ವ್ಯಕ್ತಿತ್ವ ವಿಕಸನ ಚಿಂತನೆ : ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ; ಪರಿಹಾರದ ‘ಸರಿದಾರಿ’ ಯನ್ನು ಮಾತ್ರ ಕಂಡುಕೊಳ್ಳಬೇಕು : ಮುಕ್ಕಣ್ಣ ಕರಿಗಾರ

ಸದಾ ಸುಖಿಯಾಗಿರಬಯಸುವ ಮನುಷ್ಯರು ಸಮಸ್ಯೆಗಳು ಧುತ್ತೆಂದು ಬಂದೆರಗಿದಾಗ ಅಧೀರರಾಗುತ್ತಾರೆ,ಪರಿಹಾರೋಪಾಯಗಳಿಗಾಗಿ ಚಡಪಡಿಸುತ್ತಾರೆ.ಸಂಕಷ್ಟ ಇಲ್ಲವೆ ಸಮಸ್ಯೆಗಳು ಬರುವುದು ಸಹಜ,ಆದರೆ ಸಂಕಷ್ಟದ ಸಮಯಯದಲ್ಲಿ ನಾವು ತೋರುವ ವರ್ತನೆ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.ಸಂಕಷ್ಟ ಇಲ್ಲವೆ ಸಮಸ್ಯೆ ನಿವಾರಣೆಗೆ ಪರಿಹಾರಗಳಿವೆ.ಜಗತ್ತಿನಲ್ಲಿ ಪರಿಹರಿಸದೆ ಇರುವ ಯಾವ ಸಮಸ್ಯೆಯೂ ಇಲ್ಲ.ಮನುಷ್ಯರು ತಾಳ್ಮೆಯಿಂದ ಇರಬೇಕಷ್ಟೆ.

ಜೀವನದಲ್ಲಿ ಸಂಕಷ್ಟ ಇಲ್ಲವೆ ಸಮಸ್ಯೆಗಳು ಬಂದೊದಗುವುದು ಜೀವನದ ಅಪರಿಹಾರ್ಯನಿಯಮಗಳಲ್ಲಿ ಒಂದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.ಸಮಸ್ಯೆಗಳು ಬರಿ ಬಡವರಿಗೆ ಮಾತ್ರ ಬರುವುದಿಲ್ಲ,ಮಿಲಿಯನೇರ್,ಬಿಲಿಯನೇರ್ ಗಳಿಗೂ ಸಮಸ್ಯೆಗಳಿವೆ.ಸಂಕಷ್ಟವು ಕೇವಲ ಸಂಸಾರಿಗಳಿಗೆ ಮಾತ್ರ ಬರುವುದಿಲ್ಲ,ಸಂನ್ಯಾಸಿಗಳಾದವರು ಸಹ ಹೊರಬರಲರಿಯದ ಸಂಕಷ್ಟಗಳಿಗೆ ಈಡಾಗಿದ್ದಾರೆ.ರೋಗಿಗಳಿಗಷ್ಟೇ ತೊಂದರೆ ಇರುವುದಿಲ್ಲ,ರೋಗ ನಿವಾರಿಸುವ ವೈದ್ಯರುಗಳಿಗೂ ತೊಂದರೆ- ತಾಪತ್ರಯಗಳಿವೆ.ದಡ್ಡರಿಗಷ್ಟೇ ಸಮಸ್ಯೆಗಳು ಬರುವುದಿಲ್ಲ ,ಜ್ಞಾನಿ- ವಿಜ್ಞಾನಿಗಳಿಗೂ ದೊಡ್ಡ ಸಮಸ್ಯೆಗಳು ಬಂದೊದಗುತ್ತಿವೆ.ಒಟ್ಟಿನಲ್ಲಿ ಆಳಿನಿಂದ ಅರಸನವರೆಗೆ,ರೋಗಿಯಿಂದ ಯೋಗಿಯವರೆಗೆ,ಭೋಗಿಯಿಂದ ತ್ಯಾಗಿಯವರೆಗೆ ಎಲ್ಲರೂ ಸಂಕಷ್ಟಕ್ಕೆ ಈಡಾಗುವವರೆ,ಸಮಸ್ಯೆಗಳ ಸುಳಿಗೆ ಸಿಕ್ಕಿಹಾಕಿಕೊಳ್ಳುವವರೆ.ಸಮಸ್ಯೆಯಿಂದ ಹೇಗೆ ಹೊರಬಂದರು,ಹೇಗೆ ಸಂಕಟ ಮುಕ್ತರಾದರು ಎನ್ನುವುದು ಸಮಸ್ಯಾಪೀಡಿತರ ವ್ಯಕ್ತಿತ್ವದ ಗಟ್ಟಿತನ- ಟೊಳ್ಳುತನವನ್ನು ಅವಲಂಬಿಸಿರುತ್ತದೆ.

