ಮೂರನೇ ಕಣ್ಣು : ಸರಕಾರಿ ವೈದ್ಯರ ಖಾಸಗಿ ಸೇವೆಯನ್ನು ನಿಷೇಧಿಸಬೇಕು : ಮುಕ್ಕಣ್ಣ ಕರಿಗಾರ

‌ ಸರ್ಕಾರಿ ವೈದ್ಯರು ಖಾಸಗಿಯಾಗಿ ಕ್ಲಿನಿಕ್ ನಡೆಸಲು ಅವಕಾಶ ನೀಡಿರುವುದನ್ನು ಪುನರ್ ಪರಿಶೀಲಿಸುತ್ತೇವೆ’ ಎಂದು ಹೇಳಿದ್ದಾರೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು.ಮೈಸೂರಿನಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತ ಈ ವಿಷಯವನ್ನು ತಿಳಿಸಿದ್ದಾರೆ ಆರೋಗ್ಯ ಸಚಿವರು.ಸರಕಾರಿ ವೈದ್ಯರು ಖಾಸಗಿ ಕ್ಲಿನಿಕ್ ಗಳನ್ನು ನಡೆಸಲು ಸರಕಾರ ನೀಡಿರುವ ಅನುಮತಿಯನ್ನು ಹಿಂಪಡೆದು, ಸರಕಾರಿ ವೈದ್ಯರ ಖಾಸಗಿ ಸೇವೆಯನ್ನು ನಿಷೇಧಿಸಬೇಕಾದ ಅಗತ್ಯವಿದೆ.ಸರಕಾರಿ ವೈದ್ಯರಿಗೆ ಖಾಸಗಿ ಕ್ಲಿನಿಕ್ ಗಳಲ್ಲಿ ಸೇವೆಸಲ್ಲಿಸಲು ಅವಕಾಶವನ್ನೇ ನೀಡಬಾರದಿತ್ತು.ಆದರೆ ಆರೋಗ್ಯ ಇಲಾಖೆಯಲ್ಲಿ ಕೆಲವೊಮ್ಮೆ ಸಾರ್ವಜನಿಕರ ಇಚ್ಛೆಗೆ ವಿರುದ್ಧವಾದ,ಸಾರ್ವಜನಿಕರ ಸೇವೆಗೆ ಪ್ರತಿಕೂಲವಾಗುವಂತಹ ತೀರ್ಮಾನಗಳಾಗುತ್ತಿವೆ.ಇಂತಹ ತೀರ್ಮಾನಗಳ ಹಿಂದೆ ಆರೋಗ್ಯಸಚಿವರಾದವರ ಹಿತಾಸಕ್ತಿಯೂ ಕೆಲಸ ಮಾಡಿರುತ್ತದೆ.ವೃತ್ತಿಪರ ವೈದ್ಯರಾದವರು ಆರೋಗ್ಯಸಚಿವರಾದಾಗ ಅವರು ವೈದ್ಯರ ಪರವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.ಇದು ತಪ್ಪು.ಆರೋಗ್ಯ ಸಚಿವರಾದವರು ರಾಜ್ಯದ ಜನತೆಯನ್ನು ಪ್ರತಿನಿಧಿಸಬೇಕೇ ಹೊರತು ವೈದ್ಯರುಗಳನ್ನಲ್ಲ.ಜನರ ಬದುಕುಗಳೊಂದಿಗೆ ಚೆಲ್ಲಾಟವಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಆರೋಗ್ಯಸಚಿವರುಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣುಕಿಸಿದಂತೆ.ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಇಂದಿನ ಆರೋಗ್ಯ ಸಚಿವರಾದ ದಿನೇಶ ಗುಂಡುರಾವ್ ಅವರು ಸರಕಾರಿ ವೈದ್ಯರುಗಳ ಖಾಸಗಿಸೇವೆಗೆ ನೀಡಿದ ಅನುಮತಿಯನ್ನು ಪರಿಶೀಲಿಸುವ ಕುರಿತು ಆಡಿದ ಮಾತು ಆಶಾದಾಯಕ ಬೆಳವಣಿಗೆಯಾಗಿದ್ದು ಅವರು ಈ ಬಗ್ಗೆ ಆದಷ್ಟು ಶೀಘ್ರವಾಗಿ ಕಾರ್ಯಪ್ರವೃತ್ತರಾಗಿ ಸರಕಾರಿ ವೈದ್ಯರುಗಳ ಖಾಸಗಿ ಸೇವೆಯನ್ನು ನಿಷೇಧಿಸಿ,ಆದೇಶ ಹೊರಡಿಸುವ ಅಗತ್ಯವಿದೆ.

