ಮೂರನೇ ಕಣ್ಣು : ಸ0ವಿಧಾನವನ್ನು ಉಲ್ಲಂಘಿಸುವ ತಮಿಳುನಾಡು ರಾಜ್ಯಪಾಲರ ‘ ಅತಿರೇಕದ ಕ್ರಮ’ : ಮುಕ್ಕಣ್ಣ ಕರಿಗಾರ

ರಾಜ್ಯಪಾಲರ ಹುದ್ದೆಯು ಸಾಂವಿಧಾನಿಕ ಹುದ್ದೆಯಾಗಿದ್ದು ಅವರು ಸಂವಿಧಾನವನ್ನು ಎತ್ತಿ ಹಿಡಿಯಬೇಕು,ತಾವು ನೇಮಕಗೊಂಡ ರಾಜ್ಯದ ಆಡಳಿತವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.ಅದನ್ನು ಬಿಟ್ಟು ಸಂವಿಧಾನವನ್ನು ಉಲ್ಲಂಘಿಸಿ ನಡೆಯಬಾರದು.ಇತ್ತೀಚೆಗೆ ಕೆಲವು ರಾಜ್ಯಗಳ ರಾಜ್ಯಪಾಲರುಗಳು ಯಾರನ್ನೋ ಓಲೈಸಲು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿದ್ದಾರೆ.ತಮಿಳುನಾಡು ರಾಜ್ಯಪಾಲ ಆರ್. ಎನ್ .ರವಿಯವರು ರಾಜ್ಯದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ನೇತೃತ್ವದ ಡಿ.ಎಂ.ಕೆ ನೇತೃತ್ವದ ಸರಕಾರದ ವಿರುದ್ಧ ತಮ್ಮ ಅಸಹನೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದರಲ್ಲದೆ ಈಗ ತಮಿಳುನಾಡು ಸರಕಾರದ ಸಚಿವರೊಬ್ಬರನ್ನು ವಜಾಗೊಳಿಸುವ ಮೂಲಕ ಅತಿರೇಕಕ್ಕೆ ಹೋಗಿದ್ದಾರೆ.ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸಿ ಆದೇಶಿಸಿದ ತಮಿಳುನಾಡು ರಾಜ್ಯಪಾಲರು ಕೇಂದ್ರಗೃಹಸಚಿವ ಅಮಿತ್ ಶಾ ಅವರ ಸೂಚನೆಯಂತೆ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ ನಿರ್ಧಾರವನ್ನು ತಡೆಹಿಡಿದಿದ್ದಾರೆ.ರಾಜ್ಯಪಾಲರ ಈ ನಡೆ ಸಂವಿಧಾನಕ್ಕೆ ವಿರುದ್ಧವಾದ ನಡೆಯಲ್ಲದೆ ರಾಜ್ಯಪಾಲರ ಹುದ್ದೆಯ ಘನತೆಯನ್ನು ಕುಗ್ಗಿಸಿದ ನಡೆಯಾಗಿದೆ.

ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಯವರನ್ನು ಜಾರಿ ನಿರ್ದೇಶನಾಲಯವು ಬಾಲಾಜಿಯವರು 2011-2015 ರ ಅವಧಿಯಲ್ಲಿ ಸಾರಿಗೆಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಹಣಪಡೆದಿದ್ದರೆಂಬ ಆರೋಪದಲ್ಲಿ ಬಂಧಿಸಿತ್ತು.