ಸಮಸ್ಯೆಗಳು ಬಂದಾಗ ಬಹಳಷ್ಟು ಜನರು ದೇವರ ಮೊರೆ ಹೋಗುವುದುಂಟು.ಅದು ಸರಿಯಾದುದು,ಅದರಲ್ಲಿ ಆಕ್ಷೇಪಿಸುವಂತಹದ್ದು ಏನೂ ಇಲ್ಲ.ಹಸುಳೆಯು ಏನನ್ನಾದರೂ ಕಂಡು ಭಯಪಟ್ಟಾಗ ತನ್ನ ತಾಯಿಯ ಎದೆಯ ಸೆರಗಿನಲ್ಲಿ ಬಚ್ಚಿಟ್ಟುಕೊಂಡು ಸುರಕ್ಷತೆಯನ್ನು ಅನುಭವಿಸುವಂತೆ ದೇವರಿಂದ ಹುಟ್ಟಿಸಲ್ಪಟ್ಟ ಮನುಷ್ಯರುಗಳು ಸಂಕಷ್ಟಕಾಲದಲ್ಲಿ ದೇವರ ಆಶ್ರಯಬಯಸಿದರೆ,ದೇವರಲ್ಲಿ ಮೊರೆಹೋದರೆ ಅದು ಸಹಜ,ಸಮ್ಮತನಡೆ.ಆದರೆ ಮನುಷ್ಯರ ದೌರ್ಬಲ್ಯಗಳನ್ನು ‘ ಜೀವನೋಪಾಯಶಾಸ್ತ್ರ’ ವನ್ನಾಗಿ ಮಾಡಿಕೊಂಡಿರುವ ಜ್ಯೋತಿಷಿಗಳು,ಕಪಟ ಸ್ವಾಮಿ- ಸಂನ್ಯಾಸಿಗಳು,ಡೋಂಗಿಬಾಬಾಗಳ ಬಳಿ ಹೋಗುವುದು ಮಾತ್ರ ಸರಿಯಾದ ದಾರಿಯಲ್ಲ.ನಿಜವಾದ ಶರಣರು,ಸಂತರು,ಯೋಗಿಗಳು ಮನುಷ್ಯರನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲರು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ,ಯೋಗಬಲದಿಂದ.ಅಂತಹ ಸತ್ಪುರುಷರ ಬಳಿ ಹೋಗಿ ಪರಿಹಾರ ಪಡೆಯಬಹುದು.ಆದರೆ ಪತ್ರಿಕೆಗಳಲ್ಲಿ,ಟಿ ವಿ ಚಾನೆಲ್ಲುಗಳಲ್ಲಿ ಮಿಂಚುತ್ತಿರುವ ಜ್ಯೋತಿಷಿ ಮಹಾನುಭಾವರುಗಳ ಸುಳ್ಳು ಮಾತುಗಳಿಗೆ ಮರುಳಾಗಬಾರದು; ಇಪ್ಪತ್ನಾಲ್ಕು ಘಂಟೆಗಳಲ್ಲಿ ಸಮಸ್ಯೆ ಪರಿಹರಿಸುತ್ತೇವೆ,ನಲವತ್ತೆಂಟು ಘಂಟೆಗಳಲ್ಲಿ ಸಮಸ್ಯೆ ಪರಿಹರಿಸುತ್ತೇವೆ,ಐದಾರು ದಿನಗಳಲ್ಲಿ ಎಂತಹದೆ ಸಮಸ್ಯೆಗಳಿದ್ದರೂ ಪರಿಹಾರ ನಿಶ್ಚಿತ ಎಂದು ಬೊಗಳೆ ಹೊಡೆದುಕೊಂಡು ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿರುವ,ದೊಡ್ಡದೊಡ್ಡ ಬೋರ್ಡ್ ಗಳನ್ನು ಬರೆಸಿಕೊಂಡವರ ಬಳಿ ಮಾತ್ರ ಹೋಗಬಾರದು.ನೆನಪಿರಲಿ,ನಿಮ್ಮ ಸಮಸ್ಯೆಗೆ ‘ ನಿಶ್ಚಿತಪರಿಹಾರವಿದೆ’ ಎಂದು ಬೊಗಳುವ ಜ್ಯೋತಿಷಿಗಳು,ಸಮ್ಮೋಹಿನಿ ತಾಂತ್ರಿಕರು,ಕಾಪಾಲಿಕರುಗಳಿಗೂ ಸಂಕಷ್ಟವಿದೆ,ಸಮಸ್ಯೆಗಳಿವೆ.ಅವರಿಗೂ ಅಶನ -ವಸನ( ಊಟ- ವಸತಿಗಳ ಹೊಟ್ಟೆಪಾಡು) ಗಳ ಪಾಡು ಇದೆಯೆಂದೇ ಅವರು ಜ್ಯೋತಿಷ ಹೇಳುತ್ತಿದ್ದಾರೆ,ಜ್ಯೋತಿಷಾಲಯ,ಪರಿಹಾರಾಲಯಗಳನ್ನು ಕಟ್ಟಿಕೊಂಡಿದ್ದಾರೆ.ಹೊಟ್ಟೆಯಪಾಡು ಅವರನ್ನು ಈ ದುಸ್ಥಿತಿಗೆ ತಂದಿದೆ ಎಂದು ಅವರ ಬಗ್ಗೆ ಅನುಕಂಪಪಡಬೇಕೇ ಹೊರತು ಜ್ಯೋತಿಷಿಗಳ ಬಳಿ ಪರಿಹಾರಕ್ಕೆ ಅಂಗಲಾಚಬಾರದು.ಮಂತ್ರ,ಮೋಡಿಯಂತಹ ಕ್ಷುದ್ರವಿದ್ಯೆಗಳನ್ನು ಪ್ರಯೋಗಿಸುತ್ತಿರುವ’ ಅಧಮಜೀವಿಗಳ’ ಬಳಿಯಂತೂ ಹೋಗಲೇಬಾರದು.ಮನುಷ್ಯರಿಗೆ ಕೆಡುಕನ್ನುಂಟು ಮಾಡುವ,ಮನುಷ್ಯತ್ವವಿರೋಧಿಯಾದ ಕ್ಷುದ್ರವಿದ್ಯೆ,ಅಭಿಚಾರಕರ್ಮಗಳನ್ನು ಆಶ್ರಯಿಸಬಾರದು ಸಮಸ್ಯಾಮುಕ್ತರಾಗಲು.