‌ ಸರಕಾರಿ ವೈದ್ಯರುಗಳು ಖಾಸಗಿ ಕ್ಲಿನಿಕ್ಕುಗಳಲ್ಲಿ ಸೇವೆ ನಿರ್ವಹಿಸಲು ಅನುಮತಿ ನೀಡುವುದೇ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದುದು.ಸರಕಾರಿ ವೈದ್ಯರುಗಳು ಕೂಡ ‘ ಸಾರ್ವಜನಿಕ ಸೇವಕರೇ'( Public Servants) ಕರ್ನಾಟಕ ಸರಕಾರಿ ಸೇವಾ ನಿಯಮಗಳು ರಾಜ್ಯದ ಎಲ್ಲ ಸರಕಾರಿ ಅಧಿಕಾರಿಗಳು,ನೌಕರರಿಗೆ ಅನ್ವಯವಾಗುವಂತೆ ಸರಕಾರಿ ವೈದ್ಯರಿಗೂ ಅನ್ವಯವಾಗುತ್ತವೆ.ನಡತೆನಿಯಮ( Conduct Rules) ಗಳಂತೆ ಸರಕಾರಿ ಅಧಿಕಾರಿಗಳು,ನೌಕರರುಗಳು ಖಾಸಗಿ ವೃತ್ತಿ ನಡೆಸಲು,ಖಾಸಗಿ ಸೇವೆಯಿಂದ ಲಾಭ ಪಡೆಯಲು ಅವಕಾಶವಿಲ್ಲ.ಸರಕಾರಿ ನೌಕರರು ಸಾರ್ವಜನಿಕ ಸೇವೆಯ ಪ್ರತಿಫಲವಾದ ಸಂಬಳದ ಹೊರತಾಗಿ ಬೇರೆ ಯಾವುದೇ ಮೂಲದಿಂದ ಹೆಚ್ಚುವರಿ ಆದಾಯವನ್ನು ಪಡೆಯುವುದನ್ನು ನಿರ್ಬಂಧಿಸುವ ನಡತೆನಿಯಮಗಳಂತೆ ಸರಕಾರಿ ವೈದ್ಯರುಗಳಿಗೆ ಖಾಸಗಿ ಕ್ಲಿನಿಕ್ಕುಗಳಲ್ಲಿ ಸೇವೆಸಲ್ಲಿಸಲು ಅವಕಾಶ ನೀಡಲೇಬಾರದಿತ್ತು.’ವೈದ್ಯರ ಕೊರತೆಯ ಕಾರಣ ನೀಡಿ’ ಸರಕಾರಿ ವೈದ್ಯರಿಗೆ ಖಾಸಗಿ ಕ್ಲಿನಿಕ್ಕುಗಳಲ್ಲಿ ಸೇವೆಸಲ್ಲಿಸಲು ಅನುಮತಿಸಿದ ಆರೋಗ್ಯ ಇಲಾಖೆಯ ನಿರ್ಧಾರ ಸರಿಯಾದ ನಿರ್ಧಾರವಲ್ಲ.

ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರುಗಳಿಲ್ಲ ಎನ್ನುವುದು ನಿಜವಾದರೂ ಇರುವ ಸರಕಾರಿ ವೈದ್ಯರುಗಳಲ್ಲಿ ಎಷ್ಟು ಜನರು ಬಡವರು,ನಿರ್ಗತಿಕರು,ದುರ್ಬಲರ ಬಗ್ಗೆ ಕನಿಕರಹೊಂದಿ,ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ತೃಪ್ತಿಕರವಾದ ಉತ್ತರವಿಲ್ಲ.ಗ್ರಾಮೀಣ ಪ್ರದೇಶಗಳ ಸರಕಾರಿ ಆಸ್ಪತ್ರೆಗಳಿಗೆ ನೇಮಕಗೊಂಡ ಸರಕಾರಿ ವೈದ್ಯರುಗಳ ಕಾರ್ಯವೈಖರಿಯು ಅಷ್ಟು ತೃಪ್ತಿಕರವಾಗಿಲ್ಲ.ಕೆಲವು ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ಅಲ್ಲಿಗೆ ನೇಮಕಗೊಂಡ ಸರಕಾರಿ ವೈದ್ಯರುಗಳು ನಿಯತವಾಗಿ ಬರುವುದೇ ಇಲ್ಲ.ಹೆರಿಗೆ,ಅಪಘಾತ,ತೀವ್ರರೋಗಬಾಧೆಯಂತಹ ಸಂದರ್ಭಗಳಲ್ಲಿ ಗ್ರಾಮೀಣಪ್ರದೇಶದ ಜನತೆ ಇಂದಿಗೂ ಪರದಾಡುತ್ತಿದ್ದಾರೆ.ವೈದ್ಯರ ಬಗ್ಗೆ ಕೇಳಿದರೆ ‘ ಮೀಟಿಂಗ್ ಗೆ ಹೋಗಿದ್ದಾರೆ’ ‘ ಹಳ್ಳಿಗಳಲ್ಲಿ ಹೋಗಿದ್ದಾರೆ’ ಎನ್ನುವ ನಿಜವಲ್ಲದ ಸಮರ್ಥನೆ ನೀಡುತ್ತಾರೆ ಪ್ರಾಥಮಿಕ ಆರೋಗ್ಯ ಇಲಾಖೆಯ ಸಿಬ್ಬಂದಿ.ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ ಸವಲತ್ತುಗಳನ್ನು‌ಪಡೆಯುತ್ತಿರುವ ಸರಕಾರಿ ವೈದ್ಯರುಗಳು ಸಾರ್ವಜನಿಕರ ಸೇವೆಗೆ ಬದ್ಧರಾಗಿರಬೇಕು.

ಸರಕಾರದ ಆರೋಗ್ಯ ಇಲಾಖೆಯು ಸಾರ್ವಜನಿಕರ ಆರೊಗ್ಯದ ದೃಷ್ಟಿಯಿಂದ ಅತಿ ದುಬಾರಿ ಬೆಲೆಯ ಔಷಧೋಪಕರಣಗಳನ್ನು ಖರೀದಿಸಿ,ಆಸ್ಪತ್ರೆಗಳಿಗೆ ಪೂರೈಸುತ್ತಿದೆ ಮತ್ತು ಕೆಲವು ಔಷಧೋಪಕರಣಗಳನ್ನು ಸ್ಥಳೀಯವಾಗಿ ಖರೀದಿಸಲು ಅನುಮತಿ ನೀಡಲಾಗಿದೆ.ಹೆಚ್ಚಿನ ಬೆಲೆಯಲ್ಲಿ ಖರೀದಿಸಿದ ಔಷಧೋಪಕರಣಗಳು ಸರಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗಾಗಿಯೇ ಬಳಸಬೇಕು.ಸರಕಾರಿ ವೈದ್ಯರುಗಳಿಗೆ ಖಾಸಗಿ ಕ್ಲಿನಿಕ್ ಗಳನ್ನು ನಡೆಸಲು ಅನುಮತಿಸಿದರೆ ಸರಕಾರವು ಪೂರೈಸಿದ ದುಬಾರಿ ಬೆಲೆಯ ಔಷಧೋಕರಣಗಳು ಸರಕಾರಿ ವೈದ್ಯರ ಖಾಸಗಿ ಕ್ಲಿನಿಕ್ಲುಗಳಿಗೆ ವರ್ಗಾವಣೆ ಆಗುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು ? ಸರಕಾರಿ ವೈದ್ಯರುಗಳಲ್ಲಿ ಹಲವರ ವಿರುದ್ಧ ಇಂತಹ ದೂರುಗಳಿವೆ,ಸರಕಾರಿ ವೈದ್ಯೋಪಕರಣಗಳ ದುರ್ಬಳಕೆಯ ಕುರಿತು ಇಲಾಖಾ ವಿಚಾರಣೆಗಳು ನಡೆಯುತ್ತಿವೆ. ಸರಕಾರಿ ವೈದ್ಯರುಗಳಿಗೆ ಖಾಸಗಿ ಕ್ಲಿನಿಕ್ಕುಗಳನ್ನು ತೆರೆಯಲು ಅನುಮತಿಸಿದರೆ ಸರಕಾರವೇ ಔಷಧೋಪಕರಣಗಳ ದುರ್ಬಳಕೆಗೆ ಅನುಮತಿ ನೀಡಿದಂತೆ ಆಗುತ್ತದೆ.

