ರಾಜ್ಯ ಸರ್ಕಾರ ಐದು ಕೆಜಿ ಅಕ್ಕಿಯ ಹಣ ಕೊಡುತ್ತಿರುವುದು ಸ್ವಾಗತಾರ್ಹ ಬಡವರ ಕೊಡುಗೆ ಎಂದರೆ ಬಿಜೆಪಿಗೆ ಅಲರ್ಜಿ  ಬಸವರಾಜ ಅತ್ನೂರು ಆರೋಪ

ಯಾದಗಿರಿ : ರಾಜ್ಯ ಸರ್ಕಾರ ರಾಜ್ಯದಲ್ಲಿ ಬಿಪಿಎಲ್ ಕಾರ್ಡದಾರರಿಗೆ 5 ಕೆಜಿ ಅಕ್ಕಿಯ ಜೊತೆ 5 ಕೆಜಿ ಅಕ್ಕಿಯ ಹಣ ಪಾವತಿ ಮಾಡಲಾಗುತ್ತಿರುವುದು ಸ್ವಾಗತಾರ್ಹ ಎಕದು ಕಾಂಗ್ರೆಸ್ ಮುಖಂಡರು ಮತ್ತು ಅಖಿಲ ಕರ್ನಾಟಕ ಸಿದ್ದರಾಮಯ್ಯ ಬ್ರಿಗೇಡ್ ನ ಯಾದಗಿರಿ ಜಿಲ್ಲಾಧ್ಯಕ್ಷರಾದ ಬಸವರಾಜ ಅತ್ನೂರು ಹೇಳಿದ್ದಾರೆ.ಕೇಂದ್ರ ಸರಕಾರ ಅಕ್ಕಿಯ ಜೊತೆಗೆ ರಾಜಕೀಯ ಮಾಡುತ್ತಿದೆ. ಆಹಾರ ಭದ್ರತಾ ಕಾಯ್ದೆಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದಿದ್ದರು. ಅದರಂತೆ ರಾಜ್ಯ ಸರ್ಕಾರ ಹಣ ಕೊಟ್ಟು ಅಕ್ಕಿ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಅದರ ಸೇಡಿಗಾಗಿ ಐದು ಕೆಜಿ ಅಕ್ಕಿ ಕೊಡುವುದಿಲ್ಲವೆಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಚುನಾವಣಾ ಪ್ರಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾರವರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಯಾವುದೇ ಸೌಲಭ್ಯಗಳು ಸಿಗುವುದಿಲ್ಲವೆಂದು ಹೇಳಿದ್ದರು. ಅದರಂತೆ ಅವರು ಮಾತು ಉಳಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರಕಾರ ತನ್ನ ಮಾತಿನಂತೆ ನಡೆದುಕೊಂಡಿದೆ. ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಸಿಟಿ. ರವಿ ಸೇರಿದಂತೆ ಹಲವರು ಅಕ್ಕಿಕೊಡದಿದ್ದರೆ ಹಣ ಕೊಡಿ ಎಂದು ಹೇಳಿಕೆ ನೀಡಿದ್ದರು. ಈಗ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣ ನೀಡುತ್ತಿದೆ. ಬಿಜೆಪಿ ಮತ್ತೆ ತಕರಾರು ತೆಗೆದು 10 ಕೆಜಿಗೆ ಹಣ ನೀಡಿ, ಕೇಜಿಗೆ 65 ರೂಪಾಯಿಯಂತೆ ಹಣ ನೀಡಿ ಎಂದು ಹೇಳುತ್ತಿದ್ದಾರೆ. ವಿರೋಧ ಪಕ್ಷದವರ ಹೇಳಿಕೆಯ ಬಗ್ಗೆ ರಾಜ್ಯದ ಜನತೆ ಕೆಡಿಸಿಕೊಳ್ಳಬೇಕಿಲ್ಲ. ಬಿಜೆಪಿಯವರ ನಾಟಕವನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಬಡವರಿಗೆ ಕೊಡುವ ಕೊಡುಗೆಗಳು, ಯೋಜನೆಗಳು ಬಿಜೆಪಿಯವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.