ಸಂಕಷ್ಟದಕಾಲ ಎಲ್ಲರ ಜೀವನದಲ್ಲಿ ಬರುತ್ತದೆ ಎಂದು ತಿಳಿದುಕೊಂಡು ಸಂಕಷ್ಟವನ್ನು ಎದುರಿಸಲು ಸಿದ್ಧವಾದರೆ ಸಂಕಟದರ್ಧ ಪರಿಹಾರವಾದಂತೆಯೇ.ಸಮಸ್ಯೆಗಳು ಬಂದೆರಗಿದಾಗ ಸಮಸ್ಯೆಯ ಕಾರಣವೇನು ಮತ್ತು ಅದಕ್ಕೆ ಪರಿಹಾರವೇನು ಎಂದು ಆಲೋಚಿಸಬೇಕು.ನಮ್ಮ ಬಹುತೇಕ ಸಮಸ್ಯೆಗಳಿಗೆ ನಮ್ಮ ಅವಸರಬುದ್ಧಿ,ತಪ್ಪುನಿರ್ಧಾರಗಳೇ ಕಾರಣವಾಗಿರುತ್ತವೆ.ಸಮಸ್ಯೆಯು ಬಂದೆರಗಿದಾಗ ಆ ಸಮಸ್ಯೆಯ ಮೂಲವನ್ನು ಹುಡುಕುತ್ತಾ ಹೋಗಬೇಕು.ಸಮಸ್ಯೆಯ ಮೂಲದಲ್ಲಿಯೇ ಸಮಸ್ಯೆಯ ಪರಿಹಾರವೂ ಇರುತ್ತದೆಯಾದ್ದರಿಂದ ಸಮಸ್ಯೆಯ ಕಾರಣವನ್ನು ಹುಡುಕಬೇಕು.ಸಮಸ್ಯೆಯ ಕಾರಣವನ್ನು ಕಂಡುಕೊಂಡಿದ್ದಾದರೆ ಅದರ ಪರಿಹಾರವು ಸುಲಭವಾಗಿ ಸಿಗುತ್ತದೆ.ನಮ್ಮ ಸಮಸ್ಯೆಗಳಿಗೆ ನಾವೇ ಕಾರಣರಾಗಿರುತ್ತೇವೆಯೇ ಹೊರತು ಭೂಮಿಯಿಂದ ದೂರದಲ್ಲಿ ಇರುವ ಗ್ರಹ- ತಾರೆ,ನಕ್ಷತ್ರ- ನಿಹಾರಿಕೆಗಳು ನಮ್ಮ ಸಮಸ್ಯೆಯ ಕಾರಣವಾಗಿರುವುದಿಲ್ಲ! ಜ್ಯೋತಿಷಿಗಳು ಗ್ರಹಗಳು ಜಗತ್ತಿನ ಆಗು ಹೋಗುಗಳ ಕಾರಣ ಎಂದು ಸುಳ್ಳೇ ಬೊಗಳೆ ಹೊಡೆಯುತ್ತಾರೆ.ಒಂದು ವೇಳೆ ಗ್ರಹಗಳು ಜಗತ್ತಿನ ಆಗು ಹೋಗುಗಳ ಕಾರಣವಾಗಿದ್ದರೆ ,ಗ್ರಹಗಳು ಅಷ್ಟುಶಕ್ತಿಶಾಲಿಗಳಾಗಿದ್ದರೆ ತಮ್ಮ ಪರಿಭ್ರಮಣಪಥವನ್ನೇಕೆ ಬದಲಿಸುತ್ತಿಲ್ಲ? ಪ್ರತಿಯೊಂದು ಗ್ರಹಕ್ಕೂ ಅದರದ್ದೇ ಆದ ಪರಿಭ್ರಮಣಪಥವಿದ್ದು ಆ ಗ್ರಹವು ತನ್ನ ಪರಿಭ್ರಮಣಪಥವನ್ನು ದಾಟಿ ಬರಲರಿಯದು.ಗ್ರಹ- ನಕ್ಷತ್ರಗಳು ಸೇರಿದಂತೆ ಬ್ರಹ್ಮಾಂಡವು ಪರಮಾತ್ಮನಿಂದ ನಿರ್ಮಾಣಗೊಂಡಿದ್ದು ಪರಮಾತ್ಮನ ನಿಯತಿನಿಯಮಗಳಿಗೆ ಅನುಗುಣವಾಗಿಯೇ ಸಾಗುತ್ತಿದೆ ಜಗತ್ತು ಮತ್ತು ಜೀವರುಗಳ ಸ್ಥಿತಿ ಗತಿ.ಇದನ್ನರಿಯದ ಜ್ಯೋತಿಷಗಳು ಏನು ಏನನ್ನೋ ಗಳಹುತ್ತಾರೆ,ಯಾವ ಯಾವುದೋ ಪರಿಹಾರ ಕ್ರಮಗಳನ್ನು ಸೂಚಿಸುತ್ತಾರೆ.ಜ್ಯೋತಿಷಿಗಳು ಸೂಚಿಸುವ ಪರಿಹಾರಕ್ರಮಗಳಿಂದ ಹಣವು ವ್ಯರ್ಥವಾಗುವುದಲ್ಲದೆ ಯಾವ ಪರಿಹಾರವೂ ಸಿಗದು.ಜನರಿಗೆ ಐಶ್ವರ್ಯದ ದಾರಿಯನ್ನು ತೋರಿಸುತ್ತೇವೆ ಎಂದು ಬೊಗಳುವ ಜ್ಯೋತಿಷಿಗಳು ತಮ್ಮ‌ಮನೆಗಳಲ್ಲಿ ಲಕ್ಷ್ಮೀಯೋ ಕುಬೇರನೋ ಕಾಲುಮುರಿದುಕೊಂಡು ಬಿದ್ದಿರುವಂತೆ ಮಾಡಲಾರರೇಕೆ? ಜನರಿಂದ ಶುಲ್ಕ ಪಡೆದು ಬದುಕುವ ದಯನೀಯಸ್ಥಿತಿ ಏಕಿರುತ್ತದೆ ಜ್ಯೋತಿಷಿಗಳಿಗೆ?

