧಾನದ ಪೀಠಿಕೆಯ ಪ್ರಾರಂಭದ ವಾಕ್ಯಕ್ಕೂ ಇರುವ ವ್ಯತ್ಯಾಸವನ್ನು ವಿವರಿಸಿ,ಭಾರತದ ಜನತೆಯಲ್ಲಿಯೇ ದೇಶದ ಸಾರ್ವಭೌಮಶಕ್ತಿ ಅಡಗಿದೆ ಎನ್ನುವುದನ್ನು ರಾಜಕೀಯ ತಜ್ಞರುಗಳು ಸಹ ನಿಬ್ಬೆರಗಾಗುವಂತೆ ವಿವರಿಸಿದ್ದಾರೆ’ ಎಂದರು.ಕಥೆಗಾರ ಮತ್ತು ಮಾನ್ವಿ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲ ಬಸವರಾಜ ಭೋಗಾವತಿಯವರು ಮಾತನಾಡಿ ‘ ಮೈಯಲ್ಲಿ ಹರಿದ ಬಟ್ಟೆ ಇದ್ದರೂ ಚಿಂತೆಯಿಲ್ಲ,ಕೈಯಲ್ಲೊಂದು ಪುಸ್ತಕವಿರಲಿ’ ಎಂದ ಅಬ್ರಹಾಂ ಲಿಂಕನ್ ಅವರ ಮಾತನ್ನು ಸಮರ್ಥಿಸುವಂತೆ ಎಲ್ಲರ ಕೈಯ್ಗಳಲ್ಲಿ ಇರಲೇಬೇಕಾದ ಬಹುಮಹತ್ವದ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ ಮುಕ್ಕಣ್ಣ ಕರಿಗಾರ ಅವರು.ಸಂವಿಧಾನವನ್ನು‌ ಕುರಿತು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ ಅವರ ವಿಚಾರಧಾರೆಯನ್ನು ಸೇರಿಸಿದ್ದು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆಯಲ್ಲದೆ ಸಂವಿಧಾನದಲ್ಲಿ ಅಡಕಗೊಂಡ ತತ್ತ್ವಗಳು ಅದರ ಪೀಠಿಕೆಯಲ್ಲಿ ಅಭಿವ್ಯಕ್ತಗೊಂಡ ಬಗೆಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ’ ಎಂದಭಿಪ್ರಾಯಿಸಿದರು.

ಸ್ಥಳೀಯ ಎಸ್.ಎಲ್.ಡಿ ಪಬ್ಲಿಕ್ ಶಾಲೆಯ ಉಪಾಧ್ಯಕ್ಷ ವೀರೇಂದ್ರ ಪಾಟೀಲ್ ದೇಸಾಯಿ ಸಂವಾದ ಕಾರ್ಯಕ್ರಮ ನಿರೂಪಿಸಿದರು.
ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಸಾನ್ನಿಧ್ಯ ಮತ್ತು ಅಧ್ಯಕ್ಷತೆಯಲ್ಲಿ ನಡೆದ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸುಲ್ತಾನಪುರದ ಗಂಗಾಧರ ಶಾಂತಾಶ್ರಮದ ಅಧ್ಯಕ್ಷರಾದ ಶ್ರೀ ಶರಣಪ್ಪ ಗೌಡ ಶರಣರು ಅನುಭಾವಿಗಳಾಗಿ,ಸಿದ್ಧನಗೌಡ ಮಾಲೀಪಾಟೀಲ್,ಬಸವರಾಜ ಸಿನ್ನೂರು,ಬಸವರಾಜ ಭೋಗಾವತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಗುರುಬಸವ ಹುರಕಡ್ಲಿ,ಶಿವಯ್ಯಸ್ವಾಮಿ ಮಠಪತಿ,ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ,ಬಸವರಾಜ ಬೊಮ್ಮನಾಳ ,ಸದಾಶಿವಪ್ಪಗೌಡ ಮದರಕಲ್,ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.ಶಿಕ್ಷಕ ಬಸವಲಿಂಗ ಕರಿಗಾರ ಸ್ವಾಗತಿಸಿದರು.

About The Author