ಬಾಲಾಜಿ ಅವರ ಖಾತೆಯನ್ನು ತಮ್ಮ ಸಚಿವ ಸಂಪುಟದ ಮತ್ತೋರ್ವ ಸಚಿವರಿಗೆ ವಹಿಸಲು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದರಾದರೂ ಬಾಲಾಜಿಯವರನ್ನು ಸಚಿವಸಂಪುಟದಿಂದ ಕೈ ಬಿಡಲು ಶಿಫಾರಸ್ಸು ಮಾಡಿರಲಿಲ್ಲ.ಸೆಂಥಿಲ್ ಬಾಲಾಜಿಯವರನ್ನು ಸಚಿವ ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಯವರಿಗೆ ಹೇಳುತ್ತಿದ್ದ ರಾಜ್ಯಪಾಲ ಆರ್ ಎನ್ ರವಿಯವರು ಈಗ ತಾವೇ ಸ್ವಯಂಪ್ರೇರಿತರಾಗಿ ಸೆಂಥಿಲ್ ಬಾಲಾಜಿಯವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಆದೇಶಿಸಿದ್ದಾರೆ.ತಮಿಳುನಾಡು ರಾಜ್ಯಪಾಲರ ಈ ನಡೆ ಸಂವಿಧಾನದ ಸ್ಪಷ್ಟ ಉಲ್ಲಂಘನೆ.ನಮ್ಮ ಸಂವಿಧಾನದಂತೆ ‘ರಾಜ್ಯಪಾಲರು ರಾಜ್ಯದ ಮುಖ್ಯಸ್ಥರಾಗಿದ್ದರೂ ಅವರು ಬ್ರಿಟಿಷರ ಪ್ರತಿನಿಧಿಗಳಾದ ರಾಜ್ಯಪಾಲರುಗಳಲ್ಲ,ಬದಲಿಗೆ ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಕಾರ್ಯನಿರ್ವಹಿಸಬೇಕಾದ ರಾಜ್ಯಪಾಲರು’ ಎಂಬುದನ್ನು ಎಲ್ಲ ರಾಜ್ಯಪಾಲರುಗಳು ತಿಳಿದುಕೊಳ್ಳಬೇಕಿದೆ.ಬ್ರಿಟಿಷರು ಪ್ರಾಂತೀಯ ಸರಕಾರಗಳನ್ನು ಉರುಳಿಸಲು ಅನುಕೂಲವಾಗುವಂತೆ ರೂಪಿಸಿದ್ದ ಬ್ರಿಟಿಷ್ ಇಂಡಿಯಾದ ಗವರ್ನರ್ ಹುದ್ದೆಯನ್ನು ನಮ್ಮ ಸಂವಿಧಾನದಲ್ಲಿ ಮುಂದುವರೆಸಿದ ಮಾತ್ರಕ್ಕೆ ರಾಜ್ಯಪಾಲರುಗಳಾದವರು ತಾವು ನೇಮಕಗೊಂಡ ರಾಜ್ಯಕ್ಕೆ ಪರಕೀಯರು,ಶತ್ರುಗಳು ಎಂಬಂತೆ ವರ್ತಿಸಬಾರದು.ರಾಜ್ಯಪಾಲರುಗಳನ್ನು ಪ್ರಧಾನಮಂತ್ರಿಯ ಸಲಹೆಯ ಮೇರೆಗೆ ರಾಷ್ಟ್ರಪತಿಯವರು ನೇಮಿಸುತ್ತಿದ್ದರೂ ನಮ್ಮದು ಒಕ್ಕೂಟವ್ಯವಸ್ಥೆಯ ರಾಜ್ಯನಿರ್ವಹಣಾ ಪದ್ಧತಿ ಎಂಬುದನ್ನು ರಾಜ್ಯಪಾಲರುಗಳನ್ನು ಅರ್ಥ ಮಾಡಿಕೊಳ್ಳಲೇಬೇಕು.ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತೇನೆ ಎಂದು ಪ್ರಮಾಣವಚನ ಸ್ವೀಕರಿಸಿಯೇ ರಾಜ್ಯಪಾಲರ ಹುದ್ದೆಯನ್ನು ವಹಿಸಿಕೊಳ್ಳುವವರು ಆ ಹುದ್ದೆಯನ್ನು ಸಂವಿಧಾನದ ವಿಧಿ- ನಿಯಮಗಳಿಗನುಸಾರವಾಗಿಯೇ ನಿರ್ವಹಿಸಬೇಕು.