ವಿಶ್ವನಿಯಾಮಕನಾಗಿರುವ ವಿಶ್ವೇಶ್ವರ ಶಿವನನ್ನು ಮೊರೆಹೋದರೆ ಸಮಸ್ಯೆಗಳು ಪರಿಹಾರವಾಗುತ್ತವೆ.’ಶಿವ’ ಎನ್ನುವ ಶಬ್ದದಲ್ಲಿಯೆ ಮಂಗಳ,ಕಲ್ಯಾಣ,ಶುಭ,ಸತ್ಯ,ಸೌಂದರ್ಯ ಎನ್ನುವ ಅರ್ಥಗಳಿವೆಯಾಗಿ ಸಂಕಷ್ಟಮುಕ್ತರಾಗಲು ಶಿವನನ್ನು ಮೊರೆಯಬೇಕು,ಪ್ರಾರ್ಥಿಸಬೇಕು.ಶಿವನ ಪೂಜೆ- ಪ್ರಾರ್ಥನೆಗಳಿಂದ ಅನಿಷ್ಟವು ಇಷ್ಟವಾಗಿ ಪರಿವರ್ತನೆಯಾಗುತ್ತದೆ ಎನ್ನುವ ಪರಮಸತ್ಯವನ್ನು ಕಂಡುಕೊಂಡು ಬಸವಣ್ಣನವರು ಎಲ್ಲರ ಕೈಗಳಿಗೆ ಇಷ್ಟಲಿಂಗವನ್ನು ಕೊಟ್ಟರು.ಬಸವಣ್ಣನವರು ಕೊಟ್ಟ ಅನಿಷ್ಟನಿವಾರಕ,ಶುಭಕಾರಕ ಇಷ್ಟಲಿಂಗವನ್ನು ಗೂಟಕ್ಕೆ ನೇತುಹಾಕಿ ಸಮಸ್ಯೆಗಳ ಪರಿಹಾರಕ್ಕೆಂದು ಕಂಡಕಂಡ ದೇವರುಗಳತ್ತ ಎಡತಾಕಿ,ಶರಣಾಗುತ್ತಿದ್ದಾರೆ ಮರುಳಜನರು! ಇಷ್ಟಲಿಂಗಪೂಜಕರು ಮತ್ತೊಂದು ದೈವಕ್ಕೆ ಎರಗಲಾಗದು.’ ಲಿಂಗಾಯತರು’ ಎಂದು ಬರಿಹೇಳಿಕೊಂಡರಾಗದು,ತಿಳಿದುಕೊಳ್ಳಬೇಕು ಲಿಂಗತತ್ತ್ವವನ್ನು,ಅಳವಡಿಸಿಕೊಳ್ಳಬೇಕು ಲಿಂಗದಗುಣವನ್ನು.ಕೊನೆಗೆ ಲಿಂಗವೇ ತಾವಾಗಿ ಮಂಗಳಸ್ವರೂಪರಾಗಿ ಲೋಕಕಲ್ಯಾಣವನ್ನು ಸಾಧಿಸಬೇಕು.ಇದು ಲಿಂಗತತ್ತ್ವ; ಇಷ್ಟಲಿಂಗೋಪಾಸನೆಯ ರಹಸ್ಯ.