ವೈದ್ಯರು ಕೂಡ ಎಲ್ಲರಂತೆ ಮನುಷ್ಯರೆ.ಅವರಿಗೂ ದಣಿವು,ಆಯಾಸಗಳಾಗುತ್ತಿರುವುದರಿಂದ ವೈದ್ಯರುಗಳಿಗೆ ವಿಶ್ರಾಂತಿಯ ಅಗತ್ಯವಿದೆ.ಆದ್ದರಿಂದ ಸರಕಾರಿ ವೈದ್ಯರುಗಳಿಗೆ ಕನಿಷ್ಟ ಎಂಟು ತಾಸುಗಳ ಕಾಲ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆಸಲ್ಲಿಸಿ ವಿಶ್ರಾಂತಿ ಪಡೆಯಲು ಸೂಚಿಸಬಹುದು.ವೈದ್ಯರ ಸೇವೆಯು ಮಹತ್ವದ ಸಾಮಾಜಿಕ ಸೇವೆಯಾಗಿರುವುದರಿಂದ ಎಂಟುಘಂಟೆಗಳ ನಂತರದ ಹೆಚ್ಚುವರಿ ಸೇವೆ,ಅವಧಿ ಮೀರಿದ ಸೇವೆಗೆ ಹೆಚ್ಚುವರಿ ಭತ್ತೆ,ವಿಶೇಷ ಭತ್ತೆ,ವಿಶೇಷ ವೈದ್ಯಕೀಯ ಸಾಧನೆಗಾಗಿ ಪ್ರೋತ್ಸಾಹಧನ ಮೊದಲಾದ ಉತ್ತೇಜಕ ಉಪಕ್ರಮಗಳನ್ನು ಸರಕಾರವು ನಿಗದಿಪಡಿಸಲಿ.ಆದರೆ ಯಾವುದೇ ಕಾರಣಕ್ಕೂ ಸರಕಾರಿ ವೈದ್ಯರುಗಳಿಗೆ ಖಾಸಗಿ ಕ್ಲಿನಿಕ್ಕುಗಳನ್ನು ತೆರೆದು ಖಾಸಗಿ ಸೇವೆ ಸಲ್ಲಿಸಲು ಅನುಮತಿ ನೀಡಬಾರದು.ಸರಕಾರಿ ವೈದ್ಯರುಗಳಿಗೆ ಖಾಸಗಿ ಕ್ಲಿನಿಕ್ಕುಗಳಲ್ಲಿ ಸೇವೆ ಸಲ್ಲಿಸಲು ಅನುಮತಿಸಿದರೆ ಅವರು ತಮ್ಮ ಖಾಸಗಿ ಕ್ಲಿನಿಕ್ಲುಗಳಲ್ಲೇ ಹೆಚ್ಚು ಸಮಯ ಕಳೆಯುತ್ತಾರೆಯೇ ಹೊರತು ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಮಯ ಇರುವುದಿಲ್ಲ.ಸರಕಾರಿ ಆಸ್ಪತ್ರೆಗಳಿಗೆ ಬಡವರು,ದಲಿತರು ಮತ್ತು ದುರ್ಬಲರೇ ಬರುತ್ತಾರೆಯೇ ಹೊರತು ಶ್ರೀಮಂತರುಗಳೇನು ಸರಕಾರಿ ಆಸ್ಪತ್ರೆಗಳಲ್ಲಿ ತೋರಿಸಿಕೊಳ್ಳುವುದಿಲ್ಲ.ಬಡವರು,ದುರ್ಬಲರು ,ದಲಿತರುಗಳಿಗೆ ವೈದ್ಯಕೀಯ ನೆರವು- ಸೇವೆ ದೊರೆಯಬೇಕು ಎಂದರೆ ಸರಕಾರಿ ವೈದ್ಯರುಗಳ ಖಾಸಗಿ ಸೇವೆಯನ್ನು ನಿಷೇಧಿಸಲೇಬೇಕು.