‌ ‌ ‌ಸಂವಿಧಾನದ 163 ನೆಯ ಅನುಚ್ಛೇದವು ‘ ರಾಜ್ಯಪಾಲನಿಗೆ ನೆರವು ಮತ್ತು ಸಲಹೆಯನ್ನು ನೀಡಲು ಮುಖ್ಯಮಂತ್ರಿಯ ನೇತೃತ್ವದಲ್ಲಿ ಒಂದು ಮಂತ್ರಿಮಂಡಳ ಇರತಕ್ಕದ್ದು’ ಎಂದು ಹೇಳಿದ ಮಾತ್ರಕ್ಕೆ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಸರ್ವಾಧಿಕಾರಿಯಂತೆ ನಿರಂಕುಶ ಅಧಿಕಾರ ಚಲಾಯಿಸಲು ಆಗದು.ರಾಜ್ಯಪಾಲರು ರಾಜ್ಯದ ‘ ನಾಮಮಾತ್ರ ಮುಖ್ಯಸ್ಥ’ ರಾಗಿದ್ದು ಮುಖ್ಯಮಂತ್ರಿಯೇ ರಾಜ್ಯಾಡಳಿತ ‘ ನಿಜವಾದ ಮುಖ್ಯಸ್ಥರು’ ಆಗಿರುತ್ತಾರೆ.ರಾಜ್ಯಪಾಲರು ಯಾವುದೇ ವಿಷಯದ ಕುರಿತು ಮಾಹಿತಿ ಪಡೆಯಲು ಅಧಿಕಾರಹೊಂದಿದ್ದಾರೆ ಆದರೆ ಅವರ ಸಲಹೆ,ನಿರ್ಣಯಗಳನ್ನೇ ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯಸರ್ಕಾರವನ್ನು ಒತ್ತಾಯಿಸುವ ‘ಆಗ್ರಹಾಧಿಕಾರ’ ವನ್ನು ರಾಜ್ಯಪಾಲರು ಹೊಂದಿಲ್ಲ.ಸಂವಿಧಾನದ 164 ನೆಯ ಅನುಚ್ಛೇದದಂತೆ ಮುಖ್ಯಮಂತ್ರಿಯನ್ನು ನೇಮಕ ಮಾಡುವ ರಾಜ್ಯಪಾಲರು ‘ ಮುಖ್ಯಮಂತ್ರಿಯ ಸಲಹೆಗನುಸಾರ ಇತರ ಮಂತ್ರಿಗಳನ್ನು ನೇಮಕ ಮಾಡತಕ್ಕದ್ದು’. ಸಂವಿಧಾನವು ಇಲ್ಲಿ ಸ್ಪಷ್ಟವಾಗಿ ಹೇಳಿದೆ,ರಾಜ್ಯಪಾಲನು ಮುಖ್ಯಮಂತ್ರಿಯ ಸಲಹೆಯಂತೆ ಇತರ ಮಂತ್ರಿಗಳನ್ನು ನೇಮಿಸತಕ್ಕದ್ದು ಎಂದು.’ ನೇಮಿಸತಕ್ಕದ್ದು’ ಎನ್ನುವ ಶಬ್ದವಿದೆಯೇ ಹೊರತು ‘ ನೇಮಿಸಬಹುದು’ ಎನ್ನುವ ಶಬ್ದವಿಲ್ಲ.ಇಂಗ್ಲಿಷಿನ Shall ಮತ್ತು May ಶಬ್ದಗಳು ಹೊರಡಿಸುವ ಅರ್ಥಗಳೇನೆಂಬುದನ್ನು ಸಂವಿಧಾನತಜ್ಞರುಗಳು ಚೆನ್ನಾಗಿ ಬಲ್ಲರು.ಮುಖ್ಯಮಂತ್ರಿಯ ಸಲಹೆಯಂತೆ ಮಂತ್ರಿಗಳನ್ನು ನೇಮಿಸುವ ರಾಜ್ಯಪಾಲರಿಗೆ ಮುಖ್ಯಮಂತ್ರಿಯ ಸಲಹೆಯಂತಲ್ಲದೆ ಮಂತ್ರಿಗಳನ್ನು ವಜಾಗೊಳಿಸುವ ಪರಮಾಧಿಕಾರ ಇಲ್ಲ.ಸಂವಿಧಾನದ 164 ನೆಯ ಅನುಚ್ಛೇದದ ‘ಮಂತ್ರಿಗಳು ರಾಜ್ಯಪಾಲನ ಇಷ್ಟಪರ್ಯಂತರ ಪದಧಾರಣ ಮಾಡತಕ್ಕದ್ದು’ ಎನ್ನುವ ಪದಪುಂಜಗಳನ್ನು ತಮಿಳುನಾಡು ರಾಜ್ಯಪಾಲರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.ರಾಜ್ಯಪಾಲರ ಇಷ್ಟವೆಂದರೆ ಅದು ಮುಖ್ಯಮಂತ್ರಿಯ ಇಷ್ಟ ಮತ್ತು ಸಲಹೆಯೇ ಹೊರತು ರಾಜ್ಯಪಾಲರ ಸ್ವಯಂ ನಿರ್ಧಾರದ ವಿವೇಚನಾಧಿಕಾರವಲ್ಲ.