ಶಿವನು ವಿಶ್ವನಿಯಾಮಕನು,ತನ್ನ ನಿಯತಿನಿಯಮಗಳಿಂದ ವಿಶ್ವವನ್ನು ನಿಯಂತ್ರಿಸುತ್ತಿರುವನು.ವಿಶ್ವದ ಆಗು ಹೋಗುಗಳೆಲ್ಲ ಶಿವನ ಸಂಕಲ್ಪವನ್ನನುಸರಿಸಿ ನಡೆಯುತ್ತಿರುವುದರಿಂದ ಶಿವನನ್ನು ‘ ವಿಶ್ವೇಶ್ವರ’ ಎನ್ನಲಾಗುತ್ತದೆ.ವಿಶ್ವೇಶ್ವರ ಶಿವನಲ್ಲಿ ಶರಣುಬಂದರೆ ಎಂತಹ ಕಷ್ಟ,ಸಂಕಷ್ಟಗಳಿದ್ದರೂ‌ ಪರಿಹಾರವಾಗುತ್ತವೆ.ಹುಲ್ಲಿನ ದೊಡ್ಡ ಬಣವೆ ಇರಬಹುದು ಆದರೆ ಅದನ್ನು ಒಂದು ಸಣ್ಣಬೆಂಕಿ ಕಡ್ಡಿಯು ಸುಟ್ಟುಬೂದಿಮಾಡುತ್ತದೆ.ಹುಲ್ಲಿನ ಬಣವೆ ದೊಡ್ಡದು,ಬೆಂಕಿಕಡ್ಡಿ ಸಣ್ಣದು ಎಂದು ಸಂದೇಹಿಸಬಹುದೆ? ಸಮಸ್ಯೆ ಎಷ್ಟೇ ದೊಡ್ಡದಿರಲಿ ಶಿವನ ಕಾರುಣ್ಯಕಟಾಕ್ಷ ಒದಗಿದ ಕ್ಷಣವೇ ಸುಟ್ಟುರಿದು ಹೋಗುತ್ತದೆ.ಶಿವನ ಕಾರುಣ್ಯವನ್ನು ಅರಸಿ,ಆಶ್ರಯಿಸಬೇಕೇ ಹೊರತು ಹೊಟ್ಟೆಪಾಡಿಗಾಗಿ ನೂರೆಂಟುಗಳಹುವ ಶಾಸ್ತ್ರಿಗಳನ್ನು ಅವಲಂಬಿಸಬಾರದು.ಶಿವನನ್ನು ನಂಬದವರು ಅಥವಾ ಅನ್ಯಮತ ಧರ್ಮಗಳ ಅನುಯಾಯಿಗಳು ತಮ್ಮ ‘ ಇಷ್ಟದದೈವ’ ವನ್ನು ನಂಬಬಹುದು.ಇಷ್ಟದ ದೈವವು ಕಷ್ಟವನ್ನು ಖಂಡಿತವಾಗಿಯೂ ಪರಿಹರಿಸುತ್ತದೆ.’ ಇಷ್ಟದೈವ’ ದ ಪರಿಕಲ್ಪನೆಯನ್ನೇ ಬಸವಣ್ಣನವರು ‘ ಇಷ್ಟಲಿಂಗ’ದ ಪರಿಕಲ್ಪನೆಯನ್ನಾಗಿ ವಿಸ್ತರಿಸಿದ್ದಾರೆ.ಕಷ್ಟ- ಸಂಕಷ್ಟಸಮಯದಲ್ಲಿ ವಿಶ್ವೇಶ್ವರಶಿವ,ಇಷ್ಟಲಿಂಗ ಇಲ್ಲವೆ ಇಷ್ಟದೈವವನ್ನು ಮೊರೆದು,ಪೂಜಿಸಿ ಸಂಕಷ್ಟಮುಕ್ತರಾಗಬಹುದು.

About The Author