‌‌ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರುಗಳು ಹಿಂದೇಟು ಹಾಕುತ್ತಿರುವುದರಿಂದ ಸರಕಾರಿ ವೈದ್ಯರುಗಳಿಗೆ ಗ್ರಾಮೀಣ ಪ್ರದೇಶದ ಸೇವೆಯನ್ನು‌ಕಡ್ಡಾಯಗೊಳಿಸಿ ಆದೇಶಿಸಲಾಗಿದೆ.ಈ ಕಾರಣದಿಂದಲಾದರೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳು ಕಾಣಸಿಗುತ್ತಾರೆ.ಗ್ರಾಮೀಣಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರುಗಳಿಗೆ ಅವರು ಕೇಳುವ ನ್ಯಾಯೋಚಿತವಾದ ಸಂಬಳ ಸವಲತ್ತುಗಳನ್ನು ಸರಕಾರವು ನೀಡಿ ಅವರುಗಳನ್ನು ಗ್ರಾಮೀಣ ಪ್ರದೇಶಗಳತ್ತ ಆಕರ್ಷಿತರಾಗುವಂತೆ ಮಾಡಬೇಕು.ಗ್ರಾಮೀಣ ವೈದ್ಯರುಗಳಿಗೆ ಸರಕಾರಿ ವಾಹನ ಸೌಲಭ್ಯ ಒದಗಿಸಬೇಕು,ಸರಕಾರಿ ವಾಹನ ಚಾಲಕರುಗಳನ್ನು ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಸರಕಾರಿ ವೈದ್ಯರುಗಳನ್ನು ಮೇಲಿಂದ ಮೇಲೆ ತಾಲೂಕಾ ಕೇಂದ್ರ,ಜಿಲ್ಲಾ ಕೇಂದ್ರಗಳ ಮೀಟಿಂಗುಗಳಿಗೆ ಕರೆಯಬಾರದು.ತಿಂಗಳಲ್ಲಿ ಒಂದು ದಿನ ಮಾತ್ರ ಗ್ರಾಮೀಣ‌ಪ್ರದೇಶದ ವೈದ್ಯರುಗಳನ್ನು ಮೀಟಿಂಗಿಗೆ ಕರೆಯಬಹುದು.ತಾಲೂಕಾ ಮಟ್ಟದಲ್ಲಿ ಶಾಸಕರುಗಳ ಅಧ್ಯಕ್ಷತೆಯಲ್ಲಿ ನಡೆಯುವ ತ್ರೈಮಾಸಿಕ ಕೆಡಿಪಿ ಸಭೆಗಳಿಗೆ ಮಾತ್ರ ಸರಕಾರಿ ವೈದ್ಯರುಗಳು,ತಾಲೂಕಾ ಆರೋಗ್ಯಾಧಿಕಾರಿಗಳು ಹಾಜರಾಗಬೇಕು.ತಿಂಗಳಿಗೊಮ್ಮೆ ಅಥವಾ ತಾಲೂಕಾ ಮಟ್ಟದ ಅಧಿಕಾರಿಗಳು ಮನಸ್ಸಿಗೆ ಬಂದಾಗಲೊಮ್ಮೆ ಕರೆಯುವ ಪ್ರಗತಿಪರಿಶೀಲನಾ ಸಭೆಗಳಿಗೆ ಸರಕಾರಿ ವೈದ್ಯರುಗಳನ್ನು ಕರೆಯದಂತೆ ನಿರ್ಬಂಧಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಉಪದ್ರವಕಾರಿ ವ್ಯಕ್ತಿ ಹಾಗೂ ಸಂಘಟನೆಗಳು ಸರಕಾರಿ ವೈದ್ಯರುಗಳ ತಂಟೆಗೆ ಬಾರದಂತೆ ವೈದ್ಯರುಗಳಿಗೆ ರಕ್ಷಣೆ ನೀಡಬೇಕು.ಒಟ್ಟಿನಲ್ಲಿ ಸರಕಾರಿ ವೈದ್ಯರುಗಳು ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿಯೇ ಬಹಳಹೊತ್ತು ಉಳಿಯುವಂತಹ ಎಲ್ಲ ಅಗತ್ಯಕ್ರಮಗಳನ್ನು ಸರಕಾರವು ತೆಗೆದುಕೊಳ್ಳಬೇಕು.ಗ್ರಾಮೀಣ‌ಪ್ರದೇಶದ ಜನತೆಯ ಜೀವನವು ಸುಧಾರಿಸಬೇಕು ಎಂದರೆ ಗ್ರಾಮೀಣ‌ಪ್ರದೇಶದ ಜನರು ಆರೋಗ್ಯವಾಗಿರಬೇಕಾದ ಎಲ್ಲ ಕ್ರಮಗಳನ್ನು ಸರಕಾರವು ತೆಗೆದುಕೊಳ್ಳಬೇಕು.

About The Author