ಜಾರಿ ನಿರ್ದೇಶನಾಲಯವು ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿ,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರಬಹುದು.ನ್ಯಾಯಾಂಗ ಬಂಧನಕ್ಕೆ ಒಳಗಾದ ಮಾತ್ರಕ್ಕೆ ಒಬ್ಬ ವ್ಯಕ್ತಿ ಅಪರಾಧಿ ಆಗುವುದಿಲ್ಲ ಎನ್ನುವುದು ಕಾನೂನಿನ ಸಾಮಾನ್ಯ ತಿಳಿವಳಿಕೆಯುಳ್ಳವರಿಗೂ ಅರ್ಥವಾಗುವ ಸಂಗತಿ.ಸೆಂಥಿಲ್ ಬಾಲಾಜಿ ವಿರುದ್ಧ ಪೋಲೀಸರು FIR ದಾಖಲು ಮಾಡಿದ ಮಾತ್ರಕ್ಕೆ ಅವರು ‘ ಅಪರಾಧಿ’ ಆಗುವುದಿಲ್ಲ.ಸೆಂಥಿಲ್ ಬಾಲಾಜಿ ಅವರ ವಿರುದ್ಧ ‘ ಆರೋಪ ಪಟ್ಟಿ’ ( Charge sheet) ಸಿದ್ಧವಾಗಬೇಕು,ಸಕ್ಷಮ ನ್ಯಾಯಲಯವು ಆರೋಪಗಳ ಬಗ್ಗೆ ವಿಚಾರಣೆ ನಡೆಯಿಸಿ ಅವರನ್ನು ‘ ಅಪರಾಧಿ’ ( covictionಗೆ ಒಳಪಡಿಸುವವರೆಗೂ)ಎಂದು ಘೋಷಿಸುವವರೆಗೆ ಸೆಂಥಿಲ್ ಬಾಲಾಜಿ ಅಪರಾಧಿಯಲ್ಲ.ಪೋಲಿಸರು ಎಫ್ ಐ ಆರ್ ದಾಖಲಿಸಿದ ಮಾತ್ರಕ್ಕೆ ಸೆಂಥಿಲ್ ಬಾಲಾಜಿ ಕ್ರಿಮಿನಲ್ ಅಪರಾಧಿ ಆಗುವುದಿಲ್ಲ.ಅವರ ವಿರುದ್ಧದ ಅಪರಾಧವು ನ್ಯಾಯಾಲಯದಲ್ಲಿ ಸಾಬೀತು ಆಗುವವರೆಗೆ ಸೆಂಥಿಲ್ ಬಾಲಾಜಿಯವರನ್ನು ‘ ಅಪರಾಧಿ’ ಎಂದು ಪರಿಗಣಿಸಲು ತಮಿಳುನಾಡು ರಾಜ್ಯಪಾಲ ಆರ್.ಎನ್ .ರವಿಯವರಿಗೆ ಅಧಿಕಾರವಿಲ್ಲ.ಸಚಿವರೊಬ್ಬರನ್ನು ಸಚಿವಸಂಪುಟದಲ್ಲಿ ಮುಂದುವರೆಸುವುದು ಅಥವಾ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವುದು ಮುಖ್ಯಮಂತ್ರಿಯ ವಿವೇಚನಾಧಿಕಾರ ಮತ್ತು ಪರಮಾಧಿಕಾರವೂ ಅಹುದು.ಮುಖ್ಯಮಂತ್ರಿಯ ಶಿಫಾರಸ್ಸು ಇಲ್ಲದೆ ರಾಜ್ಯಪಾಲರು ಸಚಿವರನ್ನು ಕೈಬಿಡುವ,ವಜಾಗೊಳಿಸುವ ಅಧಿಕಾರವನ್ನು ಚಲಾಯಿಸುವಂತಿಲ್ಲ.

‌ ಸಂವಿಧಾನದ 192 ನೆಯ ಅನುಚ್ಛೇದವು ‘ ರಾಜ್ಯದ ವಿಧಾನ ಮಂಡಲದ ಯಾವುದೇ ಸದಸ್ಯನ ಅನರ್ಹತೆಯ ಬಗ್ಗೆ ರಾಜ್ಯಪಾಲನ ನಿರ್ಧಾರವು ಅಂತಿಮ’ ಎನ್ನುತ್ತಿದೆಯಾದರೂ ರಾಜ್ಯಪಾಲರ ಈ ಅಂತಿಮ ನಿರ್ಧಾರವು ಸಂವಿಧಾನದ 191 ನೆಯ ವಿಧಿಯಲ್ಲಿ ನಿರ್ದಿಷ್ಟ ಪಡಿಸಲಾದ ಅನರ್ಹತೆಗಳಿಗೆ ಮಾತ್ರ ಸಂಬಂಧಿಸಿದೆ ಎಂಬುದನ್ನು ರಾಜ್ಯಪಾಲರು ಅರ್ಥಮಾಡಿಕೊಳ್ಳಬೇಕು. ಸಂವಿಧಾನದ 191 ನೆಯ ಅನುಚ್ಛೇದವು ರಾಜ್ಯದ ವಿಧಾನ ಮಂಡಲದ ಸದಸ್ಯರ ಅನರ್ಹತೆಗಳ ಬಗ್ಗೆ ವಿವರಿಸುತ್ತಿದ್ದು ವಿಧಾನ ಮಂಡಲದ ಸದಸ್ಯರನ್ನು ಅನರ್ಹರೆಂದು ಘೋಷಿಸಬೇಕಾದ ಕಾರಣಗಳು(ಎ.) ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ(ಬಿ) ಅಸ್ವಸ್ಥಚಿತ್ತನಾಗಿದ್ದರೆ ಮತ್ತು ಸಕ್ಷಮ ನ್ಯಾಯಾಲಯವು ಹಾಗೆ ಘೋಷಿಸಿದ್ದರೆ ,(ಸಿ) ಅವಿಮುಕ್ತ ದಿವಾಳಿಯಾಗಿದ್ದರೆ,(ಡಿ) ಭಾರತದ ನಾಗರಿಕನಾಗಿಲ್ಲದಿದ್ದರೆ ಅಥವಾ ಯಾವುದೇ ವಿದೇಶಿ ರಾಜ್ಯದ ನಾಗರೀಕತ್ವವನ್ನು ಸ್ವ ಇಚ್ಛೆಯಿಂದ ಅರ್ಜಿಸಿದರೆ ಅಥವಾ ಒಂದು ವಿದೇಶಿ ರಾಜ್ಯಕ್ಕೆ ನಿಷ್ಠೆ ಅಥವಾ ಅನುಸಕ್ತಿ ಹೊಂದಿರುವುದನ್ನು ಒಪ್ಪಿಕೊಂಡಿದ್ದರೆ,(ಇ) ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ಅವನನ್ನು ಹಾಗೆಂದು ಅನರ್ಹನೆಂದು ಘೋಷಿಸಿದ್ದರೆ” ಮಾತ್ರ ವಿಧಾನಸಭೆಯ ಇಲ್ಲವೆ ವಿಧಾನಪರಿಷತ್ತಿನ ಸದಸ್ಯನ‌ನ್ನು ಅನರ್ಹನೆಂದು ಪರಿಗಣಿಸಬಹುದು.ಸಂವಿಧಾನದ ಈ ನಿಬಂಧನೆಗಳಂತೆ ಸೆಂಥಿಲ್ ಬಾಲಾಜಿಯವರು ತಮಿಳುನಾಡು ವಿಧಾನಸಭೆಯ ಸದಸ್ಯರಾಗಿ ಮುಂದುವರೆಯುವ ಅರ್ಹತೆ ಪಡೆದಿದ್ದಾರೆ ಹಾಗಾಗಿ ಅವರನ್ನು ಖಾತೆರಹಿತ ಸಚಿವರನ್ನಾಗಿ ಮುಂದುವರೆಸುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ನಿರ್ಧಾರ ತಪ್ಪು ಎನ್ನಲಾಗದು.ಹೆಚ್ಚೆಂದರೆ ಈ ಅವಧಿಯಲ್ಲಿ ಖಾತೆರಹಿತ ಸಚಿವರಾಗಿ ಸೆಂಥಿಲ್ ಬಾಲಾಜಿಯವರು ಸರಕಾರಿ ಸಂಬಳ,ಸವಲತ್ತುಗಳನ್ನು ಪಡೆದರೆ ಅದನ್ನು ಪ್ರಶ್ನಿಸಬಹುದಷ್ಟೆ.

About The Author